ಸಂಬಂಧಗಳ ಸಡಿಲತೆಯಿಂದ ಬದುಕು ದುರ್ಬಲ

0
37

ದಾವಣಗೆರೆ:

      ಪ್ರಸ್ತುತ ದಿನಗಳಲ್ಲಿ ಮಾನವೀಯ ಸಂಬಂಧಗಳು ಸಡಿಲಗೊಳ್ಳುತ್ತಿರುವುದರಿಂದ ಮನುಷ್ಯನ ಬದುಕು ದುರ್ಬಲಗೊಳ್ಳುತ್ತಿದೆ ಎಂದು ರಂಭಾಪುರಿ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಕಳವಳಪಟ್ಟರು.

      ನಗರದ ಶ್ರೀಮದ್ ಅಭಿನವ ರೇಣುಕ ಮಂದಿರದಲ್ಲಿ ನಡೆಯುತ್ತಿರುವ ಆಷಾಢ ಮಾಸದ ಇಷ್ಟಲಿಂಗ ಮಹಾಪೂಜಾ ಹಾಗೂ ಜನಜಾಗೃತಿ ಧರ್ಮ ಸಮಾವೇಶದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮಾನವೀಯ ಸಂಬಂಧಗಳು ಗಟ್ಟಿಗೊಳ್ಳಬೇಕಾಗಿರುವ ಇಂದಿನ ಕಾಲಘಟ್ಟದಲ್ಲಿ ಆಧುನಿಕತೆಯ ಪ್ರಭಾವದಿಂದ ಸಂಬಂಧಗಳು ಸಡಿಲಗೊಳ್ಳುತ್ತಿವೆ. ಹೀಗಾಗಿ ಬದುಕು ದುರ್ಬಲಗೊಳ್ಳುತ್ತಿದೆ ಎಂದು ಹೇಳಿದರು.

      ಜೀವನ ಉತ್ಕರ್ಷತೆಗೆ ಮತ್ತು ಸಾಮರಸ್ಯ ಬದುಕಿಗೆ ಸಹಬಾಳ್ವೆಯ ಜೀವನ ಅವಶ್ಯವಾಗಿದೆ. ಬೆಸೆಯುವ ಸೇತುವೆ ಮತ್ತು ಬೇರ್ಪಡಿಸುವ ಗೋಡೆ ಈ ಎರಡನ್ನೂ ನಿರ್ಮಿಸುವ ಮೂಲ ವಸ್ತುಗಳು ಒಂದೇ. ಆದರೆ, ಮನುಷ್ಯ ಸೇತುವೆಯನ್ನು ನಿರ್ಮಿಸಬೇಕೆ ಹೊರತು ಗೋಡೆಗಳನ್ನಲ್ಲ ಎಂದು ಸಲಹೆ ನೀಡಿದರು.

      ಒಂದು ನಿಮಿಷದಲ್ಲಿ ಬದುಕು ಬದಲಾಗುತ್ತದೆ ಎಂದು ಹೇಳಲಾಗದು. ಆದರೆ, ಒಂದು ನಿಮಿಷದಲ್ಲಿ ತೆಗೆದುಕೊಂಡ ನಿರ್ಧಾರ ಬದುಕನ್ನು ಬದಲಿಸುತ್ತದೆ. ಮೈ ಮುರಿದು ದುಡಿಯಯುವವರ ಹಾಗೂ ನಿರಂತರ ಕ್ರಿಯಾಶೀಲ ಜೀವನವನ್ನು ರೂಪಿಸಿಕೊಂಡು ಬಾಳಬೇಕಾಗಿದೆ. ದುಡಿಮೆಯಲ್ಲಿ ಕ್ರಮ, ನಿಯಮ, ಗುರಿ ಹಾಗೂ ದಕ್ಷತೆ ಇರಬೇಕೆಂಬುದನ್ನು ವ್ಮರೆಯಬಾರದು ಎಂದ ಶ್ರೀಗಳು, ಸಾಧನೆಗೆ ಮನಸ್ಸು ಬೇಕು. ಶುದ್ಧ ಕಾಯಕದಿಂದ ನಮ್ಮ ಬದುಕು ಸಬಲಗೊಳ್ಳುತ್ತದೆ ಎಂದರು.

