ಸಮಾನತೆ ಹಾಗೂ ಸಮಾಜಿಕ ನ್ಯಾಯದ ಹರಿಕಾರ ಸಂವಿಧಾನ ಶಿಲ್ಪಿ

0
114

  ಮುಷ್ತಾಕ್ ಅಹಮ್ಮದ್, ಅಧ್ಯಕ್ಷರು

ಸಿ.ಎಂ.ಎ. ತುಮಕೂರು. -ಮೊ : 9900512785 :

 ಇಡೀ ಜಗತ್ತಿನಲ್ಲಿ ಅತ್ತುತ್ಯಮ ಅತಿ ಸುಂದರ ಹೂವಿನಂತಿರುವ ದೇಶವೆಂದರೆ ನಮ್ಮ ಭಾರತ ದೇಶ. ಸರ್ವ ಜನಾಂಗೀಯ ಶಾಂತಿಯ ತೋಟದಂತಿರುವ ಭಾರತವು ವಿವಿಧತೆಯಲ್ಲಿ ಐಕ್ಯತೆಯನ್ನು ಹೊಂದಿರುವ ಬಹುಧರ್ಮೀಯರ ವಿಶ್ವದ ಶೇಷ್ಟದೇಶ. ತನ್ನ ಧರ್ಮದ ಬಗ್ಗೆ ಅಭಿಮಾನ ಹೊಂದಿರುವುದರೊಂದಿಗೆ ಪರಧರ್ಮ ತತ್ವಾದರ್ಶಗಳನ್ನು ಅರಿತು ಗೌರವಿಸುತ್ತ ಸೋದರತ್ವ ಸಹಬಾಳ್ವೆ ನಡೆಸುವುದುಹಾಗೂ. ದೇಶವು ಶಾಂತಿ ಸ್ಥಿರತೆ ಪ್ರಗತಿ ಪಥದಲ್ಲಿ ಮುನ್ನಡೆಯುವುದಕ್ಕೆ ಇರುವ ಮೂಲ ಸೂತ್ರವಾಗಿದೆ.

ನಮ್ಮ ಭಾರತ ದೇಶದಲ್ಲಿ ಸಹಸ್ರಾರು ಜಾತಿಗಳು, ವಿಭಿನ್ನವಾದ ಆಚಾರ ವಿಚಾರಗಳು, ಸಹಸ್ರಾರು ಭಾಷೆಗಳು ಇರುತ್ತವೆ. ಆಕಾರದಲ್ಲಿ ನಾವೆಲ್ಲರೂ ಒಂದೇ ಸಮನಾಗಿರುವುದಿಲ್ಲ. ಆದರೆ ಸೌಹಾರ್ದಯುತವಾಗಿ ನಾವೆಲ್ಲಾ ಒಟ್ಟಾಗಿದ್ದೇವೆ. ಇದನ್ನು ವಿಭಿನ್ನತೆಯಲ್ಲಿ “ಐಕ್ಯತೆ” ಎಂದು ಕರೆಯುತ್ತೇವೆ. ಈ ವಿಶೇಷವಾದ ಗುಣ ನಮ್ಮ ಭಾರತ ದೇಶ ಬಿಟ್ಟರೆ ಜಗತ್ತಿನ ಯಾವ ದೇಶದಲ್ಲೂ ಕಂಡು ಬರುವುದಿಲ್ಲ.

ನಮ್ಮ ಭಾರತ ದೇಶವನ್ನು ಪರಕೀಯರ ಗುಲಾಮಗಿರಿಯಿಂದ ಮುಕ್ತ ಗೊಳಿಸಲು ಗಣ್ಯರುಗಳಾದ ಮಹಾತ್ಮ ಗಾಂಧೀಜಿ, ಜವಾಹರ್ ಲಾಲ್ ನೆಹರು, ಸರ್ದಾರ್ ವಲ್ಲಭಾಯಿ ಪಟೇಲ್, ಮೌಲಾನ ಅಬು ಕಲಾಂ ಆಜಾದ್,
ಮೈಸೂರು ಹುಲಿ ಟಿಪ್ಪುಸುಲ್ತಾನ್, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಮತ್ತು ವೀರರಾಣಿ ಕಿತ್ತೂರು ಚನ್ನಮ್ಮ ರವರುಗಳು ಪಟ್ಟಿರುವ ಶ್ರಮ, ತ್ಯಾಗ ಮತ್ತು ಬಲಿದಾನಗಳು ಶ್ಲಾಘನೀಯ ವಿಷಯವಾಗಿದೆ.

