ಸ್ವರಕ್ಷಣೆಗಾಗಿ ಸಂಚಾರಿ ನಿಯಮ ಪಾಲಿಸಿ: ಆನಂದ್

0
33

ದಾವಣಗೆರೆ:

      ಸಾರ್ವಜನಿಕರು ಪೊಲೀಸರು ಹಾಕುವ ದಂಡಕ್ಕೆ ಹೆದರಿ ಸಂಚಾರಿ ನಿಯಮ ಪಾಲಿಸುವ ಬದಲು, ಸ್ವರಕ್ಷಣೆಗಾಗಿ ಪಾಲಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದು ನಗರ ಕೇಂದ್ರ ವೃತ್ತ ನಿರೀಕ್ಷಕ ಆನಂದ್.ಇ ಕರೆ ನೀಡಿದರು.

      ನಗರದ ಜೆ.ಹೆಚ್.ಪಟೇಲ್ ಕಾಲೇಜಿನಲ್ಲಿ ಜಿಲ್ಲಾ ಪೊಲೀಸ್ ಹಾಗೂ ವಿದ್ಯಾನಗರ ಪೊಲೀಸ್ ಠಾಣೆ ವತಿಯಿಂದ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶರೀರದ ಯಾವುದೇ ಭಾಗ ಊನವಾದರೂ ಪರ್ಯಾಯವಿದೆ. ಆದರೆ, ಅಪಘಾತದಲ್ಲಿ ತಲೆಗೆ ಹಾನಿಯಾದರೆ ಅದಕ್ಕೆ ಪರಿಹಾರ ಹುಡುಕುವುದು ಕಷ್ಟ. ಆದ್ದರಿಂದ ಸಾರ್ವಜನಿಕರು ಶಾಸ್ತ್ರಕ್ಕೆಂಬಂತೆ ಕಳಪೆ ಹೆಲ್ಮೆಟ್ ಧರಿಸುವುದರ ಬದಲಾಗಿ, ತಲೆಗೆ ರಕ್ಷಣೆ ನೀಡುವ ಗುಣಮಟ್ಟದ ಹೆಲ್ಮೆಟ್ ಧರಿಸಬೇಕೆಂದು ಕಿವಿಮಾತು ಹೇಳಿದರು.

      ವಿದ್ಯಾರ್ಥಿ-ಯುವಜನರು ಯಾವುದೇ ದುಸ್ಸಾಹಾಸಕ್ಕೆ ಕೈ ಹಾಕುವ ಮುನ್ನ, ಒಮ್ಮೆ ಪೋಷಕರ ನಿಮ್ಮನ್ನು ನಂಬಿ ಕಾಣುತ್ತಿರುವ ಕನಸುಗಳನ್ನು ನೆನಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

      ವಿದ್ಯಾನಗರ ಠಾಣೆಯ ಪಿಎಸೈ ಸಿದ್ದೇಶ್ ಎಂ.ಡಿ. ಮಾತನಾಡಿ, ರಸ್ತೆ ಸಂಚಾರ ನಿಯಮಗಳನ್ನು ಸರ್ವರ ಸುರಕ್ಷತೆಯ ದೃಷ್ಠಿಯಿಂದ ರೂಪಿಸಲಾಗಿದೆ. ವಾಹನ ಚಲಾಯಿಸುವಾಗ ಅತಿಯಾದ ವೇಗ, ಸಿಗ್ನಲ್‍ನಲ್ಲಿ ಅನಗತ್ಯ ಅವಸರ, ನಿಯಮ ಮೀರಿ ವಾಹನ ಚಲಾಯಿಸಿದರೆ ರಸ್ತೆ ಅಪಘಾತ ಸಂಭವಿಸಿ ಶಾಶ್ವತವಾಗಿ ಅಂಗಾಂಗ ಊನ ಅಥವಾ ಪ್ರಾಣ ಹಾನಿಗೆ ಕಾರಣವಾಗಲಿದೆ. ಜಿಲ್ಲೆಯಲ್ಲಿ ಪ್ರತಿವರ್ಷ ಸಂಭವಿಸುವ ಸಾವುಗಳಲ್ಲಿ ಶೇ.80 ಕ್ಕೂ ಹೆಚ್ಚು ಸಾವುಗಳು ಅಪಘಾತಗಳಿಂದಲೇ ಸಂಭವಿಸುತ್ತವೆ. ಆದ್ದರಿಂದ ಸಂಚಾರಿ ನಿಯಮಗಳನ್ನು ಪಾಲಿಸುವುದು ಅತ್ಯವಶ್ಯವಾಗಿದೆ ಎಂದು ಹೇಳಿದರು.

      ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯೆ ಪ್ರತಿಭಾ ಪಿ ದೊಗ್ಗಳ್ಳಿ ಮಾತನಾಡಿ, ಇಂದಿನ ಯುವಜನರಿಗೆ ಸಂಚಾರಿ ನಿಯಮಗಳ ಮಾಹಿತಿಯ ಕೊರತೆ ಇಲ್ಲ. ಆದರೆ, ಅವುಗಳನ್ನು ಅನುಸರಿಸುವಲ್ಲಿನ ಬದ್ಧತೆಯ ಕೊರತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಕಾರ್ಯದರ್ಶಿ ದೊಗ್ಗಳ್ಳಿಗೌಡ್ರು ಪುಟ್ಟರಾಜು ಉಪಸ್ಥಿತರಿದ್ದರು. ಚಂದ್ರಿಕಾ ಪ್ರಾರ್ಥಿಸಿದರು, ಶೈಲಾ ಎನ್. ಶೆಟ್ಟಿ ಸ್ವಾಗತಿಸಿದರು, ದೀಪಾ ಕಾರ್ಯಕ್ರಮ ನಿರೂಪಿಸದರು. ಶೋಭಾ ಎಂ. ಎಸ್. ವಂದಿಸಿದರು.

LEAVE A REPLY

Please enter your comment!
Please enter your name here