ಸಾಲಮನ್ನಾಕ್ಕೆ ಒತ್ತಾಯಿಸಿ ನೂರಾರು ರೈತರ ಒಕ್ಕೊರಲ ಪ್ರತಿಭಟನೆ

0
17

ಕೊರಟಗೆರೆ

    ದೇಶದ ರೈತ ಸರಕಾರದ ಗುಲಾಮನಲ್ಲ. ಅನ್ನನೀಡುವ ರೈತ ದೇಶದ ಬೆನ್ನೆಲುಬು. ರೈತ ಸಾಲಗಾರನಲ್ಲ, ಸರ್ಕಾರವೇ ರೈತರಿಗೆ ಬಾಕಿದಾರ. ರೈತನಿಲ್ಲದೇ ಬ್ಯಾಂಕು ಇಲ್ಲ, ಸರಕಾರವೂ ಇಲ್ಲ. ಸಾಲಕ್ಕೆ ಹೆದರಿ ರೈತರು ಆತ್ಮಹತ್ಯೆಯ ಯೋಚನೆ ಕೂಡ ಮಾಡಬಾರದು ಎಂದು ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಆನಂದಪಟೇಲ್ ರೈತರಲ್ಲಿ ಮನವಿ ಮಾಡಿದರು.
ಅವರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ವತಿಯಿಂದ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕೊರಟಗೆರೆ ತಾಲ್ಲೂಕು ಕಚೇರಿಗೆ ಸೋಮವಾರ ನೂರಾರು ರೈತರ ಜೊತೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ವೇಳೆ ರೈತರನ್ನು ಉದ್ದೇಶಿಸಿ ಮಾತನಾಡಿದರು.

    ರಾಜ್ಯ ಮತ್ತು ಕೊರಟಗೆರೆಯಲ್ಲಿ ಕಳೆದ 6ವರ್ಷದಿಂದ ಮಳೆಯಿಲ್ಲದೇ ಬರಗಾಲದ ಛಾಯೆಯಿಂದ ರೈತರು ಕಂಗಾಲಾಗಿದ್ದಾರೆ. ಶಾಶ್ವತ ನೀರಾವರಿ ಯೋಜನೆ ಇನ್ನೂ ಮರೀಚಿಕೆಯಾಗಿ ಉಳಿದಿದೆ. ಕೇಂದ್ರ ಸರಕಾರ ರಾಜ್ಯ ಸರಕಾರದ ಜೊತೆ ಕೈಜೋಡಿಸಿ ರಾಜ್ಯದ ರೈತರ ಸಂಪೂರ್ಣ ಸಾಲವನ್ನು ಆ.15 ರೊಳಗೆ ಮನ್ನಾ ಮಾಡಬೇಕು. ಇಲ್ಲದಿದ್ದಲ್ಲಿ ರೈತರು ರಾಜ್ಯಾದ್ಯಂತ ಉಗ್ರಹೋರಾಟದ ಹಾದಿ ತುಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

     ಹಸಿರುಸೇನೆ ರಾಜ್ಯ ಕಾರ್ಯದರ್ಶಿ ಕೆಂಕೆರೆಸತೀಶ್ ಮಾತನಾಡಿ, ಬಡಪೀಡಿತವಾದ ಕೊರಟಗೆರೆಯಲ್ಲಿ ಎತ್ತಿನಹೊಳೆ ಯೋಜನೆಯ ಬಫರ್‍ಡ್ಯಾಂನ ಕಾಮಗಾರಿಗೆ ಶಂಕುಸ್ಥಾಪನೆ ಮಾಡಲು ರಾಜ್ಯ ಸರಕಾರ ಮೀನಾಮೇಷ ಎಣಿಸುತ್ತಿದೆ. ಭೂಮಿ ಕಳೆದುಕೊಂಡ ರೈತರಿಗೆ ಸರಕಾರದಿಂದ ಸಮರ್ಪಕ ಬೆಲೆಯನ್ನು ನೀಡಬೇಕು. ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕೇವಲ ಬೆಂಗಳೂರಿಗೆ ಮಾತ್ರ ಸಿಮೀತವಾಗದೆ ತುಮಕೂರು ಮತ್ತು ಕೊರಟಗೆರೆ ರೈತರ ಸಮಸ್ಯೆಗಳನ್ನು ಆಲಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