1947 ನೇ ಇಸವಿ ಆಗಸ್ಟ್ 15 ರಂದು ದೇಶವು ಸ್ವಾತಂತ್ರ್ಯ ಪಡೆದ ನಂತರ ನಮ್ಮ ಪ್ರಥಮ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರು ಮತ್ತು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಮುಂದೆ ಎರಡು ಅತೀ ದೊಡ್ಡ ಸವಾಲುಗಳಿದ್ದವು. ಸಮಸ್ತ ಪ್ರಜೆಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಒದಗಿಸುವುದು ಮತ್ತು ರಾಷ್ಟ್ರದ ಅಸಂಖ್ಯಾತ ಅನಕ್ಷರಸ್ಥರನ್ನು ಸಾಕ್ಷರರನಾಗಿ ಮಾಡುವುದು. ಅದಕ್ಕಾಗಿಯೇ ಇವರುಗಳು ಡಾ. ಬಿ.ಆರ್.ಅಂಬೇಡ್ಕರ್ ರವರನ್ನು ಕಾನೂನು ಮಂತ್ರಿಯನ್ನಾಗಿ ಮತ್ತು ಮೌಲಾನ ಅಬು ಕಲಾಂ ಆಜಾದ್ ಅವರನ್ನು ಶಿಕ್ಷಣ ಸಚಿವರನ್ನಾಗಿ ನೇಮಕ ಮಾಡಿದ್ದರು.

ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬವಾಡೆ ಎಂಬ ಗ್ರಾಮದಲ್ಲಿ ರಾಮ್‍ಜಿ ಸಕ್ಪಾಲ್ ಮತ್ತು ಭೀಮಬಾಯಿ ದಂಪತಿಗಳಿಗೆ ಹದಿನಾಲ್ಕನೇ ಮಗನಾಗಿ 14ನೇ ಏಪ್ರಿಲ್ 1891 ರಂದು ಡಾ. ಬಿ.ಆರ್. ಅಂಬೇಡ್ಕರ್ ರವರು ಜನಿಸಿದರು. 

ಡಾ. ಬಿ.ಆರ್. ಅಂಬೇಡ್ಕರ್ ರವರ ಹೆಸರು ಭೀಮರಾವ್ ರಾಮ್‍ಜಿ ಅಂಬಾವಾಡೇಕರ್ ಎಂದ್ದಿತು. ಅಂಬೇಡ್ಕರರ ವಿದ್ಯಾಭ್ಯಾಸಕ್ಕೆ ತಂದೆ ವಿಶೇಷ ಗಮನ ನೀಡಿದ್ದರು. ಅವರು ಸರ್ಕಾರದ ಶಾಲೆಯಲ್ಲಿ ಶಿಕ್ಷಣ ಪಡೆಯುವಾಗ ಅವರಿಗೆ ಓರ್ವ ಬ್ರಾಹ್ಮಣ ಉಪಾಧ್ಯಾಯರಿದ್ದರು. ಅವರು ಈ ಬಾಲಕನ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡು ಯಾವುದೇ ಬೇಧಭಾವಗಳಿಲ್ಲದೇ ಆದರಿಸಿ ಪ್ರೋತ್ಸಾಹಿಸಿದರು. ಆ ಉಪಾಧ್ಯಾಯರ ಮನೆತನದ ಹೆಸರು ಅಂಬೇಡ್ಕರ್, ಅವರೇ ಭೀಮರಾವ್ ರವರಿಗೆ ಅಂಬೇಡ್ಕರ್ ಎಂಬ ಹೆಸರನ್ನು ಸೇರ್ಪಡೆ ಮಾಡಿದರು.

