ಸಮಾಜಕ್ಕೆ ಶ್ರೇಷ್ಠ ಪ್ರಜೆ ನೀಡುವ ಜವಾಬ್ದಾರಿ ಶಿಕ್ಷಕರದ್ದು:ಡಾ.ಇಂತಿಯಾಜ್ ಅಹಮದ್

0
22

ತುಮಕೂರು:
              ವಿದ್ಯಾರ್ಥಿಗಳಿಗೆ ಕೇವಲ ಪಠ್ಯಪುಸ್ತಕದಲ್ಲಿರುವ ಪಾಠಗಳನ್ನು ಹೇಳಿಕೊಡುವ ಜವಾಬ್ದಾರಿ ಹೊಂದದೆ, ಶ್ರೇಷ್ಠ ಪ್ರಜೆಯನ್ನು ಸಮಾಜಕ್ಕೆ ನೀಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಸುಫ್ಹಾ ಕಾಲೇಜಿನ ಸಂಸ್ಥಾಪಕ ಕಾರ್ಯದರ್ಶಿ ಡಾ.ಇಂತಿಯಾಜ್ ಅಹಮದ್ ತಿಳಿಸಿದರು.
             ಅವರು ನಗರಕ್ಕೆ ಸಮೀಪ ಗೂಳೂರಿನಲ್ಲಿರುವ ಸುಫ್ಹಾ ಇಂಟರ್ ನ್ಯಾಷನಲ್ ಕಾಲೇಜಿನಲ್ಲಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್‍ರವರ 131ನೇ ಜನ್ಮ ದಿನೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭ ಉದ್ಘಾಟನೆ ನೆರವೇರಿಸಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
            ಶಿಕ್ಷಕರು ಸಮಾಜದ ಅನೇಕ ವಿಚಾರಗಳನ್ನು ತಿಳಿದುಕೊಂಡು ಮೌಲ್ಯಯುತ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು, ನಮ್ಮ ದೇಶ ಸರ್ವಶ್ರೇಷ್ಠ ರಾಷ್ಟ್ರವಾಗಬೇಕಾದರೆ ಸುಶಿಕ್ಷಿತ ಪ್ರಜೆಗಳು ಸಮಾಜದಲ್ಲಿರಬೇಕು. ಅಂತಹ ಪ್ರಜೆಗಳನ್ನು ನಮ್ಮ ಶಿಕ್ಷಕರು ರೂಪಿಸುತ್ತಾರೆ. ಶಿಷ್ಯಂದಿರು ಯಾವತ್ತು ನಮ್ಮ ಗುರುಗಳೆಂದು ಪೂಜಿಸುತ್ತಾರೆಯೋ ಆಗ ಆ ಶಿಕ್ಷಕರು ಶ್ರೇಷ್ಠ ಶಿಕ್ಷಕರೆನಿಸಿಕೊಳ್ಳುತ್ತಾರೆ ಎಂದರು.
ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಸಂಸ್ಕಾರ, ಉತ್ತಮ ನಡೆ, ನುಡಿ ಬೆಳೆಸಿಕೊಂಡು ಸನ್ಮಾರ್ಗದತ್ತ ನಡೆಯಬೇಕು, ರಾಷ್ಟ್ರ, ಅಂತರರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿ ಹೆತ್ತವರಿಗೆ ಹಾಗೂ ವಿದ್ಯೆ ಕಲಿಸಿದ ಗುರುಗಳಿಗೆ ಕೀರ್ತಿ ತರುವುದಲ್ಲದೇ ದೇಶದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮ ಪಡಿಸುವತ್ತ ಕೈ ಜೋಡಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.
               ಶಿಕ್ಷಕನಿಲ್ಲದ ಶಿಕ್ಷಣ ಸಫಲವಾಗದು. ವಿದ್ಯಾರ್ಥಿಗಳಿಗೆ ಒಳ್ಳೆಯ ಮಾರ್ಗದರ್ಶನ ನೀಡಿ, ಮಾನವೀಯ ಮೌಲ್ಯಗಳನ್ನು ಬಿತ್ತುವ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಶಿಕ್ಷಕರು ಹೆಜ್ಜೆಹಾಕಬೇಕು, ನಮ್ಮ ಪರಂಪರೆ ಶಿಕ್ಷಕರಿಗೆ ದೈವತ್ವ ಸ್ಥಾನ ನೀಡಿದೆ. ದೇಶದ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಡಾ.ಇಂತಿಯಾಜದ್ ಅಹಮದ್ ತಿಳಿಸಿದರು.
