ಹರಿಹರ :ಎರಡು ಜಿಲ್ಲೆಗಳ ಸಂಚಾರದ ಕೊಂಡಿಯಾದ ಬ್ರಿಟೀಷರ ಕಾಲದ ಸೇತುವೆ ವಿವಾದ

0
32

ಹರಿಹರ:

   ಎರಡು ಜಿಲ್ಲೆಗಳ ಸಂಚಾರದ ಕೊಂಡಿಯಾದ ಬ್ರಿಟೀಷರ ಕಾಲದ ಸೇತುವೆ ಮೇಲೆ ನಗರಕ್ಕೆ 24 ಗಂಟೆ ಕುಡಿಯುವ ನೀರನ್ನು ನೀಡುವ ಜಲಸಿರಿ ಯೋಜನೆಯ ಪೈಪ್‍ಲೈನನ್ನು ಅಳವಡಿಸುವ ಕುರಿತು ಪಿಡಬ್ಲ್ಯುಡಿ ಮತ್ತು ಯೋಜನೆ ಜಾರಿ ಮಾಡುತ್ತಿರುವ ಇಲಾಖೆಯ ನಡುವೆ ತಿಕ್ಕಾಟ ಆರಂಭವಾಗಿದೆ.
ಸೇತುವೆ ಶಿಥಿಲಗೊಂಡಿದೆ ಹಾಗೂ ಅನುಮತಿಯನ್ನೂ ಪಡೆಯದಿರುವುದರಿಂದ ಪೈಪ್‍ಲೈನ್ ಅಳವಡಿಕೆ ಮಾಡಬೇಡಿ ಎಂದು ಪಿಡಬ್ಲ್ಯುಡಿ ಇಲಾಖೆ ಎಇಇ ಕೆಯುಐಡಿಎಫ್‍ಸಿ, ಕೆಐಯುಡಬ್ಲ್ಯುಐಪಿ, ಆರ್‍ಪಿಎಂಯು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಸಂಚಾರದ ಕೊಂಡಿಯಾದ ಅಮೂಲ್ಯವಾದ ಸೇತುವೆ ಪೈಪಿನ ಭಾರಕ್ಕೆ ಬಿದ್ದು ದುರಂತ ನಡೆದರೆ ಯಾರು ಜವಾಬ್ದಾರಿ ಎಂಬ ಕಾಳಜಿ ಪಿಡಬ್ಲ್ಯುಡಿಯವರದ್ದಾದರೆ, ಅದೇನಾಗುತ್ತೋ ನೋಡೋಣ, ಅಂತಹದ್ದೇನೂ ಆಗಲ್ಲ ಎಂಬ ಭಂಡ ಧೈರ್ಯ ಯೋಜನೆ ಜಾರಿ ಮಾಡುತ್ತಿರುವ ಅಧಿಕಾರಿಗಳದ್ದಾಗಿದೆ.

    1924ರಲ್ಲಿ ನಿರ್ಮಿತ ಈ ಸೇತುವೆ ತಾಲೂಕಿನ ಸ್ಮಾರಕವಿದ್ದ ಹಾಗೆ. ಈಗಾಗಲೆ ಶಿಥಿಲಾವಸ್ಥೆಗೆ ತಲುಪಿದೆ. ಇದರ ಮೇಲೆ ಪೈಪ್ ಲೈನ್ ಅಳವಡಿಕೆ ಮಾಡುವ ದುಸ್ಸಾಹಸ ಬೇಡ. 60 ಕೋಟಿ ರೂ. ಅನುದಾನದೊಂದಿಗೆ ಜಾರಿಯಾಗುತ್ತಿರುವ ಈ ಯೋಜನೆಯವರು ಬೇರೆ ಇಲಾಖೆ ಸೇತುವೆ ಬಳಸದೆ ನದಿ ದಾಟಿಸಲು ತಮ್ಮದೆ ವ್ಯವಸ್ಥೆ ಮಾಡಿಕೊಳ್ಳಬೇಕೆಂಬ ಆಗ್ರಹ ನಗರದ ಹತ್ತಾರು ಸಂಘ, ಸಂಸ್ಥೆ, ಗಣ್ಯರದ್ದಾಗಿದೆ.
ಜಲಸಿರಿ ಯೋಜನೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಳೆ ಸೇತುವೆವರೆಗೂ ಪೈಪ್ ಅಳವಡಿಕೆ ಮಾಡಿದ್ದೂ ಸೇತುವೆ ಮೇಲಿನಿಂದ ಪೈಪ್ ಅಳವಡಿಕೆಗೆ ಕಾಯುತ್ತಿದ್ದಾರೆ. ಪಿಡಬ್ಲ್ಯುಡಿ ತಕರಾರಿನಿಂದಾಗಿ ಸದ್ಯಕ್ಕೆ ಅಳವಡಿಕೆ ಕಾರ್ಯ ಸ್ಥಗಿತವಾಗಿದೆ.

   ಜಲಸಿರಿ ಯೋಜನೆ ನಗರದ ಜನತೆಗೆ ಕುಡಿಯುವ ನೀರೊದಗಿಸುವ ಯೋಜನೆ ಹೌದು. ಹಾಗೆಂದು ಒಂದು ಇಲಾಖೆಗೆ ಸೇರಿದ ಆಸ್ತಿ ಮೇಲೆ ಅಕ್ರಮವಾಗಿ ಪೈಪ್ ಅಳವಡಿಕೆ ಮಾಡುವ ತುರ್ತು ಏನಿಲ್ಲ. ಕಳೆದ ಎರಡು ವರ್ಷದಿಂದ ಈ ಕಾಮಗಾರಿ ನಡೆಯುತ್ತಿದೆ. ಪಿಡಬ್ಲ್ಯುಡಿ ಹಾಗೂ ಜಲಸಿರಿಯವರು ಸೇರಿ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕು.
ಜಲಸಿರಿ ಅಧಿಕಾರಿಗಳು ಈ ವಿವಾದವನ್ನು ಈ ಮುಂಚೆಯೆ ಬಗೆಹರಿಸಿಕೊಂಡಿದ್ದರೆ ಈಗ ಕಾಮಗಾರಿ ಸ್ಥಗಿತಗೊಳಿಸುವ ದುಸ್ಥಿತಿ ಬರುತ್ತಿರಲಿಲ್ಲ. ಒಂದು ಇಲಾಖೆಯ ಆಸ್ತಿ ಮೇಲೆ, ಅದೂ ಕೂಡ 95 ವರ್ಷ ಹಳೆಯ ಸೇತುವೆ ಬಳಸುವಾಗ ತೋರಬೇಕಾದ ಮುಂಜಾಗ್ರತೆ ಕೈಗೊಂಡಿಲ್ಲ. ಏನೋ ಕಾಮಗಾರಿ ಮುಗಿಸಿ ಬಿಲ್ ಪಡೆದು ಹೋಗುವ ಗುತ್ತಿಗೆದಾರರ ಧಾವಂತಕ್ಕೆ ಜಿಲಸಿರಿ ಅಧಿಕಾರಿಗಳು ಕೈಜೋಡಿಸಿರುವುದು ಎದ್ದು ಕಾಣುತ್ತಿದೆ.

LEAVE A REPLY

Please enter your comment!
Please enter your name here