ಸರ್ಕಾರ ರೈತರ ನೆರವಿಗೆ ಬರಬೇಕು;ರಂಗಸ್ವಾಮಿ

0
26

ಚಿತ್ರದುರ್ಗ:

   ಮಧ್ಯಕರ್ನಾಟಕ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್ಲಿಯೂ ಹದಮಳೆ ಬಂದಿಲ್ಲ. ಬೀಜ ಬಿತ್ತನೆಯಾಗಿಲ್ಲ. ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು ಶಾಸಕರು, ಸಚಿವರು ಯಾರು ರೈತರ ಬಗ್ಗೆ ಕಿಂಚಿತ್ತು ಚಿಂತಿಸುತ್ತಿಲ್ಲ. ಅಧಿಕಾರ, ಕುರ್ಚಿ, ಹಣಗಳಿಕೆಗಷ್ಟೆ ಅಂಟಿಕೊಂಡಿದ್ದಾರೆ. ಬೊಗಳೆ ಭಾಷಣ ಮಾಡುವುದನ್ನು ನಿಲ್ಲಿಸಿ ರೈತರ ನೆರವಿಗೆ ಧಾವಿಸಲಿ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ಕೆ.ರಂಗಸ್ವಾಮಿ ಎಚ್ಚರಿಸಿದರು.

   ಪ್ರವಾಸಿ ಮಂದಿರದಲ್ಲಿ ರೈತರ ಸಭೆ ನಡೆಸಿದ ಸೋಮಗುದ್ದು ಕೆ.ರಂಗಸ್ವಾಮಿ ರೈತರು ಬೆಳೆ ಬೆಳೆಯಲು ಕರೆಂಟ್ ನೀಡದಿದ್ದರೆ ಪರವಾಗಿಲ್ಲ. ಜಿಲ್ಲೆಯಲ್ಲಿರುವ ಐದು ಲಕ್ಷ ಕುರಿ-ಮೇಕೆಗಳಿಗೆ ನೀರು ಕುಡಿಸಿ ದಾಹ ನೀಗಿಸುವುದಕ್ಕಾಗಿಯಾದರೂ ನಿರಂತರ ಕರೆಂಟ್ ಪೂರೈಸಿ ಎಂದು ರಾಜ್ಯ ಸರ್ಕಾರವನ್ನು ಕೇಳಿದರು.
ರಾಜ್ಯದಲ್ಲಿ ಜೆಡಿಎಸ್.ಕಾಂಗ್ರೆಸ್ ಮೈತ್ರಿ ಸರ್ಕಾರವಿರುವುದರಿಂದ ಎಲ್ಲಾ ಜಿಲ್ಲೆಗಳಲ್ಲಿಯೂ ಅಪ್ಪ ಮಕ್ಕಳು, ಅಣ್ಣತಮ್ಮಂದಿರ ಪಕ್ಷವಾಗಿದೆ. ದೇಶಕ್ಕೆ ಸ್ವಾತಂತ್ರ ಬಂದು ಎಪ್ಪತ್ತು ವರ್ಷಗಳಾಗಿದೆ. ಅನ್ನದಾತ ರೈತನಿಗೆ ಮಾತ್ರ ಇನ್ನು ಸ್ವಾತಂತ್ರ ಬಂದಿಲ್ಲ. ರಾಜಕೀಯ ವ್ಯಕ್ತಿಗಳಿಗೆ, ಅಧಿಕಾರಿಗಳಿಗೆ ಮಾತ್ರ ಸ್ವಾತಂತ್ರ ಸಿಕ್ಕಿದೆ. ಹಲವಾರು ಸಮಸ್ಯೆಗಳನ್ನು ಜಿಲ್ಲಾಡಳಿತಕ್ಕೆ ಹೇಳಿಕೊಂಡು ಪರಿಹಾರ ಕಂಡುಕೊಳ್ಳಲು ಗ್ರಾಮೀಣ ಭಾಗಗಳಿಂದ ಬರುವ ರೈತರು ಹಾಗೂ ಬಡವರು ಜಿಲ್ಲಾಧಿಕಾರಿಯನ್ನು ಭೇಟಿಯಾಗಲು ಬೆಳಿಗ್ಗೆ10-30 ರಿಂದ ಮಧ್ಯಾಹ್ನ 2 ಗಂಟೆವರೆಗೆ ಅವಕಾಶ ಮಾಡಿಕೊಡಿ. ನಂತರ ಜಿಲ್ಲಾಧಿಕಾರಿಗಳು ಅಧಿಕಾರಿಗಳ ಸಭೆಯನ್ನು ದಿನವಿಡಿ ಮಾಡಿಕೊಳ್ಳಲಿ ನಮ್ಮದೇನು ಅಭ್ಯಂತರವಿಲ್ಲ. ಇದಕ್ಕೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆದೇಶಿಸಬೇಕು. ಸಾಲ ಮನ್ನದ ಅಂಕಿ ಅಂಶವೇ ಗೊತ್ತಿಲ್ಲದ ರಾಜ್ಯ ಸರ್ಕಾರ 53 ಸಾವಿರ ಕೋಟಿ ರೂ.ರೈತರ ಸಾಲ ಮನ್ನ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ರಾಜ್ಯದ ರೈತರನ್ನು ಹಾಗೂ ಜನತೆಯನ್ನು ದಿಕ್ಕುತಪ್ಪಿಸುವುದು ಬೇಡ. ಇಲ್ಲದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಗುಡುಗಿದರು.

   ಚುನಾವಣೆಗೂ ಮುನ್ನ ನರೇಂದ್ರಮೋದಿ ವಿದೇಶಗಳಲ್ಲಿರುವ ಕಪ್ಪುಹಣವನ್ನು ತಂದು ಪ್ರತಿಯೊಬ್ಬ ಬಡವರ ಬ್ಯಾಂಕ್ ಖಾತೆಗೆ ಹದಿನೈದು ಲಕ್ಷ ರೂ.ಗಳನ್ನು ಜಮಾ ಮಾಡುವುದಾಗಿ ಆಸೆ ತೋರಿಸಿದರು. ಇದುವರೆವಿಗೂ ನಯಾಪೈಸೆಯೂ ಯಾರ ಖಾತೆಗೂ ಬಿದ್ದಿಲ್ಲ. ಗಂಗಾಮಾತೆಯನ್ನು ಶುದ್ದಿಕರಿಸುವುದಾಗಿ ಹೇಳಿದ್ದ ಮೋದಿ 20 ಸಾವಿರ ಕೋಟಿ ರೂ.ಗಳನ್ನು ನಿಗಧಿಪಡಿಸಿ ಅದರಲ್ಲಿ 16 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿದ್ದಾರೆ. ಹತ್ತು ಪೈಸೆಯಷ್ಟು ಶುದ್ದೀಕರಣವಾಗಿಲ್ಲ. ರಾಜೀವ್‍ಗಾಂಧಿ ದೇಶದ ಪ್ರಧಾನಿಯಾಗಿದ್ದಾಗ ಒಂದು ಸಾವಿರ ಕೋಟಿ ರೂ.ಗಂಗಾಮಾತೆ ಶುದ್ದೀಕರಣಕ್ಕೆ ಬಳಸಿದಾಗಲೂ ಶುದ್ದವಾಗಲಿಲ್ಲ. ಇದು ಅವಿವೇಕದ ಕೆಲಸ. ಇನ್ನು ಮುಂದಾದರೂ ಇಂತಹ ವ್ಯರ್ಥ ಪ್ರಯೋಗಗಳನ್ನು ಮಾಡುವ ಬದಲು ರೈತರ ಬದುಕನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹಸನುಗೊಳಿಸಲಿ ಎಂದು ಒತ್ತಾಯಿಸಿದರು.
ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಕುರುಬರಹಳ್ಳಿ ಶಿವಣ್ಣ, ತಾಲೂಕು ಅಧ್ಯಕ್ಷ ಎಂ.ಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಗಿರೀಶ್‍ರೆಡ್ಡಿ, ಕೆ.ಜಿ.ಭೀಮಾರೆಡ್ಡಿ, ಸತೀಶ್‍ಬೆನಕನಹಳ್ಳಿ ಇನ್ನು ಮುಂತಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here