ಸಂವಿಧಾನ ಅಗೌರವ ತೋರುವಂತ ಆಡಳಿತ ನಮ್ಮ ದೇಶಕ್ಕೆ ಅಗತ್ಯವಿಲ್ಲ

0
4

ಹಾವೇರಿ:

       ಸಂವಿಧಾನ ಅಗೌರವ ತೋರುವಂತ ಆಡಳಿತ ನಮ್ಮ ದೇಶಕ್ಕೆ ಅಗತ್ಯವಿಲ್ಲ. ಜಾತ್ಯಾತೀತ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುವಂತ ಅಂಬೇಡ್ಕರ್ ಹಾಗೂ ನೆಹರೂ ಅವರ ಮಾದರಿ ಆಡಳಿತ ನಮ್ಮ ದೇಶಕ್ಕೆ ಅಗತ್ಯವಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ವಿ.ಆರ್.ಸುದರ್ಶನ ಹೇಳಿದರು.ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

        ದೇಶದ ಅಭಿವೃದ್ಧಿಗೆ ಬಿಜೆಪಿ ಮಾರಕವಾಗಿದೆ. ಈ ದೇಶ ಜಾತ್ಯಾತೀತ, ವಿಭಿನ್ನತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ಸಂವಿಧಾನದ ಮೇಲೆ ನಂಬಿಕೆಯಿಟ್ಟಿರುವ ದೇಶ. ಇಂತಹ ದೇಶದಲ್ಲಿ ಜಾತಿ, ಧರ್ಮದ ಹೆಸರಲ್ಲಿ ದೇಶವನ್ನು ಛಿದ್ರಗೊಳಿಸಲು ಬಿಜೆಪಿ ಹವಣಿಸುತ್ತಿದೆ. ಅದರ ಭಾಗವಾಗಿ ಕೇಂದ್ರದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸಂವಿಧಾನ ವಿರೋಧಿ ಧೋರಣೆ ಅನುಸರಿಸಿದೆ ಎಂದು ದೂರಿದರು.

        ದೇಶದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರಕಾರ ರೈತರನ್ನು ಕಡೆಗಣಿಸಿದೆ. ಮಹಿಳೆಯರನ್ನು ಶೋಷಣೆ ಮಾಡುತ್ತಿದೆ. ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸಿದೆ. ವಿದ್ಯಾರ್ಥಿ ಹಾಗೂ ಯುವಜನರಿಗೆ ಉದ್ಯೋಗ ನೀಡದೆ, ನಿರುದ್ಯೋಗ ಸೃಷ್ಠಿಗೆ ಕಾರಣವಾಗಿದೆ. ದೇಶದ ಸಾಮಾನ್ಯ ನಾಗರಿಕನ ಅಭಿವೃದ್ಧಿಗೆ ಯಾವ ಸೌಲಭ್ಯಗಳನ್ನು ನೀಡದೇ, ಮೋಸ ಮಾಡಿದ್ದು, ಎಲ್ಲ ವರ್ಗದ ಅಭಿವೃದ್ಧಿ ವಿಚಾರದಲ್ಲಿ ವಿಫಲವಾಗಿದೆ ಎಂದು ತಿಳಿಸಿದರು.

        ಇಂದಿನ ಬಿಜೆಪಿ ಸರಕಾರ ಯುವಕರಿಗೆ ತಪ್ಪ ಮಾಹಿತಿ ನೀಡಿ, ಅವರಿಂದ ಪೊಲಿಟಿಕಲ್ ಮೈಲೆಜ್ ಪಡೆದುಕೊಳ್ಳಲು ಹೊರಟಿದೆ. ಸಮಾಜ ಒಡೆಯುವ ಕೆಲಸಕ್ಕೆ ಯುವಕರನ್ನು ಎಂದಿಗೂ ಕಾಂಗ್ರೆಸ್ ಬಳಸಿಕೊಳ್ಳುವದಿಲ್ಲ. ಸುಳ್ಳು ಒಂದು ದಿನ ಹೊರ ಬಿದ್ದಾಗ ಅದರ ಪರಿಣಾಮ ಘೋರವಾಗಿರುತ್ತದೆ. ಎರಡು ಕೋಟಿ ಉದ್ಯೋಗ ನೀಡುತ್ತೇವೆ ಎಂದು ಸುಳ್ಳು ಹೇಳಿದ್ದ ಪ್ರದಾನಿ ವಿರುದ್ಧ ಯುವಕರು ತಿರುಗಿ ಬಿದಿದ್ದಾರೆ ಎಂದು ತಿಳಿಸಿದರು.

