ಸೋಮವಾರ ಸಂತೆಯನ್ನು ಎಪಿಎಂಸಿ ಯಾರ್ಡ್‍ಗೆ ಬದಲಾಯಿಸಲು ಒಪ್ಪಿಗೆ

0
21

ಚಿಕ್ಕನಾಯಕನಹಳ್ಳಿ

    ಪಟ್ಟಣದಲ್ಲಿ ನಡೆಯುವ ಸೋಮವಾರ ಸಂತೆಯನ್ನು ಎ.ಪಿ.ಎಂ.ಸಿ ಯಾರ್ಡ್‍ಗೆ ಬದಲಾಯಿಸಲು ಸರ್ವಾನುಮತದಿಂದ ತೀರ್ಮಾನಿಸಿತು ಹಾಗೂ ತರಕಾರಿ ಸಂತೆಯನ್ನು ಸೋಮವಾರ ನಡೆಸಲು ಹಾಗೂ ಕುರಿಸಂತೆಯನ್ನು ಶನಿವಾರ ನಡೆಸಲು ಪುರಸಭೆ ಸದಸ್ಯರು ಸರ್ವಾನುಮತದಿಂದ ಒಪ್ಪಿಗೆ ನೀಡಿದರು.

     ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾಧ್ಯಕ್ಷ ಮಹಮದ್‍ಖಲಂದರ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ಎ.ಪಿ.ಎಂ.ಸಿ ಯಾರ್ಡ್‍ನಲ್ಲಿ ನಡೆಯುತ್ತಿದ್ದ ಕುರಿಸಂತೆಯನ್ನು ಸೋಮವಾರದ ಬದಲು ಶನಿವಾರ ನಡೆಸಲು ಹಾಗೂ ತರಕಾರಿ ಸಂತೆಯನ್ನು ಸೋಮವಾರದ ಎಪಿಎಂಸಿಯಲ್ಲಿ ನಡೆಸಲು ತೀರ್ಮಾನಿಸಿದರು.
ಕುರುಬರಹಳ್ಳಿ ಬಳಿ ಸಂತೆ ನಡೆಸಲು ಸದಸ್ಯರು ಸಭೆಗೆ ತಿಳಿಸಿದ್ದರು. ಆದರೆ ಪುರಸಭೆಗೆ ಸಂಬಂಧಪಟ್ಟ ಜಮೀನು ಕುರುಬರಹಳ್ಳಿ ಬಳಿ ಇಲ್ಲದಿರುವುದು ಸರ್ವೆ ಮಾಡಿದ ನಂತರ ತಿಳಿದಿದ್ದರಿಂದ ಈಗ ಕಾಲೇಜು ಬಳಿ ನಡೆಯುತ್ತಿರುವ ಸಂತೆಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಸಂತೆಯನ್ನು ಎ.ಪಿ.ಎಂ.ಸಿ ಯಾರ್ಡ್‍ಗೆ ಬದಲಾಯಿಸಲು ಹಾಗೂ ಅದರಿಂದ ಬರುವ ವರಮಾನವನ್ನು ಪುರಸಭೆಗೆ ಬರುವಂತೆ ನೋಡಿಕೊಳ್ಳಲು ಸದಸ್ಯರಿಗೆ ಶಾಸಕರಿಗೆ ಹೇಳಿದರು.
ಪುರಸಭೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕಂಪ್ಯೂಟರ್ ಆಪರೇಟರ್‍ಗಳನ್ನು ಇಬ್ಬರಿಗೆ ಸೀಮಿತಗೊಳಿಸಲು ಹಾಗೂ ಈಗಿನವರೆಗೆ ಹಳೆ ಟೆಂಡರ್ ಅನ್ವಯ ವೇತನವನ್ನು ಗುತ್ತಿಗೆದಾರರೇ ಪಾವತಿಸಲು ಸೂಚಿಸಿದರು.

