ಸ್ವಾತಂತ್ರ್ಯ ಪೂರ್ವದಲ್ಲೇ ಸಮಾನ ಹಕ್ಕಿಗಾಗಿ ಹೋರಾಡಿದವರು ಶಾಹು ಮಹಾರಾಜರು

0
41

ಶಿರಾ:

      ಛತ್ರಪತಿ ಶಾಹುಮಹಾರಾಜರು ಸ್ವಾತಂತ್ರ್ಯ ಪೂರ್ವದಲ್ಲೇ ಸಮಾನ ಹಕ್ಕಿಗಾಗಿ ಹೋರಾಟ ಮಾಡಿ, ದಲಿತರ, ಅಲ್ಪಸಂಖ್ಯಾತರ ಏಳಿಗೆಗಾಗಿ ಕಾನೂನುಗಳನ್ನು ಅಂದೇ ರೂಪಿಸಿದ್ದವರು. ಇಂತಹ ಮಹಾನ್ ನಾಯಕರ ಆದರ್ಶಗಳನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕು ಎಂದು ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಟೈರ್ ರಂಗನಾಥ್ ತಿಳಿಸಿದರು.

      ನಗರದ ಸರಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕರ್ನಾಟಕ ದಲಿತ ಸಂಘರ್ಷ  ಸಮಿತಿ ಮತ್ತು ವಿದ್ಯಾರ್ಥಿ ಒಕ್ಕೂಟದ ವತಿಯಿಂದ ಛತ್ರಪತಿ ಶಾಹು ಮಹಾರಾಜರ 144ನೇ ಜಯಂತಿ ಹಾಗೂ ಅಂಬೇಡ್ಕರ್ ಮತ್ತು ಜಾತಿ ವಿನಾಶ ಕುರಿತು ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು.

      ಜಾತಿಯತೆಯನ್ನು ಹೋಗಲಾಡಿಸಲು ಶಾಹುಮಹಾರಾಜರು 1922ರಲ್ಲೇ ಶೋಷಿತ ಸಮಾಜದ ವಿದ್ಯಾರ್ಥಿಗಳ ಅಭಿವೃದ್ದಿಗೆ ವಿದ್ಯಾರ್ಥಿ ವೇತನ, ವಿಧವ ವೇತನ ಮತ್ತು ಸಮಾಜದಲ್ಲಿ ಮಹಿಳೆ ಪುರುಷನಂತೆ ಮುಖ್ಯ ವಾಹಿನಿಗೆ ಬರಬೇಕು ಎಂದು ನಿರಂತರ ಹೋರಾಟವನ್ನು ಮಾಡಿದ್ದರು ಎಂದರು.

      ತುಮಕೂರು ವಿ.ವಿ. ಸಿಂಡಿಕೇಟ್ ಸದಸ್ಯ, ದಲಿತ ಚಿಂತಕ ಕೊಟ್ಟ ಶಂಕರ್ ಮಾತನಾಡಿ ಕೊಲ್ಲಾಪುರ ಸಂಸ್ಥಾನದ ಛತ್ರಪತಿ ಶಾಹು ಮಹಾರಾಜರು ದೇಶದಲ್ಲಿಯೇ ಮೊದಲ ಬಾರಿಗೆ ತಮ್ಮ ಆಡಳಿತದಲ್ಲಿ ಮೀಸಲಾತಿ ಕಲ್ಪಿಸಿ ದಲಿತರ ಏಳಿಗೆಗೆ ಶ್ರಮಿಸಿದ ಆಧುನಿಕ ಮೀಸಲಾತಿಯ ಹರಿಕಾರರು. ದೇಶದಲ್ಲಿ ಪುರೋಹಿತಶಾಹಿ ಹಿಡಿತದಿಂದ ಮೇಲ್ವರ್ಗದವರ ವಿರೋಧವನ್ನು ಲೆಕ್ಕಿಸದೆ, ದಲಿತರು ಹಿಂದುಳಿದ ಅಲ್ಪಸಂಖ್ಯಾತರಿಗೆ ಸ್ವತಂತ್ರ್ಯ ಪೂರ್ವದಲ್ಲಿಯೇ ಮೀಸಲಾತಿ ಕಲ್ಪಿಸಿದ ಶಾಹುಮಹರಾಜರನ್ನು ನಾವೆಲ್ಲ ಸ್ಮರಿಸಬೇಕಿದೆ. ಶಿಕ್ಷಣದ ಮಹತ್ವವನ್ನು ಅರಿತಿದ್ದ ಶಾಹು ಮಹಾರಾಜರು, ಶಿಕ್ಷಣ ಕ್ಷೇತ್ರ ಸೇರಿದಂತೆ, ಆರ್ಥಿಕ, ಸಮಾಜಿಕ ಸಮಾನತೆಗೆ ಅನೇಕ ಯೋಜನೆಗಳನ್ನು ರೂಪಿಸಿದ್ದರು.

      ತುಮಕೂರು ವಿ.ವಿ. ಸಹಾಯಕ ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು ಅವರು ಜಾತಿ ವಿನಾಶದ ಬಗ್ಗೆ ಮಾತನಾಡಿ ಭಾರತದಲ್ಲಿ 3600 ಜಾತಿಗಳು ಮತ್ತು 25000 ಉಪ ಜಾತಿಗಳಿಗೆ ಇಡೀ ಪ್ರಪಂಚದಲ್ಲಿ ಭಾರತವನ್ನು ಹೊರತುಪಡಿಸಿದರೆ ಬೇರೆಲ್ಲೂ ಜಾತಿ ವ್ಯವಸ್ಥೆ ಇಲ್ಲ. ಜಾತಿಗೆ ವ್ಯತ್ಯಾಸವಿಲ್ಲ, ಬಣ್ಣವಿಲ್ಲ ಎಲ್ಲರೂ ಮನುಷ್ಯ ಜಾತಿಯೇ ಎಂದು ತಿಳಿದರೆ ದೇಶ ಅಭಿವೃದ್ದಿ ಸಾಧ್ಯ. ಡಾ.ಬಿ.ಆರ್.ಅಂಬೇಡ್ಕರ್ ಅವರು ಜಾತಿ ವಿನಾಶಕ್ಕೆ ಅಂತರ್ ಜಾತಿ ವಿವಾಹ ಹಾಗೂ ಸ್ವಗೋತ್ರ ವಿವಾಹದಿಂದ ಸಾಧ್ಯ ಎಂಬ ಕಲ್ಪನೆಯನ್ನು ಅಂದೇ ಮನಗಂಡಿದ್ದರು. ಪ್ರಸ್ತುತ ಅಂತರ್‍ಜಾತಿ ವಿವಾಹಗಳು ನಡೆಯುತ್ತಿದ್ದರೂ ಜಾತಿ ವ್ಯವಸ್ಥೆ ಮಾತ್ರ ನಿರ್ಮೂಲನೆಯಾಗಿಲ್ಲ. ಜಾತಿಯ ಬಗ್ಗೆ ಮನುಷ್ಯನಲ್ಲಿರುವ ಅನಿಷ್ಠ ಯೋಚನೆಗಳು ನಿರ್ಮೂಲನೆಯಾಗದ ಹೊರತು ದೇಶದ ಯಾವುದೇ ಕಾನೂನುಗಳು ಜಾತಿ ವ್ಯವಸ್ಥೆ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ವಿಷಾಸಿದರು.

 

LEAVE A REPLY

Please enter your comment!
Please enter your name here