    ರೈತಸಂಘದ ಜಿಲ್ಲಾ ಗೌರವಾಧ್ಯಕ್ಷ ಧನಂಜಯಾರಾಧ್ಯ ಮಾತನಾಡಿ ಕೊರಟಗೆರೆ ತಾಲ್ಲೂಕಿನ ಸರಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಬೆಳೆ ವಿಮೆಗೆ ಕಾಲಾವಕಾಶ ಮುಗಿದಿದೆ. ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯವಿಲ್ಲ. ತೋಟಗಾರಿಕೆ ಇಲಾಖೆಯಿಂದ ಬರುವ ಸೌಲಭ್ಯಗಳ ಮಾಹಿತಿಯೇ ರೈತರಿಗೆ ಇಲ್ಲವಾಗಿದೆ. ಕೃಷಿ ಮತ್ತು ತೋಟಗಾರಿಕೆ ಇಲಾಖೆಯಿಂದ ರೈತರಿಗೆ ನೇರ ಸೇವಾ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.

   ರೈತರು ಪಟ್ಟಣದ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಿಂದ ಮುಖ್ಯರಸ್ತೆ ಮೂಲಕ ಎಸ್‍ಎಸ್‍ಆರ್ ವೃತ್ತದಲ್ಲಿ ಮಾನವ ಸರಪಣಿ ನಿರ್ಮಿಸಿ ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ದ ಘೋಷಣೆ ಕೂಗಿ ನಂತರ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತೋಟಗಾರಿಕೆ, ಅಬಕಾರಿ, ಕೃಷಿ ಮತ್ತು ಬೆಸ್ಕಾಂ ಇಲಾಖೆ ಅಧಿಕಾರಿಗಳಿಗೆ ತಹಸೀಲ್ದಾರ್ ಸಮ್ಮುಖದಲ್ಲಿಯೇ ರೈತ ಮುಖಂಡರು ತರಾಟೆಗೆ ತೆಗೆದುಕೊಂಡರು. ನಂತರ ಸಿಪಿಐ ಮುನಿರಾಜು ರೈತ ಮುಖಂಡರನ್ನು ಸಮಾಧಾನ ಪಡಿಸಿ ಮದ್ಯ ಮಾರಾಟದ ಸಮಸ್ಯೆಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

      ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾ ಕಾರ್ಯದರ್ಶಿ ಜಗದೀಶ್, ವೆಂಕಟಪ್ಪ, ತಾಲ್ಲೂಕು ಅಧ್ಯಕ್ಷ ಕೋಡ್ಲಹಳ್ಳಿ ಸಿದ್ದರಾಜು, ರೈತಮುಖಂಡರಾದ ಸಿದ್ದನಂಜಾರಾಧ್ಯ, ಶಶಿಧರ್, ಗೋವಿಂದರಾಜು, ಬಸವರಾಜು, ಪ್ರಸನ್ನಕುಮಾರ್, ಲೊಕೇಶ್, ಶಿವಕುಮಾರಯ್ಯ, ರಾಜಗೋಪಾಲರೆಡ್ಡಿ, ಲಕ್ಷ್ಮಣ್‍ಗೌಡ, ಕೃಷ್ಣ, ರಾಮಣ್ಣ, ಮಹಮ್ಮದ್‍ನಯಾಜ್, ಹುಳಿಯಾರ್ ಸೈಯದ್, ಜಗದೀಶ್, ಜಗನ್ನಾಥ್, ಕುಮಾರ್, ಗಂಗಹನುಮಯ್ಯ, ವಿಜಯಲಕ್ಷ್ಮೀ ಸೇರಿದಂತೆ ನೂರಾರು ರೈತರು ಇದ್ದರು.

LEAVE A REPLY

Please enter your comment!
Please enter your name here