ಅಲ್ಲಿ ಜಲಾಶಯ ತುಂಬಿ ವ್ಯರ್ಥವಾಗಿ ಹರಿದು ಹೋಯ್ತು ನೀರು : ಇಲ್ಲಿನ ಕೆರೆಗಳು ಮಾತ್ರ ಖಾಲಿ..ಖಾಲಿ

 ಇಲ್ಲಿನ ಕೆರೆಗಳು ಮಾತ್ರ ಖಾಲಿ..ಖಾಲಿ

ತುಮಕೂರು:

      ಅಲ್ಲಿ ಜಲಾಶಯಗಳಲ್ಲಿ ನೀರು ಪೋಲಾಗುತ್ತಿದ್ದರೂ ಇಲ್ಲಿನ ನಾಲೆಗಳಿಗೆ ನಿಗದಿತ ಪ್ರಮಾಣದ ನೀರು ಹರಿಸಲಾಗಲಿಲ್ಲ. ತುಮಕೂರು ಹೇಮಾವತಿ ನಾಲಾ ವಲಯಕ್ಕೆ ನೀರು ಹರಿಯಲು ಆರಂಭಿಸಿ ಎರಡೂವರೆ ತಿಂಗಳಾದರೂ ಕೆರೆಗಳನ್ನು ತುಂಬಿಸಲಾಗಿಲ್ಲ. ಅಲ್ಲಿ ಜಲಾಶಯದಲ್ಲಿ ಯಥೇಚ್ಛವಾಗಿ ನೀರಿದೆ. ಇಲ್ಲಿ ನೀರಿಲ್ಲದೆ ಜನ ಪರಿತಪಿಸುತ್ತಿದ್ದಾರೆ.

      ಈ ಬಾರಿಯೂ ಜಿಲ್ಲೆಯನ್ನು ಬರ ಆವರಿಸಿಕೊಂಡಿದೆ. ಹೇಮಾವತಿ ನೀರು ಬರದ ಬೇಗೆಯನ್ನು ತಣಿಸಬಹುದೆಂಬ ಆಶಾಭಾವನೆ ಇತ್ತು. ಆದರೆ ಅಂತಹ ಸ್ಥಿತಿಯೇ ಕಾಣುತ್ತಿಲ್ಲ. ಹೇಮಾವತಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ಇಲ್ಲಿನ ರಾಜಕಾರಣ ಸತ್ತು ಹೋಗಿದೆ. ಅಧಿಕಾರಿಗಳು ನಿಷ್ಕ್ರಿಯರಾಗಿದ್ದಾರೆ. ಯಾರೂ ತುಟಕ್ ಪಿಟಿಕ್ ಎನ್ನುತ್ತಿಲ್ಲ.

      ಗೊರೂರು ಜಲಾಶಯ, ಕೆ.ಆರ್.ಎಸ್. ಸೇರಿದಂತೆ ಹಲವು ಜಲಾಶಯಗಳು ಭರ್ತಿಯಾದ ಹಿನ್ನೆಲೆಯಲ್ಲಿ ಸಾಕಷ್ಟು ನೀರು ತಮಿಳುನಾಡಿನತ್ತ ಹರಿದು ಹೋಯಿತು. ಹೋಗುತ್ತಲೇ ಇದೆ. ಆದರೆ ಈವರೆವಿಗೂ ಈ ನೀರನ್ನು ಸದ್ಭಳಕೆ ಮಾಡಿಕೊಳ್ಳುವ ಚಿಂತನೆಗಳು ಯಾರಲ್ಲೂ ಹೊಳೆಯಲೇ ಇಲ್ಲವೇ? ಅತ್ತ ಭರ್ಜರಿಯಾಗಿ ನೀರು ಹರಿಯುತ್ತಿದ್ದರೆ, ಇಲ್ಲಿ ನೀರಿಗಾಗಿ ಜನ ಪರದಾಡುತ್ತಿದ್ದಾರೆ. ಜಲಾಶಯ ತುಂಬಿ ವ್ಯರ್ಥವಾಗುವ ನೀರನ್ನು ನಾಲೆಗಳಿಗೆ ಹರಿಸಿಕೊಳ್ಳಬಹುದಿತ್ತಲ್ಲವೇ. ಜಲಾಶಯಗಳಲ್ಲಿ ನೀರು ಭರ್ತಿಯಾದಾಗ ಆ ನೀರನ್ನು ಹೇಗೆ ಬಳಸಿಕೊಳ್ಳಬೇಕೆಂಬ ಒಂದು ಮಾನದಂಡವನ್ನು ರೂಪಿಸಲ್ಲವಾದರೂ ಏಕೆ? ಈ ವಿಷಯದಲ್ಲಿ ಆಗಿರುವ ತಾತ್ಸಾರದ ನಿಲುವನ್ನು ಯಾರೂ ಗಮನಿಸುತ್ತಿಲ್ಲ. ಜಲಾಶಯಗಳ ಆ ಭಾಗದಲ್ಲಿ ಒಂದು ತಿಂಗಳ ಕಾಲ ನೀರು ಹರಿದು ಹೋಯಿತು. ಆಗಸ್ಟ್ ತಿಂಗಳ ವೇಳೆಗೆ ತುಮಕೂರು ಜಿಲ್ಲೆಯ ಅಷ್ಟೂ ಕೆರೆಗಳನ್ನು ಇದೇ ನೀರಿನಿಂದ ಭರ್ತಿ ಮಾಡಿಕೊಳ್ಳಬಹುದಿತ್ತು. ಈ ನೀರಿಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಿತ್ತೇ? ಅಲ್ಲಿ ನೀರು ಪೋಲಾಗಿ ಹೋಗುವಾಗ ಇವರೆಲ್ಲ ಏನು ಮಾಡುತ್ತಿದ್ದರು. ನೀರಿಗಾಗಿ ಈ ಹಿಂದೆ ಬೊಬ್ಬೆ ಹಾಕುತ್ತಿದ್ದ ರಾಜಕಾರಣಿಗಳು ಎಲ್ಲಿ ಮಾಯವಾದರು? ರಾಜಕಾರಣಿಗಳ ಅಬ್ಬರ ಕಡಿಮೆಯಾಯಿತೆಂದು ಅಧಿಕಾರಿಗಳು ರಗ್ಗು ಹೊದ್ದು ಮಲಗಿ ಬಿಟ್ಟರೆ?

      ಸಾಮಾನ್ಯ ಜಲವರ್ಷದಲ್ಲಿ ತಮಿಳುನಾಡಿಗೆ ಕಾವೇರಿಯಿಂದ 192 ಟಿಎಂಸಿ ಅಡಿ ಹರಿಸಬೇಕೆಂದು ನಿಗದಿಯಾಗಿತ್ತು. ಸುಪ್ರೀಂ ಕೋರ್ಟ್ ತೀರ್ಪಿನಂತೆ ಈ ಪ್ರಮಾಣ 177.25 ಟಿಎಂಸಿ ಅಡಿಗೆ ಇಳಿಯಿತು. ಪ್ರಸಕ್ತ ವರ್ಷದ ದಾಖಲೆಗಳನ್ನು ಗಮನಿಸಿದರೆ ತಮಿಳುನಾಡಿನ ಮೆಟ್ಟೂರಿಗೆ ನಿಗದಿಗಿಂತ ಮೂರ್ನಾಲ್ಕು ಪಟ್ಟು ಹೆಚ್ಚಿನ ನೀರು ಹರಿದು ಹೋಗಿದೆ. ಜೂನ್ ತಿಂಗಳಲ್ಲಿ ಹರಿಯಬೇಕಿದ್ದ ನೀರಿನ ಪ್ರಮಾಣ 9.19 ಟಿಎಂಸಿಗಳಾದರೆ ಹರಿದಿರುವ ನೀರಿನ ಪ್ರಮಾಣ 13.3. ಜುಲೈ ತಿಂಗಳಿನಲ್ಲಿ 31.24 ಟಿಎಂಸಿ ನೀರನ್ನು ಹರಿಸಬೇಕಿದ್ದು, ವಾಸ್ತವವಾಗಿ ಹರಿದಿರುವುದು 124.7 ಟಿಎಂಸಿ. ಆಗಸ್ಟ್ ತಿಂಗಳಿನಲ್ಲಿ 45.95 ಟಿಎಂಸಿ ನೀರು ಹರಿಯಬೇಕಿದ್ದು, ಈಗಾಗಲೇ 49.3 ಟಿಎಂಸಿ ಅಡಿಗಳಷ್ಟು ನೀರನ್ನು ಹರಿಯಬಿಡಲಾಗಿದೆ. ಈ ದಾಖಲೆಗಳು ಆಗಸ್ಟ್ 15ಕ್ಕೆ ಸಂಬಂಧಿಸಿದ್ದು. ನಂತರದ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದಿರುವ ಸಾಧ್ಯತೆಗಳಿವೆ.

ನಿರ್ಲಕ್ಷ್ಯವೇಕೆ…? 

