ಶ್ರೀ ಕೃಷ್ಣ ಪಾರಿಜಾತ ಜನಪದ ನಾಟಕ

0
127

ಬ್ಯಾಡಗಿ:

             ವೃತ್ತಿಪರ ನಾಟಕ ರಂಗ ಕೇವಲ ಹಣ ಮಾಡುವ ಉದ್ದೇಶದಿಂದ ನಾಟಕದಲ್ಲಿ ದ್ವಂದಾರ್ಥದ ಪದಗಳ ಬಳಕೆ ಹಾಗೂ ಕಥಾವಸ್ತುವಿಗೆ ಸಂಬಂಧವಿಲ್ಲದಿದ್ದರೂ ಅಶ್ಲೀಲ ನೃತ್ಯಗಳನ್ನು ಜೋಡಣೆ ಮಾಡುತ್ತಿದ್ದು ಕುಟುಂಬ ಸಮೇತರಾಗಿ ನೋಡುತ್ತಿದ್ದ ನಾಟಕದ ಥೇಟರ್‍ಗಳು ಮದ್ಯವ್ಯಸನಿಗಳಿಂದ ತುಂಬಿಕೊಳ್ಳುತ್ತಿವೆ, ಇದರಿಂದ ಹವ್ಯಾಸಿ ರಂಗಭೂಮಿಗೂ ಕೂಡ ಕಳಂಕ ಬಂದಿದ್ದು ಕಲಾತ್ಮಕ ನಾಟಕಗಳು ಇನ್ನಿಲ್ಲದಂತಾಗಿವೆ ಎಂದು ವರ್ತಕರ ಸಂಘದ ನಿರ್ದೇಶಕ ಕುಮಾರಗೌಡ ಪಾಟೀಲ ವಿಷಾದ ವ್ಯಕ್ತಪಡಿಸಿದರು.
              ಗಣೇಶೋತ್ಸವದ ಅಂಗವಾಗಿ ಪಟ್ಟಣದ ಆಂಜನೇಯ ಯುವಕ ಮಂಡಳದ ವತಿಯಿಂದ ಆಯೋಜಿಸಿದ್ದ ಶ್ರೀ ಕೃಷ್ಣ ಪಾರಿಜಾತ ಜನಪದ ನಾಟಕಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
              ಗಾಂಧೀಜಿಗೆ ಪ್ರೇರಣೆ: ಸಾಮಾಜಿಕ ನಾಟಕಗಳು ಕಾಲಘಟ್ಟದಲ್ಲಿ ಹಾಸ್ಯದ ಮೂಲಕ ಮೂಢನಂಬಿಕೆಯಂತಹ ಅನಿಷ್ಟ ಪದ್ಧತಿಗಳಿಗೆ ಕಡಿವಾಣ ಹಾಕುತ್ತಾ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುತ್ತಾ ಬಂದಿವೆ ಮಹಾತ್ಮಾ ಗಾಂಧೀಜಿಗೆ ‘ಸತ್ಯ ಹರಿಶ್ಚಂದ್ರ’ ನಾಟಕವೊಂದು ಮುಂದೊಂದು ಪ್ರೇರಣೆ ನೀಡಿದ್ದಲ್ಲದೇ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿಯಾಗಿದ್ದು ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ ಎಂದರು.
               ಧಾರ್ಮಿಕ ಕಾರ್ಯಕ್ರಮಗಳು ಬಹು ಹಿಂದಿನಿಂದಲೂ ಸಮಾಜವನ್ನು ಒಗ್ಗೂಡಿಸುವಂತಹ ಕೆಲಸಗಳನ್ನು ಮಾಡುತ್ತಾ ಬಂದಿವೆ, ಹೀಗಾಗಿ ಬಹಳಷ್ಟು ದಿನಗಳಿಂದ ಹಬ್ಬ ಹರಿದಿನ, ಜಾತ್ರೆ, ಪುರಾಣ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವಂತಹ ಧಾರ್ಮಿಕ ಕಾರ್ಯಕ್ರಮಗಳು ಇಂದಿಗೂ ಗೌರವವನ್ನು ಕಾಪಾಡಿಕೊಂಡು ಬಂದಿವೆ ಜೀವನ ಮತ್ತು ಭಾಷೆಯನ್ನು ಪ್ರೇಕ್ಷಕನ ಹೃದಯಕ್ಕೆ ತಲುಪಿಸುವಲ್ಲಿ ಜನಪದ ನಾಟಕಗಳು ಯಶಸ್ವಿಯಾಗಿವೆ ಎಂಬುದರಲ್ಲಿ ಎರಡು ಮಾತಿಲ್ಲ ಎಂದರು.
