ಸ್ಫರ್ಧೆ ಎಲ್ಲಿ ಇಲ್ಲ ಹೇಳಿ…?

0
12

ಸ್ಪರ್ಧೆ ಎಲ್ಲಿಲ್ಲ ಹೇಳಿ? ಸಣ್ಣ ತರಗತಿಯ ಮಕ್ಕಳಿಂದ ಹಿಡಿದು ದೊಡ್ಡ ಹುದ್ದೆಯಲ್ಲಿರುವ ಪ್ರತಿಭಾವಂತ ವ್ಯಕ್ತಿಗಳ ನಡುವೆಯೂ ಸ್ಪರ್ಧೆ ಎಂಬುದು ಕಟ್ಟುನಿಟ್ಟಾಗಿದೆ. ಮೇಲ್ನೋಟದಲ್ಲಿ ಉತ್ತಮ ಬಾಂಧವ್ಯದಲ್ಲಿದ್ದರೂ ವ್ಯವಹಾರದ ವಿಷಯಕ್ಕೆ ಒಬ್ಬರನ್ನು, ಇನ್ನೊಬ್ಬರು ಮಣಿಸಬೇಕು ಎನ್ನುವ ಛಲವೇ ಎದ್ದುಕಾಣುತ್ತಿರುತ್ತದೆ. ಆದರೆ ಇದು ಆರೋಗ್ಯಕರವಾಗಿದ್ದರೆ ಯಾವುದೇ ದುಃಖ ಸಂಭವಿಸುವುದಿಲ್ಲ ಆದರೆ ಇದುವೇ ಇನ್ನೊಬ್ಬರ ಏಳಿಗೆಯನ್ನು ಸಹಿಸಲು ಬಯಸುವುದಿಲ್ಲ ಎಂದಾದಲ್ಲಿ ಅದು ಕೇಡು ಬಯಸಿದವರನ್ನೇ ಸುಟ್ಟು ಹಾಕುತ್ತದೆ.

ಉನ್ನತ ಮಟ್ಟದಲ್ಲಿರುವ ಸಂಸ್ಥೆಗಳಲ್ಲಿ ಸ್ಪರ್ಧೆ ಎಂಬುದು ಸಾಮಾನ್ಯ ಪ್ರಕ್ರಿಯೆ ಯಾಗಿದ್ದು ಅಲ್ಲಿ ಉದ್ಯೋಗ ನಿರ್ವಹಿಸುವ ಪ್ರತಿಯೊಬ್ಬ ಉದ್ಯೋಗಿಗೂ ಇದರ ಬಿಸಿ ತಟ್ಟುತ್ತಿರುತ್ತದೆ. ಕೆಲವೊಂದು ಕಂಪನಿಗಳಂತೂ ತಮ್ಮ ಉದ್ಯೋಗಿಗಳಿಂದ ಬಹಳಷ್ಟನ್ನು ನಿರೀಕ್ಷಿಸುತ್ತಾ ಅವರನ್ನು ಬೇರೆ ಬೇರೆ ಆಮಿಷಗಳಿಗೆ ಒಡ್ಡುವುದರ ಮೂಲಕ ಅವರಿಂದ ಕೆಲಸವನ್ನು ಸಾಧಿಸಿಕೊಳ್ಳುತ್ತಾರೆ. ಅದೇ ರೀತಿ ಉದ್ಯೋಗಿಗೂ ತಮ್ಮ ಮೇಲಾಧಿಕಾರಿ ಕೊಟ್ಟಿರುವ ಕೆಲಸವನ್ನು ಯಶಸ್ವಿಯಾಗಿ ಮುಗಿಸುವ ಕಾತರ ಎದ್ದುಕಾಣುತ್ತಿರುತ್ತದೆ. ಇದಕ್ಕಾಗಿ ಅವರು ಯಾವುದೇ ರೀತಿಯ ರಿಸ್ಕ್ ತೆಗೆದುಕೊಳ್ಳಲೂ ಸಿದ್ಧರಾಗಿರುತ್ತಾರೆ.
ಆದರೂ ಉದ್ಯೋಗದಲ್ಲಿ ಯಶಸ್ಸನ್ನು ಕಾಣುತ್ತಾ ನೀವು ಒಬ್ಬ ಆದರ್ಶ ಉದ್ಯೋಗಿ ಎಂಬುದನ್ನು ಸಾಧಿಸಿ ತೋರಿಸುವ ಪ್ರತಿಭೆ ನಿಮ್ಮಲ್ಲಿರಬೇಕು.

