ಸೋತವರ ಸಂಕಟ – ಗೆದ್ದವರ ವಿಜಯೋತ್ಸವ

 -  - 


ತುಮಕೂರು:

ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಂದ ನಂತರ ಇದೀಗ ಸೋಲು ಗೆಲುವಿನ ಕಾರಣಗಳ ಬಗ್ಗೆ ಚರ್ಚೆ ನಡೆದಿದೆ. ಒಂದು ಕಡೆ ಸೋತ ಅಭ್ಯರ್ಥಿಗಳ ಪರ ಕಾರ್ಯಕರ್ತರು ಸಪ್ಪೆ ಮೋರೆ ಹಾಕಿ ಕುಳಿತರೆ, ಗೆದ್ದ ಅಭ್ಯರ್ಥಿಗಳ ಕಡೆಯವರು ವಿಜಯೋತ್ಸವ ಆಚರಿಸುತ್ತಿದ್ದಾರೆ.

ತಮಗೆ ಬೇಕಾದವರಿಗೆ ಮೊಬೈಲ್ ಕರೆ ಮಾಡಿಕೊಂಡು ನಾನು ಗೆಲುವಿಗಾಗಿ ಓಡಾಡಿದೆ ಎಂದೆಲ್ಲಾ ಹೇಳಿಕೊಂಡು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ನೂತನವಾಗಿ ಆಯ್ಕೆಯಾಗಿರುವ ಶಾಸಕರಿಗೂ ಫೋನ್ ಕರೆ ಮಾಡಿ ತಿಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಬಹುತೇಕ ಶಾಸಕರು ಈಗ ಯಾರಿಗೂ ಲಭ್ಯವಾಗುತ್ತಿಲ್ಲ. ರಾಜ್ಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಿರುವ ಕಾರಣ ಅವರೆಲ್ಲಾ ರಾಜಧಾನಿ ಕಡೆ ಬ್ಯುಸಿ ಆಗಿರುವ ಕಾರಣ ಸುಲಭವಾಗಿ ಕಾರ್ಯಕರ್ತರ ಕೈಗೆ ಸಿಗುತ್ತಿಲ್ಲ. ಕೆಲವರ ಮೊಬೈಲ್‍ಗಳು ಸ್ವಿಚ್ ಆಫ್ ಆಗಿವೆ.

ಸೋತ ಅಭ್ಯರ್ಥಿಗಳ ಕಡೆಯ ಕಾರ್ಯಕರ್ತರು ಚೇತರಿಸಿಕೊಳ್ಳಲು ಇನ್ನೂ ಬಹಳ ದಿನಗಳೇ ಬೇಕಾಗುವುದು. ಅಭ್ಯರ್ಥಿಗಳ ಸುತ್ತವೂ ಇರುತ್ತಿದ್ದ ಪಡೆ ಈಗ ಕಾಣುತ್ತಿಲ್ಲ. ಅವರನ್ನು ಸಮಾಧಾನ ಪಡಿಸುವ ಮಂದಿಯೂ ಇಲ್ಲ. ಏಕಾಂಗಿಯಾಗಿ ಅವರನ್ನು ಬಿಟ್ಟು ತೆರಳಿರುವವರೆ ಹೆಚ್ಚು. ಇನ್ನೂ ಕೆಲವರು ಅಭ್ಯರ್ಥಿಗಳತ್ತ ಹೋಗುವುದೇ ಬೇಡ, ಯಾವ ಮುಖ ಇಟ್ಟುಕೊಂಡು ಹೋಗಲಿ ಎಂಬ ನಿರ್ಧಾರದಲ್ಲಿ ಕೊರಗುತ್ತಲೇ ಇದ್ದಾರೆ. ಮತ್ತೆ ಕೆಲವರು ಅಭ್ಯರ್ಥಿಗಳು ಇರುವ ಮನೆಗಳತ್ತ ತೆರಳಿ ಸಮಾಧಾನಪಡಿಸಿ ಬರುತ್ತಿದ್ದಾರೆ.