                ಮೇರು ನಟರಿಗೆ ಮೆಟ್ಟಿಲಾದ ನಾಟಕಗಳು: ಸಾಹಿತಿ ಸಂಕಮ್ಮ ಸಂಕಣ್ಣನವರ ಮಾತನಾಡಿ, ರಂಗಭೂಮಿ ಸಮಾಜಕ್ಕೆ ಮಾರ್ಗದರ್ಶಿ ಸಂದೇಶ ನೀಡುತ್ತಾ ಬಂದಿವೆ, ನೈಜ ಚಿತ್ರಣಕ್ಕೆ ಒತ್ತು ನೀಡುವ ನಾಟಕಗಳು ಕಲಾವಿದನ ಮೂಲಕ ಮನಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಿದ್ದು ಡಾ.ರಾಜ್‍ಕುಮಾರ್ ಸೇರಿದಂತೆ ಬಾಲಕೃಷ್ಣ, ನರಸಿಂಹರಾಜು, ಕಲ್ಪನ, ಮಾ.ಹಿರಣ್ಣಯ್ಯ ಇನ್ನಿತರ ಮೇರು ನಟರನ್ನು ಚಲನ ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿದ ರಂಗಭೂಮಿ ಇಂದು ತಂತ್ರಜ್ಞಾನದ ಹಾವಳಿಯಿಂದ ನೇಪಥ್ಯಕ್ಕೆ ಸರಿಯುತ್ತಿದೆ ಎಂದು ಖೇದ ವ್ಯಕ್ತಪಡಿಸಿದರು.
                  ಶ್ಲಾಘನೀಯ ಕಾರ್ಯ: ವರ್ತಕರ ಸಂಘದ ಕಾರ್ಯದರ್ಶಿ ರಾಜು ಮೋರಿಗೇರಿ ಮಾತನಾಡಿ, ಸಂಪ್ರದಾಯ ಆಚರಣೆ ಮತ್ತು ಹಬ್ಬಗಳಿಗೆ ಅದರದೇ ಆದ ಗೌರವವಿದೆ ಪ್ರತಿ ವರ್ಷ ಗಣೇಶೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ದೇಶದ ಕಲೆ ಮತ್ತು ಸಂಸೃತಿಯನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿರುವ ಪಟ್ಟಣದ ಆಂಜನೇಯ ಯುವಕ ಮಂಡಳಿ ಕಾರ್ಯ ಶ್ಲಾಘನೀಯ ಎಂದರು
                   ಕಲಾವಿದರ ಬೆನ್ನು ತಟ್ಟುಬೇಕು: ಕಲಾವಿದ ಬಸಲಿಂಗಯ್ಯ ಹಿರೇಮಠ ಮಾತನಾಡಿ ಎಲ್ಲ ಕಡೆಯೂ ಉತ್ತಮ ಪ್ರದರ್ಶನ ಕಾಣುತ್ತಿರುವ ಶ್ರೀ ಕೃಷ್ಣ ಪರಿಜಾತ ನಾಟಕಕ್ಕೆ ಸುಮಾರು 125 ವರ್ಷಗಳ ಇತಿಹಾಸವಿದೆ, ಕಲಾತ್ಮಕ ನಾಟಕಗಳನ್ನು ನೋಡುವ ಜನತೆ ಕಡಿಮೆಯಾಗಿದ್ದಾರೆ, ಹೀಗಿದ್ದರೂ ಸಹ ಸುಮಾರು 9 ಬಾರಿ ನಾಟಕ ಪ್ರದರ್ಶನ ನೀಡಿರುವುದು ಸಂತೋಷದ ವಿಚಾರ ಬ್ಯಾಡಗಿ ಜನತೆಯ ಕಲೆ ಮತ್ತು ಸಾಹಿತ್ಯ ಜನಪದ ರಂಗ ಭೂಮಿಯ ಕಲಾವಿದರೆ ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ ಎಂದರು..
ವೇದಿಕೆಯಲ್ಲಿ ಪುರಸಭೆ ಸದಸ್ಯ ಎಂ.ಆರ್.ಭದ್ರಗೌಡ್ರ, ಶಂಭು ಮಠದ, ರಮೇಶ ಮೋಟೆಬೆನ್ನೂರ, ಪ್ರಕಾಶ ಛತ್ರದ, ಮಹಾಂತೇಶ ಎಲಿ, ಜಗದೀಶ ಹಾಲನಗೌಡ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here