ಹಾವೇರಿ : ಗಾಂಧಿ ನೆನಪಿಸಲು ರಾಜ್ಯಾದ್ಯಂತ ಗಾಂಧಿ ರಂಗ ಪಯಣ

0
42

ಹಾವೇರಿ:

    ಮಹಾತ್ಮಗಾಂಧೀಜಿಯವರ 150ನೆಯ ಜಯಂತಿಯ ಅಂಗವಾಗಿ ಅವರ ಜೀವನ ಪಯಣ ಕುರಿತಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಿತ ಗಾಂಧಿ 150 ಒಂದು ರಂಗ ಪಯಣ ಎಂಬ ರೂಪಕವನ್ನು ಕ್ವಿಟ್ ಇಂಡಿಯಾ ಚಳುವಳಿಯ ದಿನವಾದ ಆಗಸ್ಟ್ 8ರಿಂದ ಡಿಸೆಂಬರ್ 15ರವರೆಗೆ ರಾಜ್ಯಾದ್ಯಂತ ಪ್ರದರ್ಶನಕ್ಕೆ ಸಜ್ಜುಗೊಳಿದಲಾಗಿದೆ. ವಿಶೇಷವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಯುವ ಸಮೂಹವನ್ನು ಕೇಂದ್ರಿಕರಿಸಿ ರೂಪಿಸಲಾದ ಗಾಂಧಿ ಪಯಣ ರೂಪಕ ಬೊಳುವಾರು ಮಹಮ್ಮದ್ ಕುಂಞಯವರ ಮಕ್ಕಳ ಕಾದಂಬರಿ, “ಪಾಪು ಗಾಂಧಿ, ಗಾಂಧಿ ಬಾಪು ಆದ ಕಥೆ” ಆಧರಿಸಿದೆ.

    ಈ ರಂಗ ರೂಪಕವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಎನ್.ಆರ್. ವಿಶುಕುಮಾರ್ ಅವರ ಪರಿಕಲ್ಪನೆಯಲ್ಲಿ ರಂಗಕರ್ಮಿ ಡಾ.ಶ್ರೀಪಾಧಭಟ್ ಅವರ ರಂಗ ರೂಪಕ್ಕೆ ಅಳವಡಿಸಿ ನಿರ್ದೇಶನಮಾಡಿದ್ದಾರೆ.ಗಾಂಧಿ ರಂಗ ಪಯಣದಲ್ಲಿ 30ಕ್ಕೂ ಅಧಿಕ ಕಲಾವಿದರು ತೊಡಗಿಸಿಕೊಂಡಿದ್ದಾರೆ. ಎರಡು ತಂಡವಾಗಿ ವಿಭಜಿಸಿ ದಕ್ಷಿಣ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಕಲಾವಿದ ಮಧ್ವರಾಜ್ ನೇತೃತ್ವದಲ್ಲಿ ಪಯಣ ಬೆಳೆಸಿದರೆ, ಧಾರವಾಡದ ರಂಜಿತಾ ಜಾಧವ ಅವರ ನೇತೃತ್ವದಲ್ಲಿ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪಯಣ ಬೆಳೆಸಲಿದೆ ಎಂದು ನಿರ್ದೇಶಕ ಶ್ರೀಪಾಧ ಭಟ್ ಅವರು ತಿಳಿಸಿದ್ದಾರೆ.ರಾಜ್ಯದ ಎಲ್ಲ

    ತಾಲೂಕಿನ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಹಾಗೂ ಸಂಜೆ ಸಾರ್ವಜನಿಕರಿಗಾಗಿ ಪ್ರದರ್ಶನ ವ್ಯವಸ್ಥೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಗಾಂಧೀಜಿಯವರ ಜೀವನ ಚರಿತ್ರೆ ಕುರಿತಂತೆ ಸರಳ ಭಾಷೆಯಲ್ಲಿ ರಚಿಸಲಾದ ಕಿರುಹೊತ್ತಿಗೆ ಹಂಚಿಕೆ ಹಾಗೂ ಜಗತ್ತಿನ ನಾನಾ ಭಾಷೆ , ರಾಷ್ಟ್ರಗಳಲ್ಲಿ ಗಾಂಧೀಜಿಯವರ ಕುರಿತಂತೆ ಹೊರತಂದಿರುವ ಅಂಚೆ ಚೀಟಿಗಳ ವಿಶೇಷ ಪ್ರದರ್ಶನ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ತಿಳಿಸಿದರು.ವಿಶೇಷವಾಗಿ ವಿದ್ಯಾರ್ಥಿ ಪ್ರೇಕ್ಷಕರನ್ನು ಉದ್ದೇಶವಾಗಿಟ್ಟುಕೊಂಡು ಸರಳವಾಗಿ ಈ ರಂಗ ರೂಪಕವನ್ನು ಕಟ್ಟಲಾಗಿದೆ. ಹಗಲಿನಲ್ಲಿಯೂ ತರಗತಿ ಕೋಣೆಯಲ್ಲಿಯೂ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನ ಕೊಡಬಹುದಾದ ಸರಳ ರಂಗ ವಿನ್ಯಾಸವನ್ನು ಮಾಡಲಾಗಿದೆ ಎಂದು ಅವರು

   ತಿಳಿಸಿದರು.ಗಾಂಧಿ- 150 ಒಂದು ರಂಗ ಪಯಣಕ್ಕೆ ಕಳೆದ ಒಂದು ತಿಂಗಳಿನಿಂದ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶೇಷಗಿರಿ ಗ್ರಾಮದ ಗಜಾನನ ಮಿತ್ರಮಂಡಳಿ ರಂಗ ಮಂದಿರದಲ್ಲಿ ತಾಲೀಮು ನಡೆಯುತ್ತಿದೆ. ನಿರ್ದೇಶಕ ಶ್ರೀಪಾದ್‍ಭಟ್, ಸಹ ನಿರ್ದೇಶಕರಾದ ಶೋಧನ್ ಬಸ್ರೂರು ಹಾಗೂ ಪ್ರಶಾಂತ ಉದ್ಯಾವರ, ಕಲಾವಿದರಾದ ಪ್ರಜ್ವಲ್, ಹರೀಶ್ ಗುರಪ್ಪನವರ, ಸಿದ್ದು ಕೊಂಡೋಜಿ, ಅಕ್ಕಮ್ಮಾ, ಕುಮಾರ್, ಸುನಿಲ್, ಸಂದೀಪ್, ಪವನ್ ಮಿಟ್ಟಾ, ದಿನೇಶ್, ಪ್ರದೀಪ್, ಶ್ಯಾಮಲಾ, ಜಗದೀಶ್, ಮಿಲನ್, ಸುಮನ್, ಸುಭಾಷ್, ನಿತಿನ್, ಮಂಜು ಎಂ. ಮಂಜು ಕಠಾರಿ, ಸ್ವರೂಪ್, ನಾಗರಾಜ ಕಾಸಂಬಿ, ಅಕ್ಷತಾ, ರೂಪಾ, ಮಹಾಂತೇಶ್, ಯಲ್ಲಪ್ಪಾ, ಲಕ್ಷ್ಮಣ, ಸಣ್ಣಪ್ಪಾ, ಮಂಜುನಾಥ, ರೇಣುಕಾ ಹಾಗೂ ಸುಮನ್ ಅವರು

    ತೊಡಗಿಸಿಕೊಂಡಿದ್ದಾರೆ.ಗಾಂಧಿ ಪಯಣ ರಂಗ ರೂಪಕದ ಪೂರ್ವ ತಯಾರಿ ಪ್ರದರ್ಶನವನ್ನು ಇಂದು ಮಾಧ್ಯಮದವರಿಗಾಗಿ ಶೇಷಗಿರಿ ಗ್ರಾಮದಲ್ಲಿ ಶನಿವಾರ ಪ್ರಥಮ ಪ್ರದರ್ಶನ ನಡೆಯಿತು. ವಿವಿಧ ರಂಗಕರ್ಮಿಗಳು ಈ ಪ್ರದರ್ಶನ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಗಾಂಧೀಜಿಯವರ ಕುರಿತಂತೆ ಬಂದಿರುವ ರೂಪಕಗಳು, ನಾಟಕಗಳು, ಚಲನ ಚಿತ್ರಗಳು ಒಳಗೊಂಡಂತೆ ಹಲವು ಮಾದರಿಗಳಿಗಿಂತ ಭಿನ್ನವಾಗಿ ನಿಲ್ಲುವ ಗಾಂಧಿ ಪಯಣ ವಿಶೇಷವಾಗಿ ವಿದ್ಯಾರ್ಥಿ ಸಮೂಹ ಹಾಗೂ ಯುವ ಸಮೂಹವನ್ನು ಗಮನದಲ್ಲಿಸಿರಿ ಸರಳವಾಗಿ ರೂಪಿಸಲಾಗಿದೆ. ಅತ್ಯಂತ ಸರಳವಾಗಿ ಪ್ರೇಕ್ಷರೊಂದಿಗೆ ಮಾತಿಗಿಳಿಸುವ ಈ ಕೃತಿ ಬಾಪು ಅವರ ಬಾಲ್ಯದ ದಿನಗಳ ಪಯಣ, ಯವ್ವನದ ದಿನಗಳು, ದಕ್ಷಿಣ ಆಫ್ರಿಕಾದ ಪಯಣ, ಮರಳಿ ಭಾರತ ಸ್ವಾತಂತ್ರ್ಯ ಹೋರಾಟದ ಪಯಣದ ಜೊತೆ ಜೊತೆಗೆ ಸಾಗುವ ಈ ಕಥೆ ಗಾಂಧೀಜಿಯವರ ಜೀವನ ಯಾತ್ರೆಯ ಅಂತಿಮ

