ಸ್ವಾಮಿ ವಿವೇಕಾನಂದ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು-ಶಾಸಕ ಬಿ.ಸತ್ಯನಾರಾಯಣ್

0
35

ಶಿರಾ:

   ಕಳೆದ 10 ವರ್ಷಗಳಿಂದ ಇಲ್ಲಿಯವರೆವಿಗೂ ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣಕ್ಕೆ ಒಂದು ನಯಾಪೈಸೆಯ ಅನುದಾನವನ್ನು ಸರ್ಕಾರದಿಂದ ಹಾಕಿಸದ ಪರಿಣಾಮ ಇಡೀ ಕ್ರೀಡಾಂಗಣ ಅವಸಾನದ ಅಂಚನ್ನು ತಲುಪಿದ್ದು ಸದರಿ ಕ್ರೀಡಾಂಗದ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಶಾಸಕ ಬಿ.ಸತ್ಯನಾರಾಯಣ್ ತಿಳಿಸಿದರು.

      ನಗರದ ಸ್ವಾಮಿ ವಿವೇಕಾನಂದ ಕ್ರೀಡಾಂಗಣಕ್ಕೆ ಬುಧವಾರದಂದು ಭೇಟಿ ನೀಡಿದ ಶಾಸಕರು ಕ್ರೀಡಾಂಗಣದ ಒಳಾಂಗಣ, ಹೊರಾಂಗಣ ಹಾಗೂ ಜಿಮ್ ಕೊಠಡಿಗೂ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು.

      ಈ ಹಿಂದೆ ನಾನು ಸಚಿವನಾಗಿದ್ದಾಗ ಸ್ವಾಮಿ ವಿವೇಕಾಂದ ಕ್ರೀಡಾಂಗಣಕ್ಕೆ ನಾಮಕರಣ ಮಾಡಲಾಯ್ತು. ಈ ಕ್ರೀಡಾಂಗಣದ ಉದ್ಘಾಟನೆಯೂ ಸೇರಿದಂತೆ ಕ್ರೀಡಾಂಗಣದ ಅಭಿವೃದ್ಧಿ ಮಾಡಲಾಗಿತ್ತು. ನಂತರದ ಬದಲಾದ ರಾಜಕೀಯದಾಟದಲ್ಲಿ ನಾನು ಪರಾಜಯಗೊಂಡ ನಂತರ ಈ ಕ್ರೀಡಾಂಗಣದ ಅಭಿವೃದ್ಧಿಗೆ ತಾಲ್ಲೂಕು ಆಡಳಿತ ಎಳ್ಳೂ ನೀರು ಬಿಟ್ಟಿದೆ ಎಂದರು.

      ನಗರದಲ್ಲಿ ನಡೆಯುವ ವಿವಿಧ ಸಮಾರಂಭಗಳಿಗಷ್ಟೇ ಅಲ್ಲದೆ ಸರ್ಕಾರಿ ಕಾರ್ಯಕ್ರಗಳಿಗೂ ಈ ಕ್ರೀಡಾಂಗಣವನ್ನು ಈವರೆಗೆ ಬಳಸಿಕೊಳ್ಳಲಾಗಿದೆಯೇ ಹೊರತು, ಕ್ರೀಡಾಪಟುಗಳಿಗೆ ಅನುಕೂಲವಾಗುವಂತಹ ಯಾವುದೇ ಅಭಿವೃದ್ಧಿ ಆಗಿಲ್ಲ.
ಯುವ ಸಬಲೀಕರಣ, ಕ್ರೀಡಾ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಪ.ಪೂ. ಶಿಕ್ಷಣ ಇಲಾಖೆಯ ಎಲ್ಲಾ ಕ್ರೀಡಾ ಚಟುವಟಿಕೆಗಳು ಇದೇ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದೂ ಈ ಕ್ರೀಡಾಂಗಣದ ಅಭಿವೃದ್ಧಿಕೈಗೊಳ್ಳಲು ಸಾಧ್ಯವಾಗದಿರುವುದು ದುರಂತದ ಸಂಗತಿ ಎಂದರು.

      ಕ್ರೀಡಾಂಗಣದ ವೀಕ್ಷಣೆಯ ನಂತರ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಸರ್ಕಾರ, ಆಡಳಿತಗಳು ಬದಲಾದರೆ     ಕ್ರೀಡಾಂಗಣದ ಅಭಿವೃದ್ಧಿಗೆ ಒತ್ತು ನೀಡಬಾರದು ಎಂಬ ನಿಯಮ ಎಲ್ಲೂ ಇಲ್ಲ. ಆದರೆ ಈ ಕ್ರೀಡಾಂಗಣದ ಅಭಿವೃದ್ಧಿಯ ನಿಟ್ಟಿನಲ್ಲಿ ಮಲತಾಯಿ ಧೋರಣೆ ಮಾಡಲಾಗಿದೆ ಎಂದರು.

      ಕ್ರೀಡಾಂಗಣದ ಅಭಿವೃದ್ಧಿ ನನ್ನ ಮೊದಲ ಆಧ್ಯತೆಯೂ ಆಗಿದೆ. ಕಬಡ್ಡಿ, ಥ್ರೋಬಾಲ್, ಫುಟ್‍ಬಾಲ್, ಖೋ ಖೋ ಕೋರ್ಟ್‍ಗಳ ಅಭಿವೃದ್ಧಿಯಷ್ಟೇ ಅಲ್ಲದೆ, ಒಂದು ಐಮಾಸ್ಟ್ ದೀಪ, ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲಿ ಆಗಬೇಕಿದೆ ಎಂದು ಶಾಸಕರು ತಿಳಿಸಿದರು.