ಚುನಾವಣಾ ದಿನಾಂಕ ಘೋಷಣೆಯಾಗಿ ಅಧಿಕೃತ ಟಿಕೆಟ್ ಪ್ರಕಟವಾದಾಗಿನಿಂದಲೂ ಅಭ್ಯರ್ಥಿಗಳು ಮತದಾರನ ಮನ ತಲುಪಲು ಪಟ್ಟಿರುವ ಪ್ರಯತ್ನ ಅಷ್ಟಿಷ್ಟಲ್ಲ. ಮನೆ ಮಠ ಯಾವುದನ್ನೂ ನೋಡದೆ ತನ್ನ ಆರೋಗ್ಯ ಕೂಡ ಲೆಕ್ಕಿಸದೆ ಬಿಸಿಲಿನ ಝಳದಲ್ಲಿ ತನ್ನ ಕಾರ್ಯಕರ್ತರ ಪಡೆಯೊಂದಿಗೆ ಊರೂರು ಸುತ್ತಿದರು. ಅಲ್ಲಿ ಎದುರಾಗುವ ಪ್ರಶ್ನೆಗಳಿಗೆ ಪ್ರತಿಕ್ರಯಿಸಿ ಅವರನ್ನು ಸಮಾಧಾನಿಸಿ ತನಗೆ ಮತ ಹಾಕುವಂತೆ ಪರಿಪರಿಯಾಗಿ ಬೇಡಿಬಂದಿದ್ದರು. ಅಕ್ಷರಶಃ ಅವರೆಲ್ಲಾ ಬಿಸಿಲಿಗೆ ಬಳಲಿ ಬೆಂಡಾಗಿ ಹೋಗಿದ್ದರು. ಬಹಳಷ್ಟು ಅಭ್ಯರ್ಥಿಗಳ ಮುಖಗಳು ಕಪ್ಪಿಟ್ಟಿದ್ದವು. ಈಗ ಸೋಲಿನ ನಂತರ ಅವರು ಮತ್ತೆ ಯಥಾಸ್ಥಿತಿಗೆ ಮರಗಳು ಬಹಳ ದಿನಗಳೇ ಬೇಕಾಗಬಹುದು. ಅಭ್ಯರ್ಥಿಗಳಿಗಿಂತ ಹೆಚ್ಚಾಗಿ ನೋವಾಗಿರುವುದು ಅವರ ಹಿಂದೆ ಸುತ್ತುತ್ತಿದ್ದ ಕಾರ್ಯಕರ್ತರುಗಳಿಗೆ.