1912ರಲ್ಲಿ ಅಂಬೇಡ್ಕರ್ ರವರು ಬಿ.ಎ. ಪದವೀಧರರಾದರು. ತದನಂತರ ಅವರು ಬರೋಡದಲ್ಲಿ ಸಿವಿಲ್ ಸರ್ವೀಸ್‍ಗೆ ಸೇರಿದರು. ಬರೋಡದ ಮಹಾರಾಜ ಸಯ್ಯಾಜಿರಾವ್ ಗಾಯಕ್‍ವಾಡ್ ರವರು 1913 ರಲ್ಲಿ ಅಂಬೇಡ್ಕರ್ ರವರಿಗೆ ಉನ್ನತ ಶಿಕ್ಷಣಕ್ಕಾಗಿ ಅಮೇರಿಕಾಗೆ ಕಳುಹಿಸುವ ಏರ್ಪಾಡು ಮಾಡಿದರು. 1916 ರಲ್ಲಿ ಅಂಬೇಡ್ಕರ್ ರವರು ಲಂಡನ್ ಸ್ಕೂಲ್ ಆಫ್ ಎಕಾನಾಮಿಕ್ಸ್‍ಗೆ ಸೇರಿದರು. 1921 ರಲ್ಲಿ ಅಂಬೇಡ್ಕರ್ ರವರು ಕಾನೂನು ವಿಷಯ ಓದಿ ಬ್ಯಾರಿಸ್ಟರ್ ಆದರು.

ಮುಂಬೈ ಸರ್ಕಾರಕ್ಕೆ ಅಂಬೇಡ್ಕರ್ ರವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಸರ್ಕಾರ ಅವರನ್ನು ಮೇಲ್ಮನೆ ಸದಸ್ಯರನ್ನಾಗಿ ನೇಮಿಸಿತು. ಅಂಬೇಡ್ಕರ್ ಅಸ್ಪಶ್ಯತೆಯನ್ನು ವಿರೋಧಿಸಿ ಒಂದು ಹೋರಾಟವನ್ನು ಆರಂಭಿಸಿದರು. ಅಸ್ಪ್ಯುಶ್ಯರಿಗೆ ಬೇಕಾಗಿರುವುದು ಕರುಣೆಯಲ್ಲಿ ಸಮಾನತೆ ಎಂಬುದು ಅವರ ಪ್ರತಿಪಾದನೆಯಾಗಿದ್ದಿತು. ಅಂಬೇಡ್ಕರ್‍ರವರು ಪತ್ರಿಕೋದ್ಯಮಿಯಾಗಿಯೂ ಸೇವೆ ಸಲ್ಲಿಸಿದರು. ಅಂಬೇಡ್ಕರ್‍ರವರು ತಮ್ಮ 17ನೇ ವಯಸ್ಸಿನಲ್ಲಿದ್ದಾಗ 7 ವರ್ಷದ ಕನ್ಯೆಯಾದ ರಮಿ (ರಮಾಬಾಯಿ) ಯವರನ್ನು ಮುಂಬೈನ ಬೈಕುಲಾ ಮಾರುಕಟ್ಟೆಯಲ್ಲಿ ಅವರ ವಿವಾಹ ನಡೆಯಿತು.

ಭಾರತಕ್ಕೆ ಮರಳಿದ ನಂತರ ಅಂಬೇಡ್ಕರ್‍ರವರು 1923 ರಲ್ಲಿ ವಕೀಲ ವೃತ್ತಿ ಪ್ರಾರಂಭಿಸಿದರು. 1924ರಲ್ಲಿ ಅಸ್ಪøಶ್ಯರ ಏಳಿಗೆಗಾಗಿ ಸಾಮಾಜಿಕ ಆಂದೋಲನವನ್ನು ಪ್ರಾರಂಭಿಸಲು ಅಂಬೇಡ್ಕರ್ ನಿಶ್ಚಯಿಸಿದರು. 1927 ರಲ್ಲಿ ಮುಂಬೈ ಗವರ್ನರ್ ರವರು ಅಂಬೇಡ್ಕರ್‍ರನ್ನು ಮುಂಬೈ ಲೆಜಿಸ್ಲೇಟೀವ್ ಕೌನ್ಸಿಲ್ ಸದಸ್ಯರನ್ನಾಗಿ ನೇಮಿಸಿದರು.

