ಸಂಪೂರ್ಣ ಸಾಲಮನ್ನಾಕ್ಕೆ ಆಗ್ರಹಿಸಿ ರೈತರ ಪ್ರತಿಭಟನೆ

0
13

 ಹೊಸಪೇಟೆ:

      ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರಾಜ್ಯದ ರೈತರ ಸಂಕಷ್ಟ ಪರಿಹಾರಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ರವರು ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.

      ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಗೋಣಿಬಸಪ್ಪ ಮಾತನಾಡಿ, ಸಿಎಂ ಕುಮಾರಸ್ವಾಮಿರವರು ಪ್ರಮಾಣವಚನ ಸ್ವೀಕರಿಸಿದ ಬಳಿಕ ರೈತರೊಂದಿಗೆ ಸಭೆ ನಡೆಸಿ 15 ದಿನದೊಳಗೆ ರೈತರ ಸಾಲಮನ್ನಾ ಮಾಡುವುದರ ಜೊತೆಗೆ ರೈತರ ಮನೆ ಬಾಗಿಲಿಗೆ ಋಣಮುಕ್ತ ಪ್ರಮಾಣ ಪತ್ರ ನೀಡುವುದಾಗಿ ಘೋಷಿಸಿದ್ದರು. ಆದರೆ ನಂತರದ ದಿನಗಳಲ್ಲಿ ಸಭೆ, ಸಮಾರಂಭಗಳಲ್ಲಿ ಸುಳ್ಳು ಹೇಳಿಕೆಗಳನ್ನು ನೀಡುತ್ತ, ರೈತರು ಸಾಲಮನ್ನಾ ಮಾಡಿ ಎಂದು ಒತ್ತಾಯಿಸುತ್ತೀರಿ. ಆದರೆ ಓಟು ಹಾಕುವಾಗ ಕುಮಾರಸ್ವಾಮಿ ನೆನಪಿಗೆ ಬರಲಿಲ್ಲವೇ? ಅಂತಾ ಜಾರಿಕೊಳ್ಳಲು ಹೊಸ ರಾಗ ಹಾಡುತ್ತಿದ್ದಾರೆ ಎಂದು ದೂರಿದರು.

      ಅಧಿಕಾರಕ್ಕೆ ಬಂದು ತಿಂಗಳುಗಳೇ ಕಳೆದರೂ ಈವರೆಗೂ ಸಾಲಮನ್ನಾ ಜಾರಿಗೊಳಿಸುವುದರ ಬಗ್ಗೆ ಯಾವುದೇ ಪ್ರಕ್ರಿಯೆ ಆರಂಭಿಸಿಲ್ಲ. ಅಲ್ಲದೇ ಸಭೆ, ಸಮಾರಂಭ ಹಾಗೂ ಮಾಧ್ಯಮಗಳ ಮುಂದೆ ಕಣ್ಣೀರು ಸುರಿಸುತ್ತ ಕಾಲಹರಣ ಮಾಡುತ್ತಿದ್ದಾರೆ. ರೈತರ ಸಮಸ್ಯೆ ಬಗೆಹರಿಸುವುದು ಬಿಟ್ಟು ಸಿಎಂ ಆದವರು ಹೆಂಗಸರ ರೀತಿ ಕಣ್ಣೀರು ಹಾಕಬೇಕೆ ? ಎಂದು ಪ್ರಶ್ನಿಸಿದರು.

      ಬಜೆಟ್ ಬಳಿಕ ಮುಖ್ಯಮಂತ್ರಿಗಳು ನೀಡುತ್ತಿರುವ ಹಲವು ಹೇಳಿಕೆಗಳಿಂದ ರೈತರು ಕಂಗಲಾಗಿದ್ದಾರೆ. ರೈತರು ದೈನಂದಿನ ಬದುಕು ಬಿಟ್ಟು ಸಾಲಮನ್ನಾ ಯಾವಾಗ ಆಗುತ್ತದೆ ಎಂದು ಜಾತಕ ಪಕ್ಷಿಯಂತೆ ಕಾಯುವಂತಾಗಿದೆ. ಇಷ್ಟೇಲ್ಲ ನಡೆಯುತ್ತಿದ್ದರೂ ಸಮ್ಮಿಶ್ರ ಸರಕಾರದ ಪಾಲುದಾರ ಪಕ್ಷವಾದ ಕಾಂಗ್ರೆಸ್ ಸಚಿವರು, ಮುಖಂಡರು ಮಾತ್ರ ಬಾಯಿಬಿಡುತ್ತಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶವ್ಯಕ್ತಪಡಿಸಿದರು. ಆಗಷ್ಟ 14ರೊಳಗೆ ರೈತರ ಸಾಲಮನ್ನಾ ಮಾಡದಿದ್ದರೆ ಆ. 15ರ ಸ್ವಾತಂತ್ರ್ಯ ದಿನೋತ್ಸವದಂದು ಮೌನವಾಗಿ ಕಪ್ಪುಬಾವುಟ ಪ್ರದರ್ಶನಮಾಡುವುದರ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

      ನಂತರ ತಹಸೀಲ್ದಾರ್ ಕಚೇರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸಂಘದ ಮುಖಂಡರಾದ ಎಂ.ಎಲ್.ಕೆ. ನಾಯ್ಡು, ಎಂ. ಬಸವರಾಜ್, ದೇವರಮನಿ ಮಹೇಶ್, ಉಜ್ಜಿನಯ್ಯ, ಗಂಟಿ ಸೋಮಶೇಖರ್, ಎಂ. ಸೋಮಣ್ಣ, ಮಂಜುನಾಥ್, ಬಾಷಾಸಾಬ್, ನಾಗರಾಜ್, ಕೃಷ್ಣ, ಪಂಪಾಪತಿ ಇದ್ದರು.

LEAVE A REPLY

Please enter your comment!
Please enter your name here