ಸಾಲ ಮನ್ನಾ : ನನ್ನ ಕಷ್ಟ ನನಗೇ ಗೊತ್ತು

0
38

ಬೆಂಗಳೂರು:

      ಸಾಲ ಮನ್ನಾ ವಿಚಾರವಾಗಿ ನಾನು ಹುಡುಗಾಟಿಕೆ ಮಾಡುತ್ತಿಲ್ಲ. ನನ್ನ ಕಷ್ಟ ನನಗೇ ಗೊತ್ತು. ಅದನ್ನು ಯಾರಿಗೂ ಹೇಳುವ ಹಾಗಿಲ್ಲ ಎಂದು ಸಿಎಂ ಕುಮಾರಸ್ವಾಮಿ ತಮ್ಮ ಅಸಹಾಯಕತೆ ಹೊರಹಾಕಿದ್ದಾರೆ.

      ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ 24ನೇ ವಿಶ್ವ ಆದಿವಾಸಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 48 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡುವುದು ಸಣ್ಣ ವಿಚಾರವಲ್ಲ. ಅದಕ್ಕಾಗಿ ಹಣ ಹೊಂದಿಸಬೇಕಾಗಿದೆ. ನಾನೇನು ಹಣದ ಗಿಡ ನೆಟ್ಟಿಲ್ಲ. ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ರಾತ್ರೋರಾತ್ರಿ ಹಣ ಹೊಂದಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಇದೇ ವೇಳೆ ಮಾಧ್ಯಮದವರ ವಿರುದ್ಧ ತಮ್ಮ ಅಸಮಾಧಾನವನ್ನು ಮುಂದುವರಿಸಿರುವ ಸಿಎಂ, ಮಾಧ್ಯಮವರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಏಕೆ ಮಾಡುತ್ತಾರೋ ಗೊತ್ತಿಲ್ಲ. ಅದಕ್ಕಾಗಿ ನಾನು ಮಾಧ್ಯಮದವರ ಜತೆ ಮಾತನಾಡುವುದನ್ನೇ ಕಡಿಮೆ ಮಾಡಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ನಾನು ನಿಮ್ಮ ಕ್ಷಮೆ ಕೋರುತ್ತೇನೆ. ಅನ್ಯ ಕೆಲಸಗಳು ಮತ್ತು ವೈಯ್ಯಕ್ತಿಕ ಕೆಲಸದ ನಿಮಿತ್ತ ಇಲ್ಲಿಗೆ ಬರಲು ತಡವಾಗಿದೆ. ಹೀಗಾಗಿ ಕಾರ್ಯಕ್ರಮಕ್ಕೆ ಸರ್ಕಾರದ ಮಂತ್ರಿಗಳನ್ನು ಕಳುಹಿಸಿದ್ದೆ. ಆದರೆ ಸಮಾಜಕ್ಕೆ ಸಿಎಂ ಅಗೌರವ ತೋರಿದರು ಎಂದು ಕೆಲವರು ಬಿಂಬಿಸುವ ಸಾಧ್ಯತೆ ಇರುವುದರಿಂದ ನಾನೇ ಕಾರ್ಯಕ್ರಮಕ್ಕೆ ಬಂದೆ ಎಂದು ವಿವರಿಸಿದರು. ಮಗನ ಸಿನಿಮಾ ಬಗ್ಗೆ ಸುದ್ದಿಗೋಷ್ಠಿ ಏರ್ಪಡಿಸಲಾಗಿತ್ತು. ಅದಕ್ಕಾಗಿ ಐದು ನಿಮಿಷ ಅಲ್ಲಿಗೆ ಹೋಗಿದ್ದೆ. ಒಬ್ಬ ತಂದೆಯಾಗಿ ಮಗನ ಜೀವನ ರೂಪಿಸಬೇಕಾದ ಕರ್ತವ್ಯವೂ ನನ್ನ ಮೇಲಿದೆ. ದಿನದ 24 ಗಂಟೆಯಲ್ಲಿ ಮಗನ ಮುಖ ನೋಡಲೂ ಆಗುತ್ತಿಲ್ಲ. ನನ್ನ ಕಷ್ಟ ನನಗೆ ಗೊತ್ತು ಎಂದು ಬೇಸರ ವ್ಯಕ್ತಪಡಿಸಿದರು.

