ಸರ್ಕಾರದ ಸೌಲಭ್ಯ ಸಮರ್ಪಕವಾಗಿ ತಲುಪಿಸಲು ಕರೆ

0
28

ಗುಬ್ಬಿ

    ಸರ್ಕಾರದ ಸೌಲಭ್ಯಗಳನ್ನು ವಸತಿ ನಿಲಯ ಮತ್ತು ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಸಮರ್ಪಕವಾಗಿ ತಲುಪಿಸುವತ್ತ ಶಿಕ್ಷಕಿಯರು ಮತ್ತು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡುವಂತೆ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದನರಸಿಂಹಮೂರ್ತಿ ಸೂಚಿಸಿದರು.

    ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಚೇಳೂರು ಭಾಗದ ಸರಕಾರಿ ಶಾಲೆಗಳು, ಅಂಗನವಾಡಿ, ಸಾರ್ವಜನಿಕ ಆಸ್ಪತ್ರೆ, ವಿದ್ಯಾರ್ಥಿ ವಸತಿ ನಿಲಯ, ರೈತಸಂಪರ್ಕ ಕೇಂದ್ರಗಳು ಮತ್ತು ರಂಗನಾಥಪುರ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರ್ಕಾರದಿಂದ ಬಿಡುಗಡೆಯಾಗುತ್ತಿದ್ದು ವಸತಿ ನಿಲಯ ಮತ್ತು ಅಂಗನವಾಡಿ ಕೇಂದ್ರಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಮಕ್ಕಳಿಗೆ ನಿಯಮಾನುಸಾರ ವಿತರಣೆ ಮಾಡುವಂತೆ ತಿಳಿಸಿದರು.

    ಗುಬ್ಬಿ ಪಟ್ಟಣದ ಸರಕಾರಿ ವಿದ್ಯಾರ್ಥಿನಿಯರ ಪ್ರೌಢಶಾಲೆಗೆ ಭೇಟಿ ನೀಡಿ ಅಲ್ಲಿನ ಅಡುಗೆಕೋಣೆ ಮತ್ತು ಶೌಚಾಲಯಗಳನ್ನು ವೀಕ್ಷಣೆ ಮಾಡಿದರು. ನಂತರ ವಿದ್ಯಾರ್ಥಿನಿಯರಿಗೆ ಶುದ್ದವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಶಿಕ್ಷಕರಿಗೆ ಸೂಚಿಸಿದರು. ನಂತರ ಚೇಳೂರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ಔಷಧಿಗಳನ್ನು ಪರಿಶೀಲಿಸಿದ ಅವರು ವೈದ್ಯಾಧಿಕಾರಿಗಳ ಕರ್ತವ್ಯ ಮತ್ತು ಸಾರ್ವಜನಿಕರಿಗೆ ನೀಡುವ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಪರಿಶೀಲನೆ ನಡೆಸಿದರು. ರೋಗಿಗಳಿಗೆ ನೀಡಬೇಕಾದ ಚಿಕಿತ್ಸಾ ಸೌಲಭ್ಯಗಳು ಮತ್ತು ಇತರೆ ಆರೋಗ್ಯ ಸೇವೆಗಳ ಬಗ್ಗೆಯೂ ಸಮರ್ಪಕವಾಗಿ ಪರಿಶೀಲನೆ ನಡೆಸಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

    ಜಿಲ್ಲಾ ಪಂಚಾಯತ್ ಶಿಕ್ಷಣ ಹಾಗೂ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಡಾ:ನವ್ಯಬಾಬು ಮಾತನಾಡಿ ಚೇಳೂರು  ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕಾಗಿದೆ. ಇದರಿಂದ ಹಾಗಲವಾಡಿ ಚೇಳೂರು ಹಾಗೂ ಇಲ್ಲಿನ ಸುತ್ತಮುತ್ತಲಿನ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂಬ ಮಾಹಿತಿ ಇದ್ದು ಅದನ್ನು ಜಿಲ್ಲಾ ಪಂಚಾಯತ್ ಸಭೆಯಲ್ಲಿ ಚರ್ಚೆ ಮಾಡಿ ಇಲ್ಲಿಗೆ ಇನ್ನೂ ಹೆಚ್ಚಿನ ವೈದ್ಯಾಧಿಕಾರಿಗಳ ಅವಶ್ಯಕತೆ ಇದೆ ಹಾಗೂ ಹೆಚ್ಚಿನ ಸೌಲಭ್ಯ ನೀಡಲು ಒತ್ತು ನೀಡಲಾಗುತ್ತದೆ ಎಂದರು.

