ಹೊನ್ನಾಳಿ ತಾಲ್ಲೂಕಿನ ಬಿದರಗಡ್ಡೆ : ಸ್ವಯಂ ಸೇವಕರು ಶ್ರಮದಾನದ ಮೂಲಕ ಸ್ವಚ್ಛತಾ ಅಭಿಯಾನ

0
20

ಹೊನ್ನಾಳಿ:

   ಸ್ವಚ್ಛತೆ ಇದ್ದಲ್ಲಿ ದೇವರು ನೆಲೆಸುತ್ತಾನೆ ಎಂದು ಹೊನ್ನಾಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಎಚ್. ಬಸವರಾಜ್ ಹೇಳಿದರು.

   ತಾಲೂಕಿನ ಬಿದರಗಡ್ಡೆ ಗ್ರಾಮದಲ್ಲಿ ಶನಿವಾರ ಹೊನ್ನಾಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ಹಮ್ಮಿಕೊಂಡ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

  ಬಿದರಗಡ್ಡೆ ಗ್ರಾಮದಲ್ಲಿ ಸೆ.16ರಂದು ಭಾನುವಾರ ದಾಸೋಹ ನಿಧಿ ಸಮರ್ಪಣಾ ಸಮಾರಂಭ ನಡೆಯಲಿದ್ದು, ನಾಡಿನ ವಿವಿಧೆಡೆಗಳಿಂದ ಸಹಸ್ರಾರು ಜನರು ಆಗಮಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಪರಿಸರದಲ್ಲಿ ನೈರ್ಮಲ್ಯತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೇ ರೀತಿ ಎಲ್ಲರೂ ಸ್ವಚ್ಛ ಪರಿಸರಕ್ಕೆ ಮುಂದಾಗಬೇಕು ಎಂದು ತಿಳಿಸಿದರು.

   ಎನ್ನೆಸ್ಸೆಸ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ನಾಯಕತ್ವದ ಗುಣಗಳು ಬೆಳೆಯುತ್ತವೆ. ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಗ್ರಾಮೀಣ ಪರಿಸರದ ಪರಿಚಯವಾಗುತ್ತದೆ. ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶಗಳ ಅನಕ್ಷರಸ್ಥರಿಗೆ ಅಕ್ಷರ ಕಲಿಕೆಯಂಥ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

  ಹೊನ್ನಾಳಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಎನ್ನೆಸ್ಸೆಸ್ ಸ್ವಯಂ ಸೇವಕರು ಗ್ರಾಮದ ಒಳಗಿನ ಹಾಗೂ ಹೊರಭಾಗದ ಪ್ರತಿಯೊಂದು ಬೀದಿಗಳಲ್ಲೂ ಕಸ ಗುಡಿಸಿ, ರಸ್ತೆಗಳಿಗೆ ನೀರು ಹಾಕಿದರು. ಚರಂಡಿಗಳಲ್ಲಿನ ತ್ಯಾಜ್ಯವನ್ನು ಹೊರ ಸಾಗಿಸಿದರು.
ಅತಿಥಿ ಉಪನ್ಯಾಸಕಿಯರಾದ ಬಿ.ಎಂ. ನೇತ್ರಾವತಿ, ಎಚ್.ಎನ್. ನಿಖಿತಾ, ಬಿದರಗಡ್ಡೆ ಗ್ರಾಮದ ಮುಖಂಡರಾದ ಬಿ.ಎಚ್. ನಾಗೇಂದ್ರಪ್ಪ, ಬಿ.ಜಿ. ಚನ್ನೇಶ್, ಬಿ.ಎಂ. ಬಸವರಾಜಪ್ಪ ಇತರರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here