ನೀರಾವರಿ ಯೋಜನೆಗಳು ಹಂತ ಹಂತವಾಗಿ ಪೂರ್ಣ : ಸಚಿವ ಎಸ್.ಆರ್.ಶ್ರೀನಿವಾಸ್

0
32

ಗುಬ್ಬಿ:
ತಾಲ್ಲೂಕಿನ ಎಲ್ಲಾ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದ್ದು ಹಂತ ಹಂತವಾಗಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದೆಂದು ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ತಿಳಿಸಿದರು.

      ತಾಲ್ಲೂಕಿನ ಸುರಿಗೇನಹಳ್ಳಿ ಶ್ರೀರಂಗನಾಥಸ್ವಾಮಿ ದೇವಾಲಯದ ಸಮುದಾಯ ಭವನದಲ್ಲಿ ಹೇಮಾವತಿ ಕುಡಿಯುವ ನೀರಿನ ಹೋರಾಟ ಸಮಿತಿ ವತಿಯಿಂದ ನಡೆದ ಬಿಕ್ಕೆಗುಡ್ಡ ನೀರಾವರಿ ಹಕ್ಕೊತ್ತಾಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನೀರಾವರಿ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಡಬೇಕಾದ ಅಧಿಕಾರಿಗಳನ್ನು ಸಭೆ ಕರೆದು ತ್ವರಿತವಾಗಿ ಪರಿಹಾರ ಬಿಡುಗಡೆಗೊಳಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದರು.

      ತಾಲ್ಲೂಕಿನಲ್ಲಿ ಬಿಕ್ಕೆಗುಡ್ಡ ನೀರಾವರಿ ಯೋಜನೆ ಸೇರಿದಂತೆ ಹಲವು ಕಡೆಗಳಲ್ಲಿ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕಾಗಿರುವುದರಿಂದ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ವಿಶೇಷ ಭೂಸ್ವಾಧೀನ ಅಧಿಕಾರಿಯನ್ನು ನೇಮಕ ಮಾಡಿ ರೈತರ ಭೂಮಿಗೆ ಸೂಕ್ತವಾದ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ ಅವರು, ಬಿಕ್ಕೆಗುಡ್ಡ ಭಾಗದ ನೀರಾವರಿ ಯೋಜನೆ ವ್ಯಾಪ್ತಿಗೆ 28 ಹಳ್ಳಿಗಳು ಸೇರ್ಪಡೆಯಾಗಲಿದ್ದು ತಾಲ್ಲೂಕಿನಲ್ಲಿಯೆ ಅತಿ ಎತ್ತರದ ಪ್ರದೇಶದಲ್ಲಿದ್ದಾರೆ. ಮಳೆಗಾಲದಲ್ಲಿಯೂ ಸಮರ್ಪಕವಾಗಿ ಮಳೆಯಾಗದೆ ಅಂತರ್ಜಲ ಕುಸಿತದಿಂದ ಕುಡಿಯುವ ನೀರಿ ತೀವ್ರತರ ಸಮಸ್ಯೆಯಾಗುತ್ತಿದ್ದು ಕೂಡಲೆ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೆ ಈ ನೀರಾವರಿ ಯೋಜನೆಯಿಂದ ಈ ಭಾಗದ ಎಲ್ಲಾ ರೈತರಿಗೂ ಅನುಕೂಲವಾಗುವಂತೆ ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.

      ಜೂ.30 ರಂದು ಮುಖ್ಯಮಂತ್ರಿಗಳು ಮತ್ತು ಜಲಸಂಪನ್ಮೂಲ ಸಚಿವರೊಂದಿಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ಸಭೆ ನಡೆಯಲಿದ್ದು ನಾಳೆಯಿಂದಲೆ ತುಮಕೂರು ಜಿಲ್ಲೆಯ ನಾಲಾಗಳಿಗೆ ಹೇಮಾವತಿ ನೀರು ಹರಿಯಲಿದೆ ಎಂದು ಸಚಿವರು ತಿಳಿಸಿದರು.

      ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ ಹೇಮಾವತಿ ಯೋಜನೆಯಿಂದ ತಾಲ್ಲೂಕಿನ ರೈತರು ಭೂಮಿ ಕಳೆದುಕೊಂಡು ಪರಿಹಾರಕ್ಕಾಗಿ ದಶಕಗಳಿಂದಲೂ ಹೋರಾಟ ನಡೆಸುತ್ತಿದ್ದಾರೆ. ಹೇಮಾವತಿ ನಾಲಾ ಅಧಿಕಾರಿಗಳು, ಜಿಲ್ಲಾಡಳಿತ, ಕಂದಾಯ ಇಲಾಖೆ, ಕೃಷಿ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಬಹುತೇಕ ಹೇಮಾವತಿ ನೀರಾವರಿ ಯೋಜನೆಗಳು ನೆನೆಗುದಿಗೆ ಬಿದ್ದಿವೆ. ಭೂಮಿ ಕಳೆದುಕೊಂಡ ರೈತರಿಗೆ ಸಕಾಲಕ್ಕೆ ಪರಿಹಾರ ನೀಡಿದ್ದರೆ ಶೇ.40 ರಷ್ಟು ಬಾಕಿ ಇರುವ ಕಾಮಗಾರಿಗಳು ಪೂರ್ಣಗೊಳ್ಳುತ್ತಿದ್ದವು. ಈ ಬಗ್ಗೆ ಸಚಿವರು ಸೂಕ್ತವಾದ ಕ್ರಮಗಳನ್ನು ಕೈಗೊಂಡು ರೈತರಿಗೆ ಪರಿಹಾರ ದೊರಕಿಸಿಕೊಡುವುದರ ಜೊತೆಗೆ ನೆನೆಗುದಿಗೆ ಬಿದ್ದಿರುವ ಕಾಮಗಾರಿಯನ್ನು ಪೂರ್ಣಗೊಳಿಸಿ ತ್ವರಿತವಾಗಿ ಈ ಭಾಗಕ್ಕೆ ನೀರು ಹರಿಯುವಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡರು.

      ಸಭೆಯಲ್ಲಿ ರೈತ ಮುಖಂಡರಾದ ಚಂದ್ರಶೇಖರ್, ಬ್ಯಾಟರಂಗೇಗೌಡ, ಕಳ್ಳಿಪಾಳ್ಯ ಲೋಕೇಶ್, ಸು.ಮುನಿಯಪ್ಪ, ವೆಂಕಟೇಗೌಡ, ವೆಂಕಟೇಶ್ ಗೌಡ, ರಾಮು, ಪ್ರಭಾಕರ್, ಜಿ.ಟಿ.ರೇವಣ್ಣ, ಕೆ.ಆರ್.ವೆಂಕಟೇಶ್, ಎಸ್.ಎಲ್.ನರಸಿಂಹಯ್ಯ, ರಹಮತ್ ಉಲ್ಲಾ, ಜುಂಜೇಗೌಡ ಸೇರಿದಂತೆ ಈ ಭಾಗದ ರೈತರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here