ಅಂಬೇಡ್ಕರ್ ರವರ ಪ್ರಥಮ ಪತ್ನಿ ರಮಾಬಾಯಿಯವರು 26-05-1935 ರಂದು ನಿಧನರಾದರು. ಆ ಬಳಿಕ ಅಂಬೇಡ್ಕರ್‍ರವರು ದಿನಾಂಕ 15-04-1948 ರಲ್ಲಿ ಕನ್ಯೆಯಾದ ಡಾ. ಶಾರದ ಕಬೀರ್ ರವರನ್ನು ವಿವಾಹವಾದರು. ಅಂಬೇಡ್ಕರ್‍ರವರು ಈ ರೀತಿ ವಿವಾಹವಾಗುವುದರ ಮೂಲಕ ಸವರ್ಣೀಯರು ಮತ್ತು ನಿಮ್ನ ವರ್ಗದವರ ಮಧ್ಯೆ ಯಾವುದೇ ತಾರತಮ್ಯ ಇಲ್ಲ ಎನ್ನುವುದನ್ನು ತಾವೇ ಸ್ವತಃ ತೋರಿಸಿಕೊಟ್ಟರು.

ಸ್ವಾತಂತ್ರ್ಯ ಪೂರ್ವದಲ್ಲಿ ಭಾರತೀಯರ ಮನವೊಲಿಸುವ ಸಲುವಾಗಿ ಬ್ರಿಟೀಷ್ ವೈಸರಾಯ್ ರವರು ಸಮರ್ಥ ನಾಯಕರುಗಳಿಗೊಂದು ಸಂಪುಟ ರಚಿಸಿದರು. ಇದರಲ್ಲಿ ಡಾ. ಅಂಬೇಡ್ಕರ್ ರವರನ್ನು ಸಹ ಸೇರಿಸಲಾಯಿತು. ಈ ಹುದ್ದೆ ಅವರಿಗಿದ್ದ ಅಪಾರವಾದ ಕಾನೂನು ಜ್ಞಾನ ಸಂಘಟನಾ ಶಕ್ತಿ ಮತ್ತು ದಲಿತ ಶ್ರಮಿಕ ವರ್ಗದವರ ಪರ ಅವರು ನಡೆಸಿದ ನಿರಂತರ ಹೋರಾಟಗಳಿಗೆ ಸಿಕ್ಕ ಮನ್ನಣೆಯಾಯ್ತು.

1947ರಲ್ಲಿ ಭಾರತವು ಸ್ವಾತಂತ್ರ್ಯ ಪಡೆದ ನಂತರ ರಚನೆಯಾದ ಮಂತ್ರಿಮಂಡಳದಲ್ಲಿ ಅಂಬೇಡ್ಕರ್‍ರವರು ಕಾನೂನು ಸಚಿವರಾಗಿ ನೇಮಕಗೊಂಡು ಅತ್ಯುತ್ತಮ ಕಾರ್ಯ ನಿರ್ವಹಿಸಿದರು.

ಸಂವಿಧಾನ ಶಿಲ್ಪಿ
ಭಾರತದಂಥ ಬೃಹತ್ ರಾಷ್ಟ್ರಕ್ಕೆ ಸಂವಿಧಾನದ ಕರಡನ್ನು ಸಿದ್ಧಪಡಿಸುವ ಸಲುವಾಗಿ ಡಾ. ಬಿ.ಆರ್. ಅಂಬೇಡ್ಕರ್ ರವರ ಅಧ್ಯಕ್ಷತೆಯಲ್ಲಿ ಸಂವಿಧಾನ ಕರಡು ಸಮಿತಿ ರಚನೆಯಾಯ್ತು. ಇದರಲ್ಲಿ ಶ್ರೀ ಗೋಪಾಲಸ್ವಾಮಿ ಅಯ್ಯಂಗಾರ್, ಶ್ರೀ ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಶ್ರೀ ಕೆ.ಎಂ. ಮುನ್‍ಷಿ, ಶ್ರೀ ಮಹಮ್ಮದ್ ಸಾದುಲ್ಲಾ ಮತ್ತು ಶ್ರೀ ಡಿ.ಪಿ. ಬೈತಾನ್ ರವರಿದ್ದರು. ಈ ಸಮಿತಿಯೂ ವಿಶ್ವದ ಅನೇಕ ರಾಷ್ಟ್ರಗಳ ಸಂವಿಧಾನಗಳು, ಕಾನೂನುಗಳು ಇತ್ಯಾದಿಗಳನ್ನು ಅಧ್ಯಯನ ಮಾಡಿದ ನಂತರ ಭಾರತ ದೇಶದ ಸಂವಿಧಾನವನ್ನು ರಚನೆ ಮಾಡಿದರು. ನಮ್ಮ ಸಂವಿಧಾನ ಇಡೀ ಜಗತ್ತಿಗೆ ಮಾದರಿಯಾಗಿದೆ. ಭಾರತದ ಸಂವಿಧಾನಕ್ಕೆ ನಿಜವಾದ ಕೊಡುಗೆ ಸರಕಾರದ ವಿಶೇಷ ಮೀಸಲಾತಿ ನೀತಿಯಲ್ಲಿ ಅಭಿವ್ಯಕ್ತವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಸ್ಥಿತಿಗತಿಗಳನ್ನು ಸುಧಾರಿಸುವುದು ಉದ್ದೇಶವಾಗಿತ್ತು. ಈ ಸಂವಿಧಾನವು ಜನವರಿ 26 ರಂದು 1950 ರಲ್ಲಿ ಜಾರಿಯಾಯಿತು.

