ಹಾನಗಲ್ಲಿನಲ್ಲಿ ಶ್ರೀಗಂಗಾ ಕ್ಷೇಮಾಭಿವೃದ್ಧಿ ಸೌಹಾರ್ಧ ಸಹಕಾರಿ ಬ್ಯಾಂಕ ಉದ್ಘಾಟಿಸುತ್ತಿರುವ ಶಾಸಕ ಸಿ.ಎಂ.ಉದಾಸಿ.

ಹಾನಗಲ್ಲ :

        ಗ್ರಾಹಕರು ನೌಕರರ ಪ್ರಾಮಾಣಿಕತೆಯಿಂದ ಮಾತ್ರ ಒಂದು ಆರ್ಥಿಕ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆಯಲು ಸಾಧ್ಯ ಎಂಬುದನ್ನು ಆಡಳಿತ ಮಂಡಳಿಯೂ ಅರಿತರೆ ಮಾತ್ರ ಅದರಿಂದ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಲು ಸಾಧ್ಯ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಜಗದ್ಗುರು ಗುರುಸಿದ್ಧರಾಜಯೋಗೀಂದ್ರ ಮಹಾಸ್ವಾಮಿಗಳು ಕರೆ ನೀಡಿದರು.

       ಬುಧವಾರ ಹಾನಗಲ್ಲಿನಲ್ಲಿ ಶ್ರೀಗಂಗಾ ಕ್ಷೇಮಾಭಿವೃದ್ಧಿ ಸೌಹಾರ್ಧ ಸಹಕಾರಿ ನಿಯಮಿತದ ಉದ್ಘಾಟನಾ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಅವರು, ಗಂಗಾಮತ ಸಮುದಾಯ 12 ನೇ ಶತಮಾನದಿಂದ ಅತ್ಯುತ್ತಮ ಇತಿಹಾಸ ಹೊಂದಿದೆ. ಭಗೀರಥ ಈ ಸಮಾಜದ ವಂಶಸ್ಥ. ಮನುಷ್ಯನಿಗೆ ಮೋಕ್ಷ ನೀಡುವುದು ಗಂಗೆಯೇ ಆಗಿದೆ. ಸಮಾನತೆಯ ಕ್ರಾಂತಿಗೆ, ಕಾಯಕ ಸೇರಿದಂತೆ ಸರ್ವರೂ ಒಂದಾಗಿ ಬಾಳಿವ ಸಂದೇಶ ನೀಡಿದ ಸಮಾಜ ಇದಾಗಿದೆ. ಈ ಸಮುದಾಯದ ಯುವಕರು, ಹಿರಿಯರು ಒಳ್ಳೆಯ ವಿಚಾರದಿಂದ ಒಂದು ಆರ್ಥಿಕ ಸಂಸ್ಥೆ ಹುಟ್ಟು ಹಾಕುತ್ತಿದ್ದೀರಿ. ಠೇವಣಿ ಇಡುವವರು, ಸಾಲಗಾರರಿಂದ ಈ ಸಂಸ್ಥೆ ಬೆಳೆಯಬೇಕು. ಈ ಸಂದರ್ಭದಲ್ಲಿ ಸಾಲಗಾರರು ಸಕಾಲಿಕ ಮರುಪಾವತಿಗೆ ಯಾವುದೇ ರೀತಿಯ ಆತಂಕವಾಗಬಾರದು ಎಂದು ಸಲಹೆ ಮಾಡಿದರು.

      ಬ್ಯಾಂಕ ಉದ್ಘಾಟಿಸಿ ಮಾತನಾಡಿದ ಶಾಸಕ ಸಿ.ಎಂ.ಉದಾಸಿ, ಸಹಕಾರಿ ಸಂಘಗಳು ಎಡವಿ ಅಪಾಯಕ್ಕೆ ಅವಕಾಶ ಮಾಡಿಕೊಟ್ಟಿವೆ. ಸಮಾಜಮುಖಿ ಕಾರ್ಯದಲ್ಲಿ ಸ್ವಾರ್ಥ ಸಂಕುಚಿಚತೆಗಳು ಬೇಡ. ಒಂದು ಆರ್ಥಿಕ ಸಂಸ್ಥೆ ಆರಂಭದ ಮೂಲಕ ಕೆಲವರಿಗೆ ಉದ್ಯೋಗ, ಇನ್ನು ಕೆಲವರಿಗೆ ಆರ್ಥಿಕ ಸಹಾಯದ ಮೂಲಕ ಸಹಕಾರ ನೀಡಲು ಸಾಧ್ಯ. ಯಾವುದೇ ಮುಲಾಜಿಗೆ ಒಳಗಾಗದೆ ಕಟ್ಟುನಿಟ್ಟಿನ ವ್ಯವಹಾರ ಮಾಡಿ ಯಾವುದೆ ರಿಯಾಯತಿಗೆ ಅವಕಾಶವಿಲ್ಲದಂತೆ ಆಡಳಿತ ನಡೆಸಬೇಕು. ಆಗ ಮಾತ್ರ ಈ ಸಂಸ್ಥೆ ನಂಬಿಕೊಂಡ ಗುರಿ ಮುಟ್ಟಲು ಸಾಧ್ಯ ಎಂದರು.

