ಸಾಲ ಮರುಪಾವತಿಗೆ ನೋಟೀಸ್ ಜಾರಿ

ಚಿತ್ರದುರ್ಗ:

       ಕೃಷಿಗಾಗಿ ಸಾಲ ಮಾಡಿರುವ ರೈತರಿಗೆ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಒಂದಾಗಿರುವ ಸಿಂಡಿಕೇಟ್ ಬ್ಯಾಂಕ್ ಚಿತ್ರದುರ್ಗ ಶಾಖೆ ಹಾಗೂ ಖಾಸಗಿ ಬ್ಯಾಂಕ್‍ಗಳು ರೈತರಿಗೆ ಸಾಲದ ನೋಟಿಸ್ ನೀಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

          ಸತತವಾಗಿ ಏಳು ವರ್ಷಗಳಿಂದಲೂ ಚಿತ್ರದುರ್ಗ ಜಿಲ್ಲೆ ಸತತ ಬರಗಾಲವನ್ನು ಎದುರಿಸುತ್ತಿದ್ದು, ನಾಲ್ಕು ವರ್ಷಗಳಿಂದ ಅತೀವ ಬರಗಾಲದಿಂದ ತತ್ತರಿಸುತ್ತಿದೆ. ಕೃಷಿಗಾಗಿ ಮಾಡಿದ ಸಾಲ ಪಾವತಿಸಲು ಇರುವ ಆಸ್ತಿಯನ್ನು ಮಾರಲು ಹೋದರೆ ಕೊಂಡುಕೊಳ್ಳುವವರು ಯಾರು ಇಲ್ಲದಿರುವುದರಿಂದ ರೈತರ ಜೀವನ ಅಯೋಮಯವಾಗಿದೆ. ಇವೆಲ್ಲವನ್ನು ಮನಗಂಡು ರಾಜ್ಯ ಸರ್ಕಾರ ರೈತರಿಗೆ ಸಾಲದ ನೋಟಿಸ್ ನೀಡಬಾರದೆಂದು ಎಚ್ಚರಿಕೆ ನೀಡಿದೆ.

          ಸತತ ಬರಗಾಲಕ್ಕೆ ತುತ್ತಾಗಿರುವ ರೈತರ ಸಾಲವನ್ನು ದೀರ್ಘಾವಧಿಯಾಗಿ ಪರಿವರ್ತಿಸಿ ಹೊಸ ಸಾಲವನ್ನು ನೀಡುವಂತೆ ರಿಸರ್ವ್ ಬ್ಯಾಂಕ್ ಕೂಡ ಎಲ್ಲಾ ಬ್ಯಾಂಕ್‍ಗಳಿಗೆ ನಿರ್ದೇಶನ ನೀಡಿದ್ದರೂ ರೈತರಿಗೆ ಸಾಲದ ನೋಟಿಸ್ ನೀಡುವ ಕೆಲಸವನ್ನು ನಿರಂತರವಾಗಿ ಬ್ಯಾಂಕ್‍ಗಳು ಮಾಡುತ್ತಿರುವುದರಿಂದ ಮರ್ಯಾದೆಗೆ ಹೆದರಿ ರೈತ ಆತ್ಮಹತ್ಯೆ ಮಾಡಿಕೊಳ್ಳುವ ದಾರಿ ಬಿಟ್ಟರೆ ಅನ್ಯ ಮಾರ್ಗವಿಲ್ಲ. ಆದ್ದರಿಂದ ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯಾಧಿಕಾರಿಗಳ ಸಭೆ ನಡೆಸಿ ಇನ್ನು ಮುಂದೆ ಯಾವುದೇ ಬ್ಯಾಂಕ್‍ಗಳು ರೈತರಿಗೆ ನೋಟಿಸ್ ನೀಡುವುದನ್ನು ನಿಲ್ಲಿಸುವಂತೆ ಆದೇಶಿಸಬೇಕೆಂದು ರೈತರು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ನುಲೇನೂರು ಶಂಕರಪ್ಪ, ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ತಾಲೂಕು ಅಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು, ಧನಂಜಯ, ಪಿ.ತಿಪ್ಪೇಸ್ವಾಮಿ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap