ಹೇಮಾವತಿ ಯೋಜನೆ: ರೈತರಿಗೆ ಹದಿನೈದು ದಿನಗಳಲ್ಲಿ ಪರಿಹಾರ ಧನ, ಶೀಘ್ರ ಕಾಮಗಾರಿ ಪ್ರಾರಂಭ; ಜೆ.ಸಿ.ಎಂ.

0
31

ಚಿಕ್ಕನಾಯಕನಹಳ್ಳಿ :

    ತಾಲೂಕಿಗೆ ಹೇಮಾವತಿ ನೀರು ಹರಿಸುವ ಸಂಬಂಧ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ, ಗುತ್ತಿಗೆದಾರ ಹಾಗೂ ಯೋಜನೆಗೆ ಭೂಮಿ ಬಿಟ್ಟುಕೊಡುತ್ತಿರುವ ರೈತರ ಸಭೆಯನ್ನು ಶಾಸಕ ಜೆ.ಸಿ.ಮಾಧುಸ್ವಾಮಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

    ಬೆಂಗಳೂರಿನ ಕಾವೇರಿ ಭವನದಲ್ಲಿ ನಡೆದ ಸಭೆಯಲ್ಲಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಹದಿನೈದು ದಿನಗಳೊಳಗೆ ಭೂಮಿ ಬಿಟ್ಟುಕೊಡುತ್ತಿರುವ ರೈತರಿಗೆ ಪರಿಹಾರ ಧನ ನೀಡಬೇಕು, ಪರಿಹಾರಧನ ನೀಡದ ನಂತರ ಗುತ್ತಿಗೆದಾರ ಕೋರ್ಟ್‍ನಲ್ಲಿ ಹೂಡಿರುವ ಪ್ರಕರಣವನ್ನು ವಾಪಸ್ ಪಡೆದು ಕೆಲಸ ಪ್ರಾರಂಭಿಸಬೇಕು ಎಂದು ನಿರ್ದೇಶನ ನೀಡಿದ್ದಾರೆ.

    ಈ ಸಂದರ್ಭದಲ್ಲಿ ರೈತರು ನಮಗೆ ಬರಬೇಕಾದ ಪರಿಹಾರಧನವನ್ನು ಶೀಘ್ರ ಕೊಡಲು ಆಗ್ರಹಿಸಿದ ಹಿನ್ನೆಲೆಯಲ್ಲಿ, ಸಭೆಯಲ್ಲಿದ್ದ ಭೂ ಸ್ವಾಧೀನಾಧಿಕಾರಿ ಮಾತನಾಡಿ, ಕೆಲವು ಜಮೀನುಗಳಿಗೆ ಪರಿಹಾರ ನೀಡಲು ಕಾನೂನಾತ್ಮಕ ತೊಡಕುಗಳ ಬಗ್ಗೆ ವಿವರಿಸಿದಾಗ, ಅಂತಹ ಜಮೀನುಗಳ ಪರಿಹಾರ ಧನವನ್ನು ರೈತರ ಹಾಗೂ ಅಧಿಕಾರಿಗಳ ಜಂಟಿ ಜವಬ್ದಾರಿಯಲ್ಲಿ ಕೋರ್ಟ್‍ನಲ್ಲಿ ಇಡಿಗಂಟಾಗಿ ಇಡಿ, ತೊಡಕುಗಳು ಪರಿಹಾರವಾದ ನಂತರ ಸಂಬಂಧಿಸಿದ ರೈತರಿಗೆ ಆ ಹಣ ಹೋಗುವಂತೆ ಕೋರ್ಟ್ ನಿರ್ದೇಶನ ನೀಡುತ್ತದೆ, ಉಳಿದವರಿಗೆ ಇನ್ನು ಹದಿನೈದು ದಿನಗಳೊಳಗೆ ಪರಿಹಾರದ ಚೆಕ್‍ನ್ನು ವಿತರಿಸಬೇಕು ಎಂದು ತಾಕೀತು ಮಾಡಿದರು. ಇದಕ್ಕೆ ಬೇಕಾದ ಅನುಧಾನವನ್ನು ಜಲಸಂಪನ್ಮೂಲ ಇಲಾಖೆ ತಕ್ಷಣವೇ ಬಿಡುಗಡೆಗೊಳಿಸಬೇಕು ಎಂದು ಸ್ಥಳದಲ್ಲಿದ್ದ ಇಲಾಖೆಯ ಕಾರ್ಯದರ್ಶಿ ಜೈಪ್ರಕಾಶ್‍ರವರಿಗೆ ತಿಳಿಸಿದರು. ಜೈಪ್ರಕಾಶ್‍ರವರು ಶೀಘ್ರ ಬಿಡುಗಡೆಗೊಳಿಸುವುದಾಗಿ ತಿಳಿಸಿದರು.

    ರೈತರು ಜಮೀನು ಬಿಟ್ಟುಕೊಟ್ಟ ತಕ್ಷಣವೇ ಗುತ್ತಿಗೆದಾರರು ನ್ಯಾಯಾಲಯದಲ್ಲಿ ಹೂಡಿರುವ ದಾವೆಯನ್ನು ವಾಪಸ್ ಪಡೆದು ಕೆಲಸವನ್ನು ಪ್ರಾರಂಭಿಸುವಂತೆ ಸಭೆಯಲ್ಲಿದ್ದ ಗುತ್ತಿಗೆದಾರ ಸುಭಾಷ್‍ರವರಿಗೆ ತಿಳಿಸಿದರು.
ಸಭೆಯಲ್ಲಿ ಕಾವೇರಿ ನೀರಾವರಿ ನಿಗಮದ ಹೇಮಾವತಿ ವಿಭಾಗದ ಮುಖ್ಯ ಇಂಜಿನಿಯರ್ ಪ್ರಸನ್ನಕುಮಾರ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಎಚ್.ಆರ್.ಶಶಿಧರ್, ತಾ.ಪಂ.ಮಾಜಿ ಉಪಾಧ್ಯಕ್ಷ ನಿರಂಜನ್, ರೈತರಾದ ಶಿವರಾಜ್, ಶಂಕರಲಿಂಗಪ್ಪ ಸೇರಿದಂತೆ ಸಂಬಂಧಪಟ್ಟ ಇಂಜಿನಿಯರ್‍ಗಳು ಹಾಗೂ ವಿಶೇಷ ಭೂ ಸ್ವಾಧೀನಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

LEAVE A REPLY

Please enter your comment!
Please enter your name here