ಇನ್ನು ಮುಂದೆ ಇಂತಹ ಚುನಾವಣೆಗಳ ಸಹವಾಸವೇ ಬೇಡ. ನನಗೆ ಪರಿಚಯವಿದ್ದ ಕಾರಣ ಹಾಗೂ ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರೆಂಬ ಕಾರಣ ಓಲೈಸಿ ಅವರ ಪರ ಚುನಾವಣೆಯಲ್ಲಿ ಪಾಲ್ಗೊಂಡಿದ್ದೆ. ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿತ್ತು. ನೀವೆ ಗೆಲ್ಲುತ್ತೀರಿ ಎಂದು ಹೋದ ಕಡೆಯಲ್ಲೆಲ್ಲಾ ಹೇಳುತ್ತಿದ್ದರು. ಇದೇ ಮಾತನ್ನು ಅಭ್ಯರ್ಥಿಗೂ ತಿಳಿಸುತ್ತಿದ್ದೆವು. ಅವರು ಖುಷಿಯಗಿ ಹೋಗುತ್ತಿದ್ದರು. ಆದರೆ ಚುನಾವಣಾ ಫಲಿತಾಂಶ ನೋಡಿದಾಗ ನಮ್ಮ ಕಿವಿಗೆ ಹೂ ಇಟ್ಟಿದ್ದಾರೆಂಬುದು ಅರ್ಥವಾಯಿತು. ಮತದಾರ ಈ ರೀತಿ ಮೋಸ ಮಾಡುತ್ತಾನೆಂದು ಅಂದುಕೊಂಡಿರಲಿಲ್ಲ. ಇನ್ನು ಮುಂದೆ ಇಂತಹ ಚುನಾವಣೆಗಳ ಸಹವಾಸವೇ ಬೇಡ ಎನ್ನುತ್ತಾರೆ ಪಕ್ಷವೊಂದರ ಪ್ರಮುಖ ಅಭ್ಯರ್ಥಿಯ ಹಿಂದೆ 20 ದಿನಗಳ ಕಾಲ ಓಡಾಡಿದ ಓರ್ವ ನಿವೃತ್ತ ನೌಕರ.
ಚುನಾವಣೆಯೇನೋ ಮುಗಿದು ಹೋಯಿತು. ಮಳೆ ಬಂದು ನಿಂತಂತಾಯಿತು. ಆದರೂ ಇದರ ಲೆಕ್ಕಾಚಾರಗಳು ಈಗಲೇ ಮುಗಿಯುವುದಿಲ್ಲ. ಅಸಹನೆ, ದ್ವೇಷ, ಅಸೂಯೆ ಇವೆಲ್ಲವೂ ಇನ್ನೂ ಕೆಲಕಾಲ ಮನೆ ಮಾಡಿರುತ್ತವೆ. ಪಕ್ಷಪಕ್ಷಗಳ ನಡುವಿನ ತಿಕ್ಕಾಟ ಅಭ್ಯರ್ಥಿಗಳ ಪರ ವಿರೋಧದ ಕಾರ್ಯಕರ್ತರ ನಡುವಿನ ಭಿನ್ನಮತ ಇವೆಲ್ಲವೂ ಮಾಮೂಲಿ ಸ್ಥಿತಿಗೆ ಬರಲು ಇನ್ನೂ ಎಷ್ಟೋ ದಿನಗಳು ಬೇಕಾಗಬಹುದು. ಸಧ್ಯಕ್ಕೆ ಕೆಲವು ದಿನಗಳ ಕಾಲ ಸೋಲು ಗೆಲುವಿನ ಲೆಕ್ಕಾಚಾರಗಳೆ ಮುಂದುವರೆಯುತ್ತವೆ. ಯಾವ ಬೂತ್‍ನಲ್ಲಿ ಯಾರಿಗೆ ಹೆಚ್ಚು ಮತಗಳು ಬಂದಿವೆ ಎಂಬುದರ ಮೇಲೆಯೇ ಎಣಿಕೆಗಳು ಮತ್ತು ಲೆಕ್ಕಾಚಾರಗಳು ನಡೆಯುತ್ತವೆ. ಅಲ್ಲಿಗೆ ನಿಲ್ಲುವುದಿಲ್ಲ ಆ ಭಾಗದಲ್ಲಿ ಏನೆಲ್ಲಾ ಕಸರತ್ತುಗಳು ನಡೆದಿರುತ್ತವೆಯೋ ಅದಕ್ಕೆ ತಕ್ಕ ಕ್ರಿಯೆ ಪ್ರತಿಕ್ರಿಯೆಗಳು ನಡೆಯುತ್ತವೆ. ಸುಳ್ಳು ಹೇಳಿರುವವರಿಗೆ ಹಿಗ್ಗಾಮುಗ್ಗಾ ಕ್ಲಾಸ್ ಆಗುತ್ತದೆ. ಎಷ್ಟೋ ಜನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ. ಈಗ ಬೂತ್ ವಾರು ಅಂಕಿ ಅಂಶಗಳು ಸಿಗುವುದರಿಂದ ಸುಲಭವಾಗಿ ಯಾವಮತಗಟ್ಟೆಯಲ್ಲಿ ಯಾವ ಅಭ್ಯರ್ಥಿಗೆ ಹೆಚ್ಚು ಮತಗಳು ಲಭಿಸಿವೆ, ಯಾರಿಗೆ ಕಡಿಮೆ ಬಂದಿವೆ ಎಂಬುದರ ಚರ್ಚೆಗಳೇ ಮುಂದುವರೆಯುತ್ತವೆ. ಅಲ್ಲಲ್ಲಿ ಹಿಡಿಗಂಟು ಪಡೆದು ಹೋದವರ ಸ್ಥಿತಿಯಂತೂ ಈಗ ಹೇಳತೀರದು.

comments icon 0 comments
0 notes
2 views
bookmark icon

Write a comment...

Your email address will not be published. Required fields are marked *