      2018 ರ ಚುನಾವಣೆಯನ್ನೇ ನೋಡುತ್ತಿದ್ದ ರಾಜಕಾರಣಿಗಳು 2017ರ ಸಮಯದಲ್ಲಿ ನೀರಿಗಾಗಿ ಬಹುದೊಡ್ಡ ಕ್ರಾಂತಿಯನ್ನೇ ಎಬ್ಬಿಸಿಬಿಟ್ಟರು. ಇಡೀ ಜಿಲ್ಲೆಗೆ ಹೇಮಾವತಿ ಹರಿಯಲಿ ಎಂಬ ಧೋರಣೆಗೆ ಬದಲಾಗಿ ನನ್ನ ತಾಲ್ಲೂಕಿಗೆ ಎಷ್ಟು ಬೇಕು ಎಂಬ ಕಿತ್ತಾಟಗಳಲ್ಲಿಯೇ ಮುಳುಗಿ ಹೋದರು. ರೈತರ ಜೊತೆ ತಾವೂ ಸೇರಿಕೊಂಡರು. ಆಗ ಅಕ್ಷರಶಃ ಭೀಕರ ಬರಗಾಲವಾಗಿತ್ತು. ಹೇಮಾವತಿ ಜಲಾಶಯದಲ್ಲಿಯೂ ನೀರು ಇಂಗಿಹೋಗಿತ್ತು. ಡೆಡ್ ಸ್ಟೋರೇಜ್ ಬಳಕೆಯಾಗುವವರೆಗೂ ಹೋರಾಟಗಳು ತೀವ್ರಗೊಂಡವು. ನೀರಿಲ್ಲದ ಆ ಸಂದರ್ಭದಲ್ಲಿ ನೀರಿಗಾಗಿ ನಡೆಸಿದ ಹೋರಾಟದ ರಾಜಕಾರಣ ಈಗ ಸತ್ತು ಹೋಯಿತೇ? ಹೇಗೂ ಚುನಾವಣೆಗಳು ಮುಗಿದು ಹೋದವು ಎಂದು ತಮ್ಮಷ್ಟಕ್ಕೆ ತಾವು ಇದ್ದುಬಿಟ್ಟಿದ್ದಾರೆಯೇ? ಯಾರೊಬ್ಬರೂ ಹೇಮಾವತಿ ನೀರಿನ ಸ್ಥಿತಿಗತಿಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಈ ಬಗ್ಗೆ ಮಾತನಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಎದುರಾಗುವ ನೀರಿನ ಸಂಕಷ್ಟವನ್ನು ನಿಭಾಯಿಸುವುದಾದರೂ ಹೇಗೆ ಎಂಬ ಕಿಂಚಿತ್ತು ಕಾಳಜಿಯಾದರೂ ನಮ್ಮ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಇರಬೇಡವೇ? ಹೇಮಾವತಿ ನೀರನ್ನು ನಿಗದಿತ ಪ್ರಮಾಣದಲ್ಲಿ ಹರಿಸಲು ಯೋಜನೆ ಇದೆ. ಇದಕ್ಕೊಂದು ಸಮಿತಿಯೂ ಇದೆ. ನಿಯಮಾನುಸಾರವೇ ನೀರು ಹರಿಸಬೇಕು. ಇದರಲ್ಲಿ ಎರಡು ಮಾತಿಲ್ಲ. ಈ ವರ್ಷ ಜಲಾಶಯಗಳಲ್ಲಿ ಯಥೇಚ್ಛ ನೀರು ಸಂಗ್ರಹವಾಗಿದ್ದರಿಂದ ಏನು ಮಾಡಬಹುದೆಂಬ ಚಿಂತನೆಗಳು ರಾಜಕಾರಣ ವಲಯದಲ್ಲಿ ಹೊಳೆಯಬೇಕಾಗಿತ್ತು. ಸಮಿತಿ ಸಭೆ ಸೇರುವಂತೆ ಮಾಡಬೇಕಾಗಿತ್ತು. ಪೋಲಾಗಿ ಹೋಗುವ ನೀರನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಬಗ್ಗೆ ಚಿಂತನೆಗಳು ನಡೆಯಬೇಕಿತ್ತು. ಆದರೆ ಯಾರೊಬ್ಬರೂ ಈ ಬಗ್ಗೆ ಚಕಾರ ಎತ್ತಲಿಲ್ಲ.

      ಹೇಮಾವತಿ ಜಲಾಶಯದ ಗರಿಷ್ಠ ಸಾಮಥ್ರ್ಯ 37 ಟಿಎಂಸಿ. ಗರಿಷ್ಠ ನೀರಿನ ಮಟ್ಟ 2,922 ಅಡಿ. ಪ್ರಸ್ತುತ 2,920 ಅಡಿಗಳಷ್ಟು ನೀರು ಸಂಗ್ರಹ ಇದೆ. ಜೂನ್ ತಿಂಗಳಿನಿಂದಲೇ ಆರಂಭವಾದ ಮಳೆಯ ಪರಿಣಾಮ ಜಲಾಶಯದಲ್ಲಿ ನೀರು ಹೆಚ್ಚಳವಾಯಿತೇ ವಿನಃ ಯಾವ ಹಂತದಲ್ಲಿಯೂ ನೀರು ಕಡಿಮೆಯಾಗಲೇ ಇಲ್ಲ. ಮಳೆಯ ಪ್ರಮಾಣ ಹೆಚ್ಚುತ್ತಿದ್ದಂತೆ ಹಾಗೂ ತುಮಕೂರು ಭಾಗದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸಿದ್ದನ್ನು ಮನಗಂಡು ಜುಲೈ 1 ರಿಂದಲೇ ಹೇಮಾವತಿ ಜಲಾಶಯದಿಂದ ತುಮಕೂರು ನಾಲಾ ವಲಯದಲ್ಲಿ ನೀರು ಹರಿಯಬಿಡಲಾಯಿತು.

      ಜುಲೈ ತಿಂಗಳ ಆರಂಭದಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗುತ್ತಿದ್ದ ಪರಿಣಾಮ ರೈತಾಪಿ ವರ್ಗ ನೀರಿನ ಬಳಕೆಯತ್ತ ಹೆಚ್ಚು ಆಕರ್ಷಿತರಾಗಲಿಲ್ಲ. ಹೀಗಾಗಿ ಯೋಜನೆಯ ಪ್ರಕಾರ ನಿಗದಿತ ಕೆರೆಗಳಿಗೆ ನೀರು ಹರಿಸುವ ಪ್ರಕ್ರಿಯೆಗಳು ಚಾಲನೆಗೊಂಡವು. ತುಮಕೂರಿಗೆ ಕುಡಿಯುವ ನೀರು ಒದಗಿಸುವ ಬುಗುಡನಹಳ್ಳಿ ಕೆರೆಗೂ ಉತ್ತಮ ಪ್ರಮಾಣದಲ್ಲಿ ನೀರು ಹರಿಯತೊಡಗಿತು. ಅಷ್ಟೇ ಪ್ರಮಾಣದಲ್ಲಿ (ತುಮಕೂರು ನಾಲಾ ವಲಯದಲ್ಲಿ 1300 ಕ್ಯುಸೆಕ್ಸ್ ಹಾಗೂ ನಾಗಮಂಗಲ ನಾಲಾ ವಲಯದಲ್ಲಿ 600 ಕ್ಯುಸೆಕ್ಸ್ ಪ್ರಮಾಣದಲ್ಲಿ ಆಗ ನೀರು ಹರಿಯುತ್ತಿತ್ತು.) ನೀರು ಹರಿದಿದ್ದರೆ ಕೇವಲ 20 ದಿನಗಳಲ್ಲಿ ಬುಗುಡನಹಳ್ಳಿ ಕೆರೆ ಭರ್ತಿಯಾಗುತ್ತಿತ್ತು. ಇದೇ ಕನಸಿನೊಂದಿಗೆ ಇಲ್ಲಿನ ಜನಪ್ರತಿನಿಧಿಗಳು ಗಂಗಾಪೂಜೆ ನೆರವೇರಿಸಿ ಸಂಭ್ರಮಿಸಿದ್ದರು.

      ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹೇಳಿಕೊಂಡಂತೆ 20 ದಿನಗಳು ತುಂಬಿ ಹೋದರೂ ಬುಗುಡನಹಳ್ಳಿ ಕೆರೆಗೆ ಅರ್ಧದಷ್ಟೂ ನೀರು ತುಂಬಲಿಲ್ಲ. ಒಂದು ವಾರದ ನಂತರ ನೀರಿನ ಹರಿಯುವಿಕೆಯ ಪ್ರಮಾಣ ಕ್ರಮೇಣ ಕಡಿಮೆಯಾಯಿತು. ಇದೀಗ ಬುಗುಡನಹಳ್ಳಿಗೆ ಸ್ವಲ್ಪ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಇನ್ನೊಂದು ವಾರದಲ್ಲಿ ಭರ್ತಿಯಾಗಬಹುದೆಂಬ ಆಶಾಭಾವನೆ ಕೆಲವರಲ್ಲಿದೆ. ಇದೇ ಕಾರಣಕ್ಕಾಗಿ ಹೆಬ್ಬಾಕ ಕೆರೆಗೆ ನೀರು ಹರಿಸಲಾಗುತ್ತಿದೆ. ಬುಗುಡನಹಳ್ಳಿ ಕೆರೆ ಭರ್ತಿಯಾಗಲು (ಅದೂ ಕುಡಿಯುವ ನೀರಿನ ಉಪಯೋಗಕ್ಕಾಗಿ) ಎರಡೂವರೆ ತಿಂಗಳು ಮುಗಿಯಬೇಕಿತ್ತೆ ಎಂಬುದು ಹಲವರ ಪ್ರಶ್ನೆ. ಒಂದು ವೇಳೆ ಆಗಲೇ ನೀರನ್ನು ಹರಿಸಿ ಕೆರೆ ಭರ್ತಿಯಾಗಿದ್ದರೆ ಇತರೆ ಕೆರೆಗಳಿಗೂ ಹರಿಸಬಹುದಿತ್ತಲ್ಲ ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ.

