ಸಮೀಪಿಸುತ್ತಿರುವ ಲೋಕಸಭಾ ಚುನಾವಣೆ : ಗರಿಗೆದರಿದ ರಾಜಕೀಯ ಚಟುವಟಿಕೆ

0
24

ಬೆಂಗಳೂರು/ ನವದೆಹಲಿ :

Related image

     ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಕೀಯದ ಚಟುವಟಿಕೆಗಳು ಸಹ ಗರಿಗೆದರಿವೆ.
ಬಿಜೆಪಿಗೆ ಸೆಡ್ಡುಹೊಡೆಯಲು ತೃತೀಯ ರಂಗ ರಚನೆಗೆ ವೇದಿಕೆ ಸಿದ್ದವಾಗುತ್ತಿದ್ದು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಮಾಜಿ ಪ್ರಧಾನಿ, ಜೆಡಿಎಸ್ ಪಕ್ಷದ ವರಿಷ್ಠ ಹೆಚ್.ಡಿ.ದೇವೇಗೌಡರು ಇಂದು ದೆಹಲಿಯಲ್ಲಿ ಮಹತ್ವದ ಮಾತುಕತೆ ನಡೆಸಿದರು.

      ನಾಯಕರ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ, ಮಮತಾ ಬ್ಯಾನರ್ಜಿ ಅವರೊಂದಿಗೆ ದೇಶದ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದೇನೆ ಎಂದರು.ತೃತೀಯ ರಂಗ ರಚನೆಯ ನಿಟ್ಟಿನಲ್ಲಿ ಮಮತಾ ಬ್ಯಾನರ್ಜಿ ಅವರು ನಡೆಸುತ್ತಿರುವ ಪ್ರಯತ್ನಕ್ಕೆ ನನ್ನ ಬೆಂಬಲವಿದೆ ಎಂದು ಹೇಳಿದರು.

      ರಾಷ್ಟ್ರೀಯ ನಾಗರೀಕ ನೋಂದಣಿ (ಎನ್‍ಆರ್‍ಸಿ) ವಿಷಯದಲ್ಲಿ ಮಮತಾ ಅವರ ನಿಲುವಿಗೆ ತಮ್ಮ ಬೆಂಬಲವಿದೆ ಎಂದು ತಿಳಿಸಿದರು.

      ಮಮತಾ ಬ್ಯಾನರ್ಜಿ ಮಾತನಾಡಿ, ಹಿರಿಯ ಮುತ್ಸದಿ ರಾಜಕಾರಣಿ, ಮಾಜಿ ಪ್ರಧಾನಿ ದೇವೇಗೌಡರ ಮೇಲಿನ ಗೌರವದ ಭಾವನೆಯಿಂದ ಅವರನ್ನು ಭೇಟಿ ಮಾಡಲು ಬಂದಿದ್ದೆ. ಅವರನ್ನು ನಾನು ಮೊದಲಿನಿಂದಲೂ ಬಲ್ಲೆ. ದೂರವಾಣಿಯಲ್ಲಿ ಅವರೊಂದಿಗೆ ಮಾತನಾಡುತ್ತಾ ಇರುತ್ತೇನೆ ಎಂದು ಹೇಳಿದರು.

      ರಾಜಕೀಯದ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದಷ್ಟೇ ಹೇಳಿದ ಅವರು, ತಮ್ಮ ಮುಂದಿನ ನಡೆ ಕುರಿತು ಯಾವುದೇ ಮಾಹಿತಿ ನೀಡಲಿಲ್ಲ.  ಪ್ರಧಾನಿ ನರೇಂದ್ರ ಮೋದಿ ಅವರು ಈಗಾಗಲೇ ಚುನಾವಣೆಗೆ ತಯಾರಾಗುತ್ತಿದ್ದು, ಬಿಜೆಪಿಯನ್ನು ಶತಾಯಗತಾಯ ಮಣಿಸಲು ಕಾಂಗ್ರೆಸ್ ಸೇರಿದಂತೆ ಪ್ರಾದೇಶಿಕ ಪಕ್ಷಗಳು ಒಗ್ಗೂಡಲು ವೇದಿಕೆ ಸಿದ್ದತೆ ಮಾಡಿಕೊಳ್ಳುತ್ತಿರುವುದಕ್ಕೆ ಈ ನಾಯಕರ ಭೇಟಿ ಪುಷ್ಠಿ ನೀಡುತ್ತದೆ.

LEAVE A REPLY

Please enter your comment!
Please enter your name here