ಹೊಸ ವರುಷ ಬರಲಿ, ಹೊಸ ಹರುಷ ತರಲಿ

0
36

      ಹೊಸ ವರುಷವೆಂದರೆ ಅದೇನೋ ಸಂಭ್ರಮ. ಅದೇನೋ ಸಡಗರ. ಹಳೆಯ ನೆನಪಿನ ಬುತ್ತಿಯನ್ನು ಮುಚ್ಚಿ, ಹೊಸ ಜೀವನದ ಪಯಣಕ್ಕೆ ಅದೇನೋ ಕಾತುರ, ಅದೇನೋ ಆತುರ.

Image result for new year

      ಹೊಸ ವರುಷ ಬಂದಿದೆ. ಹೊಸ ಹರುಷತಂದಿದೆ. ಹೊಸ ವರುಷವನ್ನ ಸ್ವಾಗತಿಸಲು ಹೊಸ್ತಿಲಲ್ಲಿ ನಿಂತಿರುವ ಈ ಶುಭ ಘಳಿಗೆಯಲ್ಲಿ ಕಳೆದು ಹೋದಂತಹ ವರುಷವನ್ನೊಮ್ಮೆ ಮೆಲುಕು ಹಾಕಿದರೆ ನಮ್ಮ ಜೀವನದಲ್ಲಿನ ಸಿಹಿ-ಕಹಿ ನೆನಪುಗಳ ತೆರೆದ ಪುಟಗಳು ಮನಸ್ಸಿನಲ್ಲಿ ಹಾದು ಹೋಗುತ್ತವೆ. ” ಅಬ್ಬಾ ! ಈ ವರುಷ ಇಷ್ಟು ಬೇಗನೆ ಮುಗಿದು ಹೋಯಿತಲ್ಲಾ ?! ” ಎಂದು ನಿಟ್ಟುಸಿರು ಬಿಡುವಾಗ ಸಂದ ವರುಷದಲ್ಲಿ ನಾನೇನು ಮಾಡಿದೆ? ಏನು ಗಳಿಸಿದೆ? ಏನು ಅನುಭವಿಸಿದೆ? … ಹೀಗೆ ಅನೇಕ ಪ್ರಶ್ನೆಗಳೊಂದಿಗೆ ನಮ್ಮ ಏಳುಬೀಳುಗಳ ನೆನಪುಗಳು ನಮ್ಮ ಮನಃಪಟಲದಲ್ಲಿ ಚಿತ್ತಾರವನ್ನ ಬಿಡಿಸುತ್ತವೆ.

      ಹೊಸ ವರುಷ ಎಂದರೆ ಹೀಗೇನೇ. ಬರುವಾಗ ಏನೋ ಖುಷಿ, ಏನೋ ಸಂಭ್ರಮ ಹೊತ್ತುತರುತ್ತದೆ. ಬರುವ ವರ್ಷಕ್ಕೆ ಮೊದಲೇಅದಕ್ಕಾಗಿ ಪೂರ್ವತಯಾರಿ… ಹೊಸ ವರ್ಷಕ್ಕಾಗಿ ಹೊಸ ಹೊಸ ಆಸೆಗಳು… ಜೀವ ತುಂಬಲಿಟ್ಟಂತಹ ಕನಸುಗಳು… ಇನ್ನೇನೋ… ಇನ್ನೇನೋ… ಇದನೆಲ್ಲವನ್ನ ಕಾರ್ಯರೂಪಕ್ಕೆ ತರಬೇಕೆಂದು ಛಲತೊಟ್ಟು ಹೊಸ ಚೈತನ್ಯದಿಂದ ಕಾಯುವ ಜನಮಾನಸ.

