ಸಮರ್ಪಕ ಯೋಜನೆ ರೂಪಿಸದಿರುವುದೇ ತಾಲ್ಲೂಕು ಹಿಂದುಳಿಯಲು ಕಾರಣ

0
10

ಕೂಡ್ಲಿಗಿ:

      ಸಮರ್ಪಕ ಯೋಜನೆಗಳನ್ನು ರೂಪಿಸದೆ ಇರುವುದೇ ತಾಲ್ಲೂಕು ಹಿಂದುಳಿಯಲು ಕಾರಣವಾಗಿದೆ. ಅದ್ದರಿಂದ ಎಲ್ಲಾ ಇಲಾಖೆಗಳು ಅವಶ್ಯವಾದ ಕ್ರಿಯಾ ಯೋಜನೆಗಳನ್ನು ಸಿದ್ದಪಡಿಸಿಟ್ಟುಕೊಳ್ಳಬೇಕು ಎಂದು ಶಾಸಕ ಎನ್.ಎವೈ. ಗೋಪಾಲಕೃಷ್ಣ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅವರು ಸೋಮವಾರ ಪ್ರವಾಸಿ ಮಂದಿರಲ್ಲಿ ನಡೆದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಸದಸ್ಯರು ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

      ಜಿಲ್ಲೆಯ ಖನಿಜ ನಿಧಿ ಹಾಗೂ ಹೈದ್ರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಸಾಕಷ್ಟು ಅನುದಾನ ಬರಲಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳವ ಮೂಲಕ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲ್ಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರು, ರಸ್ತೆ, ಶಿಕ್ಷಣ, ಆರೋಗ್ಯ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಕೊಡಬೇಕಾಗಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಸದಸ್ಯರೊಂದಿಗೆ ಚರ್ಚಿಸಿ ಅವರು ಸೂಚಿಸುವ ಕಾಮಗಾರಿಗಳನ್ನು ಕ್ರಿಯಾ ಯೋಜನೆಯಲ್ಲಿ ಸೇರ್ಪಡೆ ಮಾಡಿಕೊಳ್ಳಬೇಕು. ಕ್ರಿಯಾ ಯೋಜನೆ ರೂಪಿಸುವಾಗ ಅಧಿಕಾರಿಗಳಿಗೆ ತಮ್ಮ ಕಾರ್ಯ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಪರಿಪೂರ್ಣ ಪರಿಚಯವಿರಬೇಕು. ಇದರಿಂದ ಯಾವ ಗ್ರಾಮಕ್ಕೆ ಯಾವ ಯೋಜನೆ ನೀಡಬೇಕು ಎಂಬುದಕ್ಕೆ ಅನುಕೂಲವಾಗಲಿದೆ. ಮುಂಚಿತವಾಗಿ ಕ್ರಿಯಾ ಯೋಜನೆಗಳನ್ನು ಸಿದ್ದಪಡಿಸಿಟ್ಟುಕೊಂಡರೆ ಅನುದಾನ ಬಂದಾಗ ಅಗತ್ಯಕ್ಕೆ ಅನುಗುಣವಾಗಿ ಹಣ ಬಳಕೆ ಮಾಡಿಕೊಳ್ಳಲು ಅನುಕೂಲವಾಗುತ್ತದೆ ಎಂದು ಅಧಿಕಾರಿಗಳಿಗೆ ತಿಳಿಸಿದರು.

