ಸೌಲಭ್ಯ ಕಲ್ಪಿಸಿದರೆ, ಸರ್ಕಾರಿ ಶಾಲೆ ಉಳಿಯಲಿವೆ

0
26

ದಾವಣಗೆರೆ:

             ಸರ್ಕಾರ ಶಾಲೆಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಿದರೆ, ಮುಚ್ಚುವ ಸ್ಥಿತಿಯಲ್ಲಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿಕೊಳ್ಳಬಹುದಾಗಿದೆ ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ನಿರ್ದೇಶಕ, ನಿರ್ಮಾಪಕ ರಿಷಬ್ ಶೆಟ್ಟಿ ತಿಳಿಸಿದ್ದಾರೆ.
           ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದ ವಿಜಯೋತ್ಸವದ ಹಿನ್ನೆಲೆಯಲ್ಲಿ ಶನಿವಾರ ನಗರದ ಗೀತಾಂಜಲಿ ಚಿತ್ರಮಂದಿರಕ್ಕೆ ಭೇಟಿ ನೀಡಿ, ಪ್ರೇಕ್ಷಕರ ಜೊತೆಗೆ ಸಂವಾದ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಣ ದುರುಪಯೋಗ ಮಾಡುವುದಕ್ಕೆ ಕಡಿವಾಣ ಹಾಕಿ, ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸಿದರೆ ಮುಚ್ಚುತ್ತಿರುವ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.
           ಪ್ರಸ್ತುತ ರಾಜ್ಯದಲ್ಲಿ ಸುಮಾರು 28 ಸಾವಿರ ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿವೆ. ಆದ್ದರಿಂದ ಇದನ್ನು ಹಾಗೂ ಮಾತೃಭಾಷೆಯಲ್ಲಿ ಶಿಕ್ಷಣದ ವಿಷಯ ಇಟ್ಟುಕೊಂಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾ ನಿರ್ಮಿಸಿದ್ದು, ತಿಳಿಹಾಸ್ಯದೊಂದಿಗೆ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಬಗೆಯನ್ನು ಎಳೆ, ಎಳೆಯಾಗಿ ಬಿಚ್ಚಿಡುವ ಮೂಲಕ ಪ್ರೇಕ್ಷಕರಿಗೆ ಒಂದು ಉತ್ತಮ ಸಂದೇಶ ನೀಡಿದೆ ಎಂದು ಹೇಳಿದರು.
           ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಈ ಚಿತ್ರ ತೋರಿಸಲು ಪ್ರಯತ್ನ ನಡೆದಿತ್ತು. ಅಷ್ಟರಲ್ಲೇ ಕೊಡಗಿನಲ್ಲಿ ಪ್ರವಾಹ ಸಂಭವಿಸಿದ್ದರಿಂದ ಅದು ಸಾಧ್ಯವಾಗಲಿಲ್ಲ. ಶೀಘ್ರವೇ ಸಿಎಂ ಕುಮಾರಸ್ವಾಮಿಗೆ ಸಿನಿಮಾ ತೋರಿಸಲಾಗುವುದು. ಸರ್ಕಾರಿ ಶಾಲೆಗಳ ಉಳಿವಿಗಾಗಿ ಈ ಚಿತ್ರ ಜನರನ್ನು ಜಾಗೃತಗೊಳಿಸಿರುವುದು ಅನುಭವಕ್ಕೆ ಬಂದಿದೆ. ಸಾಮಾಜಿಕವಾಗಿ ಈ ಸಿನಿಮಾ ಪ್ರಭಾವ ಬೀರಿದೆ. ಅನೇಕ ಸಂಘ-ಸಂಸ್ಥೆಗಳು ಶಾಲೆಗಳ ಉಳಿವಿಗೆ ಮುಂದೆ ಬರುತ್ತಿವೆ. ಇದೆ ಈ ಚಿತ್ರದ ಬಹುದೊಡ್ಡ ವಿಜಯವಾಗಿದೆ ಎಂದು ಹೇಳಿದರು.
             ಆಗಸ್ಟ್ 23ಕ್ಕೆ ತೆರೆ ಕಂಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರವು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಬಿಡುಗಡೆಯಾದ 75 ಚಿತ್ರಮಂದಿರಗಳಲ್ಲಿ 25ನೇ ದಿನ ಪೂರೈಸಿದೆ. 2 ಕೋಟಿ ರೂ. ವೆಚ್ಚದಲ್ಲಿ 68 ದಿನಗಳ ಕಾಲ ಚಿತ್ರೀಕರಣಗೊಂಡಿರುವ ಈ ಚಿತ್ರವು ಈವರೆಗೆ 10 ಕೋಟಿ ರೂ. ಕಲೆಕ್ಷನ್ ಮಾಡಿದೆ. ಈ ಹಿನ್ನೆಲೆಯಲ್ಲಿ ಮೈಸೂರಿನಿಂದ ಸರ್ಕಾರಿ ಶಾಲೆ ವಿಜಯೋತ್ಸವ ಆರಂಭಿಸಿದ್ದು, ಜಿಲ್ಲಾ ಕೇಂದ್ರಗಳಿಗೆ ಭೇಟಿ ನೀಡಿ, ಚಿತ್ರವನ್ನು ಗೆಲ್ಲಿಸಿಕೊಟ್ಟ ಪ್ರೇಕ್ಷಕರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಾಲ ಕಲಾವಿದರಾದ ರಂಜನ್, ಸಂಪತ್, ಗೀತಾಂಜಲಿ ಟಾಕೀಸ್ ಮ್ಯಾನೇಜರ್ ಮಹದೇವ ಗೌಡ್ರು ಹಾಜರಿದ್ದರು

LEAVE A REPLY

Please enter your comment!
Please enter your name here