ಸ್ಟೇರಿಂಗ್, ಟಿಕೇಟ್ ಬಾಕ್ಸ್ ಬಿಟ್ಟು ಆಟೋಟದಲ್ಲಿ ಪಾಲ್ಗೊಂಡ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ

0
17

ತುಮಕೂರು:

      ಸದಾ ನಟ್ಟು, ಬೋಲ್ಟು, ಸ್ಟೀರಿಂಗ್, ವ್ಹೀಲ್, ಟಿಕೇಟ್ ಕಲೇಕ್ಷನ್, ರೈಟ್, ಓಲ್ಡಾನ್ ಎಂದು ಒತ್ತಡದಲ್ಲಿಯೇ ಕೆಲಸ ಮಾಡುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆ.ಎಸ್.ಆರ್.ಟಿ.ಸಿ.)ಯ ನೌಕರರಿಗೆ ಮನರಂಜನೆಯ ಜೊತೆಗೆ, ಪ್ರತಿಭಾ ಪ್ರೋತ್ಸಾಹದ ಹಿನ್ನೆಲೆಯಲ್ಲಿ ನಗರದ ಎಸ್.ಐ.ಟಿ. ಕ್ರೀಡಾಂಗಣದಲ್ಲಿ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು.

      ಕೆ.ಎಸ್.ಆರ್.ಟಿ.ಸಿ.ಗೆ ಸೇರಿದ ಸಂಚಾರಿ ನಿಯಂತ್ರಕರು,ಚಾಲಕ, ನಿವಾರ್ಹಕ,ತಾಂತ್ರಿಕ ಕೆಲಸಗಾರರು, ಮಹಿಳಾ ಸಿಬ್ಬಂದಿಗಳು ಸೇರಿದಂತೆ ಜಿಲ್ಲೆಯ ವಿವಿಧ ಘಟಕಗಳ ಸುಮಾರು 400ಕ್ಕೂ ಅಧಿಕ ಕ್ರೀಡಾಪಟುಗಳು ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ, ತಮ್ಮ ಕ್ರೀಡಾಸ್ಪೂರ್ತಿಯನ್ನು ಮೆರೆದರು.

      ಪುರುಷರಿಗಾಗಿ 100ಮೀ ಓಟ,ಗುಂಡು ಎಸೆತ, ಚೆಸ್, ವಾಲಿಬಾಲ್, ಕೇರಂ ಸಿಂಗಲ್ಸ್ ಮತ್ತು ಡಬಲ್ಸ್, 40ವರ್ಷ ಮೇಲ್ಪಟ್ಟ ಪುರುಷರಿಗೆ ಮಡಿಕೆ ಒಡೆಯುವುದು, ಗುಂಡು ಎಸೆತ, ಮಹಿಳೆಯರಿಗೆ 100 ಮೀಟರ್ ಓಟ, ರಿಂಗ್ ಎಸೆಯುವುದು, ಥ್ರೋ ಬಾಲ್, ಮ್ಯೂಸಿಕಲ್ ಚೇರ್, ಕೇರಂ ಸಿಂಗಲ್,40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮಡಿಕೆ ಒಡೆಯುವುದು, ಹಗ್ಗ ಜಗ್ಗಾಟ ಕ್ರೀಡೆಗಳನ್ನು ಆಯೋಜಿಸಲಾಗಿತ್ತು. ತುಮಕೂರು ವಿಭಾಗಕ್ಕೆ ಸೇರಿದ ತುಮಕೂರು ಘಟಕ 1 ಮತ್ತು 2, ಕುಣಿಗಲ್, ತುರುವೇಕೆರೆ, ಮಧುಗಿರಿ, ತಿಪಟೂರು, ವಿಭಾಗೀಯ ಕಚೇರಿ ಮತ್ತು ವಿಭಾಗೀಯ ಕಾರ್ಯಾಗಾರ ಆಡಳಿತಾಧಿಕಾರಿಗಳು, ಸಿಬ್ಬಂದಿಗಳು ಕ್ರೀಡಾಕೂಟದಲ್ಲಿ ಭಾಗವಹಿಸಿ, ಸಂತೋಷ ಪಟ್ಟರು.