      ನಾಗಮಂಗಲ ನಾಲಾ ವಲಯ, ತುಮಕೂರು ನಾಲಾ ವಲಯ, ಏತ ನೀರಾವರಿ ಯೋಜನೆ ಅಡಿಯಲ್ಲಿ ಒಟ್ಟು 251 ಕೆರೆಗಳಿವೆ. ಪ್ರಸ್ತುತ ತುಮಕೂರು ನಾಲಾ ವಲಯದಲ್ಲಿ ಕುಡಿಯುವ ನೀರಿನ ಯೋಜನೆಗಾಗಿಯೇ 63 ಕೆರೆಗಳಿವೆ. ಈ ಎಲ್ಲ ಕೆರೆಗಳನ್ನು ತುಂಬಿಸಬೇಕು. ಪ್ರಸ್ತುತ ಈ ಕೆರೆಗಳಲ್ಲಿ ಅರ್ಧ ಭಾಗದಷ್ಟಿರಲಿ ಕಾಲು ಭಾಗದ ಕೆರೆಗಳನ್ನಾದರೂ ತುಂಬಿಸಲು ಸಾಧ್ಯವಾಗಿಲ್ಲ. ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೇಮಾವತಿ ನೀರನ್ನು ಈಗ ಹರಿಸಲಾಗುತ್ತಿದೆ. ಇದಕ್ಕಾಗಿಯೇ ಕೆಲವು ಕೆರೆಗಳನ್ನು ನಿಗದಿಪಡಿಸಲಾಗಿದೆ. ಅಷ್ಟಾದರೂ ಕೆರೆಗಳು ತುಂಬಿದರೆ ಸಾಕಾಗುತ್ತಿತ್ತು. ಪ್ರಸ್ತುತ ಜಿಲ್ಲೆಯಲ್ಲಿ ತುರುವೇಕೆರೆ ತಾಲ್ಲೂಕಿನ ಮಲ್ಲಾಘಟ್ಟ ಕೆರೆ ಸೇರಿದಂತೆ ಕೆಲವೇ ಒಂದೆರಡು ಕೆರೆಗಳನ್ನು ಹೊರತುಪಡಿಸಿದರೆ ಬೇರೆ ಯಾವ ಕೆರೆಗಳೂ ತುಂಬಿ ಕೋಡಿ ಹರಿದಿರುವ ಉದಾಹರಣೆಗಳಿಲ್ಲ. ಕನಿಷ್ಠ ಭರ್ತಿಯಾಗುವ ಲಕ್ಷಣಗಳೂ ಇಲ್ಲ. ಈ ವೇಳೆಗಾಗಲೇ ಕೆರೆಗಳು ತುಂಬಬೇಕಾಗಿತ್ತು. ಈ ನಿರ್ಲಕ್ಷ್ಯವಾದರೂ ಏಕೆ ಎಂಬುದು ಅರ್ಥವಾಗುತ್ತಿಲ್ಲ. ಒಂದು ವೇಳೆ ಹೇಮಾವತಿ ನಾಲೆಯಲ್ಲಿ ನೀರು ಹರಿಸಿದಾಗಿನಿಂದಲೂ ಸಮರ್ಪಕವಾಗಿ ನೀರನ್ನು ಕೆರೆಗೆ ಹಾಯಿಸಿದ್ದರೆ, ಆ ಕೆರೆಗಳೆಲ್ಲಾ ತುಂಬುವಂತಾಗಿದ್ದರೆ ಅಂತರ್ಜಲದ ಪ್ರಮಾಣ ವೃದ್ಧಿಯಾಗುತ್ತಿತ್ತು. ಈಗ ಎದುರಾಗಿರುವ ಅಂತರ್ಜಲ ಸಮಸ್ಯೆಯನ್ನು ನೀಗಿಸಬಹುದಿತ್ತುಈ ವರ್ಷವೂ ಮತ್ತೆ ಬರಗಾಲ ಎದುರಾಗಿರುವುದರಿಂದ ರೈತರು ನೀರಿನ ಮೂಲಗಳತ್ತ ಹಾತೊರೆಯುತ್ತಿದ್ದಾರೆ. ಬೋರ್‍ವೆಲ್ ಗಳು ಭರ್ತಿಯಾಗುತ್ತಿವೆ. ಹೇಮಾವತಿ ನೀರನ್ನು ಎರಡು ತಿಂಗಳಿನಿಂದಲೂ ಕೆರೆಗಳಿಗೆ ಹರಿಸುವಂತಾಗಿದ್ದರೆ ಜಲವರ್ಗ ವೃದ್ಧಿಸುತ್ತಿತ್ತು. ಬೋರ್‍ವೆಲ್‍ಗಳು ಸಕ್ರಿಯವಾಗಿರುತ್ತಿದ್ದವು.

      ಹಿಂದಿನ ವರ್ಷಗಳನ್ನು ಗಮನಿಸಿದರೆ ನಾವು ಕಂಡಂತೆ ಯಾವ ವರ್ಷವೂ ಈ ಜಿಲ್ಲೆಗೆ (ನಾಲಾ ವಲಯಕ್ಕೆ) ಹರಿಯಬೇಕಾಗಿರುವ ಒಟ್ಟು 24 ಟಿಎಂಸಿ ನೀರನ್ನು ಬಳಕೆ ಮಾಡಿಕೊಂಡಿರುವ ಉದಾಹರಣೆಗಳಿಲ್ಲ. ಹೇಮಾವತಿ ಜಲಾಶಯದಿಂದ ತುಮಕೂರು ಜಿಲ್ಲೆಗೆ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಮೂಲಕ ನೀರನ್ನು ಹರಿಸಿಕೊಳ್ಳಲಾಗುತ್ತಿದೆ. ಪ್ರತಿವರ್ಷವೂ ನೀರು ಹರಿದಾಗ ಕೆಲವೇ ದಿನಗಳಲ್ಲಿ ಏನಾದರೊಂದು ಎಡವಟ್ಟಾಗಿ ಕೆಲ ದಿನಗಳು ನೀರನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿತ್ತು. ಪದೇ ಪದೇ ನಾಲೆ ಒಡೆದು ಹೋಗುವುದು, ಬಿರುಕು ಕಾಣಿಸಿಕೊಳ್ಳುವುದು ಸಾಮಾನ್ಯ ಸಂಗತಿಯಾಗಿದ್ದವು.

      2014 ರಲ್ಲಿ ಹೇಮಾವತಿ ಎಡದಂಡೆ ನಾಲೆಯ 62ನೇ ಕಿ.ಮೀ.ನಲ್ಲಿ ನಾಗಸಮುದ್ರದ ಬಳಿ ಬಿರುಕು ಕಾಣಿಸಿಕೊಂಡು ನೀರು ಸ್ಥಗಿತಗೊಳಿಸಲಾಗಿತ್ತು. 2013 ರಲ್ಲಿ 71.14ನೇ ಕಿ.ಮೀ.ನಲ್ಲಿ ನಾಲೆ ಬಿರುಕುಗೊಂಡು 28 ದಿನಗಳ ಕಾಲ ನೀರು ಸ್ಥಗಿತವಾಗಿತ್ತು. 2012ನೇ ಸಾಲಿನಲ್ಲಿ 47ನೇ ಕಿ.ಮೀನಲ್ಲಿ ನಾಲೆಗೆ ಹಾನಿಯಾಗಿ 13 ದಿನಗಳು ನೀರು ಸ್ಥಗಿತವಾಗಿತ್ತು. ಹೀಗೆ ಹಿಂದಿನ ವರ್ಷಗಳನ್ನು ಗಮನಿಸಿದಾಗ ತುಮಕೂರು ನಾಲಾ ವಲಯಕ್ಕೆ ನಿಗದಿತ ಪ್ರಮಾಣದ ನೀರು ಹರಿದಿರುವುದೇ ಕಡಿಮೆ. ಈ ವರ್ಷ ಪರಿಸ್ಥಿತಿ ಹಾಗಿಲ್ಲ. ಹೇಮಾವತಿ ನಾಲೆಯನ್ನು ದುರಸ್ತಿಗೊಳಿಸಿ ಆಧುನೀಕರಣಗೊಳಿಸಲಾಗಿದೆ. ಹೀಗಿದ್ದೂ ಇಲ್ಲಿಗೆ ಬರಬೇಕಾದ ನೀರಿನ ಪಾಲು ಇನ್ನು ಬಂದಿಲ್ಲವೆಂದರೆ ಇದರಲ್ಲಿ ತಪ್ಪು ಯಾರದು?

      ಈ ವರ್ಷ ಜಲಾಶಯಗಳು ಭರ್ತಿಯಾದ ಪರಿಣಾಮ ಒಪ್ಪಿತ ನಿಯಮದ ಪ್ರಕಾರ ತುಮಕೂರು ನಾಲಾ ವಲಯಕ್ಕೆ ನಿಗದಿಯಾಗಿರುವ 24.183 ಟಿ.ಎಂ.ಸಿ.ನೀರು ಬಂದೇ ಬರುತ್ತದೆ ಎಂಬ ಆಶಾಭಾವನೆ ಜುಲೈ ತಿಂಗಳಿನಲ್ಲೇ ಮೂಡಿತ್ತು. ಇದೇ ಆಶಾಭಾವವನ್ನು ಇಂದಿಗೂ ಹೊಂದಿದ್ದಾರೆ. ಅಷ್ಟು ಪ್ರಮಾಣದ ನೀರನ್ನು ಮುಂದೆ ಪಡೆಯಬಹುದೇನೋ. ಅದು ಬೇರೆ ಮಾತು. ಆದರೆ ಈವರೆಗೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾದರೂ ಏಕೆ? ನಮ್ಮ ಜಲಾಶಯದಲ್ಲಿರುವ ನೀರನ್ನೇ ಮತ್ತೆ ಪಡೆಯಲು ನಾವು ಜಗಳ ಮಾಡಬೇಕೆ? ಇದಕ್ಕಾಗಿ ಹೋರಾಟ ಮಾಡಬೇಕೆ? ಯಾವುದೇ ಹೋರಾಟಗಳಿಲ್ಲದೆ ಯಥೇಚ್ಛವಾಗಿ ಹರಿದು ಹೋಗುತ್ತಿರುವ ಅಧಿಕ ನೀರನ್ನು ಪಡೆದುಕೊಂಡಿದ್ದರೆ ಮುಂದೆ ನಮಗೆ ನಿಗದಿಯಾಗಿರುವ ನೀರನ್ನು ಪಡೆಯಬಹುದಿತ್ತು. ಹೀಗಾಗಿದ್ದರೆ ಮುಂದಿನ ದಿನಗಳಲ್ಲಿ ಎದುರಾಗುವ ನೀರಿನ ಹಾಹಾಕಾರವನ್ನು ತಪ್ಪಿಸಬಹುದಿತ್ತು. ಈ ವಿಷಯದಲ್ಲಿ ಜಾಣ ಕುರುಕು ತೋರಿದ್ದು ಸರಿಯೇ? ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉತ್ತರಿಸಬೇಕು.

ಬರದ ಛಾಯೆ : ತುಂಬದ ಕೆರೆ-ಕಟ್ಟೆಗಳು 

      ತುಮಕೂರು ಜಿಲ್ಲೆ ಈಗ ಮತ್ತೊಮ್ಮೆ ಬರದ ದವಡೆಯಲ್ಲಿ ಸಿಲುಕಿಕೊಂಡಿದೆ. ನೀರಿನ ಅಭಾವ ಕಾಣಿಸಿಕೊಳ್ಳುತ್ತಿದೆ. ಕೆರೆಕಟ್ಟೆಗಳು ಬರಿದಾಗುವ ಆತಂಕ ಎದುರಾಗಿದೆ. ತುಮಕೂರು ನಾಲಾ ವಲಯದ ಕುಡಿಯುವ ನೀರಿನ ಯೋಜನೆಗಳುಳ್ಳ ಕೆರೆಗಳು ಭರ್ತಿಯಾಗಿದ್ದರೆ ಅಂತರ್ಜಲ ವೃದ್ಧಿಯಾಗಿ ನೀರಿನ ಸಮಸ್ಯೆಯೂ ನೀಗುತ್ತಿತ್ತು. ಯೋಜನೆಯ ಪ್ರಕಾರವೇ ಹರಿಸಬಹುದಾಗಿದ್ದ ಕುಡಿಯುವ ನೀರಿನ ಕೆರೆಗಳು ಭರ್ತಿಯಾಗಿಲ್ಲ. ಕೆಲವು ಕೆರೆಗಳಿಗೆ ಈವರೆಗೂ ನೀರನ್ನೇ ಹರಿಸಲಾಗಿಲ್ಲ ಎಂಬ ವಾಸ್ತವ ಚಿತ್ರಣಗಳು ಕಂಡುಬರುತ್ತಿವೆ.