      ಚೇಳೂರಿನ ರೈತಸಂಪರ್ಕ ಕೇಂದ್ರಕ್ಕೆ ಸಹ ಭೇಟಿ ನೀಡಿ ರೈತರಿಗೆ ನೀಡಬೇಕಾದಂತಹ ಎಲ್ಲಾ ರೀತಿಯ ಸರಕಾರದ ಸೌಲಭ್ಯಗಳನ್ನು ಸರಿಯಾಗಿ ನೀಡುವಂತೆ ಅಧಿಕಾರಿಗಳಿಗೆ ತಿಳಿಸಿ, ಬಿತ್ತನೆ ಬೀಜ ಸಂಗ್ರಹ ಮಾಡಿರುವ ಸಂಗ್ರಹ ಕೇಂದ್ರಕ್ಕೂ ಸಹ ಭೇಟಿ ನೀಡಿ ಪರಿಶೀಲನೆ ಮಾಡಿದರು ಹಾಗೂ ಸ್ಥಳದಲ್ಲಿದ್ದ ರೈತರಿಗೆ ರಾಗಿಯನ್ನು ವಿತರಣೆ ಮಾಡಿದರು.
ನಂತರ ರಂಗನಾಥಪುರದ ಸರಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ತಿಳಿದರು. ಅಲ್ಲಿನ ಶಿಕ್ಷಕರು ಶಾಲೆಯ ಮೇಲೆ ವಿದ್ಯುತ್ ತಂತಿ ಹಾದುಹೋಗಿದ್ದು ಇದನ್ನು ಬದಲಾವಣೆ ಮಾಡುವಂತೆ ತಿಳಿಸಿದರು. ಅದನ್ನು ತೆಗೆದಿಲ್ಲ, ಇದನ್ನು ತೆಗೆಸಿಕೊಡುವಂತೆ ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಉಪಾಧ್ಯಕ್ಷರು ಕೂಡಲೆ ಸರಿಪಡಿಸುವುದಾಗಿ ಭರವಸೆ ನೀಡಿದರು. ನಂತರ ಅಂಗನವಾಡಿಗೆ ಭೇಟಿ ನೀಡಿದಾಗ ಅವಧಿ ಮುಗಿದಿರುವಂತಹ ಬೇಳೆ, ಬೆಲ್ಲದಂತಹ ಆಹಾರ ಪದಾರ್ಥಗಳು ಇರುವುದು ಕಂಡು ಬಂತು. ಅವಧಿ ಮುಗಿದ ಆಹಾರ ಪದಾರ್ಥಗಳನ್ನು ಏಕೆ ಇಟ್ಟಿಕೊಂಡಿದ್ದೀರಾ, ಕೂಡಲೆ ಇದನ್ನು ತೆಗೆದು ಹಾಕಬೇಕು ಮತ್ತು ಮಕ್ಕಳಿಗೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥಗಳನ್ನು ನಿಯಮಾನುಸಾರ ನೀಡುವಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಸಿಡಿಪಿಓ ಅವರಿಗೆ ಸೂಚಿಸಿದರು.

       ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ನಡೆಸಿ ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಠಾನ ಮತ್ತು ಗ್ರಾಮ ಪಂಚಾಯ್ತಿಗಳು ಗ್ರಾಮೀಣ ಜನರ ಮೂಲಭೂತ ಸೌಲಭ್ಯಗಳಾದ ಕುಡಿಯುವ ನೀರು, ಶೌಚಾಲಯ ಮತ್ತು ಚರಂಡಿ ವ್ಯವಸ್ಥೆ ಸೇರಿದಂತೆ ಪಂಚಾಯ್ತಿ ವತಿಯಿಂದ ನಿರ್ವಹಣೆ ಮಾಡಬೇಕಾದ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ನಂತರ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷರ ಭೇಟಿ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಭಾರತಿಹಿತೇಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಗಂಗಮ್ಮ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಶಿವಪ್ರಕಾಶ್, ಸಿಡಿಪಿಒ ಹೊನ್ನೇಶಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಯೋಗಾನಂದ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಾಮಣ್ಣ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here