     ಆದಿಶಕ್ತಿ ಸೌಹಾರ್ಧ ಸಹಕಾರಿ ಸಂಘದ ಅಧ್ಯಕ್ಷ ಎಂ.ಬಿ.ಕಲಾಲ ಮಾತನಾಡಿ, ಸಾಲಗಾರರು ಹಾಗೂ ಹೂಡಿಕೆದಾರರ ಜೊತೆಗೆ ವ್ಯವಹರಿಸುವಾಗ ಎಚ್ಚರಿಕೆ ಅತ್ಯವಶ್ಯಕ. ಇತ್ತೀಚಿನ ದಿನಗಳಲ್ಲಿ ಕಾನೂನುಗಳ ಕಣ್ಣು ಆರ್ಥಿಕ ಸಂಸ್ಥೆಗಳ ಮೇಲೆ ಬಹಳಷ್ಟು ನಿಗಾ ಇರುವುದರಿಂದ ಕಾನೂನು ಬಾಹೀರವಾಗಿ ಮಾತನಾಡುವುದು ಕೂಡ ಸಂಸ್ಥೆಯನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎಂಬ ಎಚ್ಚರಿಕೆ ಇರಲಿ. ಬ್ಯಾಂಕ ನಡೆಸುವುದು ಸುಲಭದ ಕೆಲಸವಲ್ಲ. ಆದರೆ ಇದರಿಂದ ಹಿಂದೆ ಸರಿಯುವ ಅವಶ್ಯಕತೆ ಇಲ್ಲ. ಲೆಕ್ಕಾಚಾರಗಳು ಚುಕ್ತಾ ಇರಲಿ ಎಂದು ಎಚ್ಚರಿಸಿದರು.

     ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಚಂದ್ರಪ್ಪ ಜಾಲಗಾರ, ಬಡವರು, ಸಾಮಾನ್ಯರಿಗೆ ಸಾಲನೀಡಿ, ಜಾತ್ಯಾತೀತವಾಗಿ ಈ ಸಂಸ್ಥೆಯನ್ನು ಬೆಳೆಸುವ ಉದ್ದೇಶವಿದೆ. ಈ ಮೂಲಕ ಸಾರ್ವಜನಿಕ ಕ್ಷೇತ್ರದಲ್ಲಿಯೂ ಸಮಾಜ ಸೇವೆ ಮಾಡುವ ಹೆಬ್ಬಯಕೆ ಹೊಂದಿದ್ದೇವೆ. ಇದಕ್ಕೆ ಎಲ್ಲರ ಸಹಕಾರವಿರಲಿ ಎಂದು ಮನವಿ ಮಾಡಿದರು.

     ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಗುರುಪೀಠದ ಪೀಠಾಧ್ಯಕ್ಷ ಜಗದ್ಗುರು ಶಾಂತಭೀಷ್ಮ ಚೌಡಯ್ಯ ಮಹಾಸ್ವಾಮಿಗಳು ಸಾನಿಧ್ಯವಹಿಸಿದ್ದರು. ತಾಲೂಕು ಗಂಗಾಮತ ಹಿತರಕ್ಷಕರ ಸಂಘದ ಅಧ್ಯಕ್ಷ ರಾಜೇಂದ್ರ ಬಾರ್ಕಿ, ತಹಶೀಲ್ದಾರ ಸಿ.ಎಸ್.ಭಂಗಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಕೆಸಿಸಿ ಬ್ಯಾಂಕ ನಿರ್ದೇಶಕ ಮಾಲತೇಶ ಸೊಪ್ಪಿನ, ರಾಘವೇಂದ್ರ ಗುಡಿಕೇರಿ, ಹನುಮಂತಪ್ಪ ಮಲಗುಂದ, ನಾರಾಯಣಪ್ಪ ಕಠಾರಿ ಅತಿಥಿಗಳಾಗಿದ್ದರು.

       ಸೌಭಾಗ್ಯ ಜಾಲಗಾರ ಪ್ರಾರ್ಥಿಸಿದರು. ಹನುಮಂತಪ್ಪ ಹುಡೇದವರ ಸ್ವಾಗತಿಸಿದರು. ನಾಗರಾಜ ಗೋಯಿಕಾಯಿ ಕಾರ್ಯಕ್ರಮ ನಿರೂಪಿಸಿದರು. ಕರಬಸಪ್ಪ ಬಾರ್ಕಿ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap