ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳಿಗೆ ವರ್ಣರಂಜಿತ ಬದುಕನ್ನು ನೀಡುವ ಶಿಕ್ಷಣ ಕೇಂದ್ರಗಳು

0
37

ಚಳ್ಳಕೆರೆ

ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಗುಣಮಟ್ಟದ ಶಿಕ್ಷಣವನ್ನು ನೀಡುವ ಸರ್ಕಾರಿ ಶಾಲೆಗಳಿಗೆ ದಾಖಲಾಗಬೇಕು. ರಾಜ್ಯದಲ್ಲಿ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಐಎಎಸ್, ಐಪಿಎಸ್ ಮತ್ತು ಕೆಎಎಸ್ ಅಧಿಕಾರಿಗಳು ಸರ್ಕಾರಿ ಶಾಲೆಗಳಲ್ಲಿ ಓದಿದ ಪ್ರತಿಭಾವಂತರಾಗಿದ್ಧಾರೆ. ಸರ್ಕಾರಿ ಶಾಲೆಗಳು ಎಲ್ಲಾ ಹಂತದಲ್ಲೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹೆಚ್ಚು ಒತ್ತು ನೀಡುತ್ತಿವೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಶ್ರೀನಾಥ ಎಂ.ಜೋಶಿ ತಿಳಿಸಿದರು.
ಅವರು, ಮಂಗಳವಾರ ಸಂಜೆ ತಾಲ್ಲೂಕಿನ ತಳಕು ಠಾಣಾ ವ್ಯಾಪ್ತಿಯ ಹೊಸಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ತಳಕು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಹೆಚ್ಚಿನ ದಾಖಲಾತಿಗಳು ಆಗುತ್ತಿದ್ದು, ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಸರ್ಕಾರ ಎಲ್ಲಾ ಸೌಲಭ್ಯವನ್ನು ನೀಡುತ್ತಿದೆ.

        ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಅನುಭವ ಹೊಂದಿದ ಶಿಕ್ಷಕರನ್ನು ನೇಮಿಸಿ ಅವರ ಮೂಲಕ ಗ್ರಾಮೀಣ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗಿದೆ. ಕೇವಲ ಮಕ್ಕಳನ್ನು ಶೈಕ್ಷಣಿಕವಾಗಿ ರೂಪಿಸುವುದಲ್ಲದೆ ಸಂಗೀತ ಕಲೆ ಮತ್ತು ಇನ್ನಿತರೆ ಪ್ರತಿಭೆಗಳನ್ನು ಪ್ರತಿಭಾ ಕಾರಂಜಿ ಮೂಲಕ ಪ್ರದರ್ಶಿಸಿ ಅವರಿಗೆ ಸೂಕ್ತ ಸ್ಥಾನಮಾನಗಳನ್ನು ಸಹ ಕಲ್ಪಿಸುತ್ತಿದೆ. ನಾನು ಇಂದು ಪೊಲೀಸ್ ರಕ್ಷಣಾಧಿಕಾರಿ ಕಾರ್ಯನಿರ್ವಹಿಸುತ್ತಿದ್ದು, ನಾನು ಸಹ ಸರ್ಕಾರಿ ಶಾಲೆಯಲ್ಲಿ ಓದಿದೆ ಎಂಬ ಹೆಮ್ಮೆ ನನ್ನದು ಎಂದರು.

       ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕ ಸಿ.ಟಿ.ವೀರೇಶ್ ಮಾತನಾಡಿ, ವಿದ್ಯೆ ಎಂಬ ಸರಸ್ವತಿ ಒಲಿಯಲು ವಿದ್ಯಾರ್ಥಿಗಳು ಅತ್ಯಂತ ಪರಿಶ್ರಮದಿಂದ ಅಭ್ಯಾಸ ಮಾಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಭಾಗದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಪಠ್ಯೇತರ ಮತ್ತು ಪಠ್ಯ ಚಟುವಟಿಕೆಗಳಲ್ಲಿ ಅತ್ಯಂತ ಪ್ರಭಾವಶಾಲಿಯಾಗಿ ಹೊರಹೊಮ್ಮುತ್ತಿದ್ದಾರೆ. ವಿದ್ಯೆ ಎಂಬ ಎರಡಕ್ಷರ ನಿಮ್ಮ ಬದುಕನ್ನು ಸಾರ್ಥಕಗೊಳಿಸಲಿದೆ. ಪ್ರತಿಯೊಬ್ಬರೂ ಶಿಕ್ಷಕರ ಮಾರ್ಗದರ್ಶನ ಪಡೆದು ಉತ್ತಮ ಫಲಿತಾಂಶ ಪಡೆಯಿರಿ ಎಂದರು.

