ಹೊನ್ನೇನಹಳ್ಳಿಯ ನಿರಾಶ್ರಿತ ದಲಿತ ಕುಟುಂಬಗಳಿಗೆ ಪೂರ್ವಜರ ಆಸ್ತಿಯ ನಿವೇಶನ ಹಕ್ಕುಪತ್ರಕ್ಕೆ ಸಿ.ಎಂ. ಸೂಚನೆ

0
19

ತುಮಕೂರು:

      ತುಮಕೂರು ಹೊರವಲಯದ ಹೊನ್ನೇನಹಳ್ಳಿಯ 63 ನಿರಾಶ್ರಿತ ದಲಿತ ಕುಟುಂಬಗಳಿಗೆ ಪೂರ್ವಜರ ಆಸ್ತಿಯ ನಿವೇಶನದ ಹಕ್ಕುಪತ್ರ ನೀಡುವಂತೆ ಕೋರಿ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎನ್.ಗೋವಿಂದರಾಜು ಸಲ್ಲಿಸಿದ್ದ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಬಗ್ಗೆ ಕೂಡಲೇ ಸೂಕ್ತಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ರವಾನಿಸಿದ್ದಾರೆ.

      ತುಮಕೂರು ಮಹಾನಗರ ಪಾಲಿಕೆ ವಾರ್ಡ್ ನಂ.1 ರ ಹೊರವಲಯದಲ್ಲಿ ಸುಮಾರು 63 ನಿರಾಶ್ರಿತ ದಲಿತ ಕುಟುಂಬಗಳು ಕಳೆದ 10 ವರ್ಷಗಳಿಂದ ಮೂಲಭೂತ ಸೌಲಭ್ಯ ಮತ್ತು ಹಕ್ಕುಗಳಿಲ್ಲದೆ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿವೆ. ಇಲ್ಲಿ ಗುಡಿಸಲು ಹಾಕಿಕೊಂಡಿರುವ ದಲಿತ ಕುಟುಂಬಗಳ ಪೂರ್ವಜರು ಹಿಂದಿನ ಕಾಲದಲ್ಲಿ ಪ್ಲೇಗ್ ರೋಗಕ್ಕೆ ಹೆದರಿ ಈ ಹೊನ್ನೇನಹಳ್ಳಿ ಗ್ರಾಮಕ್ಕೆ ವಸಲತ ಹೋಗಿ ಜೀವನ ಕಟ್ಟಿಕೊಂಡಿದ್ದರು. ಆದರೆ ಇಂದು ಕುಟುಂಬಗಳು ಬೆಳೆದಿರುವ ಕಾರಣದಿಂದ ನಿರಾಶ್ರಿತರಾಗಿರುವ ಆ ಬಡ ದಲಿತ ಕುಟುಂಬಗಳು ತಮ್ಮ ಮೂಲಸ್ಥಾನಕ್ಕೆ ಮರಳು ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ಆ ಜಾಗವೂ ಅವರ ಪೂರ್ವಜರಿಗೆ ಸೇರಿದ ಸ್ವತ್ತಾಗಿದ್ದು ಅದರ ಬಗ್ಗೆ ಪೂರಕ ದಾಖಲೆಗಳೂ ಅವರ ಬಳಿ ಇವೆ.

      ಹೀಗಿದ್ದರೂ ಕೂಡಾ ಸ್ಥಳೀಯ ಆಡಳಿತ ಮತ್ತು ಹಿಂದಿನ ಸರ್ಕಾರಗಳು ಅವರಿಗೆ ನಿವೇಶನದ ಹಕ್ಕುಪತ್ರ ಮೂಲಭೂತ ಸೌಲಭ್ಯ ಹಾಗೂ ಮೂಲಭೂತ ಹಕ್ಕುಗಳನ್ನು ಒದಗಿಸಿಲ್ಲ. ಕೆಲವು ಸ್ಥಳೀಯ ಕಾರ್ಪೋರೇಟರ್, ಶಾಸಕರು ಇಲ್ಲಿನ ಜನರಿಗೆ ನಿವೇಶನದ ಹಕ್ಕುಪತ್ರ, ಮೂಲಭೂತ ಸೌಲಭ್ಯ ಹಾಗೂ ಮೂಲಭೂತ ಹಕ್ಕುಗಳನ್ನು ನೀಡುತ್ತೇವೆ ಎನ್ನುವ ಸುಳ್ಳು ಭರವಸೆಗಳನ್ನು ನೀಡಿ ಇಲ್ಲಿನ ಬಡ ದಲಿತ ಜನಾಂಗದವರನ್ನು ತಮ್ಮ ಮತ ಬ್ಯಾಂಕ್‍ಗಳನ್ನಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಆದರೆ ಇದುವರೆವಿಗೂ ಯಕಶ್ಚಿತ ವಿದ್ಯುತ್, ನೀರು, ರಸ್ತೆ, ಚರಂಡಿಗಳಂತಹ ಮೂಲಭೂತ ಸೌಲಭ್ಯಗಳನ್ನೇ ಒದಗಿಸಿಲ್ಲ. ಇತ್ತೀಚೆಗೆ ಉಪ ಮುಖ್ಯಮಂತ್ರಿಗಳಾದ ಡಾ.ಜಿ.ಪರಮೇಶ್ವರ್ ಅವರು ಇಲ್ಲಿನ ಜನರಿಗೆ ನಿವೇಶನದ ಹಕ್ಕುಪತ್ರ ನೀಡುವ ಭರವಸೆ ನೀಡಿದ್ದರು ಎಂದು ಸ್ಥಳೀಯ ದಲಿತ ಕುಟುಂಬಗಳು ತಿಳಿಸಿವೆ. ಆದರೆ ಇದುವರೆಗೂ ಇಲ್ಲಿನ ಬಡ ದಲಿತ ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ, ಮೂಲಭೂತ ಸೌಲಭ್ಯ ಹಾಗೂ ಮೂಲಭೂತ ಹಕ್ಕುಗಳು ದೊರೆತಿಲ್ಲ.

      ಆದ್ದರಿಂದ ತುಮಕೂರು ಮಹಾನಗರ ಪಾಲಿಕೆಯ ವಾರ್ಡ್ ನಂ.1 ರ ಹೊನ್ನೇನಹಳ್ಳಿಯ 63 ನಿರಾಶ್ರಿತ ಕುಟುಂಬಗಳಿ ತಮ್ಮ ಪೂರ್ವಜರ ಆಸ್ತಿಯ ನಿವೇಶನದ ಹಕ್ಕುಪತ್ರ ನೀಡಿ ಮೂಲಭೂತ ಸೌಲಭ್ಯಗಳು ಮತ್ತು ಮೂಲಭೂತ ಹಕ್ಕುಗಳನ್ನು ಕಲ್ಪಿಸಲು ಎನ್.ಗೋವಿಂದರಾಜು ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here