     ಪಯಣದೊಂದಿಗೆ ತೆರೆ ಬಿಳುತ್ತದೆ.ಒಂದುವರೆ ಗಂಟೆಯ ಈ ರೂಪಕ ಆರಂಭದಿಂದ ಕೊನೆಯವರೆಗೂ ಬೀಗಿಬಂಧದೊಂದಿಗೆ ಪ್ರೇಕ್ಷಕರನ್ನು ಆಪ್ತಗೊಳಿಸುತ್ತದೆ. ಇಂದಿನ ಯುವ ಜನಾಂಗಕ್ಕೆ ಅಗತ್ಯವಾದ ಗಾಂಧೀಜಿಯವರ ಸತ್ಯ, ಅಹಿಂಸೆ, ಸಾಮರಸ್ಯದ ಮಾರ್ಗಗಳನ್ನು ಪ್ರಧಾನವಾಗಿರಿಸಿಕೊಂಡು ಬೆಳೆಯುವ ಕಥೆ ಹಾಗೂ ದೃಶ್ಯಾವಳಿಗಳು ಗಾಂಧಿ ಅವರ ಅಗತ್ಯತೆಯನ್ನು ತಿಳಿಸುತ್ತದೆ. ರೂಪಕದಲ್ಲಿ ಹಲವು ದೃಶ್ಯಾವಳಿಗಳು ಚಲಿಸುವ ವೇಗ ನಟರ ಅಭಿನಯ ಕೌಶಲ್ಯ, ಕಥಾ ಹಂದರ ಗಾಂಧಿಯನ್ನು ನಮ್ಮೊಳಗೆ ಸದ್ದಿಲ್ಲದೆ ಆವರಿಸಿಕೊಳ್ಳುತ್ತದೆ. ಎಲ್ಲಿಯೂ ಸಡಿಲಗೊಳ್ಳದೆ ವಾಚ್ಯವಾಗದೆ ಪ್ರೇಕ್ಷರ ತಾಳ್ಮೆಯನ್ನು ಕೆಣಕದೆ ಇಂದಿನ ರಾಜಕೀಯ, ಸಾಮಾಜಿಕ ಅಪಮೌಲ್ಯಗಳನ್ನು ಕೆಣಕುತ್ತಲೇ ಗಾಂಧೀಜಿಯ ಮಾರ್ಗಗಳ ಅಗತ್ಯತೆಯನ್ನು ನಮ್ಮೊಳಗೆ ಹುಟ್ಟುಹಾಕುತ್ತದೆ.ಬ್ರಿಟಿಷ್ ಭಾರತದ ಚರಿತ್ರೆಯನ್ನು ಹಾಗೂ ಇಂದಿನ ಚರಿತ್ರೆಯನ್ನು ಸದ್ದಿಲ್ಲದೆ ಪ್ರೇಕ್ಷಕನೊಳಗೆ

     ಮೌಲ್ಯಮಾಪನಕ್ಕೆ ತೊಡಗಿಸುವ ಹೊಸ ಚಿಂತನೆಗೆ ನಮ್ಮನ್ನು ತೊಡಗಿಸಲು ಬಾಪು ಪಯಣ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಇಂದಿನ ದಿನಮಾನಗಳಲ್ಲಿ ಗಾಂಧೀಜಿಯನ್ನು ಅಪಮೌಲ್ಯಗೊಳಿಸಿ ನೋಡುವ ದೃಷ್ಟಿಕೋನಕ್ಕೊಂದು ಹೊಸ ಆಯಾಮ ನೀಡುವಲ್ಲಿ ವಿಶೇಷವಾಗಿ ವಿದ್ಯಾರ್ಥಿ ಸಮೂಹ ಹಾಗೂ ಯುವ ಸಮೂಹಕ್ಕೆ ಗಾಂಧಿಯೊಂದಿಗೆ ಪಯಣದ ಅಗತ್ಯತೆಯನ್ನು ಸಾರುವಲ್ಲಿ ಈ ರೂಪಕ ಯಶಸ್ವಿಯಾಗಲಿದೆ ಎಂಬ ಆಶಾಭಾವನೆ ಮೊದಲ ಪ್ರದರ್ಶನ ನೋಡಿದ ರಂಗವಿಮರ್ಶಕರ ಅನಿಸಿಕೆ.ಈ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ಬಸವಂತರಾಯ ಪಾಟೀಲ, ರಂಗಾಯಣ ನಿರ್ದೇಶಕ ಪ್ರಮೋದ ಶಿಗ್ಗಾಂವ, ರಂಗಕರ್ಮಿಗಳಾದ ಕೆ.ವೈ.ನಾರಾಯಣ, ಶಂಕರಯ್ಯ ಘಂಟಿ, ಬಿ.ಆರ್. ಪೊಲೀಸ್‍ಪಾಟೀಲ, ಶಿವಾನಂದ ಶೆಟ್ಟರ, ಶಶಿಧರ ಬಾರಿಗಾರ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here