Related image

 

      ಪ್ರಸ್ತುತ ವರ್ಷದಲ್ಲಿ ಏನೇನೋ ಘಟನೆಗಳು ನಡೆದಿರಬಹುದು. ನಡೆದಿರುವಂತಹುಗಳು ಕಹಿ ಘಟನೆಗಳಾಗಿದ್ದರೆ ಅಂತಹಜಾಗದಲ್ಲಿ ಸಿಹಿ ತುಂಬುವಕಾತರ ; ಸಂತಸಭರಿತ ಸಮಯಗಳೇ ತುಂಬಿದ್ದರೆ ಅದೇ ಹಾಯಿದೋಣಿಯನ್ನ ಮುನ್ನಡೆಸಬೇಕೆಂಬ ಆತುರ. ಹೊಸತನ್ನತುಂಬುವ ಹಳೆಯದನ್ನ ಮರೆಯುವ ಒಟ್ಟಾರೆ ಚೈತನ್ಯತುಂಬಿದ ಹೊಸ ಆಶಾಕಿರಣಗಳಿಂದ ಸ್ವಾಗತಿಸುವ ಹಂಬಲ ಎಲ್ಲರದ್ದೂ.

       ಜನವರಿ 1 ಭಾರತೀಯ ಸಂಸ್ಕೃತಿ ಪ್ರಕಾರ ಹೊಸ ವರ್ಷ ಅಲ್ಲದಿದ್ದರೂ, ಇಡೀ ಜಗತ್ತೇ ಹೊಸ ವರುಷ ಎಂದು ಬರಮಾಡಿಕೊಳ್ಳುವುದು ಈ ದಿನವನ್ನೇ. ಡಿಸೆಂಬರ್ 31ರ ರಾತ್ರಿ “ಟಾ..ಟಾ” “ಬೈ..ಬೈ” ಹೇಳುವ ತವಕ. ಮಧ್ಯರಾತ್ರಿ “ವೆಲ್‍ಕಮ್” ಮಾಡುವ ಧಾವಂತ. ನಮ್ಮ ಹೊಸ ಹೊಸ ಉಪಾಯಗಳನ್ನ ಕಾರ್ಯರೂಪಕ್ಕೆ ತರುವ ಗಡಿಬಿಡಿ. ಒಟ್ಟಾಗಿ ಇದು ಬದಲಾವಣೆಯ ಹಂತ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಲ್ಲರೂ ಕುತೂಹಲದಿಂದ ತಾಳ್ಮೆಯಿಂದ ಕಾಯುವ ದಿನ.

ಚಿಕ್ಕ ಮಕ್ಕಳನ್ನ ಕೇಳಿ ….

” ಹೊಸ ವರುಷಕ್ಕೆ ಚೆನ್ನಾಗಿ ಓದಬೇಕು “
” ಪಿಕ್ ನಿಕ್ ಹೋಗಬೇಕು “
” ಹೊಸ ಡ್ರೆಸ್ ಹಾಕಬೇಕು “
ಇನ್ನೇನೋ… ಇನ್ನೇನೋ… ಕನಸುಗಳು. ಅದೇ ಮಧ್ಯವಯಸ್ಕರನ್ನ ಕೇಳಿದರೆ ಅವರಿಗೆ ಅವರದ್ದೇ ಕಲ್ಪನೆಯ ಕನಸುಗಳ ಬುತ್ತಿ…

Image result for new year

      ಪ್ರತಿ ಬಾರಿ ಹೊಸ ವರ್ಷ ಬಂದಾಗಲೂ ಈ ವರ್ಷವಾದರೂ ತಾವು ಜೀವನದಲ್ಲಿ ಪ್ರಗತಿ ಹೊಂದಬೇಕು ಎನ್ನುವ ಆಕಾಂಕ್ಷೆ ಎಲ್ಲರಲ್ಲೂ ಇರುವುದು ಸಹಜ. ಆದರೆ ಜೀವನದಲ್ಲಿ ಏಳಿಗೆ ಸಾಧಿಸಬೇಕಾದರೆ ಏನಾದರೂ ಗುರಿ ಇಟ್ಟಕೊಂಡಿರಬೇಕಲ್ಲವೇ ? ಆ ಗುರಿಯತ್ತ ಏಕಮುಖವಾಗಿ, ಏಕಾಗ್ರಚಿತ್ತರಾಗಿ ತನು-ಮನವನ್ನ ಅರ್ಪಿಸಿ ಹೆಜ್ಜೆ ಇಟ್ಟಾಗಲೇ ಈಡೇರಬಹುದು.