ತಿಪಟೂರು ತಾಲ್ಲೂಕು:

      ಪುರಾತನವಾದ ಹಾಗೂ ತಿಪಟೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಈಚನೂರು ಕೆರೆ ತುಂಬಿರುವುದನ್ನು ಹೊರತುಪಡಿಸಿದರೆ ತಿಪಟೂರು ತಾಲ್ಲೂಕಿನ ಯಾವ ಕೆರೆಗಳೂ ತುಂಬಿಲ್ಲ. ನಾಲೆಯಲ್ಲಿ ನೀರು ಹರಿಯಲು ಆರಂಭವಾಗಿ ಎರಡೂವರೆ ತಿಂಗಳು ಕಳೆದು ಹೋದವು. ಇತ್ತ ಕೆರೆಗಳಿಗೆ ನೀರೂ ಬರಲಿಲ್ಲ. ಅತ್ತ ಮಳೆಯೂ ಬರಲಿಲ್ಲ. ಇದರಿಂದಾಗಿ ರೈತ ಮತ್ತೆ ತಲೆಯ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

      ಹೇಮಾವತಿ ನಾಲೆಯ ಮೂಲಕವೇ ತುಂಬಿಸಬಹುದಾದ ಕೆರೆಗಳಾದ ತಿಪಟೂರು ಅಮಾನಿಕೆರೆ, ಹೊನ್ನವಳ್ಳಿ, ಬಾಗುವಾಳ, ಮತ್ತಿಹಳ್ಳಿ, ರಾಮಚಂದ್ರಪುರ, ಗೌಡನಕಟ್ಟೆ, ತಡಸೂರು, ರಂಗಾಪುರದ ಕೆರೆಗಳಿಗೆ ಹಸಿದ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ 10 ದಿನಗಳಂತೆ ಸರತಿಯ ಪ್ರಕಾರ ನೀರು ಹರಿಸಲಾಗುತ್ತಿದೆ. ಇದೇ ರೀತಿ ನೀರು ಹರಿದರೆ ಒಂದೇ ಒಂದು ಕೆರೆಯೂ ತುಂಬುವುದಿಲ್ಲ. ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದರೆ, ಬರಗಾಲಕ್ಕೆ ಒಣಗುತ್ತಿರುವ ಕೆರೆಗಳು ನೀರನ್ನೇ ಆಪೋಷಣ ತೆಗೆದುಕೊಳ್ಳಬಹುದು.

      ಕಳೆದ 15 ದಿನಗಳಿಂದ ಮಡೆನೂರು, ಮತ್ತಿಹಳ್ಳಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಮಡೆನೂರು ಕೆರೆಗೆ ಈಗ ಸತತವಾಗಿ ನೀರು ಹರಿಯುತ್ತಿದ್ದು, ಅರ್ಧದಷ್ಟು ನೀರು ಸಂಗ್ರಹವಾಗುವ ಸನಿಹದಲ್ಲಿದೆ. ಪಕ್ಕದ ಮತ್ತಿಹಳ್ಳಿ ಕೆರೆಯಲ್ಲಿ ಕಾಲು ಭಾಗದಷ್ಟು ನೀರಿದೆ. ಚಿಕ್ಕಬಿದರೆ, ಗುರುಗದಹಳ್ಳಿ ಕೆರೆಗಳಿಗೆ ಶೇ.10 ರಷ್ಟು ನೀರು ಸಂಗ್ರಹವಾಗಿದೆ. ತಿಪಟೂರು ತಾಲ್ಲೂಕಿಗೆ ಹೊಂದಿಕೊಂಡಿರುವ ಅರಸೀಕೆರೆ ತಾಲ್ಲೂಕಿನ ಜೆ.ಸಿ.ಪುರ ಕೆರೆಗೆ ಮಾತ್ರ ಯಥೇಚ್ಛವಾಗಿ ನೀರು ಹರಿಯುತ್ತಿದೆ. ಈ ಭಾಗಕ್ಕೆ ಮುಖ್ಯ ಪೈಪ್‍ನಿಂದ ನೀರು ಕೊಂಡೊಯ್ಯಲಾಗಿದೆ. ತಿಪಟೂರು ತಾಲ್ಲೂಕಿನ ಈಚನೂರು ಕೆರೆಯಿಂದ ತಿಪಟೂರು ಪಟ್ಟಣಕ್ಕೆ ಮಾತ್ರವಲ್ಲದೆ, ಅರಸೀಕೆರೆಗೂ ಕುಡಿಯುವ ನೀರು ಹರಿಸಲು ಯೋಜನೆ ರೂಪಿತವಾಗಿರುವುದರಿಂದ ಒಟ್ಟು 302 ಎಂಸಿಎಫ್‍ಟಿ ನೀರನ್ನು ಇದಕ್ಕಾಗಿ ನಿಗದಿಪಡಿಸಲಾಗಿದೆ.

      ಹೊನ್ನವಳ್ಳಿ ವ್ಯಾಪ್ತಿಯ ಕೆರೆಗಳ ಸ್ಥಿತಿಯಂತೂ ಹೇಳತೀರದು. ಹೊನ್ನವಳ್ಳಿಯ ಹಿರೇಕೆರೆಗೆ ಮಾತ್ರವೇ ಸ್ವಲ್ಪ ನೀರು ಹರಿದಿರುವುದನ್ನು ಬಿಟ್ಟರೆ ಉಳಿದ ಯಾವ ಕೆರೆಗೂ ನೀರು ಹರಿದಿಲ್ಲ. ಬಡಗೀಕೆರೆಗೆ ಈವರೆವಿಗೂ ನೀರೇ ಹರಿದಿಲ್ಲ. ಹೊನ್ನವಳ್ಳಿ ವ್ಯಾಪ್ತಿಯಲ್ಲಿ ಏತ ನೀರಾವರಿ ಯೋಜನೆಯಡಿಯಲ್ಲಿ 5 ಕೆರೆಗಳಿಗೆ ಕುಡಿಯುವ ನೀರು ಹರಿಸಬೇಕು. ಈ ಯೋಜನೆ ರೂಪುಗೊಂಡು ಬಹಳ ವರ್ಷಗಳೇ ಕಳೆದಿವೆ. ಹೊನ್ನವಳ್ಳಿ ಹಿರೇಕೆರೆ, ಬಡಗೀಕೆರೆ, ಬಾಗುವಾಳ ಕೆರೆ, ಮಾರ್ಗೊಂಡನಹಳ್ಳಿ ಕೆರೆ, ನಾಗತಿಹಳ್ಳಿ ಕೆರೆಗಳು ಈ ಯೋಜನೆ ವ್ಯಾಪ್ತಿಯಲ್ಲಿದ್ದು, ಒಂದೇ ಒಂದು ಕೆರೆಗೂ ಹೇಮಾವತಿ ನೀರಿನ ಸಿಂಚನವಾಗಿಲ್ಲ. ಜಿಲ್ಲೆಗೆ ನೀರು ಹರಿಯುತ್ತಿದ್ದರೂ ಈ ಕೆರೆಗಳಿಗೆ ನೀರು ಹರಿದಿಲ್ಲ. ಕೆರೆಯ ತುಂಬೆಲ್ಲಾ ಬಳ್ಳಾರಿ ಜಾಲಿಗಿಡಗಳು ಬೆಳೆದು ನಿಂತಿವೆ. ಇಲ್ಲಿಗೆ ನೀರು ಯಾವಾಗ ಹರಿಯುವುದೋ ಎಂಬ ಕನಸನ್ನು ಹೊತ್ತೇ ರೈತರು ದಿನದೂಡುತ್ತಿದ್ದಾರೆ.

      ತಿಪಟೂರು ತೆಂಗಿನ ಬೆಳೆಗೆ ಪ್ರಸಿದ್ಧಿ. ಸತತ ಎದುರಾದ ಬರಗಾಲದಿಂದಾಗಿ ತೆಂಗು ನಾಶವಾಗುತ್ತಾ ಬಂದಿದೆ. ಹಿಂದೆಲ್ಲಾ ಇಲ್ಲಿ ತೆಂಗು ಹಾಗೂ ಬತ್ತ ಪ್ರಸಿದ್ಧಿಯಾಗಿತ್ತು. ಈಗ ಈ ಭಾಗದ ರೈತರು ಬತ್ತ ಬೆಳೆಯುವುದನ್ನು ಬಿಟ್ಟು ಸರ್ಕಾರ ಕೊಡುವ ಅನ್ನಭಾಗ್ಯ ಅಕ್ಕಿಯನ್ನು ನೋಡುವಂತಾಗಿದೆ.

ತುರುವೇಕೆರೆ ತಾಲ್ಲೂಕು:

      ಮಲ್ಲಾಘಟ್ಟ ಕೆರೆ ತುಂಬಿ ಕೋಡಿ ಹರಿಯುತ್ತಿದೆ. ಇದನ್ನು ಬಿಟ್ಟರೆ ತುಂಬಿ ಕೋಡಿ ಹರಿಯುತ್ತಿರುವ ಕೆರೆಗಳು ಇಲ್ಲಿ ಕಂಡು ಬರುವುದಿಲ್ಲ. ಕೆಲವು ಕೆರೆಗಳಿಗೆ ನೀರು ಹರಿಯುತ್ತಿದ್ದರೆ ಮತ್ತೆ ಕೆಲವು ಕೆರೆಗಳಿಗೆ ಇನ್ನೂ ನೀರು ಹರಿದಿಲ್ಲ. ಯೋಜನೆ ಅನ್ವಯ ಹೇಮಾವತಿ ನಾಲಾ ವಲಯದ ವಿ-ನಾಲೆ ಮೂಲಕ 18 ಕೆರೆಗಳಿಗೆ ಕುಡಿಯುವ ನೀರನ್ನು ಹರಿಸಬೇಕು.

      ಇಲಾಖೆಯ ಅಂಕಿ ಅಂಶಗಳನ್ನು ಗಮನಿಸಿದರೆ 18 ಕೆರೆಗಳ ಪೈಕಿ 11 ಕೆರೆಗಳನ್ನು ತುಂಬಿಸಿರುವ ವರದಿ ಲಭ್ಯವಾಗುತ್ತದೆ. ಬಲಮಾದಿಹಳ್ಳಿ, ಪುರಚಂಡೂರು, ಹುಳೀಸಂದ್ರ, ಅಮ್ಮಸಂದ್ರ, ತಂಡಗ, ತುರುವೇಕೆರೆ ಕೆರೆ, ಕೋಳಾಲ, ಗೋಣಿ ತುಮಕೂರು, ಅರಿಸಿನದ ಹಳ್ಳಿ ಅಣೆ, ಬಾಳೆಮಡು ಅಣೆ, ಡೊಂಕಿಹಳ್ಳಿ ಅಣೆ ಇವುಗಳನ್ನು ತುಂಬಿಸಲಾಗಿರುವ ಬಗ್ಗೆ ವರದಿಗಳು ಹೇಳುತ್ತವೆ. ವಾಸ್ತವವಾಗಿ ಈ ಎಲ್ಲ ಕೆರೆಗಳು ಸಂಪೂರ್ಣವಾಗಿ ಭರ್ತಿಯಾಗಿಲ್ಲ. ಕೊಂಡಜ್ಜಿ ಕೆರೆಗೆ ಶೇ.15 ರಷ್ಟು, ಸಾರಿಗೆಹಳ್ಳಿ ಕೆರೆಗೆ ಶೇ.30 ರಷ್ಟು, ಬೊಮ್ಮೇನಹಳ್ಳಿ ಕೆರೆಗೆ ಶೇ.40 ರಷ್ಟು ಪ್ರಮಾಣದ ನೀರು ಹರಿದಿದೆ. ಅಕ್ಕಳಸಂದ್ರ, ಚಿಮ್ಮನಹಳ್ಳಿ, ಡಿ.ಶೆಟ್ಟಿಹಳ್ಳಿ ಕೆರೆಗಳಿಗೆ ಈವರೆಗೂ ನೀರು ಹರಿದೇ ಇಲ್ಲ.
ಹೇಮಾವತಿ ನೀರು ಹರಿಸಲು ಆಗ್ರಹಿಸಿ ಈ ಭಾಗದಲ್ಲಿ ಪ್ರತಿಭಟನೆಗಳು ಆರಂಭವಾಗಿವೆ. ಕೊಂಡಜ್ಜಿಕೆರೆಗೆ ಶೇ.15 ರಷ್ಟು ನೀರು ಹರಿದಿದೆ ಎಂದು ವರದಿಗಳು ತಿಳಿಸುತ್ತವೆ. ಆದರೆ ಶೇ.5ರಷ್ಟು ನೀರೂ ಸಹ ಕೆರೆಗೆ ಹರಿದಿಲ್ಲ ಎಂಬ ಆಕ್ರೋಶ ಆ ಭಾಗದ ರೈತರದ್ದು. ತಾಲ್ಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಸಬೇಕೆಂದು ಆಗ್ರಹಿಸಿ ಶಾಸಕ ಮಸಾಲ ಜಯರಾಂ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ಆರಂಭವಾಗಿದೆ. ರಾತ್ರಿಯಿಡೀ ಶಾಸಕರು ಉಪವಾಸದಲ್ಲಿ ನಿರತರಾದರು. ಚಾಕುವಳ್ಳಿಪಾಳ್ಯ ಡಿ 10ರ ತೂಬಿನ ಬಳಿ ಉಪವಾಸ ಸತ್ಯಾಗ್ರಹ ನಡೆಯಿತು. ತಾಲ್ಲೂಕಿನ ಕೆರೆಗಳನ್ನು ತುಂಬಿಸದೆ ಅನ್ಯಾಯ ಎಸಗಲಾಗುತ್ತಿದೆ. ಮಾಗಡಿ ತಾಲ್ಲೂಕಿಗೆ ನೀರನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಮೊದಲಾದ ಆರೋಪಗಳೊಂದಿಗೆ ಇಲ್ಲಿ ಧರಣಿ ಆರಂಭವಾಗಿದೆ.

      567.25 ಎಂಸಿಎಫ್‍ಟಿ ನೀರಿನ ಸಂಗ್ರಹಣಾ ಸಾಮಥ್ರ್ಯವಿರುವ ಮಲ್ಲಾಘಟ್ಟ ಕೆರೆ ಸಂಪೂರ್ಣ ತುಂಬಿ ಹರಿಯುತ್ತಿದ್ದು, ಶಿಂಷಾ ನದಿ ಸೇರಿ ಅಲ್ಲಿಂದ ಕುಣಿಗಲ್ ತಾಲ್ಲೂಕಿನ ಮಾರ್ಕೋನಹಳ್ಳಿ ಜಲಾಶಯ ತಲುಪುತ್ತದೆ. ಹೀಗಾಗಿ ಮಲ್ಲಾಘಟ್ಟ ಕೆರೆ ತುಂಬಿರುವುದರಿಂದ ಆ ವ್ಯಾಪ್ತಿಯ ರೈತರು ಹರ್ಷಗೊಂಡಿದ್ದಾರೆ. ಉಳಿದ ಕೆರೆಗಳಿಗೆ ನೀರು ಹರಿಸಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.

ಗುಬ್ಬಿ ತಾಲ್ಲೂಕು:

      ಗುಬ್ಬಿ ತಾಲ್ಲೂಕಿನಲ್ಲಿ ಒಟ್ಟು 60 ಕೆರೆಗಳನ್ನು ಕುಡಿಯುವ ನೀರಿನ ಯೋಜನೆಯಡಿ ಗುರುತಿಸಲಾಗಿದೆ. ಇವುಗಳ ಪೈಕಿ 15 ಕೆರೆಗಳಿಗೆ ಶೇ.30 ರಷ್ಟು ನೀರು ಹರಿದಿದೆ. ಯಾವ ಕೆರೆಯೂ ಸಂಪೂರ್ಣ ತುಂಬಿಲ್ಲ. ಗುಬ್ಬಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಹೇರೂರು ಕೆರೆಗೆ ಮಾತ್ರ ಆರಂಭದಿಂದಲೂ ನೀರು ಹರಿಯುತ್ತಿದ್ದು, ಶೇ.70 ರಷ್ಟು ನೀರು ಸಂಗ್ರಹವಾಗಿದೆ. ತಾಲ್ಲೂಕಿನ ಕೆಲವು ಭಾಗಗಳಲ್ಲಿ ನೀರಿನ ಸಮಸ್ಯೆ ಮನಗಂಡ ರೈತರು ತಾವೇ ಪಂಪು ಮೋಟಾರ್ ಅಳವಡಿಸಿಕೊಂಡು ತಮ್ಮ ಭಾಗದ ಕೆರೆಗಳನ್ನು ತುಂಬಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ ಸುಮಾರು 6-7 ಸಣ್ಣಪುಟ್ಟ ಕೆರೆಗಳು ಭರ್ತಿಯಾಗುವ ಹಂತದಲ್ಲಿವೆ.

      ಗುಬ್ಬಿ ಕೆರೆಗೆ ಎಂ.ಎಚ್.ಪಟ್ನ ಕೆರೆಯಿಂದ ನೀರು ಹರಿದು ಬರಬೇಕು. ಆದರೆ ಎಂ.ಎಚ್.ಪಟ್ನದ ಕೆರೆಯೇ ಇನ್ನೂ ತುಂಬಿಲ್ಲ. ನಾಲಾ ವಲಯದಲ್ಲಿ ಬರುವ ಅಕ್ಕಪಕ್ಕದ ಕೆರೆಗಳಿಗಷ್ಟೇ ನೀರು ಹರಿಸಲಾಗುತ್ತಿದ್ದು, ದೂರದ ಕೆರೆಗಳಿಗೆ ಇನ್ನೂ ನೀರು ಹರಿಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ವಿಶಾಲವಾಗಿರುವ ದೊಡ್ಡಗುಣಿ ಕೆರೆಗೆ ನೀರು ಹರಿದಿದ್ದರೆ ಆ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗುತ್ತಿತ್ತು. ಇಲ್ಲಿ ಹೆಚ್ಚಿನ ರೈತರು ತೆಂಗು ಮತ್ತು ಅಡಿಕೆ ಬೆಳೆಯುತ್ತಿದ್ದು, ಈಗಾಗಲೇ ಆತಂಕಕ್ಕೆ ಒಳಗಾಗಿದ್ದಾರೆ. ಹೇಮಾವತಿ ನೀರು ದೊಡ್ಡಗುಣಿ ಕೆರೆಗೆ ನಾಮಕಾವಸ್ಥೆ ಹರಿಯುತ್ತಿದ್ದು, ಶೇ.20 ರಷ್ಟು ನೀರು ಹರಿದಿರಬಹುದು ಎನ್ನುತ್ತಾರೆ ಆ ಭಾಗದ ಜನತೆ.

      ಕುಡಿಯುವ ನೀರಿನ ಯೋಜನೆಗಾಗಿಯೇ ರೂಪಿತವಾಗಿರುವ ಹೇರೂರು, ಸೋಮಲಾಪುರ, ನಿಟ್ಟೂರು, ಕಡಬ, ದೊಡ್ಡಗುಣಿ, ಶಿವಸಂದ್ರ, ಹಂಡನಹಳ್ಳಿ, ಮುಸಕೊಂಡ್ಲಿ, ಹಾಗಲವಾಡಿ, ಅಳಿಲಘಟ್ಟ, ಹೊಸಕೆರೆ, ಚೇಳೂರು, ಕೋಡಿಯಾಲ, ಮತ್ತಿಕೆರೆ, ಬಿದರೆ ಕೆರೆಗಳಿಗೆ ನೀರನ್ನು ತುಂಬಿಸಿದ್ದರೆ ಸ್ವಲ್ಪ ಮಟ್ಟಿಗೆ ನೀರಿನ ಹಾಹಾಕಾರ ತಪ್ಪಿಸಬಹುದಿತ್ತು.