         ದೇಶದ ಭದ್ರತೆ, ರಕ್ಷಣಾ ವಿಚಾರದಲ್ಲಿ ಬಿಜೆಪಿ ಭ್ರಷ್ಟಾಚಾರ ಎಸಗಿದೆ. ದೇಶದ ರಕ್ಷಣೆಗಾಗಿ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಸುಮಾರ 30 ಸಾವಿರ ಕೋಟಿಯಷ್ಟು ಭ್ರಷ್ಟಾಚಾರ ಮಾಡಲಾಗಿದೆ. ಈ ವಿಷಯ ಹೊರಬರುತ್ತಿದ್ದಂತೆ ಕೇಂದ್ರ ಸರಕಾರ ದಿನಕೊಂದು ಸುಳ್ಳು ಹೇಳಿಕೊಂಡ ಜನರ ಗಮನ ಬೇರೆ ಕಡೆಗೆ ಸೆಳೆಯಲು ಮುಂದಾಗಿದೆ. ಈ ಬಗ್ಗೆ ದೇಶದ ಸವೋಚ್ಛ ನ್ಯಾಯಾಲಯದಲ್ಲಿ ದಾಖಲೆಗಳು ಕಳೆದು ಹೋಗಿವೆ ಎಂದು ಹೇಳಿಕೆ ನೀಡಿ, ಛೀಮಾರಿ ಹಾಕಿಸಿಕೊಂಡಿದೆ. ಇಷ್ಟೊಂದು ಭ್ರಷ್ಟಾಚಾರ ಮಾಡಿರುವ ಬಿಜೆಪಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ ಎಂದು ತಿಳಿಸಿದರು.

         ನರೇಂದ್ರ ಮೋದಿ ದೇಶದ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವದನ್ನು ಬಿಟ್ಟು ಭಾವನಾತ್ಮಕ ವಿಚಾರದಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ದೇಶದ ಭದ್ರತೆ, ಸೈನಿಕರು, ರಕ್ಷಣಾ ವ್ಯವಸ್ಥೆಯ ವಿಷಯಗಳನ್ನ ಮುಂದಿಟ್ಟುಕೊಂಡು ಜನರ ಭಾವನೆಗಳೊಂದಿಗೆ ಆಟವಾಡುತ್ತಿದೆ. ಪುಲ್ವಾಮಾ ದಾಳಿ, ಬಾಲಕೋಟ್ ದಾಳಿ, ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ಮುಂತಾದ ವಿಷಯಗಳನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿರುವದು ನಾಚಿಕೆಯ ಸಂಗತಿ ಎಂದು ತಿಳಿಸಿದರು.

         ಕಳೆದ ಐದು ವರ್ಷದಲ್ಲಿ ಕೇಂದ್ರದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಹಾಗೂ ಬಿಜೆಪಿ ಸರಕಾರ ಜನಪರ, ಅಭಿವೃದ್ಧಿ ಪರವಾಗಿ ಯಾವ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಜನರಿಗೆ ತಿಳಿಸಲಿ. ಕಳೆದ ಚುನಾವಣೆಯಲ್ಲಿ ಬಿಜೆಪಿ ನೀಡಿದ್ದ ಎಲ್ಲ ಭರವಸೆಗಳು ಏನಾದವು ಎಂದು ಪ್ರಶ್ನಿಸಿದರು. ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಏನು ಮಾಡಿದ್ದಾರೆ ಎಂದು ಜನರಿಗೆ ಉತ್ತರಿಸಬೇಕು ಎಂದು ತಿಳಿಸಿದರು.

         ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮೋದಿ ಹಾಗೂ ಆರ್.ಎಸ್.ಎಸ್ ವಿಚಾರಗಳನ್ನು ಹೇರಿದೆ. ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ದೇಶದ ಬಡ ಜನರಿಗೆ ನ್ಯಾಯ ಒದಗಿಸುವ ಯೋಜನೆಗಳನ್ನು ಜಾರಿಗೆ ತರುವ ಭರವಸೆ ನೀಡಿದೆ. ಆದರೆ, ಬಿಜೆಪಿ ದೇಶದ ಜನರ ಅಭಿವೃದ್ಧಿಗೆ ಪೂರಕವಾದ ಯೋಜನೆಗಳನ್ನು ಈಡೇರಿಸಿಲ್ಲ ಬಿಜೆಪಿ ಪ್ರಣಾಳಿಕೆಗೆ ದೂರದೃಷ್ಠಿಯಿಲ್ಲ ಎಂದರು.

