‘ಸಮರ್ಥನೆಗಾಗಿ ಸಂಪರ್ಕ’ ಅಭಿಯಾನಕ್ಕೆ ತಿಪ್ಪಾರೆಡ್ಡಿ ಚಾಲನೆ ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆಗಳ ಪ್ರಚಾರ

0
36

ಚಿತ್ರದುರ್ಗ
   ನರೇಂದ್ರ ಮೋದಿ ಅವರ ಸರ್ಕಾರ ನಾಲ್ಕು ವರ್ಷಗಳಲ್ಲಿ ಅನೇಕ ಜನಪ್ರಿಯ ಯೋಜನೆಗಳನ್ನು ಜಾರಿ ಮಾಡಿದೆ. ಇವುಗಳ ಕುರಿತು ಜನರಿಗೆ ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಕೆಲವು ಗಣ್ಯರಿಗೆ ಪುಸ್ತಕಗಳನ್ನು ನೀಡಲಾಗುತ್ತಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದರು.
ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ‘ಸಮರ್ಥನೆಗಾಗಿ ಸಂಪರ್ಕ ಅಭಿಯಾನ’ ಅಂಗವಾಗಿ ನಗರದ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ವಕೀಲರನ್ನು ಭೇಟಿ ಮಾಡಿ ನರೇಂದ್ರ ಮೋದಿ ಅವರ ನಾಲ್ಕು ವರ್ಷಗಳ ಸಾಧನೆ ಕುರಿತ ‘ಶುದ್ಧ ನಡೆ – ಸೂಕ್ತ ವಿಕಾಸ’ ಪುಸ್ತಕವನ್ನು ವಕೀಲರ ಸಂಘದ ಅಧ್ಯಕ್ಷರಿಗೆ ನೀಡಿ ಮಾತನಾಡಿದರು.

   ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಐದು ವರ್ಷಗಳ ಕಾಲ ಉತ್ತಮ ಆಡಳಿತ ನಡೆಸಿತ್ತು. ಆದರೆ ಅವನ್ನು ಜನರಿಗೆ ತಿಳಿಸುವಲ್ಲಿ ಬಿಜೆಪಿ ಪಕ್ಷದವರು ಹೆಚ್ಚು ಗಮನ ನೀಡಲಿಲ್ಲ. ಇದರಿಂದಾಗಿ ಕೇಂದ್ರದಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಕೇಂದ್ರ ಸರ್ಕಾರದ ಸಾಧನೆಗಳನ್ನು ಪ್ರಜ್ಞಾವಂತರು ತಿಳಿದುಕೊಳ್ಳಬೇಕು. ಇದರಿಂದ ಇತರರು ತಿಳಿಯಲು ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸಾಹಿತಿಗಳು, ವಕೀಲರು, ಪ್ರಾಧ್ಯಾಪಕರು ಸೇರಿದಂತೆ ಅನೇಕ ಪ್ರಮುಖ ವ್ಯಕ್ತಿಗಳಿಗೆ ಕೇಂದ್ರ ಸರ್ಕಾರದ ಸಾಧನೆಗಳ ಕುರಿತು ಪುಸ್ತಕಗಳನ್ನು ನೀಡಲಾಗುತ್ತಿದೆ. ಅದರಂತೆ ಎಲ್ಲಾ ಕ್ಷೇತ್ರಗಳಲ್ಲಿಯೂ ಆಯ್ದ ಗಣ್ಯರಿಗೆ ಪುಸ್ತಕಗಳನ್ನು         ವಿತರಿಸಲಾಗುತ್ತಿದೆ. ಇದನ್ನು ಓದಿ ತಿಳಿದ ಅವರು ಇತರರಿಗೂ ತಿಳಿಸಬೇಕೆಂದು ಮನವಿ ಮಾಡಿದರು.