ಆಧುನಿಕ ಭಾರತದ ನಿರ್ಮಾಪಕರ ಸಾಲಿನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ರವರ ಪಾತ್ರ ಅತ್ಯಂತ ಶ್ರೇಷ್ಟವಾಗಿದೆ. ಮಹಾನ್ ಮಾನವತಾವಾದಿ, ಮಹಾನ್ ಶಿಕ್ಷಣ ಅಭಿಯಾನಿ, ಪ್ರತಿಭಟನೆಯ ಜ್ವಾಲಾಮುಖಿ, ಸ್ವಾಭಿಮಾನಿ, ಸತ್ಯನಿಷ್ಟೆ, ಸಂಘಟನಾಕಾರ, ದಲಿತೋದ್ಧಾರಕ, ಕರ್ತವ್ಯನಿಷ್ಟ ಮತ್ತು ಸಂವಿಧಾನ ಶಿಲ್ಪಿಯಾಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ರವರು ಬಹುಮುಖ ಪ್ರತಿಭಾ ಸಂಪನ್ನ ವ್ಯಕ್ತಿ ಆಗಿದ್ದರು.

ಭಾರತ ಸರ್ಕಾರವು ಡಾ. ಬಿ.ಆರ್. ಅಂಬೇಡ್ಕರ್ ರವರನ್ನು ಅವರ ನಿಧನದ ನಂತರ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಿತು. ಡಾ. ಬಿ.ಆರ್. ಅಂಬೇಡ್ಕರ್ ರವರು ಬಡತನದ ಬವಣೆಯಲ್ಲಿ ಬೆಂದು ಹಲವಾರು ಬಗೆಯ ಅವಮಾನಗಳನ್ನು ಅನುಭವಿಸಿ ಉನ್ನತ ಶಿಕ್ಷನವನ್ನು ಪಡೆದು ಅತ್ಯಂತ ತಾಳ್ಮೆ, ಧರ್ಯ ಮತ್ತು ವಿವೇಚನೆಯಿಂದ ದಲಿತರನ್ನು, ಬಡವರನ್ನು. ಕಾರ್ಮಿಕರನ್ನು ರೈತರನ್ನು ಸಂಘಟಿಸಿದರು. ದಲಿತರಿಗೆ, ಬಡವರಿಗೆ ಅವರ ಮೂಲಭೂತ ಹಕ್ಕುಗಳ ಬಗ್ಗೆ ಜಾಗೃತಿಯನ್ನು ಉಂಟುಮಾಡಿದರು.