      ಕೆ.ಎಸ್.ಆರ್.ಟಿ.ಸಿ.ನೌಕರರ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ತುಮಕೂರು ವಿಭಾಗೀಯ ನಿಯಂತ್ರಣಾಧಿಕಾರಿ ಎ.ಎಸ್.ಗಜೇಂದ್ರಕುಮಾರ್, ದಿನದ ಇಪ್ಪತ್ನಾಲ್ಕು ಗಂಟೆ ಕಾಲ ಸಾರ್ವಜನಿಕ ಸೇವೆಯಲ್ಲಿ ನಿರತರಾಗಿರುವ ಸಾರಿಗೆ ಸಂಸ್ಥೆಯ ಸಿಬ್ಬಂದಿಗಳು, ದೈಹಿಕ ಆರೋಗ್ಯದ ಜೊತೆಗೆ, ಮಾನಸಿಕ ಆರೋಗ್ಯವನ್ನು ಕಾಪಾಡಿಕೊಂಡು,ಪ್ರಯಾಣಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಲಿ ಎಂಬ ಉದ್ದೇಶದಿಂದ ಹಲವು ವರ್ಷಗಳಿಂದ ಕ್ರೀಡಾಕೂಟವನ್ನು ನಡೆಸಿಕೊಂಡು ಬರಲಾಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಎಸ್.ಐ.ಟಿ. ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದು,400ಕ್ಕೂ ಅಧಿಕ ಸಿಬ್ಬಂದಿ ಪಾಲ್ಗೊಂಡಿರುವುದು ಸಂತೋಷದ ವಿಷಯ ಎಂದರು.

      ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರವು ಅಸಮತೋಲನದಿಂದ ಕೂಡಿದೆ.ಇದರ ಜೊತೆಗೆ ಅಧುನಿಕ ತಂತ್ರಜ್ಞಾನಗಳಾದ ಮೊಬೈಲ್ ಬಳಕೆಯಿಂದ ಮನುಷ್ಯನ ದೇಹದ ಮೇಲೆ ಹಲವಾರು ಕೆಟ್ಟ ಪರಿಣಾಮಗಳು ಉಂಟು ಮಾಡುತ್ತಿದ್ದು, ಹೃದ್ರೋಗ, ಕ್ಯಾನ್ಸರ್,ಮಧುಮೇಹ,ಅಧಿಕ ರಕ್ತದೊತ್ತಡ ದಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಇವುಗಳಿಂದ ಹೊರಬರಬೇಕಾದರೆ ನಿಯಮಿತವಾಗಿ ಕ್ರೀಡೆ, ಯೋಗ, ವ್ಯಾಯಾಮದಂತಹ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಅನಿವಾರ್ಯ.ಇದರಿಂದ ದೈಹಿಕವಾಗಿ ಸದೃಢತೆಯ ಜೊತೆಗೆ, ಮಾನಸಿಕ ಲವಲವಿಕೆಗೆ ಕ್ರೀಡೆ ಸಹಕಾರಿಯಾಗಿದೆ. ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಕೆ.ಎಸ್.ಆರ್.ಟಿ.ಸಿ ನೌಕರರು ನಾಗರಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಪ್ರಯೋಜನವಾಗಲಿದೆ ಎಂದು ಗಜೇಂದ್ರಕುಮಾರ್ ತಿಳಿಸಿದರು.

      ಕಾರ್ಯಕ್ರಮದಲ್ಲಿ ಅಧಿಕಾರಿಗಳಾದ ಪಕೃದ್ದೀನ್, ಕುಮಾರಿ ಹಂಸವೇಣಿ,ಸಂತೋಷ, ಹೆಚ್.ಆರ್, ಲಕ್ಷ್ಮಿಪತಿ, ಸಿದ್ದಗಂಗಾ ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾ ನಿರ್ದೇಶಕ ಯೋಗೀಶ್,ಎಂಪ್ರೆಸ್ ಮಹಿಳಾ ಪದವಿಪೂರ್ವ ಕಾಲೇಜಿನ ಕ್ರೀಡಾಧಿಕಾರಿ ಮುತ್ತು ನಾಯ್ಕ್ ಉಪಸ್ಥಿತರಿದ್ದರು.

     ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ಕ್ರೀಡಾಪಟುಗಳು ಬಹುಮಾನ ವಿತರಿಸಲಾಯಿತು.

LEAVE A REPLY

Please enter your comment!
Please enter your name here