ಸಮಗ್ರ ಕರ್ನಾಟಕದ ಅಭಿವೃದ್ಧಿಗಾಗಿ ವಿಶ್ವ ಕರವೇ ಒತ್ತಾಯ

0
20

ದಾವಣಗೆರೆ:

      ಅಭಿವೃದ್ಧಿಯಲ್ಲಿ ಕಡೆಗಣಿಸಲ್ಪಟ್ಟಿರುವ ಉತ್ತರ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗಾಗಿ ಒತ್ತಾಯಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

      ನಗರದ ಜಯದೇವ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು, ಕಲ್ಬುರ್ಗಿಯಲ್ಲಿ ಪ್ರತ್ಯೇಕ ರಾಜ್ಯದ ಧ್ವಜ ಹಾರಿಸಿದ್ದ ಎಂ.ಎಸ್. ಪಾಟೀಲ್ ನರಿಬೋಳರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿ, ಎಸಿ ಕಚೇರಿಗೆ ತೆರಳಿ ಉಪವಿಭಾಗಾಧಿಕಾರಿಗಳ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

      ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವ ಕರವೇ ರಾಜ್ಯಾಧ್ಯಕ್ಷ ಕೆ.ಜಿ.ಯಲ್ಲಪ್ಪ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಜೊತೆ, ಜೊತೆಯಾಗಿಯೇ ಕರ್ನಾಟಕದ ಏಕೀಕರಣ ಚಳವಳಿ ನಡೆದಿದ್ದರ ಭಾಗವಾಗಿ, ಹೈದ್ರಾಬಾದ್ ಕರ್ನಾಟಕ, ಹಳೇ ಮೈಸೂರು ಸಂಸ್ಥಾನ, ಮದ್ರಾಸ್ ಪ್ರೆಸಿಡೆನ್ಸಿಗಳಾಗಿ ಹರಿದು ಹಂಚುಹೋಗಿದ್ದ ನಾಡನ್ನು ಭಾಷಾವಾರು ಪ್ರಾಂತ್ಯಗಳ ಒಗ್ಗೂಡಿಸಲಾಯಿತು.

      ಈ ಏಕೀಕರಣ ಚಳುವಳಿಯಲ್ಲಿ ಉತ್ತರ ಕರ್ನಾಟಕದ ಅನೇಕ ಮಹಾನೀಯರು ಮುಂಚೂಣಿಯಲ್ಲಿದ್ದರು. ಅವರ ತ್ಯಾಗ, ಬಲಿದಾನದಿಂದಲೇ ಅಖಂಡ ಕರ್ನಾಟಕ ನಿರ್ಮಾಣವಾಗಿದೆ. ಆದರೆ, ಇದರ ಪರಿವೇ ಇಲ್ಲದ ಮುಖ್ಯಮಂತ್ರಿ ಕುಮಾರಸ್ವಾಮಿ ಬಜೇಟ್‍ನಲ್ಲಿ ಉತ್ತರ ಕರ್ನಾಟಕವನ್ನು ಕಡೆಗಣಿಸಿ, ಪ್ರತ್ಯೇಕ ಕೂಗಿಗೆ ಕಾರಣವಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.

      ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಕಾರಣಕ್ಕಾಗಿ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಮರೀಚಿಕೆಯಾಗಿದೆ. ಇಂದಿಗೂ ಸಹ ಅಲ್ಲಿನ 13 ಜಿಲ್ಲೆಗಳಲ್ಲಿ ಕುಡಿಯಲು ಯೋಗ್ಯವಾದ ನೀರು ಸಹ ಇಲ್ಲವಾಗಿದೆ. ಅಲ್ಲದೆ, ದುಡಿಯುವ ಕೈಗಳಿಗೆ ಕೆಲಸ ಇಲ್ಲದ ಕಾರಣ ಹೊಟ್ಟೆಪಾಡಿಗಾಗಿ ಉದ್ಯೋಗ ಅರಿಸಿ ಬೇರೆಕಡೆಗೆ ವಲಸೆ ಹೋಗುತ್ತಿದ್ದಾರೆ. ಆದ್ದರಿಂದ ರಾಜ್ಯ ಸರ್ಕಾರದ ತಕ್ಷಣವೇ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಗಮನಹರಿಸಿ, ಮಹಾದಾಯಿ ಮತ್ತು ಕಳಾಸಬಂಡೂರಿ ನಾಲಾ ಜೋಡಣೆ ಬಗ್ಗೆ ಕ್ರಮವಹಿಸಿ ಕುಡಿಯುವ ನೀರಿನ ಬವಣೆ ತಪ್ಪಿಸಬೇಕು. ಜನರು ವಲಸೆ ಹೋಗುವುದನ್ನು ತಡೆಯಲು ಯಾವುದಾದರೂ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಬಜೆಟ್‍ನಲ್ಲಿ ಬೆಂಗಳೂರು, ಮೈಸೂರು ಭಾಗಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ, ಉತ್ತರ ಕರ್ನಾಟಕದ ಭಾಗಕ್ಕೆ ತಾರತಮ್ಯ ಮಾಡಿದ್ದು, ತಕ್ಷಣವೇ ಇದನ್ನು ಸರಿ ಪಡಿಸಿ ಉತ್ತರ ಕರ್ನಾಟಕ ಸೇರಿದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿದರು.

      ಪ್ರತಿಭಟನೆಯಲ್ಲಿ ವಿಶ್ವ ಕರವೇಯ ಜಿಲ್ಲಾ ಉಸ್ತುವಾರಿ ನಾಗರಾಜ್ ಗೌಡ, ಪ್ರಧಾನ ಕಾರ್ಯದರ್ಶಿ ಅಮ್ಜದ್ ಅಲಿ, ಸೈಯದ್ ನಜೀರ್, ಸಿಖಂದರ್ ಹಜರತ್, ಮಂಜುನಾಥ್ ಗಂಗೂರ, ದಯಾನಂದ, ರಾಮಣ್ಣ ತೆಲಗಿ, ನಾಗರಾಜ್ ಜಮ್ನಹಳ್ಳಿ, ಎಸ್.ಶ್ರೇಯಸ್, ಸಂತೋಷ, ಮಂಜುನಾಥ್ ಪವಾರ್ ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here