ಯಾವುದಾದರೂ ಕೆಲಸವನ್ನು ನೀಡಿದರೆ ಅದನ್ನು ಕ್ಲಪ್ತ ಸಮಯದಲ್ಲಿ ಯಾವುದೇ ಕಪ್ಪು ಚುಕ್ಕೆಯಿಲ್ಲದೆ ಇವರು ಸಾಧಿಸಿ ತೋರಿಸುತ್ತಾರೆ ಎಂಬ ನಂಬಿಕೆ ನಿಮ್ಮ ಕೆಲಸ ನೀಡುವವರಲ್ಲಿ ಇರಬೇಕು. ಆ ವಿಶ್ವಾಸವನ್ನು ನೀವು ಗಳಿಸಿಕೊಳ್ಳಬೇಕು ಎಂದಾದಲ್ಲಿ ನೀವು ಹೇಗೆ ಎಂಬುದನ್ನು ತೋರಿಸಿಕೊಡಬೇಕು. ಅದಕ್ಕೆಂದೇ ಇಂದಿನ ಲೇಖನದಲ್ಲಿ ನೀವೊಬ್ಬ ಯಶಸ್ವಿ ಉದ್ಯೋಗಿ ಎಂಬುದನ್ನು ತೋರಿಸಲು ಸಹಾಯ ಮಾಡುವ ಕೆಲವೊಂದು ಅಂಶಗಳನ್ನು ನೀಡುತ್ತಿದ್ದು ಈ ಅಂಶಗಳು ನಿಮ್ಮ ಕಾರ್ಯದಲ್ಲಿ 100 % ಯಶಸ್ಸನ್ನು ದಯಪಾಲಿಸಲು ನೆರವಾಗಲಿದೆ.

ನಿಮ್ಮ ಕೆಲಸವನ್ನು ಚೆನ್ನಾಗಿ ಅರಿತುಕೊಳ್ಳಿ
ನಿಮ್ಮ ಸಂಸ್ಥೆಯಲ್ಲಿ ನೀವು ಎಂದಿಗೂ ಯಶಸ್ಸನ್ನು ಹೊಂದಿದವರೇ ಆಗಿರಬೇಕು ಎಂದಾದಲ್ಲಿ ನೀವು ಮಾಡುವ ಕೆಲಸವನ್ನು ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಿ. ನಿಮ್ಮ ಗುರಿಯನ್ನು ಹೇಗೆ ತಲುಪಬೇಕು ಎಂಬುದನ್ನು ಕೆಲಸದ ಬಗೆಗಿನ ಜ್ಞಾನ ತಿಳಿಸಿ ಕೊಡುತ್ತದೆ.

ನಿಮ್ಮನ್ನು ಮೇಲ್ದರ್ಜೆಗೇರಿಸಿರುವ ಕಾರಣವನ್ನು ತಿಳಿದುಕೊಳ್ಳಿ
ನಿಮ್ಮನ್ನು ನಿಮ್ಮ ಸಂಸ್ಥೆ ಮೇಲಿನ ಹುದ್ದೆಗೆ ನೇಮಿಸಿದೆ ಎಂದಾದಲ್ಲಿ ಅವರು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ತಿಳಿಯಿರಿ. ಅವರು ನಿಮ್ಮ ಮೇಲೆ ಕೆಲವೊಂದು ನಂಬಿಕೆಗಳನ್ನಿಟ್ಟುಕೊಂಡು ನಿಮಗೆ ಉತ್ತಮ ಹುದ್ದೆಯನ್ನು ನೀಡಿರುವುದರಿಂದ ಆ ನಂಬಿಕೆಯನ್ನು ಉಳಿಸಿಕೊಳ್ಳಿ. ಅಂತೆಯೇ ನಿಮ್ಮ ಗುರಿಯನ್ನು ತಲುಪುವಲ್ಲಿ ಸಫಲರಾಗಿ.

ಕೆಲಸವನ್ನು ಯೋಜಿಸಿಕೊಳ್ಳಿ
ಯಾವುದೇ ಕೆಲಸವನ್ನು ಆರಂಭಿಸುವ ಮುನ್ನ ಸೂಕ್ತವಾದ ಯೋಜನೆಯನ್ನು ರೂಪಿಸಿಕೊಳ್ಳುವುದು ಅಗತ್ಯವಾಗಿದೆ. ಇಷ್ಟು ದಿನಗಳ ಒಳಗಾಗಿ ಈ ಕೆಲಸವನ್ನು ಮುಗಿಸಬೇಕು ಎಂಬ ಯೋಜನೆಯನ್ನು ರೂಪಿಸಿಕೊಂಡಲ್ಲಿ ಅದನ್ನು ಪರಿಪೂರ್ಣವಾಗಿ ಮುಗಿಸುವ ಕಲೆ ನಿಮಗೆ ಬಂದೊದಗುತ್ತದೆ. ಯಾವುದೇ ಅಡಚಣೆಯನ್ನು ದೂರ ಮಾಡುವ ಛಾತಿ ನಿಮ್ಮಲ್ಲಿ ಉದ್ಭವವಾಗುತ್ತದೆ.

ಒತ್ತಡ ಬೇಡ
ಯಾವುದೇ ಕೆಲಸವನ್ನು ಮುಗಿಸಲು ತೀವ್ರ ರೀತಿಯ ಒತ್ತಡವನ್ನು ನಿಮ್ಮ ಮೇಲೆ ಹೇರಿಕೊಳ್ಳಬೇಡಿ. ಅಂದಂದಿನ ಕೆಲಸವನ್ನು ನೀವು ಅಂದೇ ಮುಗಿಸಿಕೊಂಡಲ್ಲಿ ಒತ್ತಡವಿಲ್ಲದೆ ಯಶಸ್ವಿಯಾಗಿ ನೀವು ಹಿಡಿದ ಕೆಲಸವನ್ನು ನಿಮಗೆ ಮುಗಿಸಿಕೊಳ್ಳಬಹುದು.