ಒಂದು ಪೈಸೆ ಹಣವನ್ನೂ ಹಿಂಪಡೆದಿಲ್ಲ:

      ಮಾಧ್ಯಮಗಳು ಸರ್ಕಾರ ಶಾದಿ ಭಾಗ್ಯದ ಹಣ ಕಡಿತಗೊಳಿಸಿದೆ ಎಂದು ವರದಿ ಮಾಡಿವೆ. ಆದರೆ ಹಣ ಕಡಿತಗೊಳಿಸಿರುವ ಬಗ್ಗೆ ನನಗೆ ಗೊತ್ತೇ ಇಲ್ಲ. ಹಿಂದಿನ ಸರ್ಕಾರದ ಯೋಜನೆಗಳಿಗೆ ಕೊಟ್ಟಿರುವ ಹಣದಲ್ಲಿ ಒಂದೂ ಪೈಸೆಯನ್ನೂ ನಾನು ಹಿಂಪಡೆದಿಲ್ಲ ಎಂದು ಸ್ಪಷ್ಟ ಪಡಿಸಿದರು.

      ಮಾತೃಪೂರ್ಣ ಯೋಜನೆಯಾಗಲಿ, ಯಾವುದಕ್ಕೂ ಹಣ ಕಡಿತ ಗೊಳಿಸಿಲ್ಲ. ನಾನು ಯಾವುದೇ ತಪ್ಪು ಮಾಡದಿದ್ದರೂ ನನ್ನನ್ನು ದೂಷಿಸಲಾಗುತ್ತಿದೆ. ದೊಡ್ಡವರನ್ನು ಮೆಚ್ಚಿಸಲು ನಾನು ಸಿಎಂ ಆಗಿಲ್ಲ. ನಾನು ಯಾವುದೇ ಸ್ವಾರ್ಥದ ತೀರ್ಮಾನ ಮಾಡಲ್ಲ. ರಾಜ್ಯದ ಸಮಗ್ರ ಅಭಿವೃದ್ಧಿ ನನ್ನ ಗುರಿ. ನಾನು ಬಡವರ ಜತೆ ಬೆರೆಯುವ ವ್ಯಕ್ತಿ ಎಂದು ತಿಳಿಸಿದರು.

      ಮಾಧ್ಯಮದಲ್ಲಿ ಜನತಾದಳದ ಕಾರ್ಯಕರ್ತರಿಗೆ ವಿಧಾನಸೌಧ ಪ್ರವೇಶ ನಿಷೇಧ ಎಂದು ಪ್ರಸಾರ ಮಾಡುತ್ತಿತ್ತು. ನಾನು ಯಾರನ್ನೂ ನಿಷೇಧಿಸಿಲ್ಲ. ನಾನು ಏಕೆ ನಿಷೇಧ ಮಾಡಲಿ?. ಕೃಷ್ಣಾದಲ್ಲಾಗಲಿ, ವಿಧಾನಸೌಧಕ್ಕಾಗಲಿ, ನನ್ನ ಮನೆ ಮುಂದೆಯಾಗಲಿ ದಿನನಿತ್ಯ ಜನ ಬರುತ್ತಾರೆ. ಮಾಧ್ಯಮದವರಿಗೆ ಅದು ಯಾರು ಈ ರೀತಿ ಮಾಹಿತಿ ನೀಡುತ್ತಾರೋ ಗೊತ್ತಿಲ್ಲ ಎಂದು ಟೀಕಿಸಿದರು.

LEAVE A REPLY

Please enter your comment!
Please enter your name here