      ತಾಲ್ಲೂಕಿನಲ್ಲಿ ಅಧಿಕಾರಿಗಳ ಕೊರತೆ ಇದ್ದು, ಇರುವ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರಿಂದ ಕೆಲಸ ಮಾಡಿಸಬೇಕು ಎಂದು ಜನ ಪ್ರತಿನಿಧಿಗಳಿಗೆ ಸಲಹೆ ನೀಡಿದ ಶಾಸಕರು, ಅಧಿಕಾರಿಗಳು ಸಹ ತಮ್ಮ ಜವಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

      ತಾಲ್ಲೂಕಿನ ಭೀಮ ಸಮುದ್ರ, ಸಿದ್ದಾಪುರ, ಕಡೇಕೊಳ್ಳ ಸೇರಿದಂತೆ ಅನೇಕ ಗ್ರಾಮಗಳಲ್ಲಿ ರೈತರ ಮೇಲೆ ಕರಡಿ ದಾಳಿ ಮಾಡುತ್ತವೆ. ಅದರಲ್ಲೂ ತೋಟಗಳಲ್ಲಿ ರಾತ್ರಿ ನೀರು ಹಾಯಿಸುವ ರೈತರ ಮೇಲೆ ಕರಡಿ ದಾಳಿ ಮಾಡುವ ಸಂಭವ ಹೆಚ್ಚು. ಅದ್ದರಿಂದ ಹೆಚ್ಚು ಕರಡಿಗಳಿರುವ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಹಗಲು ಹೊತ್ತಿನಲ್ಲಿಯೇ ರೈತರ ಪಂಪ್ ಸೆಟ್ಟುಗಳಿಗೆ ವಿದ್ಯುತ್ ಪೂರೈಕೆ ಮಾಡುವಂತೆ ಜೆಸ್ಕಾಂ ಇಲಾಖೆಯ ಸಹಾಯಕ ಕಾರ್ಯನಿರ್ವಹಕ ಎಂಜನಿಯರ್ ಎ.ಎಂ. ರಾಜೇಶ್ ಅವರಿಗೆ ತಿಳಿಸಿದರು.

      ಬಡವರು ಮನೆ ಕಟ್ಟಲು ಮರಳು ಸಿಗುತ್ತಿಲ್ಲ, ಎತ್ತಿನ ಗಾಡಿಯಲ್ಲಿ ಮರಳು ತರಲು ಅನುಕೂಲ ಮಾಡಿಕೊಡುವಂತೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ನಾಯ್ಕ್ ವಲಯ ಆರಣ್ಯಧಿಕಾರಿ ಮಂಜುನಾಥ ಅವರಿಗೆ ಕೇಳಿದರು. ಆದರೆ ಇದಕ್ಕೆ ಒಪ್ಪದ ಆರಣ್ಯಧಿಕಾರಿ ಮಂಜುನಾಥ, ಆರಣ್ಯ ಪ್ರದೇಶದಲ್ಲಿ ಮರಳು ತರಲು ಅವಕಾಶವಿಲ್ಲ ಎಂದು ಹೇಳಿದರು. ಈ ಸಂದರ್ಭದಲ್ಲಿ ಮರಳು ಕುರಿತು ಲೋಕಪಯೋಗಿ ಇಲಾಖೆ ಮರಳು ಸಂಗ್ರಹಕ್ಕೆ ಮುಂದಾಗಲಿ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಎಚ್. ರೇವಣ್ಣ ಹೇಳಿದರು. ಮರಳು ಸಂಗ್ರಹವನ್ನು ಗಣಿ ಮತ್ತು ಭೂವಿಜ್ಞಾನ ಇಲಾಖೆಯೇ ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಹಕ ಎಂಜನಿಯರ್ ತಿಮ್ಮಣ್ಣ ಮಾಹಿತಿ ನೀಡಿದರು.

      ಜಿಲ್ಲಾ ಪಂಚಾಯ್ತಿ ಸದಸ್ಯರಾದ ಎಂ.ಎಂ.ಜೆ. ಹರ್ಷವರ್ಧನ್, ಎಸ್.ಪಿ. ರತ್ಮಮ್ಮ, ಕೆ. ಆಶಾ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಬಿ. ವೆಂಕಟೇಶ್ ನಾಯ್ಕ್, ಸ್ಥಾಯಿ ಸಮಿತಿ ಅಧ್ಯಕ್ಷ ಕೆಇಬಿ ಬಸವರಾಜ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

LEAVE A REPLY

Please enter your comment!
Please enter your name here