      ಹೊಸ ವರುಷಕ್ಕೆ ಕೆಲವರು ಜೀವನದಲ್ಲಿ ಪ್ರಗತಿ ಪಥದಲ್ಲಿ ಸಾಗಿದ್ದರೆ, ಇನ್ನು ಕೆಲವರು ಜೀವನ ರಾತ್ರಿಯಲ್ಲಿ ಸೋಲನ್ನು ಅನುಭವಿಸಲು ಕಾರಣವೇನು ? ಎಂದು ತಿಳಿಯ ಹೊರಡುತ್ತಾರೆ. ಹಾಗೆ ಹೊರಟಾಗ ಯಾವುದೇ ಗೊತ್ತು ಗುರಿ ಇಲ್ಲದೇ, ಲಂಗುಲಗಾಮಿಲ್ಲದೇ ಜೀವನ ಸಾಗಿಸುತ್ತಿರುವ ಕಾರಣ ಎದುರಾಗುತ್ತದೆ.

        ” ಛೇ ! ಹಾಗೆ ಮಾಡಿದ್ದರೆ ಚೆನ್ನಾಗಿತ್ತು. ಹೀಗೆ ಮಾಡಿದರೆ ಚೆನ್ನಾಗಿತ್ತು ” ಎಂದು ಪಶ್ಚಾತ್ತಾಪದ ಬೆಂಕಿಯಲ್ಲಿ ಬೆಂದು, ಭೂತಕಾಲದ ಸಿಹಿಕಹಿ ಘಟನೆಗಳನ್ನು ನೆನಪಿಸಿಕೊಳ್ಳುತ್ತಾ, ಚಿಂತೆಯ ಚಿತೆಯಲ್ಲಿ ಬೇಯುತ್ತಾ, ಭವಿಷ್ಯವನ್ನೇ ಹಾಳು ಮಾಡಿಕೊಳ್ಳುವ ಜನರು ನಮ್ಮ ನಡುವೆ ಇರುತ್ತಾರೆ. ನಿನ್ನೆ ಮೊನ್ನೆಗಳ ಕಹಿಗಳನ್ನು ಮರೆತು ನಾಳೆಗಳ ಸಿಹಿಯನ್ನ ಕಲ್ಪಿಸಿಕೊಳ್ಳುವ ಮನಃ ಸ್ಥಿತಿಯನ್ನು ಬೆಳೆಸಿಕೊಂಡರೆ ಭವಿಷ್ಯ ಹಸನಾಗುವುದರಲ್ಲಿ ಸಂಶಯವಿಲ್ಲ. ನಕಾರಾತ್ಮಕ ಚಿಂತನೆಗಳನ್ನ ಬಿತ್ತುವ ನಿರಾಶಾವಾದಿ ಜನರ ಮಾತುಗಳಿಗೆ ಕಿವಿಗೊಡದೇ ಸಕಾರಾತ್ಮಕಚಿಂತನೆ ಬೆಳೆಸಿಕೊಂಡು, ಹೊಸ ವರ್ಷದಲ್ಲಿ ಏನಾದರೂ ಸಾಧನೆ ಮಾಡುತ್ತೇನೆಂಬ ಆತ್ಮವಿಶ್ವಾಸದೊಂದಿಗೆ ಆಶಾವಾದಿಯಾಗಿ ಮುಂದೆ ಹೆಜ್ಜೆ ಇಟ್ಟರೆ ಬೆಳಕಿನ ಆಶಾಕಿರಣ ಮೂಡಬಹುದು.