                  ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರಾಜಯ್ಯ, ಬದುಕು ರೂಪಿಸಲು ಬೇಕಾದ ವಿದ್ಯೆ ಕಲಿಸಿಕೊಡುವ ಗುರು, ತಂದೆ-ತಾಯಿಗಿಂತ ಮಿಗಿಲು. ಶಿಕ್ಷಕರೇ ನಿಜವಾದ ದೇವರು ಎಂದು ಹೇಳಿದರು.
                ಶಿಕ್ಷಕರು ದೇವರಿಗೆ ಸಮಾನರು. ನಾವು ಎಷ್ಟೇ ಉನ್ನತ ಹುದ್ದೆ ಹೊಂದಿದರೂ ಅದಕ್ಕೆ ಕಾರಣ ಶಿಕ್ಷಕರು. ಶಿಕ್ಷಕರನ್ನು ಎಲ್ಲರೂ ಗೌರವಿಸಬೇಕು. ಸಮಾಜದಲ್ಲಿ ರೈತರು ಎಷ್ಟು ಮುಖ್ಯವೋ ಶಿಕ್ಷಕರು ಅಷ್ಟೇ ಮುಖ್ಯವಾಗಿದ್ದಾರೆ. ಶಿಕ್ಷಣವಿಲ್ಲವೆಂದರೆ ಏನನ್ನೂ ಉಳಿಹಿಸಿಕೊಳ್ಳಲು ಸಾಧ್ಯವಿಲ್ಲ. ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದರು.
                ಸರ್ವೆಪಲ್ಲಿ ರಾಧಾಕೃಷ್ಣನ್ ಅವರು ತಮ್ಮ ಶಿಕ್ಷಕ ವೃತ್ತಿಯ ಸೇವೆಯಿಂದ ಅಪಾರ ಗೌರವ ಸಂಪಾದಿಸಿದ್ದರು. ಶಿಕ್ಷಕರ ಜವಾಬ್ದಾರಿ ಬಹಳ ಮಹತ್ವದ್ದಾಗಿದೆ. ಡಾಕ್ಟರ್, ಇಂಜಿನೀಯರ್, ವಿಜ್ಞಾನಿ, ಅಧಿಕಾರಿಗಳು ಹಾಗೂ ನಾಯಕರನ್ನು ನಿರ್ಮಾಣ ಮಾಡುವ ಕುಶಲಕರ್ಮಿ ಎಂದರೆ ಅವರು ಶಿಕ್ಷಕರು ಮಾತ್ರ. ಈ ಎಲ್ಲ ಪದವಿ ಹೊಂದಲೂ ಶಿಕ್ಷಕರೇ ಕಾರಣ ಎಂದು ನುಡಿದರು.
                ಕಾರ್ಯಕ್ರಮದಲ್ಲಿ ಸಾಮಾಜಿಕ, ಶೈಕ್ಷಣಿಕ ಸೇವಾ ಕಾರ್ಯದಲ್ಲಿ ನಿರತರಾಗಿರುವ ಸಿದ್ಧಾರ್ಥ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಜಯ್ಯ ಅವರನ್ನು ಸೂಫ್ಹಾ ಕಾಲೇಜು ವತಿಯಿಂದ ಡಾ.ಇಂತಿಯಾಜ್ ಅಹಮದ್ ಶಾಲು ಹೊದಿಸಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪಿಹೆಚ್‍ಡಿ ಸಂಶೋಧನಾರ್ಥಿ ಡಾ.ಹರ್ಷಧರ್ ಜಿ., ಸುಫ್ಹಾ ಕಾಲೇಜಿನ ವಿಭಾಗದ ಮುಖ್ಯಸ್ಥರಾದ ಆಯಿಶಾ, ಸುಫ್ಹಾ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲರಾದ ಮಹಮ್ಮದ್ ನೂರುಲ್ಲಾ, ಉಪನ್ಯಾಸಕರಾದ ಉಮ್ಮೆಹಾನಿ, ವತ್ಸಲ, ದೀಪಿಕಾ, ಶ್ವೇತಾ, ಪುಷ್ಪ ಸೇರಿದಂತೆ ಕಾಲೇಜಿನ ಬೋಧಕ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. 

LEAVE A REPLY

Please enter your comment!
Please enter your name here