  10 ಲಕ್ಷ ರೂ. ಅನುದಾನ ; ಇದೇ ಸಂದರ್ಭದಲ್ಲಿ ಶಾಸಕರು ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಭವನದ ಮೇಲ್ಛಾವಣಿ ನಿರ್ಮಾಣಕ್ಕೆ 10 ಲಕ್ಷ ರೂ. ಅನುದಾನ ನೀಡಲಾಗುವುದಾಗಿ ಭರವಸೆ ನೀಡಿ ನಾನು ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದಾಗಿನಿಂದಲೂ ವಕೀಲರ ಸಂಘಕ್ಕೆ ಅನುದಾನ ನೀಡಲು ಸಿದ್ಧನಿದ್ದೇನೆ. ಆದರೆ ನೀವೇ ಅದನ್ನು ಬಳಸಿಕೊಳ್ಳುತ್ತಿಲ್ಲ. ಅನೇಕ ಬಾರಿ ಅನುದಾನ ನೀಡುವುದಾಗಿ ನಾನು ತಿಳಿಸಿದ್ದರೂ ಸಂಘದ ಯಾವುದೇ ಪದಾಧಿಕಾರಿಗಳು ಅನುದಾನ ಪಡೆಯಲು ಮುಂದೆ ಬಂದಿಲ್ಲ. ಆದರೆ ಈ ಬಾರಿ ಹಾಗಾಗದಂತೆ ನಿಗಾ ವಹಿಸಬೇಕು. ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

  ವಕೀಲರ ಸಂಘದ ಜಿಲ್ಲಾಧ್ಯಕ್ಷ ಎನ್.ವಿ.ವಿಶ್ವನಾಥ್ ಮಾತನಾಡಿ, ಪ್ರಸ್ತುತ ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರವಾಗಿದೆ. ಎಲ್ಲ ಪಕ್ಷಗಳಲ್ಲಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ಆರಂಭವಾಗಿದೆ. ವಕೀಲರಲ್ಲಿ ಕೆಲವರು ನಗರಸಭೆ ಚುನಾವಣೆಗೆ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ. ಹಾಗಾಗಿ ಬಿಜೆಪಿ ವತಿಯಿಂದ ಕನಿಷ್ಠ ನಾಲ್ಕರಿಂದ ಐದು ಜನರಿಗೆ ಟಿಕೆಟ್ ನೀಡಬೇಕು. ಶಾಸಕರಲ್ಲಿ ಮನವಿ ಮಾಡಿದಾಗ ಜಿ.ಹೆಚ್.ತಿಪ್ಪಾರೆಡ್ಡಿ ಟಿಕೆಟ್ ನೀಡುವ ಕುರಿತು ಪರಿಶೀಲಿಸುವುದಾಗಿ ತಿಳಿಸಿದರು.

  ಜಿಲ್ಲಾ ವಕೀಲರ ಸಂಘದ ವಿವಿಧ ಪದಾಧಿಕಾರಿಗಳು ಹಾಗೂ ವಕೀಲರು ಈ ಸಂದರ್ಭದಲ್ಲಿ ಹಾಜರಿದ್ದರು. ಇದಕ್ಕೂ ಮೊದಲು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಸಂಶೋಧಕ ಡಾ.ಬಿ.ರಾಜಶೇಖರಪ್ಪ ಅವರ ನಿವಾಸಕ್ಕೆ ತೆರಳಿ ‘ಶುದ್ಧ ನಡೆ – ಸೂಕ್ತ ವಿಕಾಸ’ ಪುಸ್ತಕ ನೀಡಿದರು. ನಂತರ ಜಿಲ್ಲಾ ನ್ಯಾಯಾಧೀರನ್ನು ಭೇಟಿ ಮಾಡಿ ಪುಸ್ತಕ ನೀಡಿದರು. ವಿಭಾಗೀಯ ಪ್ರಮುಖ ಜಿ.ಎಂ.ಸುರೇಶ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರತ್ನಮ್ಮ, ಮಲ್ಲಿಕಾರ್ಜುನ್, ವಕ್ತಾರ ನಾಗರಾಜ್ ಬೇದ್ರೆ, ಜೆ.ಎಸ್.ಶಂಭು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here