ಡಾ. ಬಿ.ಆರ್. ಅಂಬೇಡ್ಕರ್ ರವರು ತಮ್ಮ ದೇಶಪ್ರೇಮ, ಸಮಾನತೆ, ಸಾಮಾಜಿಕ ನ್ಯಾಯ, ಜಾತ್ಯಾತೀತ ಮನೋಭಾವ ಮತ್ತು ಕೋಮು ಸೌಹಾರ್ದತೆಯ ಗುಣಗಳಿಂದ ನಮ್ಮ ದೇಶದ ಮಹಾನ್ ವ್ಯಕ್ತಿಗಳಾದ ಭಗವಾನ್ ಬುದ್ಧ, ಮಹಾವೀರ, ಜಗಜ್ಯೋತಿ ಬಸವೇಶ್ವರ, ಗುರುನಾನಕ್, ಗಾಂಧೀಜಿ, ನೆಹರು, ಪೊಲೆ ಮತ್ತು ಮೌಲಾನ ಅಬು ಕಲಾಂ ಆಜಾದ್ ರವರ ಪಂಕ್ತಿಗೆ ಸೇರಿರುವುದು ಒಂದು ಐತಿಹಾಸಿಕ ವಿಷಯವಾಗಿದೆ. ನಮ್ಮ ಸಂವಿಧಾನದಲ್ಲಿ ನಮೂದಿಸಿರುವ ಎಲ್ಲಾ ಹಕ್ಕುಗಳ ಸದುಪಯೋಗವಾಗಬೇಕು. ಸರ್ವರಿಗೂ ಸಾಮಾಜಿಕ ನ್ಯಾಯ, ಸಮಾನತೆ ದೊರೆಯಲು ಸರ್ವರ ಪ್ರಾಮಾಣಿಕ ಪ್ರಯತ್ನ ಅಗತ್ಯವಿದೆ.

ಅಂಬೇಡ್ಕರ್ ರವರು ಬೌದ್ಧ ಧರ್ಮದ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. 1956 ರ ಅಕ್ಟೋಬರ್ 14 ರಂದು ನಾಗಪುರದಲ್ಲಿ ಬೌದ್ಧ ಧರ್ಮದ ದೀಕ್ಷೆಯನ್ನು ಪಡೆದರು. ಮರುದಿನ ಡಾ. ಬಿ.ಆರ್. ಅಂಬೇಡ್ಕರ್ ರವರೇ ಸಹಸ್ರಾರು ಜನರಿಗೆ ಬೌದ್ಧ ಧರ್ಮದ ಧೀಕ್ಷೆಯನ್ನು ನೀಡಿದರು.

1956 ನೇ ಡಿಸೆಂಬರ್ 5 ರಂದು ರಾತ್ರಿ ತಮ್ಮ “ಗಾಸ್ಟೆಲ್ ಆಫ್ ಬುದ್ಧ” ಪುಸ್ತಕದ ಪ್ರಸ್ತಾವನೆಯನ್ನು ಬರೆದು ಮುಗಿದು ಮರುದಿನ 6ನೇ ತಾರೀಖಿನಿಂದು ಬೆಳಿಗ್ಗೆ ಅವರ ಸಹಾಯಕ ಚಹಾ ನೀಡಲು ಹೋದಾಗ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಹೀಗೆ ಬಡವರ ದೀನ, ದಲಿತರ ನೇತಾರನ ಹೆಸರು ಇತಿಹಾಸದ ಪುಟದಲ್ಲಿ ಸೇರಿಹೋಯಿತು.

ಭಾರತ ದೇಶದ ಪ್ರಜೆಗಳಾದ ನಾವುಗಳು ಸೋದರರಾಗಿ ಬಾಳೋಣ, ಸೋದರರಾಗಿ ಬಾಳುತ್ತಾ ನಾವು ಸದಾಕಾಲ ದೇಶದ ಹಿತವನ್ನು ಬಯಸೋಣ, ಜಾತಿ ಜಾತಿಗಳ ಮಧ್ಯೆ ಇರುವ ಅಡ್ಡಗೋಡೆಯನ್ನು ಕಿತ್ತು ಎಸೆದು ಶೋಷಣೆಯ ಬೇರನ್ನು ಕಿತ್ತು ಎಸೆದು ಸಮಾನತೆಯ ಹಾಗೂ ಸಾಮಾಜಿಕ ನ್ಯಾಯ ಮತ್ತು ಕೋಮು ಸೌಹಾರ್ದತೆಯ ಸಂದೇಶವನ್ನು ಸಾರೋಣ. ಎಲ್ಲರೂ ಒಟ್ಟಾಗಿ ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸೋಣ ಎಂಬ ಪ್ರತಿಜ್ಞೆಯನ್ನು ಮಾಡುವುದು ‘‘ಭಾರತ ರತ್ನ” ಡಾ. ಬಿ.ಆರ್. ಅಂಬೇಡ್ಕರ್ ರವರಿಗೆ ಸಲ್ಲಿಸುವ ನೈಜ ಗೌರವ ಮತ್ತು ಆಶಯ ವಾಗುತ್ತದೆ.

LEAVE A REPLY

Please enter your comment!
Please enter your name here