ಹಡಪದ ಅಪ್ಪಣ್ಣನಂತಹ ಹಿರಿಯ ದಾರ್ಶನಿಕರ ಸಮಾಜ ಪರಿವರ್ತನೆ ಕಾರ್ಯ ಶ್ಲಾಘನೀಯ

0
37

ಚಳ್ಳಕೆರೆ:

ಸಮಾಜದಲ್ಲಿ ಎಲ್ಲಾ ಸಮುದಾಯದಲ್ಲೂ ಧಾರ್ಮಿಕ ಜಾಗೃತಿಯ ಜೊತೆಗೆ ಸಾಮಾಜಿಕ ನೈತಿಕ ನೆಲೆಯನ್ನು ಕಂಡುಕೊಂಡ ಹಿರಿಯ ದಾರ್ಶನಿಕರು ಎಲ್ಲಾ ಸಮುದಾಯದಲ್ಲೂ ಸುಖ, ಶಾಂತಿ, ನೆಮ್ಮದಿ ನೆಲೆಸುವ ನಿಟ್ಟಿನಲ್ಲಿ ತಮ್ಮದೇಯಾದ ವಚನ ಸಾಹಿತ್ಯಗಳ ಮೂಲಕ ಜನರ ಪರಿವರ್ತನೆಗೆ ಕಾರಣರಾದರು. ಅಂತಹ ಮಹಾನ್ ದಾರ್ಶನಿಕರಲ್ಲಿ ಜಗಜ್ಯೋತಿ ಬಸವೇಶ್ವರರ ಅನುಯಾಯಿಯೂ, ಪರಮಾಪ್ತ ಶಿಷ್ಯನಾದ ಹಡಪದ ಅಪ್ಪಣನವರು ಸಹ ಒಬ್ಬರು. ಬಸವಣ್ಣನವರ ವಚನ ಸಾಹಿತ್ಯ ಹಡಪದ ಅಪ್ಪಣ್ಣನವರಿಗೆ ಸಮಾಜದಲ್ಲಿ ಸಾಮಾಜಿಕ ಕ್ರಾಂತಿ ಮೂಡಿಸಲು ಸಹಾಯವಾಯಿತು ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ಅವರು ಶುಕ್ರವಾರ ಇಲ್ಲಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಕಳೆದ ಎರಡು ತಿಂಗಳ ಹಿಂದೆ ಅಧಿಕಾರಕ್ಕೆ ಬಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಕೂಟದ ಸರ್ಕಾರ ಹಡಪದ ಅಪ್ಪಣ್ಣ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಮಾಡುವ ಮೂಲಕ ಇವರಿಗೆ ತನ್ನ ಗೌರವವನ್ನು ಸೂಚಿಸಿದೆ ಎಂದರು. ಪ್ರತಿಯೊಬ್ಬರೂ ಸಹ ತಮ್ಮ ನಿತ್ಯ ಜೀವನದಲ್ಲಿ ಇಂತಹ ಮಹಾನ್ ಶರಣರ ವಚನ ಸಾಹಿತ್ಯದ ಸಾರವನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿ ಅಧ್ಯಕ್ಷರೂ, ತಹಶೀಲ್ದಾರ್‍ರಾದ ಟಿ.ಸಿ.ಕಾಂತರಾಜು, ಸರ್ಕಾರ ಹಡಪದ ಅಪ್ಪಣ್ಣ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವನ್ನಾಗಿ ಮಾಡುವ ಮೂಲಕ ಇವರ ತತ್ವಾದರ್ಶಗಳನ್ನು ಸಮಾಜದ ಪ್ರತಿಯೊಬ್ಬರಿಗೂ ಅರಿಯುವಂತೆ ಮಾಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಜಗಜ್ಯೋತಿ ಬಸವೇಶ್ವರರು ಸಾಮಾಜಿಕ ಕ್ರಾಂತಿಯ ಹರಿಕಾರರು. ಅದೇ ರೀತಿ ಹಡಪದ ಅಪ್ಪಣ್ಣನವರೂ ಸಹ ಬಸವೇಶ್ವರರ ಸಾಹಿತ್ಯ ಕೃಷಿಯನ್ನು ಜನ ಸಾಮಾನ್ಯರಿಗೆ ತಿಳಿಸುವಲ್ಲಿ ತಮ್ಮದೇಯಾದ ವಿಶೇಷ ವಚನಗಳ ರಚನೆ ಮೂಲಕ ಸಮಾಜಕ್ಕೆ ಸಾರಿದರು. ಹಡಪದ ಅಪ್ಪಣ್ಣ ಸಾಮಾಜಿಕ ಜಾಗೃತಿಯ ಶ್ರೇಷ್ಠರಲ್ಲಿ ಒಬ್ಬರು ಎಂದರು.

ಉಪನ್ಯಾಸಕ ನೀಡಿದ ಪ್ರೊ.ಎನ್.ಜಗನ್ನಾಥ ಮಾತನಾಡಿ, ಕಳೆದ ನೂರಾರು ವರ್ಷಗಳಿಂದ ನಿರಂತರವಾಗಿ ನಾನು ಮಹಾನ್ ಪುರುಷರ ಸಾಮಾಜಿಕ ಜಾಗೃತಿಯ ಬಗ್ಗೆ ತಿಳಿದುಕೊಳ್ಳುತ್ತಿದ್ದೇವೆ. ವಿಶೇಷವಾಗಿ ಹಡಪದ ಅಪ್ಪಣ್ಣ ಸಹ ಯಾವುದೇ ರೀತಿಯ ಪ್ರಚಾರವನ್ನು ಬಯಸದೇ ತನ್ನದೇಯಾದ ವಚನ ಸಾಹಿತ್ಯದ ಮೂಲಕ ಸಮಾಜದ ಪರಿವರ್ತನೆಗೆ ಪ್ರಾಮಾಣಿಕ ಪ್ರಯತ್ನ ನಡೆಸಿದರು. ಹಡಪದ ಅಪ್ಪಣ್ಣ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯುವ ವಚನಕಾರವೆಂದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಗಿರಿಯಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯ ಸಣ್ಣ ಸೂರಯ್ಯ, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ಬಿಇಒ ವೆಂಕಟೇಶ್‍ಪ್ಪ, ಸಿಡಿಪಿಒ ಗಿರಿಜಾಂಭ, ಕೃಷಿ ಅಧಿಕಾರಿ ಮಾರುತಿ, ಪಶುವೈದ್ಯಾಧಿಕಾರಿ ಡಾ.ಹನುಮಪ್ಪ, ನಗರಸಭಾ ಸದಸ್ಯರಾದ ಬಿ.ಟಿ.ರಮೇಶ್‍ಗೌಡ, ಎಂ.ರಾಮು, ಎಸ್.ಸಲೀಂ, ಡಾ.ಕೆ.ಟಿ.ಸ್ವಾಮಿ, ಶ್ರೀಕಂಠಪ್ಪ, ಡಿ.ಕೆ.ಕಾಟಯ್ಯ, ಬಡಗಿಪಾಪಣ್ಣ, ಮೂಡಲಗಿರಿಯಪ್ಪ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಿಸಿಎಂ ಅಧಿಕಾರಿ ಜಿ.ಟಿ.ಜಗನ್ನಾಥ ಸ್ವಾಗತಿಸಿದರು, ಸಮಾಜ ಕಲ್ಯಾಣಾಧಿಕಾರಿ ಮಮತ ವಂದಿಸಿದರು, ಡಿ.ಶ್ರೀನಿವಾಸ್ ನಿರೂಪಿಸಿದರು.

LEAVE A REPLY

Please enter your comment!
Please enter your name here