      ಕ್ರೀಡಾಂಗಣದಲ್ಲಿ ವೀಕ್ಷಣೆಗೆ ಕುಳಿತುಕೊಳ್ಳುವ ವೀಕ್ಷಕರ ಗ್ಯಾಲರಿಯಲ್ಲಿ ನೆರಳಿನ ಅಗತ್ಯವೂ ಇದೆಯಲ್ಲದೆ, ರಾಷ್ಟ್ರೀಯ ಅಂತರರಾಷ್ಟ್ರೀಯ ಆಟಗಳಲ್ಲಿ ನಮ್ಮ ತಾಲ್ಲೂಕಿನ ಕ್ರೀಡಾಪಟುಗಳು ಭಾಗವಹಿಸುವಂತೆ ಮಾಡುವ ಕೆಲಸವನ್ನು ಮೊದಲು ಮಾಡಬೇಕಿದೆ. ಈ ಹಿಂದೆ ನಾನೇ ಉದ್ಘಾಟಿಸಿದ್ದ ಜಿಮ್ ಕೊಠಡಿಗೆ ಕಳೆದ 10 ವರ್ಷಗಳಿಂದಲೂ ಸುಣ್ಣಬಣ್ಣ ಬಳಿಯುವ ಕೆಲಸವನ್ನೂ ಮಾಡಿಲ್ಲ ಎಂದು ಸತ್ಯನಾರಾಯಣ್ ತಿಳಿಸಿದರು.

      ತಾಲ್ಲೂಕು ಪಂಚಾಯ್ತಿ ಹಾಗೂ ನಗರಸಭೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಶಾಸಕರು, ತಮ್ಮ ಎರಡೂ ಇಲಾಖೆಗಳಲ್ಲಿ ಕ್ರೀಡಾಭಿವೃದ್ಧಿಗಾಗಿಯೇ ಅನುದಾನ ಮೀಸಲಿರಿಸಲು ಸರ್ಕಾರದ ಆದೇಶವೂ ಇದೆ. ಕ್ರೀಡಾ ಅನುದಾನದ ಬಗ್ಗೆ ನನಗೆ ಸಮಗ್ರ ಮಾಹಿತಿ ನೀಡುವುದರ ಜೊತೆಗೆ ಸದರಿ ಅನುದಾನ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

      ಕ್ರೀಡಾ ತರಬೇತುದಾರರಾದ ಮೊಹಮದ್ ಇಸ್ಮಾಯಿಲ್ ಶಾಸಕರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ ಸದರಿ ಕ್ರೀಡಾಂಗಣದಲ್ಲಿ 200 ಮೀಟರ್ ಅಥ್ಲೆಟಿಕ್ ಟ್ರ್ಯಾಕ್ ಮತ್ತು ಡ್ರೈನೇಜ್ ವ್ಯವಸ್ಥೆ, ಮಲ್ಟಿಪರ್ಪಸ್ ಇನ್‍ಡೋರ್‍ಹಾಲ್, ವಿವಿಧ ಕ್ರೀಡಾ ಅಂಕಣಗಳ ನಿರ್ಮಾಣ, ಶೌಚಾಲಯ ಮತ್ತು ಚೇಂಜಿಂಗ್ ಕೊಠಡಿ, ಕೊಳವೆ ಬಾವಿ ಸೇರಿದಂತೆ ಹಲವು ಅಗತ್ಯಗಳ ಬಗ್ಗೆ ವಿವರಣೆ ನೀಡಿದರು. ಕ್ರೀಡಾಂಗಣದ ಸಮಗ್ರ ಅಭಿವೃದ್ಧಿಯ ಬಗ್ಗೆ ವಿಶೇಷ ಆಸಕ್ತಿ ವಹಿಸುವುದಾಗಿ ಹೇಳಿದ ಸಚಿವರು ಅಂದಾಜುಪಟ್ಟಿ ತಯಾರಿಸಿ ನಿಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

      ತಾ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಮೊಹಮದ್ ಮುಬೀನ್, ಜಿಲ್ಲಾ ಕ್ರೀಡಾಧಿಕಾರಿ ಟಿ.ಜಯಲಕ್ಷ್ಮೀ, ಕ್ರೀಡಾ ತರಬೇತು ಅಧಿಕಾರಿ ಮೊಹಮದ್ ಇಸ್ಮಾಯಿಲ್, ನಗರಸಭೆಯ ವ್ಯವಸ್ಥಾಪಕಿ ರೇಣುಕಮ್ಮ, ಡಾ||ಶಂಕರ್, ಡಾ||ರಾಮಕೃಷ್ಣ, ಡಾ||ವಿನಯ್, ಡಾ||ರಘು, ಡಾ||ದೀಪಕ್, ಡಾ||ಡಿ.ಎಂ.ಗೌಡ, ಎಸ್.ಎಲ್.ಗೋವಿಂದರಾಜು, ಹಂದಿಕುಂಟೆ ಚಂದ್ರಶೇಖರ್, ಹುಳಿಗೆರೆ ಮೂಡಲಗಿರಿಯಪ್ಪ, ಶಿರಾ ರವಿ, ಸೋಮಶೇಖರ್ ಸೇರಿದಂತೆ ಅನೇಕ ಪ್ರಮುಖರು ಹಾಜರಿದ್ದರು.

LEAVE A REPLY

Please enter your comment!
Please enter your name here