    ಪುರಸಭೆಯ ಕಂದಾಯ ಹಣ ಕಟ್ಟಲು ವಿಜಯಾಬ್ಯಾಂಕ್‍ನಲ್ಲಿ ಸಾಕಷ್ಟು ಜನಸಂಖ್ಯೆಯ ದಟ್ಟಣೆ ಇದ್ದು ಬ್ಯಾಂಕ್‍ನವರು ಮೂರು ದಿನ ಮಾತ್ರ ವ್ಯವಹಾರಕ್ಕೆ ಸೀಮಿತಗೊಳಿಸಿರುವುದರಿಂದ ಕೆನರಾಬ್ಯಾಂಕ್‍ನಲ್ಲಿ ಇನ್ನೊಂದು ಖಾತೆ ರಚಿಸಿ ವ್ಯವಹಾರ ಸುಲಲಿತ ಮಾಡಲು ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು.
ಪುರಸಭಾ ಸದಸ್ಯ ಸಿ.ಪಿ.ಮಹೇಶ್ ಮಾತನಾಡಿ, ಪಟ್ಟಣದ ಹೊಸ ಬಸ್ಟಾಂಡ್ ಬಳಿ ಇರುವ ಕೋಳಿ ಅಂಗಡಿ ಹಾಗೂ ಮಾಂಸದ ಅಂಗಡಿಗಳ ತ್ಯಾಜ್ಯದಿಂದ ಸುತ್ತಮುತ್ತಲ ವಾತಾವರಣ ಕಲುಷಿತಗೊಂಡಿದ್ದು ಇದರಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿರುವುದನ್ನು ತಪ್ಪಿಸಲು ಕೋಳಿ ಅಂಗಡಿ ಹಾಗೂ ಮಾಂಸದ ಅಂಗಡಿಗಳನ್ನು ಹೊನ್ನೆಬಾಗಿ ಪಂಚಾಯ್ತಿಯ ಕಾಡೇನಹಳ್ಳಿ ಬಳಿ ಇರುವ ಸರ್ಕಾರಿ ಗೋಮಾಳ ಜಮೀನಿನಲ್ಲಿ ಪುರಸಭೆಯಿಂದ ಕಸಾಯಿಖಾನೆ ನಿರ್ಮಿಸಿ, ಮಾರಾಟವನ್ನು ಪಟ್ಟಣಕ್ಕೆ ತಂದು ತಮ್ಮ ಅಂಗಡಿಗಳಲ್ಲೇ ಮಾರಾಟ ಮಾಡುವಂತೆ ಸಲಹೆ ನೀಡಿದರು. ಮಹೇಶ್‍ರವರು ನೀಡಿದ ಸಲಹೆಯನ್ನು ಸಭೆ ಒಪ್ಪಿಗೆ ನೀಡಿತು.

     ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ಮಾತನಾಡಿ, ಪಟ್ಟಣದಲ್ಲಿ ನಡೆಯುತ್ತಿರುವ ಸಂತೆಯಲ್ಲಿ ಮೊಬೈಲ್ ಕಳ್ಳರು ಹೆಚ್ಚಿದ್ದಾರೆ. ಮುಂದೆ ನಡೆಯುವ ಸಂತೆಯಲ್ಲಿ ಈ ಬಗ್ಗೆ ಗಮನ ಹರಿಸಲು ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದ ಅವರು, ಬೀದಿಬದಿ ವ್ಯಾಪಾರಿಗಳು ರಸ್ತೆ ಬದಿ ಅಂಗಡಿ ಇಟ್ಟುಕೊಂಡಿದ್ದಾರೆ. ಆದರೆ ಇವರಿಂದ ಮಧ್ಯವರ್ತಿಗಳು ವ್ಯಾಪಾರಿಗಳಿಂದ ಹಣ ಪಡೆಯುತ್ತಿದ್ದಾರೆ, ಶಾಸಕರು ಬೀದಿಬದಿ ವ್ಯಾಪಾರಿಗಳ ಸಭೆ ಕರೆದು ಅವರಿಗೆ ಧೈರ್ಯ ತುಂಬಿ ಮಧ್ಯವರ್ತಿಗಳಿಗೆ ಹಣ ನೀಡಬೇಡಿ ಎಂದು ತಿಳಿಸಬೇಕು ಎಂದು ಸಲಹೆ ನೀಡಿದರು. ಈ ಬಗ್ಗೆ ಸಭೆ ಕರೆಯಲು ತೀರ್ಮಾನಿಸಲಾಯಿತು.
ಪುರಸಭಾ ಸದಸ್ಯ ಸಿ.ಎಸ್.ರಮೇಶ್ ಮಾತನಾಡಿ, ಆಗಸ್ಟ್ 15ರಂದು ನಡೆಯುವ ಸ್ವತಂತ್ರ ದಿನಾಚರಣೆಯಲ್ಲಿ ಮಕ್ಕಳಿಗೆ ಹಂಚುವ ಸಿಹಿ ಹಂಚಿಕೆಯಿಂದ ಪುರಸಭೆಗೆ ಆಗುವ ಹೆಚ್ಚಿನ ಹೊರೆಯನ್ನು ತಪ್ಪಿಸಲು ಹೇಳಿದಾಗ, ಸದಸ್ಯರು ತಹಸೀಲ್ದಾರ್‍ಗೆ ವಹಿಸುವಂತೆ ಸಭೆ ತೀರ್ಮಾನಿಸಿತು.

         ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಸ್ವಚ್ಛ ಭಾರತ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಸ್ಥಳ ಪರಿಶೀಲನೆಗೆ ತಂಡ ತಾಲ್ಲೂಕಿಗೆ ಆಗಮಿಸುತ್ತಿದ್ದು ನಗರವನ್ನು ಸ್ವಚ್ಛವಾಗಿಡಲು ನಾನು ಪ್ರತಿದಿನ ಬೆಳಗ್ಗೆ 6.30ರಿಂದ 9 ರವರೆಗೆ ಭೇಟಿ ನೀಡುತ್ತೇನೆ. ಈ ವೇಳೆ ಪುರಸಭಾ ಸದಸ್ಯರು ಜೊತೆಯಲ್ಲೇ ಇದ್ದು ಪೌರಕಾರ್ಮಿಕರೊಂದಿಗೆ ಕೆಲಸ ಮಾಡಿಸಿ ಎಂದ ಅವರು, ಪಟ್ಟಣಕ್ಕೆ 14ನೇ ಹಣಕಾಸು ಯೋಜನೆ ವತಿಯಿಂದ ಕೈಲಾಸರಥ ತರುವುದಕ್ಕೆ ಯೋಜನೆ ರೂಪಿಸಲಾಗಿದೆ ಎಂದರು.
ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷೆ ಇಂದಿರಾಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ್, ಸದಸ್ಯರುಗಳಾದ ರೇಣುಕಮ್ಮಗುರುಮೂರ್ತಿ, ಎಂ.ಕೆ.ರವಿಚಂದ್ರ, ಪ್ರೇಮದೇವರಾಜು, ರಾಜಶೇಖರ್, ರೇಣುಕಾಸತೀಶ್, ಕೆ.ಜಿ.ಕೃಷ್ಣೆಗೌಡ, ಧರಣಿಲಕ್ಕಪ್ಪ, ಹೆಚ್.ಬಿ.ಪ್ರಕಾಶ್, ಸಿ.ಆರ್.ತಿಮ್ಮಪ್ಪ, ಬಿ.ಶಿವಕುಮಾರ್, ಮಲ್ಲೇಶಯ್ಯ, ರೂಪಶಿವಕುಮಾರ್, ಮಲ್ಲಿಕಾರ್ಜುನ್, ಜಾವಿದ್‍ಪಾಷ, ಬಸವರಾಜು ಪ್ರಭಾರ ಮುಖ್ಯಾಧಿಕಾರಿ ನಿರ್ವಾಣಯ್ಯ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here