      ನಮ್ಮ ದೇಹದಲ್ಲಿರುವ ಒಂದು ಭಾಗ ವಿಶ್ರಾಂತಿ ತೆಗೆದುಕೊಂಡರೆ ದೇಹದ ಸ್ಥಿತಿ ಏನಾದೀತು. ಅಸಿ, ಮಸಿ, ಕೃಷಿ ದೇಶಕ್ಕೆ ಬಹು ಮುಖ್ಯವಾಗಿದೆ. ದೇಶ ಕಾಯುವ ಸೈನಿಕ, ಉತ್ತಮ ಸಾಹಿತಿ ರಚಿಸಿದ ಸಾಹಿತ್ಯ, ಅನ್ನ ಕೊಡುವ ರೈತನನ್ನು ಎಂದಿಗೂ ಮರೆಯಬಾರದು. ದೇಶದ ನಾಡಿನ ಶ್ರೇಯಸ್ಸಿಗೆ ಇವರೆಲ್ಲರೂ ಅವಶ್ಯಕವಾಗಿ ಬೇಕು ಎಂದು ನುಡಿದರು.

      ಅನಿತ್ಯವಾದ ಶರೀರ ಶಾಶ್ವತವಲ್ಲದ ಸಂಪತ್ತು ನೆಚ್ಚಿ ಯಾರೂ ಸಹ ಕೆಡಬಾರದು. ಸತ್ಯ ಧರ್ಮ ಶಾಂತಿ ಬಾಳಿನ ಉಸಿರಂದು ಶ್ರೀಜಗದ್ಗುರು ರೇಣುಕಾಚಾರ್ಯರು ಹಾಗೂ ನಾಡಿನ ಅನೇಕ ಮಹಾತ್ಮರು ಎಚ್ಚರಿಸಿದ್ದಾರೆ. ಇವುಗಳನ್ನು ಅಳವಡಿಸಿಕೊಂಡು ಬದುಕಬೇಕೆಂದು ಕಿವಿಮಾತು ಹೇಳಿದರು.

      ಹರಪನಹಳ್ಳಿ ತೆಗ್ಗಿನಮಠದ ಶ್ರೀವರ ಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಉಜ್ವಲ ಭವಿಷ್ಯಕ್ಕೆ ಧರ್ಮ ಪರಿಪಾಲನೆ ಅವಶ್ಯಕವಾಗಿದೆ. ಹುಟ್ಟು ಸಾವು ನಮ್ಮ ಕೈಯಲ್ಲಿ ಇಲ್ಲ. ಬದುಕು ಮಾತ್ರ ನಮ್ಮ ಕೈಯಲ್ಲಿದೆ. ಬಾಳ ಬದುಕನ್ನು ಸಮೃದ್ಧಗೊಳಿಸಿಕೊಳ್ಳಬೇಕಾದುದು ಅವರವರ ಜವಾಬ್ದಾರಿ ಎಂದರು.

ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀಓಂಕಾರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಇಂದಿನ ವೈಚಾರಿಕ ಯುಗದಲ್ಲಿ ಧರ್ಮ ಸಂರಕ್ಷಣೆ ಮಾಡುವುದು ನಮ್ಮ ಕರ್ತವ್ಯವಾಗಬೇಕು. ಸಂಸ್ಕಾರ ಸಂಸ್ಕತಿ ಸಭ್ಯತೆ ಸ್ವಾಭಿಮಾನ ಬೆಳೆಸಲು ಎಲ್ಲರೂ ಶ್ರಮಿಸಬೇಕು ಎಂದರು.

      ಕಾರ್ಮಿಕ ಮುಖಂಡ ಹೆಚ್.ಕೆ. ರಾಮಚಂದ್ರಪ್ಪನವರಿಗೆ “ಕಾಯಕ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚನ್ನಗಿರಿಯ ಶ್ರೀಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಉಪಸ್ಥಿತರಿದ್ದರು.ಗದುಗಿನ ವೀರೇಶ ಕಿತ್ತೂರು ಅವರಿಂದ ಸಂಗೀತ ಸೇವೆ ಜರುಗಿತು. ಭೂಸನೂರು ವಿಶ್ವನಾಥ ಸ್ವಾಗತಿಸಿದರು. ಐನಹಳ್ಳಿ ವಸಂತಕುಮಾರಿ ನಿರೂಪಿಸಿದರು.

LEAVE A REPLY

Please enter your comment!
Please enter your name here