ಹಳದಿ ರೋಗಕ್ಕೆ 150ಕ್ಕೂ ಹೆಚ್ಚು ಕುರಿ ಮರಿಗಳ ಸಾವು.

0
28

ಹೊಸಪೇಟೆ :

  ಕಳೆದ 12 ದಿನಗಳಿಂದ ವಿಚಿತ್ರ ಕಾಯಿಲೆಗೆ 150ಕ್ಕೂ ಹೆಚ್ಚು ಕುರಿ ಮರಿಗಳು ಸಾವನ್ನಪ್ಪಿವೆ. ಒಂದು ಕಡೆ ಚಿಕಿತ್ಸೆ ನೀಡಲು ಪಶು ವೈಧ್ಯರು ಬರುತ್ತಿಲ್ಲ. ಇನ್ನೊಂದೆಡೆ ಆಸ್ಪತ್ರೆಗೆ ತೆರಳಿ ಔಷಧಿ ಕೇಳಿದರೂ ಸಿಗುತ್ತಿಲ್ಲ. ಖಾಸಗಿ ಅಂಗಡಿಗಳಲ್ಲಿ ಸಾವಿರಾರು ರೂ.ಖರ್ಚು ಮಾಡಿ ಔಷಧಿ ತಂದರೂ ರೋಗ ಹತೋಟಿಗೆ ಬರುತ್ತಿಲ್ಲ. ಹೀಗಾಗಿ ಏನು ಮಾಡಬೇಕು ಎಂಬುದೇ ತೋಚುತ್ತಿಲ್ಲ ಎಂದು ಬೆಳಗಾವಿ ಜಿಲ್ಲೆಯ ನಾಗರ ಮುನವಳ್ಳಿ, ಖಡಕ್ ಲಾಟ್ ಗ್ರಾಮಗಳ ಸಂಚಾರಿ ಕುರುಬರು ತಮ್ಮ ಅಳಲನ್ನು ತೋಡಿಕೊಂಡ ಪರಿ ಇದು.

 

  ಇದು ತಾಲೂಕಿನ ವಡ್ಡರಹಳ್ಳಿ ಗ್ರಾಮದ ಹೊರ ವಲಯದಲ್ಲಿ ಬೀಡು ಬಿಟ್ಟಿರುವ ಬೆಳಗಾವಿ ಜಿಲ್ಲೆಯ ಸಂಚಾರಿ ಕುರುಬರ ಕಣ್ಣೀರಿನ ಕಥೆ.
ಕುರಿಗಳಿಗೆ ಮೇವು, ನೀರು ಹರಸಿ ವಲಸೆ ಬಂದಿರುವ ಇವರ ಕುರಿ ಮರಿಗಳಿಗೆ, ಕಳೆದ 12 ದಿನಗಳಿಂದ ವಿಚಿತ್ರ ಕಾಯಿಲೆ ಹಳದಿ ರೋಗ(ಎಲ್ಲೋ ಲ್ಯಾಂಬೋ) ತಗುಲಿ ನಿತ್ಯ 10ರಿಂದ 12 ಕುರಿ ಮರಿಗಳು ಸಾವನ್ನಪ್ಪುತ್ತಿವೆ. ಸಕಾಲಕ್ಕೆ ಚಿಕಿತ್ಸೆ ಸಿಗದೇ ಸಾವಿನ ಸಂಖ್ಯೆ ಹೆಚ್ಚಾಗುವ ಸಂಭವವಿದ್ದು, ಕುರಿಗಾಯಿ ಕುಟುಂಬಗಳು ಕಂಗಾಲಾಗಿವೆ. ಸತ್ತ ಕುರಿಗಳಿಗೆ ಸರ್ಕಾರದಿಂದ ಪರಿಹಾರ ಸಿಕ್ಕರೆ ಸಹಾಯವಾಗುತ್ತದೆ ಎಂಬುದು ಕುರಿಗಾಯಿಗಳಾದ ಶ್ರೀಕಾಂತ ಮಾರುತಿ ಪೂಜಾರಿ, ಈರಪ್ಪ ಮಾರುತಿ ಪೂಜಾರಿ, ಧರಿಯಪ್ಪ ಮಾರುತಿ ಪೂಜಾರಿ ಹಾಗು ಖಾನಪ್ಪ ಇಟ್ಟಪ್ಪ ಭಿಂಗ್ರಿ ಅವರ ಅಭಿಪ್ರಾಯವಾಗಿದೆ.

  ಪ್ರತಿ ವರ್ಷ ಮಳೆಗಾಲದಲ್ಲಿ ಕುರಿಗಳಿಗೆ ಈಟಿ(ಎಂಟರೋ ಟಾಕ್ಸಿನಿಯಾ) ಸಾಂಕ್ರಮಿಕ ರೋಗ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಸೂಕ್ತ ಔಷಧಿ ಹಾಕಿದರೆ ಗುಣವಾಗಲಿದೆ. ಆದರೆ ಕುರಿ ಮರಿಗಳಿಗೆ ಬರುವ ಕಾಯಿಲೆಗೆ ಚಿಕಿತ್ಸೆ ನೀಡಲು ಬರುವುದಿಲ್ಲ. ಹೀಗಾಗಿ ರೋಗ ಹತೋಟಿಗೆ ಬರುವುದು ಸ್ವಲ್ಪ ಕಷ್ಟ. ಈಗ ಸತ್ತ ಕುರಿಮರಿಗಳ ರಕ್ತ ಪರೀಕ್ಷೆಯಾಗಿದ್ದು, ಪ್ರಯೋಗಾಲಯದ ವರದಿಯಂತೆ ಹಳದಿ ರೋಗವೆಂದು ಧೃಢಪಟ್ಟಿದ್ದು, ಚಿಕಿತ್ಸೆ ನೀಡಲಾಗುವುದು.

 ಮಳೆಗಾಲ ಆರಂಭಕ್ಕೂ ಮುನ್ನ ಪಶು ಆಸ್ಪತ್ರೆಗಳಿಗೆ ಈ ಔಷಧಿ ವಿತರಿಸಲಾಗಿದ್ದು, ಅದು ಖಾಲಿಯಾಗಿದೆ. ಮೇಲಾಧಿಕಾರಿಗಳ ಗಮನಕ್ಕೆ ತಂದು ಔಷಧಿ ವಿತರಿಸಲಾಗುವುದು. ಪಶು ವೈಧ್ಯರು ಹೈದ್ರಾಬಾದ್ ತೆರಳಿದ್ದರಿಂದ ಚಿಕಿತ್ಸೆ ನೀಡಲು ವಿಳಂಬವಾಗಿದೆ. ಬಂದ ಮೇಲೆ ಸೂಕ್ತ ಚಿಕಿತ್ಸೆ ನೀಡಲಾಗುವುದು ಎಂದು ಗಾದಿಗನೂರು ಪಶು ವೈಧ್ಯ ಆನಂದ ಹೇಳುತ್ತಾರೆ.

LEAVE A REPLY

Please enter your comment!
Please enter your name here