ಸೆ.25ರ ಅಕ್ಕಿ ಸಾಗಾಣಿಕೆ ಬಂದ್‍ನ ಪೋಸ್ಟರ್ ಬಿಡುಗಡೆ

0
36

ದಾವಣಗೆರೆ:

         ಅನ್ನಭಾಗ್ಯ ಯೋಜನೆಯ ಸಗಟು ಗೋದಾಮುಗಳಲ್ಲಿ ಕೆಲಸ ಮಾಡುತ್ತಿರುವ ಲೋಡಿಂಗ್ ಮತ್ತು ಅನ್‍ಲೋಡಿಂಗ್ (ಹಮಾಲಿ) ಕಾರ್ಮಿಕರು, ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಸೆ.25ರಂದು ಕರ್ನಾಟಕ ಶ್ರಮಿಕ ಶಕ್ತಿ ನೇತೃತ್ವದಲ್ಲಿ ಅಕ್ಕಿ ಸಾಗಾಣಿಕೆ ಬಂದ್ ಮಾಡಿ, ಮುಷ್ಕರಕ್ಕೆ ಕರೆ ನೀಡಿರುವುದರ ಪೋಸ್ಟರ್‍ಗಳನ್ನು ಭಾನುವಾರ ನಗರದಲ್ಲಿ ಬಿಡುಗಡೆಗೊಳಿಸಲಾಯಿತು.

          ನಗರದ ಜಯದೇವ ವೃತ್ತದಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಕರ್ನಾಟಕ ಶ್ರಮಿಕ ಶಕ್ತಿಯ ಜಿಲ್ಲಾ ಸಂಚಾಲಕ ಸತೀಶ್ ಅರವಿಂದ್, ಅನ್ನಭಾಗ್ಯ ಯೋಜನೆಯ ಸಗಟು ಗೋದಾಮುಗಳಲ್ಲಿ ಕೆಲಸ ಮಾಡುತ್ತಿರುವ ಲೋಡಿಂಗ್ ಮತ್ತು ಅನ್‍ಲೋಡಿಂಗ್ (ಹಮಾಲಿ) ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಸೆ.25ರಂದು ಅಕ್ಕಿ ಸಾಗಾಣಿಕೆ ಬಂದ್ ಮಾಡಿ, ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದ್ದು ಎಲ್ಲಾ ಕಾರ್ಮಿಕರು ಈ ಹೋರಾಟದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. 

        ಈ ಹಮಾಲರು ಅನ್ನ ಭಾಗ್ಯ ಯೋಜನೆಯ ಅಕ್ಕಿಯನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಗಾಣಿಕೆ ಮಾಡಿ, ಬಡ ಬಿಪಿಎಲ್ ಪಡಿತರ ಚೀಟಿ ಫಲಾನುಭವಿಗಳ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಇವರಿಗೆ ಸರಿಯಾದ ಕೂಲಿ ಹಾಗೂ ಸೌಲಭ್ಯ ಸಿಗದಿರುವುದರಿಂದ ಉಪವಾಸ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಈ ಹಲಮಾರ ಕೂಲಿ ಹೆಚ್ಚಿಸಬೇಕು, ಇಎಸ್‍ಐ-ಪಿಎಫ್ ಜಾರಿ ಮಾಡಲು ಉಸ್ತುವಾರಿ ಅಧಿಕಾರಗಳನ್ನು ನೇಮಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಹಲವು ಬಾರಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿಲಾಗಿದೆ. ಅಲ್ಲದೆ, ಸಂಬಂಧಪಟ್ಟ ಮಂತ್ರಿಗಳ ಜೊತೆ ಹಲವು ಬಾರಿ ಚರ್ಚಿಸಲಾಗಿದೆ. ಆದರೆ, ಇದ್ಯಾವುದಕ್ಕೂ ಸರ್ಕಾರಗಳು ಸ್ಪಂದಿಸಿಲ್ಲ ಎಂದು ಆರೋಪಿಸಿದರು.

        ಸರ್ಕಾರದ ಈ ನಿರ್ಲಕ್ಷ್ಯ ಖಂಡಿಸಿ ಸೆ.25ರಿಂದ ರಾಜ್ಯದ ಸಗಟು ಗೋದಾಮುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲರು ಎಫ್‍ಸಿಐನಿಂದ ಬರುವ ಅಕ್ಕಿ ಮತ್ತು ಇನ್ನಿತರ ಸರಕುಗಳ ಅನ್‍ಲೋಡಿಂಗ್ ನಡೆಸುವುದಿಲ್ಲ ಮತ್ತು ಸಗಟು ಗೋದಾಮುಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ಸರಕುಗಳನ್ನು ಕಳುಹಿಸದೇ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿ, ತಮ್ಮ ನ್ಯಾಯಯುತ ಬೇಡಿಕೆಗಳು ಈಡೇರುವ ವರೆಗೂ ಪ್ರತಿಭಟಿಸಲು ತೀರ್ಮಾನಿಸಿದ್ದಾರೆಂದು ಹೇಳಿದರು.

         ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಕಳೆದ 43 ವರ್ಷಗಳಿಂದ ಸುವ್ಯಸ್ಥಿತವಾದ ಯಂತ್ರಾಂಗ ರೂಪಿಸಿ ನಡೆಸಿಕೊಂಡು ಬರಲಾಗುತ್ತಿದೆ. ತಾಲೂಕು ಮಟ್ಟದಲ್ಲಿರುವ ಸಗಟು ಗೋದಾಮು, ಜಿಲ್ಲೆಯ ಉಗ್ರಾಣ ನಿಗಮಗಳ ಗೋದಾಮಗಳಲ್ಲಿ ಕೆಲಸ ಮಾಡುವ ಸುಮಾರು 7000ಕ್ಕೂ ಹೆಚ್ಚು ಲೋಡಿಂಗ್, ಅನ್‍ಲೋಡಿಂಗ್ ಕಾರ್ಮಿಕರು ಇದಕ್ಕಾಗಿ ದುಡಿಯುತ್ತಿದ್ದಾರೆ. ಸಾಮಾನ್ಯವಾಗಿ ಎಲ್ಲರಿಗೂ ನ್ಯಾಯಬೆಲೆ ಅಂಗಡಿಗಳು ಕಾಣಿಸುತ್ತವೆಯೇ ಹೊರತು ಕಾರ್ಮಿಕರು ಹೆಚ್ಚಾಗಿ ಕಾಣುವುದಿಲ್ಲ. ಈ ಕಾರ್ಮಿಕರಿಗೆ ಕಾರ್ಮಿಕರಿಗೆ 38 ವರ್ಷಗಳಿಂದ ಸರಿಯಾದ ಕೂಲಿ ನೀಡುತ್ತಿಲ್ಲ. ಇಎಸ್‍ಐ, ಪಿಎಫ್ ಸೇರಿದಂತೆ ಯಾವೊಂದು ಕಾರ್ಮಿಕ ಕಾನೂನನ್ನೂ ಜಾರಿ ಮಾಡಿಲ್ಲ ಎಂದು ಆರೋಪಿಸಿದರು.

           ತಕ್ಷಣವೇ ಸರ್ಕಾರ ಎಚ್ಚೆತ್ತು ಇಎಸ್‍ಐ, ಪಿಎಫ್ ಸೇರಿದಂತೆ ಗುತ್ತಿಗೆ ಮತ್ತು ಕಾರ್ಮಿಕ ಕಾನೂನು ಜಾರಿ ಮಾಡಲು ಸೀನಿಯರ್ ಜಂಟಿ ನಿರ್ದೇಶಕರ ಮಟ್ಟದ ಒಬ್ಬ ಅಧಿಕಾರಿಯನ್ನು ರಾಜ್ಯಮಟ್ಟದಲ್ಲಿ ನೇಮಿಸಬೇಕು ಮತ್ತು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನಕ್ಕೆ ನಿರ್ದಿಷ್ಟ ಅಧಿಕಾರಿ ನಿಯೋಜಿಸಬೇಕೆಂದು ಒತ್ತಾಯಿಸಿದರು.

            ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಅನೀಸ್ ಪಾಷ ಮಾತನಾಡಿ, ಸಗಟು ಗೋದಾಮುಗಳಿಂದ ನ್ಯಾಯಬೆಲೆ ಅಂಗಡಿಗೆ ಹೋಗುವ ಅಕ್ಕಿಗೆ ಕ್ವಿಂಟಾಲ್ ಒಂದಕ್ಕೆ 30 ರು.ಗಳ ಕೂಲಿದರ ನಿಗದಿ, ಎಫ್‍ಸಿಐನಿಂದ ಬರುವ ಅಕ್ಕಿಯ ಅನ್‍ಲೋಡಿಂಗ್‍ಗೆ ಕ್ವಿಂಟಾಲ್‍ಗೆ 10 ರು. ಏಕರೂಪದ ಕೂಲಿದರ ನಿಗದಿ, ಅಲಾಟ್‍ಮೆಂಟ್‍ಗೆ ತಕ್ಕಂತೆ ಕಾರ್ಮಿಕರ ಹಾಜರಾತಿ ನಿರ್ವಹಿಸಿ, ನೇರವಾಗಿ ಇಲಾಖೆಯಿಂದಲೇ ಕೂಲಿದರ ಹಾಗೂ ಇಎಸ್‍ಐ, ಪಿಎಫ್ ಅನ್ನು ಕಾರ್ಮಿಕರಿಗೆ ಪಾವತಿಸಬೇಕು, ರಾಜ್ಯ ಉಗ್ರಾಣ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಲೋಡಿಂಗ್ ಕಾರ್ಮಿಕರಿಗೂ ಈ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಉಷಾ ಕೈಲಾಸದ್, ಆದಿಲ್‍ಖಾನ್, ಶೇಖರಪ್ಪ, ಪರಶುರಾಮ್, ಹೆಚ್. ರಮೇಶ್, ಎಂ.ಬಿ.ಸಂತೋಷ್ ಕುಮಾರ್, ಎಸ್.ಕೆ. ಒಡೆಯರ್, ಹಳದಪ್ಪ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here