       ರೈತ ಸಂಘದ ಜಿಲ್ಲಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಇಂದಿನ ಮಕ್ಕಳಲ್ಲಿ ಕ್ರೀಯಾಶೀಲತೆ ತಾನೇ ತಾನಾಗಿ ಹೆಚ್ಚುತ್ತಿದೆ. ಇಂದು ಸರ್ಕಾರ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿಯೇ ನಿರೀಕ್ಷೆಗೂ ಮೀರಿ ಹೆಚ್ಚು ಸವಲತ್ತನ್ನು ನೀಡುತ್ತಿದೆ. ಸರ್ಕಾರಿ ಶಾಲೆಗೆ ದಾಖಲಾದ ಮಕ್ಕಳು ಪೋಷಕರಿಗೆ ಎಂದೂ ಹೊರೆಯಾಗುವುದಿಲ್ಲ. ಸರ್ಕಾರ ನೀಡುವ ಸವಲತ್ತು ಸದುಪಯೋಗ ಪಡಿಸಿಕೊಂಡು ವಿದ್ಯಾರ್ಥಿಗಳು ಅಭಿವೃದ್ಧಿ ಪಥದತ್ತ ಮುನ್ನಡೆಯಬೇಕು ಎಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕರ ಶ್ರೀಕಾಂತ್ ಕಳೆದ ಹಲವಾರು ವರ್ಷಗಳಿಂದ ಈ ನಮ್ಮ ಶಾಲೆ ಉತ್ತಮ ಫಲಿತಾಂಶ ಪಡೆಯುವಲ್ಲಿ ಮುನ್ನಡೆ ಸಾಧಿಸಿದೆ. ಶಾಲೆಯ ಮಕ್ಕಳಿಗೆ ಅನೇಕ ರಾಷ್ಟ್ರೀಯ ನಾಯಕರ ವಿಚಾರಧಾರೆಗಳನ್ನು ಪ್ರತಿನಿತ್ಯ ತಿಳಿಸಲಾಗುವುದು. ಯಾವುದೇ ಸಂದರ್ಭದಲ್ಲೂ ವಿದ್ಯಾರ್ಥಿಗಳು ಶಿಕ್ಷಕರಿಂದ ಮಾಹಿತಿ ಪಡೆಯುವ ಸೌಲಭ್ಯ ನೀಡಲಾಗಿದೆ. ಶಾಲೆಯ ಬೆಳವಣಿಗೆಯಲ್ಲಿ ಎಸ್‍ಡಿಎಂಸಿ ಸಮಿತಿ ಹಾಗೂ ಗ್ರಾಮಸ್ಥರು ಉತ್ತಮ ಸಹಕಾರ ನೀಡುತ್ತಿದ್ಧಾರೆಂದರು.

    ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮಲ್ಲಿಕಾರ್ಜುನ್, ಅರುಣ್‍ಕುಮಾರ್, ಪಾರ್ವತಮ್ಮ, ರೇಖಮ್ಮ, ಮುಖ್ಯ ಶಿಕ್ಷಕ ಟಿ.ಎಲ್.ವಿಜಯ್, ಸಿಆರ್‍ಪಿ ತಿಪ್ಪೇಸ್ವಾಮಿ, ಪ್ರಮೀಳಾ, ಚಿಟ್ಟಿಬಾಬು, ನಸರ್‍ಉನ್ನಿಸಾ, ಪಿಎಸ್‍ಐ ಶಿವಕುಮಾರ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here