      ತಾಲ್ಲೂಕಿನಲ್ಲಿ ಹೇರೂರು, ಗುಬ್ಬಿ ಕೆರೆ ಮತ್ತು ಕಡಬ ಕೆರೆಗಳಿಗೆ ಮುಖ್ಯವಾಗಿ ನೀರು ಹರಿಯಬೇಕೆಂಬುದು ಕೆಲವರ ಒತ್ತಾಸೆ. ಗುಬ್ಬಿ ಮತ್ತು ಕಡಬ ಕೆರೆಗಳು ಭರ್ತಿಯಾದರೆ 40 ಹಳ್ಳಿಗಳ ಭಾಗದಲ್ಲಿ ಅಂತರ್ಜಲ ವೃದ್ಧಿಸುತ್ತದೆ. ದೊಡ್ಡಗುಣಿ, ಕಡಬ ಮತ್ತು ಬಿದರೆ ಕೆರೆಗಳನ್ನು ಬಹುಗ್ರಾಮ ಯೋಜನೆಯಡಿ ಗುರುತಿಸಲಾಗಿದ್ದು, ಈ ಕೆರೆಗಳಿಂದ ನಿಗದಿತ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲಾಗುತ್ತದೆ.
ಕಡಬ ಕೆರೆಗೆ ಕಳೆದ 10 – 12 ದಿನಗಳಿಂದ ನೀರು ಹರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕೆರೆಯಿಂದ ಎಚ್.ಎ.ಎಲ್. ಘಟಕಕ್ಕೆ ನೀರು ಪೂರೈಸುವ ಯೋಜನೆ ಇದೆ. ಆದರೆ ಪ್ರಸ್ತುತ ಸ್ಥಿತಿಗಳನ್ನು ಗಮನಿಸಿದಾಗ ಇಂತಹ ಪ್ರಮುಖ ಕೆರೆಗಳಿಗೆ ನೀರೇ ಇಲ್ಲವಾದರೆ ಕೈಗಾರಿಕೆಗಳಿಗೆ ಹೇಗೆ ನೀರು ಪೂರೈಸಲು ಸಾಧ್ಯ ಎಂಬ ಪ್ರಶ್ನೆಗಳು ಎದುರಾಗುತ್ತಿವೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕು:

      ಚಿ.ನಾ.ಹಳ್ಳಿ ಪಟ್ಟಣಕ್ಕೆ ಕಳೆದ 10 ವರ್ಷಗಳಿಂದ ಏತ ನೀರಾವರಿ ಮೂಲಕ ಚಿ.ನಾ.ಹಳ್ಳಿ ಕೆರೆಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಇದು ಆ ಪಟ್ಟಣಕ್ಕಷ್ಟೇ ಸೀಮಿತ. ಕಳೆದ ವರ್ಷದಿಂದ ತಾಲ್ಲೂಕಿನ ಬ್ಯಾಡರಹಳ್ಳಿ ಮತ್ತು ಜೆ.ಸಿ.ಪುರ ಕೆರೆಗಳಿಗೆ ಕುಡಿಯುವ ನೀರಿನ ಏತ ನೀರಾವರಿ ಯೋಜನೆಯಡಿ ನೀರು ಒದಗಿಸುವ ಯೋಜನೆ ರೂಪುಗೊಂಡಿದೆ. ಹೇಮಾವತಿ ನಾಲೆಯಲ್ಲಿ ಈ ವರ್ಷ ನೀರು ಹರಿಯಲು ಆರಂಭಿಸಿದ ದಿನದಿಂದ ಈವರೆಗೂ ಹರಿದಿರುವ ನೀರಿನ ಪ್ರಮಾಣ ಅಷ್ಟಕ್ಕಷ್ಟೆ. ಮೂರೂ ಕೆರೆಗಳಿಗೂ ಕನಿಷ್ಠ ಮೂರು ಅಡಿಗಳಷ್ಟು ನೀರು ಬಂದಿಲ್ಲ.

      ಬ್ಯಾಡರಹಳ್ಳಿ ಮತ್ತು ಜೆ.ಸಿ.ಪುರ ಕೆರೆಗಳನ್ನು ಒಮ್ಮೆ ವೀಕ್ಷಿಸಿದರೆ ಹಾಗೂ ಪೈಪ್ ಮೂಲಕ ಹರಿಯುತ್ತಿರುವ ನೀರಿನ ಪ್ರಮಾಣ ಗಮನಿಸಿದರೆ ಈ ಕಾಲಕ್ಕೆ ಕೆರೆಗಳು ತುಂಬುವ ಲಕ್ಷಣಗಳಿಲ್ಲ. ಇದೇ ತಾಲ್ಲೂಕಿನ ಪೆಮ್ಮಲದೇವನಹಳ್ಳಿ ಕೆರೆಯಿಂದ ಬೋರನಕಣಿವೆವರೆಗೆ 26 ಕೆರೆಗಳಿಗೆ ನೀರು ಹರಿಸುವ ಯೋಜನೆ ಆರಂಭವಾಗಿದೆ. ಈ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ. ಈಗಾಗಲೇ ಇರುವ ಮೂರು ಏತ ನೀರಾವರಿ ಕೆರೆಗಳನ್ನು ಹೊರತುಪಡಿಸಿದರೆ ಉಳಿದ 23 ಕೆರೆಗಳು ಗುರುತ್ವಾಕರ್ಷಣೆ ಮೂಲಕ ನೀರು ಹರಿಸಬಹುದಾದ ಯೋಜನೆಗೆ ಒಳಪಟ್ಟಿವೆ.

ಹೇಮಾವತಿ ನೀರು ಹರಿಯಿತಾದರೂ ಎಲ್ಲಿಗೆ

ಕುಣಿಗಲ್ ತಾಲ್ಲೂಕು:

      ಮೂಡಲ್ ಕುಣಿಗಲ್ ಕೆರೆ ಇಡೀ ರಾಜ್ಯಕ್ಕೆ ಹೆಸರುವಾಸಿ. ಹೇಮಾವತಿ ನೀರು ಯೋಜನೆಯ ಪ್ರಕಾರ ಕೊನೆಯ ಹಂತದ (ಟೈಲ್ ಎಂಡ್) ಕೆರೆಗಳಿಗೆ ಮೊದಲು ನೀರು ಹರಿಸಬೇಕು. ಆನಂತರ ಉಳಿದ ಕೆರೆಗಳಿಗೆ ನೀರು ಹರಿಸಬೇಕೆಂಬುದು ನಿಯಮ. ಆದರೆ ಈ ನಿಯಮ ಪುಸ್ತಕದಲ್ಲಷ್ಟೇ ಇದೆ. ನಿಯಮಾನುಸಾರ ನೀರು ಹರಿಸಿದ್ದರೆ ಈ ವೇಳೆಗಾಗಲೇ ಕುಣಿಗಲ್ ದೊಡ್ಡಕೆರೆ (ಮೂಡಲ್ ಕುಣಿಗಲ್ ಕೆರೆ) ಭರ್ತಿಯಾಗಬೇಕಿತ್ತು. ಜುಲೈ 1 ರಿಂದ ಜಿಲ್ಲೆಗೆ ನೀರು ಹರಿಯಿತಾದರೂ ಕುಣಿಗಲ್ ದೊಡ್ಡಕೆರೆಗೆ ಮಾತ್ರ ನಿರಂತರವಾಗಿ ನೀರು ಹರಿಯಲಿಲ್ಲ. ಆರಂಭದ 2 ದಿನಗಳು ಮಾತ್ರ ನೀರು ಕಾಣಿಸಿಕೊಂಡು ನಂತರ ಸ್ಥಗಿತಗೊಂಡಿತು. ಅಷ್ಟೇ ನೀರಿಗೆ ಶಾಸಕರು ಗಂಗಾಪೂಜೆ ನೆರವೇರಿಸಿದ್ದರು.

      ಇತ್ತೀಚೆಗೆ ಅಂದರೆ, ಕಳೆದ 10 ದಿನಗಳಿಂದ ನಿರಂತರವಾಗಿ ನೀರು ಹರಿಸಲಾಗುತ್ತಿದ್ದು, ಕೆರೆಯಲ್ಲಿ ಅರ್ಧಭಾಗದಷ್ಟು ನೀರು ಸಂಗ್ರಹವಾಗಿದೆ. ಕುಣಿಗಲ್ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ದೊಡ್ಡಕೆರೆಯ ಒಟ್ಟು ಸಾಮಥ್ರ್ಯ 532 ಎಂಸಿಎಫ್‍ಟಿ. ಕಳೆದ ಐದಾರು ವರ್ಷಗಳ ಹಿಂದೆ ಈ ಕೆರೆ ತುಂಬಿರುವುದನ್ನು ಬಿಟ್ಟರೆ ನಂತರದ ದಿನಗಳಲ್ಲಿ ಭರ್ತಿಯಾಗಲೇ ಇಲ್ಲ. ಸತತ ಬರಗಾಲದ ನೆರಳಿನಲ್ಲಿ ಕೆರೆಯೂ ಬರದ ಸ್ಥಿತಿ ಅನುಭವಿಸುತ್ತಿದೆ.

      ಮಾರ್ಕೋನಹಳ್ಳಿಗೆ ದೊಡ್ಡಕೆರೆಯಂತೆಯೇ ನೀರು ಹರಿಸಲಾಗುತ್ತಿದೆ. ಆದರೆ ಮಾರ್ಕೋನಹಳ್ಳಿಯಲ್ಲಿ ಹೆಚ್ಚಿನ ನೀರು ಸಂಗ್ರಹವಾಗಿದೆ. ಇದಕ್ಕೆ ಕಾರಣ ತುರುವೇಕೆರೆ ತಾಲ್ಲೂಕಿನ ಮಲ್ಲಾಘಟ್ಟ ಕೆರೆಯಿಂದ ಶಿಂಷಾ ನದಿ ಮಾರ್ಗವಾಗಿ ಇಲ್ಲಿಗೆ ನೀರು ಹರಿದು ಬರುತ್ತದೆ. ಇದರ ಜೊತೆಗೆ ಮಳೆಯ ಪ್ರಮಾಣವೂ ಸ್ವಲ್ಪ ಮಟ್ಟಿಗೆ ಇದ್ದುದರಿಂದ ಇಲ್ಲಿ ನೀರು ಹೆಚ್ಚು ಸಂಗ್ರಹವಾಗಲು ಕಾರಣವಾಗಿದೆ. ಮಾರ್ಕೋನಹಳ್ಳಿಯಿಂದ ಹುಲಿಯೂರು ದುರ್ಗ ಸೇರಿದಂತೆ ಇತರೆ ಪ್ರದೇಶಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.