ವಿರಾಮ ತೆಗೆದುಕೊಳ್ಳುವುದು
ಒಂದೇ ಕಡೆ ನಿರಂತರವಾಗಿ ಕೆಲಸ ಮಾಡುವುದು ನಿಮಗೆ ಕೆಲಸದ ಮೇಲಿನ ಏಕಾಗ್ರತೆಯನ್ನು ಕುಗ್ಗಿಸಬಹುದು. ಅಂತೆಯೇ ಬೆನ್ನು ನೋವು ಮೊದಲಾದ ಕಿರಿಕಿರಿಗೆ ನಿಮ್ಮನ್ನು ನೂಕಬಹುದು. ಆದ್ದರಿಂದ ಕೆಲಸದ ನಡುವೆ ಒಂದಿಷ್ಟು ವಿರಾಮವನ್ನು ತೆಗೆದುಕೊಳ್ಳಿ. ಈ ವಿರಾಮ ಹೆಚ್ಚು ದೀರ್ಘವಾಗದಿರಲಿ. ಆದಷ್ಟು ಕೆಲಸ ನಡುವೆ ನಿಮಗೆ ಕೊಂಚ ಆರಾಮವನ್ನು ನೀಡುವ ಸಣ್ಣ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ.

ಇತರರ ಸಹಾಯವನ್ನು ಪಡೆದುಕೊಳ್ಳುವುದು
ನೀವು ಮಾಡುತ್ತಿರುವ ಕೆಲಸ ನಿಮ್ಮಿಂದ ಒಬ್ಬರಿಂದಲೇ ಸಾಧ್ಯವಾಗುತ್ತಿಲ್ಲ ಎಂದಾದಲ್ಲಿ ಅದಕ್ಕಾಗಿ ಸಮಯವನ್ನು ಹಾಳುಮಾಡಬೇಡಿ. ಇತರರ ಸಹಾಯವನ್ನು ಪಡೆದು ಕೊಂಡು ಅವರಿಂದ ಸಲಹೆಗಳನ್ನು ಪಡೆದುಕೊಂಡು ಅದನ್ನು ಮುಗಿಸಿಕೊಳ್ಳಿ. ಇತರರ ಸಹಾಯವನ್ನು ಪಡೆದುಕೊಳ್ಳಲು ಹಿಂಜರಿಯಬೇಡಿ. ಇದರಿಂದ ಯಾವುದೇ ಕೆಡುಕು ನಿಮಗುಂಟಾಗುವುದಿಲ್ಲ.

ಕೆಲಸಕ್ಕೆ ಬದ್ಧರಾಗಿರುವುದು
ಒಂದು ಕೆಲಸವನ್ನು ನೀವು ಕೈಗೆತ್ತಿಕೊಂಡ ನಂತರ ಎಂದಿಗೂ ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕೆ ಇರಿಸಿಕೊಳ್ಳಬೇಡಿ. ‘ಈಸಬೇಕು ಇದ್ದು ಜೈಸಬೇಕು’ ಎಂಬ ಮಾತಿನಂತೆಯೇ ನೀವು ಕೈಗೆತ್ತಿಕೊಂಡಿರುವ ಯಶಸ್ವಿಯಾಗಿ ನಿರ್ವಹಿ ಸುವವರೆಗೂ ಹಿಂಜರಿಯಬೇಡಿ. ನನ್ನಿಂದ ಇದು ಸಾಧ್ಯ ಎಂಬುದನ್ನು ಮನನ ಮಾಡಿಕೊಂಡು ಮುಂದು ವರಿಯಿರಿ. ಖಂಡಿತ ಯಶಸ್ಸಿನ ಬಾಗಿಲು ನಿಮಗಾಗಿ ತೆರೆದಿರುತ್ತದೆ.’

ನಿಮ್ಮ ಮೇಲೆ ನಂಬಿಕೆ ಇರಿಸಿಕೊಳ್ಳಿ
ನಿಮ್ಮ ಮೇಲೆ ನೀವು ನಂಬಿಕೆ ಇರಿಸಿಕೊಳ್ಳುವುದು ಅತಿ ಮುಖ್ಯವಾದುದು. ನನ್ನಿಂದ ಈ ಕೆಲಸ ಸಾಧ್ಯ ಎಂಬ ಆತ್ಮವಿಶ್ವಾಸವನ್ನು ಮೊದಲು ನಿಮ್ಮಲ್ಲಿ ಬೆಳೆಸಿಕೊಳ್ಳಿ. ನಿಮ್ಮಿಂದ ಆಗುವ ಪ್ರಯತ್ನವನ್ನು ಮಾಡಿ ಉತ್ತಮ ಪ್ರತಿಫಲ ಖಂಡಿತ ನಿಮ್ಮದಾಗುತ್ತದೆ.

LEAVE A REPLY

Please enter your comment!
Please enter your name here