         ದೇಶದಲ್ಲಿ ಈ ಹಿಂದೆ ನಡೆದ ಎಲ್ಲ ಭಯೋತ್ಪಾದಕ ಕೃತ್ಯಗಳ ನಡೆದಾಗ ಬಿಜೆಪಿ ಅಧಿಕಾರದಲ್ಲಿತ್ತು. ಇತ್ತೀಚೆಗೆ ಪುಲ್ವಾಮಾ, ಬಾಲಕೋಟ್ ದಾಳಿ ನಡೆದಾಗಲೂ ಬಿಜೆಪಿಯೇ ಅಧಿಕಾರದಲ್ಲಿದೆ ಯಾಕೆ ಭಯೋತ್ಪಾದನೆ ತಡೆಗಟ್ಟಲು ಸಾಧ್ಯವಾಗಲಿಲ್ಲ. ನಿಮಗೆ ಭಯೋತ್ಪಾದನೆ ತಡೆಗಟ್ಟಲು ಮನಸ್ಸು ಇಲ್ಲವೋ, ಅಥವಾ ಧೈರ್ಯವಿಲ್ಲವೋ ಎಂದು ಬಿಜೆಪಿಯನ್ನು ತರಾಟೆ ತೆಗೆದುಕೊಂಡರು. ಈ ಹಿಂದೆಯೂ ಭಾರತ ಸರ್ಜಿಕಲ್ ದಾಳಿ ನಡೆದಿತ್ತು.

          ಮೋದಿ ಅವಧಿಯಲ್ಲಿ ಎರಡು ಸರ್ಜಿಕಲ್ ದಾಳಿ ನಡೆಸಿದರೆ, ಯು.ಪಿ.ಎ ಅಧಿಕಾರದಲ್ಲಿ 6 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದರೂ, ಅಂಧಿನ ಸರಕಾರ ಯಾವತ್ತೂ ಅದನ್ನು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲಿಲ್ಲ. ದೇಶದ ಭದ್ರತೆ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು. ಭಾರತದ ಸೈನ್ಯ ಯಾವುದೇ ಸರಕಾರದ ಆಡಳಿತದಲ್ಲಿ ಪಾಕಿಸ್ತಾನದ ವಿರುದ್ಧ ಸೋಲು ಖಂಡಿಲ್ಲ ಎಂದು ವಿ.ಆರ್.ಸುದರ್ಶನ ಬಿಜೆಪಿ ಪಕ್ಷದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

       ಕೆಪಿಸಿಸಿ ಉಪಾಧ್ಯಕ್ಷ ಬಳಿಕ ವೀರಣ್ಣ ಮತ್ತಿಗಟ್ಟಿ, ಬಿಜೆಪಿ ಈ ಚುನಾವಣೆಯಲ್ಲಿ ಜಾತಿ, ಧರ್ಮದ ಹೆಸರಲ್ಲಿ ಅಧಿಕಾರಕ್ಕೆ ಬರಲು ಮುಂದಾಗಿದೆ. ಬಿಜೆಪಿ ಚುನಾವಣೆಯಲ್ಲಿ ಈ ಬಾರಿ ಭಾವನಾತ್ಮಕ ವಿಚಾರಗಳನ್ನು ಮೇಲೆ ಚುನಾವಣೆ ಎದುರಿಸಲು ಮುಂದಾಗಿದೆ. ಕಳೆದ ಐದು ವರ್ಷದಲ್ಲಿ ಬಿಜೆಪಿ ನೀಡಿದ್ದ ಯಾವ ಭರವಸೆಯನ್ನು ಈಡೇರಿಸಿಲ್ಲ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಐ.ಜಿ.ಸನದಿ,ಜಯಸಿಂಹ,ಶ್ರೀನಿವಾಸ್ ಹಳ್ಳಳ್ಳಿ ಮಹೇಂದ್ರಸಿಂಗ್ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here