      ತಾಲ್ಲೂಕಿನ ಬೇಗೂರು, ಚಿಕ್ಕಕೆರೆ, ಮಂಗಳ ಜಲಾಶಯ, ಗುನ್ನಾಗೆರೆ, ಕೆಂಪನಹಳ್ಳಿ, ಮಡಕೆ ಕೆಂಪಸಂದ್ರ, ಮಾರ್ಕೋನಹಳ್ಳಿ, ಕೊತ್ತಗೆರೆ ಕೆರೆಗಳಿಗೆ ನೀರು ಹರಿಸಬೇಕು. ಆದರೆ ಮಾರ್ಕೋನಹಳ್ಳಿ ಹಾಗೂ ದೊಡ್ಡಕೆರೆಗೆ ನೀರು ಹರಿಯುತ್ತಿರುವುದನ್ನು ಬಿಟ್ಟರೆ ಉಳಿದ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ. ಹೀಗಾಗಿ ಹೇಮಾವತಿ ಯೋಜನೆಯ ನಿಯಮಗಳನ್ನೇ ಗಾಳಿಗೆ ತೂರಲಾಗಿದೆ. ಕೊನೆ ಹಂತದ ಕೆರೆಗಳನ್ನು ಬಿಟ್ಟು ಬೇಕಾಬಿಟ್ಟಿ ನೀರನ್ನು ಕೊಂಡೊಯ್ಯಲಾಗುತ್ತಿದೆ ಎಂಬ ಆಕ್ರೋಶ ಅಲ್ಲಿನ ಜನತೆಯದ್ದು. ಹೇಮಾವತಿ ಯೋಜನೆ ನಂತರ ಬಹುಗ್ರಾಮ ಯೋಜನೆ ಜಾರಿಗೆ ತರಲಾಯಿತು. ಇದರ ಪ್ರಕಾರ ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಬಹುಗ್ರಾಮ ಯೋಜನೆಯಡಿಯಲ್ಲಿ ನೀರು ಹರಿಸಲು ಕೆಲವು ಗ್ರಾಮಗಳನ್ನು ಗುರುತಿಸಲಾಯಿತು. ಇದರ ಪರಿಣಾಮ ನೀರನ್ನು ಹೇಗೆ ಬೇಕೋ ಹಾಗೆ ಹರಿಸಿಕೊಳ್ಳಲು ರಾಜಕಾರಣಿಗಳೇ ಮುಂದಾದರು. ಒಟ್ಟಾರೆ ಜಿಲ್ಲೆಯ ಹಿತದೃಷ್ಟಿ ಮರೆತ ರಾಜಕಾರಣಿಗಳು ತಮ್ಮ ಸ್ವಾರ್ಥಕ್ಕೆ ಜನರನ್ನು ಎತ್ತಿಕಟ್ಟುವ ಕೆಲಸ ಮಾಡಿದರು ಎನ್ನುತ್ತಾರೆ ರೈತ ಸಂಘದ ಆನಂದ್ ಪಟೇಲ್.

      ತುಮಕೂರು ನಾಲಾ ವಲಯದ ವ್ಯಾಪ್ತಿಯಲ್ಲಿ ಪದೇ ಪದೇ ಹಾನಿಯಾಗಿ ನೀರು ಹರಿಯುವುದೇ ಈ ಭಾಗಕ್ಕೆ ದುಸ್ತರವಾಗಿತ್ತು. ಈ ನಾಲೆಯ ಸಾಮಥ್ರ್ಯ 1600 ಕ್ಯುಸೆಕ್ಸ್ ಎಂದು ಸರ್ಕಾರಿ ಮೂಲಗಳು ಹೇಳುತ್ತವೆ. ನಾಲೆಯನ್ನು ಅಗಲೀಕರಣಗೊಳಿಸುವ ಹಾಗೂ ಆಧುನೀಕರಣಗೊಳಿಸುವ ಕಾರ್ಯ ನಡೆಯಿತಾದರೂ ಇದರ ಪ್ರಯೋಜನ ತುಮಕೂರು ಜಿಲ್ಲೆಗೆ ಆಗುತ್ತಿಲ್ಲ. 0.72 ಕಿ.ಮೀ. ನಲ್ಲಿ 562 ಕೋಟಿ ರೂ.ಗಳ ವೆಚ್ಚದಲ್ಲಿ ನಾಲಾ ಅಗಲೀಕರಣ ಮಾಡಲಾಗಿದೆ. ಹಾಸನ ಗಡಿ ಭಾಗದಲ್ಲಿ ಈ ಅಗಲೀಕರಣ ಕಾರ್ಯ ನಡೆದಿರುವುದರಿಂದ ತುಮಕೂರು ಜಿಲ್ಲೆಗೆ ಬದಲಾಗಿ ಶ್ರವಣಬೆಳಗೊಳ, ಕೆ.ಆರ್.ಪೇಟೆ ಭಾಗಗಳಿಗೆ ಅನುಕೂಲವಾಗುತ್ತಿದೆ. ಹೀಗಾಗಿ ತುಮಕೂರು ನಾಲೆಯಲ್ಲಿ ಹೆಚ್ಚು ನೀರು ಹರಿಸಲು ಸಾಧ್ಯವಾಗುತ್ತಿಲ್ಲ.

      ರಾಜಕಾರಣಿಗಳು ಮತ್ತು ಅಧಿಕಾರಿಗಳು ಮೂಲ ಸಮಸ್ಯೆಯ ಬಗ್ಗೆ ಗಮನ ಹರಿಸುತ್ತಿಲ್ಲ. ತುಮಕೂರು ನಾಲಾ ವಲಯದಲ್ಲಿ 1100ಕ್ಕಿಂತ ಹೆಚ್ಚು ಕ್ಯುಸೆಕ್ಸ್ ನೀರು ಹರಿದರೆ ನಾಲೆ ಬಿರುಕು ಬಿಡುವ ಅಥವಾ ಹಾನಿಯಾಗುವ ಅಪಾಯ ಇದ್ದೇ ಇರುತ್ತದೆ. ಹೀಗಾಗಿ ನಮಗೆ ನಿಗದಿಪಡಿಸಿರುವ 24 ಟಿಎಂಸಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದರೆ 3500 ಕ್ಯುಸೆಕ್ಸ್ ಪ್ರಮಾಣದ ನೀರು ಹರಿಯುವಂತೆ ನಾಲೆಯನ್ನು ಅಗಲೀಕರಣಗೊಳಿಸಬೇಕು. ಈಗ ಜಿಲ್ಲೆಯವರೇ ಉಪಮುಖ್ಯಮಂತ್ರಿಗಳಾಗಿದ್ದಾರೆ. ಗುಬ್ಬಿ ಶಾಸಕರು ಸಚಿವರಾಗಿದ್ದಾರೆ. ಇವರೆಲ್ಲ ವಾಸ್ತವವಾಗಿ ಯೋಚಿಸಬೇಕು. ನಾಲಾ ಅಗಲೀಕರಣದಿಂದ ಮಾತ್ರವೇ ಸಮರ್ಪಕ ನೀರು ಹರಿಸಿಕೊಳ್ಳಲು ಸಾಧ್ಯ ಎಂಬುದನ್ನು ಅವರು ಅರಿಯಬೇಕು ಎನ್ನುತ್ತಾರೆ ಆನಂದಪಟೇಲ್.

      ಕುಣಿಗಲ್ ತಾಲ್ಲೂಕಿನಲ್ಲಿ ಈಗ ಹೆಚ್ಚು ಕೂಗು ಕೇಳಿಬರುತ್ತಿರುವುದು ಮಾಗಡಿಯತ್ತ ನೀರು ಕೊಂಡೊಯ್ಯಲಾಗುತ್ತಿದೆ ಎಂಬುದು. ಅಲ್ಲಿನ ಭಾಗಗಳಿಗೆ ನೀರು ಹರಿಸುವ ಯೋಜನೆಗೆ ಈಗಾಗಲೇ 150 ಕೋಟಿ ರೂ.ಗಳು ಮಂಜೂರಾಗಿದೆ. ಒಂದು ಕಡೆ ಜಿಲ್ಲೆಯ ಇತರೆ ಭಾಗಗಳಲ್ಲಿ ನೀರನ್ನು ಹರಿಸಿಕೊಳ್ಳುತ್ತಿದ್ದರೆ ಮತ್ತೊಂದು ಕಡೆ ಈ ಭಾಗದ ಕೆರೆಗಳಿಂದ ಮಾಗಡಿ, ರಾಮನಗರದತ್ತ ನೀರು ಕೊಂಡೊಯ್ಯಲು ಭರದ ಕಾಮಗಾರಿಗಳು ನಡೆಯುತ್ತಿವೆ.

 ಶಿರಾ ತಾಲ್ಲೂಕು:

      ಈ ತಾಲ್ಲೂಕಿನ ಕಳ್ಳಂಬೆಳ್ಳಕ್ಕೆ ಹೇಮಾವತಿ ನೀರು ಪಾದಾರ್ಪಣೆಯಾಗಿದೆ. ಇಲ್ಲಿಂದ ಶಿರಾ ಕೆರೆ ಹಾಗೂ ಮದಲೂರು ಕೆರೆಗಳು ಕುಡಿಯುವ ನೀರಿನ ಯೋಜನೆಯಡಿ ನಿರ್ಮಾಣಗೊಂಡಿವೆ. ಆಗಸ್ಟ್ 1 ರಿಂದ ಕಳ್ಳಂಬೆಳ್ಳ ಕೆರೆಗೆ ನೀರು ಹರಿಯುತ್ತಿದೆ. ಸುಮಾರು ಅರ್ಧದಷ್ಟು ನೀರು ಸಂಗ್ರಹವಾಗಿದೆ. ಕಳ್ಳಂಬೆಳ್ಳ ಕೆರೆಯ ಹಿಂಭಾಗದಲ್ಲಿರುವ ಪಟ್ರಾವತನಹಳ್ಳಿಗೆ ಹೇಮಾವತಿ ನೀರು ಹರಿಯುತ್ತದೆ. ಅಲ್ಲಿಂದ ಎಸ್ಕೇಪ್ ಗೇಟ್ ಮೂಲಕ ಕಳ್ಳಂಬೆಳ್ಳ ಕೆರೆಗೆ ನೀರು ಹರಿಸಲಾಗುತ್ತಿದ್ದು, ಪ್ರಸ್ತುತ 150 ಕ್ಯುಸೆಕ್ಸ್‍ನಷ್ಟು ಪ್ರಮಾಣದ ನೀರನ್ನು ಈ ಕೆರೆಗೆ ಹರಿಯಬಿಡಲಾಗುತ್ತಿದೆ.