Related image

      ಕನಸುಗಳನ್ನ ಕಾಣಬೇಕು. ಕನಸು ಕಂಡರೆ ಮಾತ್ರ ಅದನ್ನ ಸಾಕಾರಗೊಳಿಸಬಹುದು. ಆಸೆಗಳನ್ನು ಇಟ್ಟುಕೊಳ್ಳಲೇಬೇಕು. ಆದರೆ ಅತಿ ಆಸೆ ಇರಬಾರದು. ಯಾರು ಕನಸುಗಳನ್ನು ಹೊಂದಿರುತ್ತಾರೋ, ಆಸೆಗಳನ್ನ ಇಟ್ಟುಕೊಂಡಿರುತ್ತಾರೋ, ದೃಢ ನಿರ್ಧಾರಗಳನ್ನ ಬೆಳೆಸಿಕೊಂಡಿರುತ್ತಾರೋ ಅವರು ಮಾತ್ರಜೀವನದಲ್ಲಿ ಮುನ್ನಡೆಯಲು ಸಾಧ್ಯ. ಹೊತ್ತಿರುವ ಕನಸುಗಳನ್ನೆಲ್ಲ ಸಂಪೂರ್ಣಗೊಳಿಸಬೇಕೆಂದಿಲ್ಲ. ಎಲ್ಲವನ್ನ ಸಂಪೂರ್ಣಗೊಳಿಸಬೇಕೆಂಬ ಭಾರವನ್ನ ಹೊರಬಾರದು ಕೂಡ. ಆದರೆ ಯಶಸ್ವಿಗೊಳಿಸಬೇಕು ಎಂಬ ಇಚ್ಛೆ ಬೇಕು. ಒಂದು ವೇಳೆ ಸೋಲು ಬಂದಲ್ಲಿ ಅದನ್ನು ಎದುರಿಸುವ ಧೈರ್ಯ ಕೂಡ ಬೇಕು. ಯಾಕೆಂದರೆ ಸೋಲೇ ಗೆಲುವಿನ ಸೋಪಾನ. ಆ ಸೋಲನ್ನ ಮುಂದಿನ ವರ್ಷಕ್ಕಾಗಿ ಕಾದಿಡಬಹುದು.

Related image

      ಇನ್ನು ಕೆಲವರು ಹೊಸ ವರ್ಷಕ್ಕೆ ಗುರಿಗಳನ್ನ ಇಟ್ಟುಕೊಂಡು ಕಾರ್ಯೋನ್ಮುಖರಾಗಿ ಆರಂಭಶೂರರಾಗಿ ಕೆಲಕಾಲದ ಬಳಿಕ ಗುರಿಗಳನ್ನೇ ಮರೆತು, ಮತ್ತೊಂದು ವರ್ಷ ಕಾಲಿರಿಸಿದಾಗ ತಮ್ಮ ಸಾಧನೆಯಕಡೆ ಹಿನ್ನೋಟ ಹರಿಸಿ ಸಾಧನೆ ಶೂನ್ಯವೆಂದುಕಂಡು ಬಂದಾಗ ನಿರಾಶಾವಾದಿಯಾಗಿ ಬಿಡುತ್ತಾರೆ. ಹಾಗೆ ನಿರಾಶಾವಾದಿಯಾಗುವ ಬದಲು, ಗುರಿಯತ್ತ ತನ್ಮಯತೆಯಿಂದ-ದೃಢಚಿತ್ತದಿಂದ ಹೆಜ್ಜೆ ಇರಿಸಿದರೆ ಅವುಗಳ ಅನುಷ್ಠಾನಕ್ಕೆ ಅವಿರತ ಶ್ರಮವಹಿಸಿದರೆ ಮುಳ್ಳಿನ ಹಾದಿ ಕಳೆದು ಸಾಧನೆಯ ಶೃಂಗ ಮುಟ್ಟುವುದರಲ್ಲಿ ಸಂಶಯವಿಲ್ಲ. ನಿನ್ನೆಗಳನ್ನು ಮರೆತು-ನಾಳೆಗಳನ್ನ ನೆನೆನೆನೆದು-ಕಲ್ಪನೆಯ ಕನಸುಗಳನ್ನು ಹೊಸೆದು-ಅವುಗಳ ಸಾಕಾರದತ್ತ ಸಾಗಿದರೆ, ಜೀವನ ಆಗುವುದು ಸಾರ್ಥಕ.

LEAVE A REPLY

Please enter your comment!
Please enter your name here