      ಶಿರಾ ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಶಿರಾ ಕೆರೆ ಬತ್ತಿ ಹೋಗಿ ಬಹಳ ದಿನಗಳೇ ಆಗಿವೆ. ಕಳ್ಳಂಬೆಳ್ಳ ಕೆರೆಯಿಂದಲೇ ತೆರೆದ ಹಳ್ಳದ ಮೂಲಕ ಶಿರಾ ಕೆರೆಗೆ ನೀರು ಹರಿಯಬೇಕು. ಕುಡಿಯುವ ನೀರೊದಗಿಸುವ ಯೋಜನೆಯಡಿ ತೂಬು ಎತ್ತಲಾಗಿದ್ದರೂ ಇನ್ನೂ ಶಿರಾ ಕೆರೆಯನ್ನು ನೀರು ತಲುಪಿಲ್ಲ. ಮಳೆಯ ಅವಕೃಪೆಯಿಂದಾಗಿ ನೆಲ ಒಣಗಿ ಹೋಗಿರುವುದರಿಂದ ಹಳ್ಳದಲ್ಲಿ ಹರಿಯುತ್ತಿರುವ ನೀರು ರಭಸ ಕಾಣಲು ಸಾಧ್ಯವಾಗಿಲ್ಲ. ಅಲ್ಲಲ್ಲಿ ನೀರು ಇಂಗಿದ ನಂತರವೇ ಮುಂದೆ ಹರಿಯಬೇಕಾಗಿರುವುದರಿಂದ ತಡವಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಶಿರಾ ಕೆರೆಗೆ ನೀರು ಹರಿಯುವ ಸಾಧ್ಯತೆಗಳಿವೆ.

      ಆದರೆ ಮದಲೂರು ಕೆರೆಗೆ ನೀರು ಹರಿಸುವುದು ಕಷ್ಟಸಾಧ್ಯವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ. ಶಿರಾ ಕೆರೆಗೆ 164 ದಿನಗಳ ಕಾಲ ನೀರು ಹರಿಸಬೇಕು. ಇದಕ್ಕಾಗಿ ಒಂದೂವರೆ ತಿಂಗಳು ಬೇಕಾಗಬಹುದು. ಆ ವೇಳೆಗೆ ಏನೇನು ಬದಲಾವಣೆಗಳು ಆಗುತ್ತವೆಯೋ ತಿಳಿಯದು. ಒಂದು ವೇಳೆ ಮಳೆ ಏನಾದರೂ ಬಂದಿದ್ದೇ ಆದಲ್ಲಿ ಕೆರೆಗೆ ನೀರುಣಿಸುವ ಹಾದಿ ಸುಗಮವಾಗಬಹುದು ಎನ್ನುತ್ತಾರೆ ಕೆಲವರು.

      ಇತ್ತೀಚೆಗಷ್ಟೇ ಅಲ್ಲಿನ ಶಾಸಕ ಬಿ.ಸತ್ಯನಾರಾಯಣ ಪ್ರತಿಭಟನೆಯ ಹಾದಿ ಹಿಡಿದಿದ್ದರು. ಶಿರಾ ದೊಡ್ಡಕೆರೆ ಬಳಿ ಧರಣಿ ಕುಳಿತು ಹೇಮಾವತಿ ನೀರಿನ ಪ್ರಮಾಣ ಹೆಚ್ಚಿಸುವಂತೆ ಒತ್ತಾಯಿಸಿದರು. ಇದರ ಪರಿಣಾಮವಾಗಿ ಮಾರನೆಯ ದಿನವೇ ಆ ಭಾಗಕ್ಕೆ ಹರಿಯುವ ನೀರಿನ ಪ್ರಮಾಣ ಹೆಚ್ಚಳವಾಯಿತು. ಈಗ ಬರದ ಛಾಯೆ ಎದುರಾಗಿರುವ ಕಾರಣ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಎದುರಾಗದಂತೆ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಾರೆ ನೋಡಬೇಕು.

ಚಿಕ್ಕನಾಯಕನಹಳ್ಳಿ ತಾಲ್ಲೂಕು:

      ಚಿ.ನಾ.ಹಳ್ಳಿ ಪಟ್ಟಣಕ್ಕೆ ಕಳೆದ 10 ವರ್ಷಗಳಿಂದ ಏತ ನೀರಾವರಿ ಮೂಲಕ ಚಿ.ನಾ.ಹಳ್ಳಿ ಕೆರೆಗೆ ಕುಡಿಯುವ ನೀರು ಒದಗಿಸಲಾಗುತ್ತಿದೆ. ಇದು ಆ ಪಟ್ಟಣಕ್ಕಷ್ಟೇ ಸೀಮಿತ. ಕಳೆದ ವರ್ಷದಿಂದ ತಾಲ್ಲೂಕಿನ ಬ್ಯಾಡರಹಳ್ಳಿ ಮತ್ತು ಜೆ.ಸಿ.ಪುರ ಕೆರೆಗಳಿಗೆ ಕುಡಿಯುವ ನೀರಿನ ಏತ ನೀರಾವರಿ ಯೋಜನೆಯಡಿ ನೀರು ಒದಗಿಸುವ ಯೋಜನೆ ರೂಪುಗೊಂಡಿದೆ. ಹೇಮಾವತಿ ನಾಲೆಯಲ್ಲಿ ಈ ವರ್ಷ ನೀರು ಹರಿಯಲು ಆರಂಭಿಸಿದ ದಿನದಿಂದ ಈವರೆಗೂ ಹರಿದಿರುವ ನೀರಿನ ಪ್ರಮಾಣ ಅಷ್ಟಕ್ಕಷ್ಟೆ. ಮೂರೂ ಕೆರೆಗಳಿಗೂ ಕನಿಷ್ಠ ಮೂರು ಅಡಿಗಳಷ್ಟು ನೀರು ಬಂದಿಲ್ಲ.

      ಬ್ಯಾಡರಹಳ್ಳಿ ಮತ್ತು ಜೆ.ಸಿ.ಪುರ ಕೆರೆಗಳನ್ನು ಒಮ್ಮೆ ವೀಕ್ಷಿಸಿದರೆ ಹಾಗೂ ಪೈಪ್ ಮೂಲಕ ಹರಿಯುತ್ತಿರುವ ನೀರಿನ ಪ್ರಮಾಣ ಗಮನಿಸಿದರೆ ಈ ಕಾಲಕ್ಕೆ ಕೆರೆಗಳು ತುಂಬುವ ಲಕ್ಷಣಗಳಿಲ್ಲ. ಇದೇ ತಾಲ್ಲೂಕಿನ ಪೆಮ್ಮಲದೇವನಹಳ್ಳಿ ಕೆರೆಯಿಂದ ಬೋರನಕಣಿವೆವರೆಗೆ 26 ಕೆರೆಗಳಿಗೆ ನೀರು ಹರಿಸುವ ಯೋಜನೆ ಆರಂಭವಾಗಿದೆ. ಈ ಯೋಜನೆ ಇನ್ನೂ ಕಾರ್ಯಗತಗೊಂಡಿಲ್ಲ. ಈಗಾಗಲೇ ಇರುವ ಮೂರು ಏತ ನೀರಾವರಿ ಕೆರೆಗಳನ್ನು ಹೊರತುಪಡಿಸಿದರೆ ಉಳಿದ 23 ಕೆರೆಗಳು ಗುರುತ್ವಾಕರ್ಷಣೆ ಮೂಲಕ ನೀರು ಹರಿಸಬಹುದಾದ ಯೋಜನೆಗೆ ಒಳಪಟ್ಟಿವೆ.

      ತೆಂಗು ಬೆಳೆಯುವ ಪ್ರದೇಶವಾಗಿರುವ ಕಾರಣ ಇಲ್ಲಿ ಕಳೆದ ಹಲವು ವರ್ಷಗಳಿಂದ ನೀರಿನ ಸಮಸ್ಯೆ ಎದುರಾಗಿದೆ. ಈ ತಾಲ್ಲೂಕಿನಲ್ಲಿ ಯಾವುದೇ ಜಲಮೂಲ ಇಲ್ಲದೇ ಇರುವುದು ಅಂತರ್ಜಲ ಬರಿದಾಗಲು ಕಾರಣವಾಗಿದೆ. ಇದೇ ಕಾರಣಕ್ಕೆ ಪೆಮ್ಮಲದೇವನಹಳ್ಳಿ ಕೆರೆಯಿಂದ ಬೋರನಕಣಿವೆವರೆಗೆ ಬರುವ ಕೆರೆಗಳನ್ನು ತುಂಬಿಸುವ ಯೋಜನೆ ರೂಪುಗೊಂಡದ್ದು. ಅದಿರಲಿ, ಪ್ರಸ್ತುತ ಕುಡಿಯುವ ನೀರಿಗಾಗಿಯೇ ಇರುವ ಕೆರೆಗಳಿಗೆ ನೀರಿಲ್ಲ ಎಂದಾದರೆ ಅಂತರ್ಜಲ ಅಭಿವೃದ್ಧಿಯ ಮಾತಿನ್ನೆಲ್ಲಿ.

ಮಧುಗಿರಿ : ಪೈಪ್ ಹಾನಿಯಿಂದ ಪೋಲಾಗುತ್ತಿದೆ ನೀರು

ಮಧುಗಿರಿ ತಾಲ್ಲೂಕು:

      ಮಧುಗಿರಿ ಪಟ್ಟಣದ ಜನತೆಗೆ ಕುಡಿಯುವ ನೀರು ಒದಗಿಸಲೆಂದೆ ಮಧುಗಿರಿ ಸಿದ್ದಾಪುರ ಕೆರೆಗೆ ಹೇಮಾವತಿ ನೀರು ಹರಿಸಲಾಗುತ್ತದೆ. 5.24 ಎಂ.ಎಲ್.ಡಿ. ನೀರು ಸಂಗ್ರಹಣಾ ಸಾಮರ್ಥ್ಯವಿರುವ ಸಿದ್ದಾಪುರ ಕೆರೆಯಿಂದ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆಯಿದು. ಹೇಮಾವತಿ ನೀರು ತಾಲ್ಲೂಕಿನ ಓಬಳಾಪುರಕ್ಕೆ ತಲುಪಿ ಅಲ್ಲಿಂದ ಸಿದ್ದಾಪುರಕ್ಕೆ ಮೋಟಾರ್ ಮೂಲಕ ನೀರು ಹರಿಸಲಾಗುತ್ತದೆ. ಪ್ರಸ್ತುತ 15 ದಿನಗಳಿಗಾಗುವಷ್ಟು ಮಾತ್ರವೇ ನೀರು ಸಿದ್ದಾಪುರ ಕೆರೆಯಲ್ಲಿದೆ.

      ಸಿದ್ದಾಪುರ ಕೆರೆಗೆ ಕಳೆದ ಒಂದು ತಿಂಗಳಿನಿಂದ ಕಡಿಮೆ ಪ್ರಮಾಣದಲ್ಲಿ ನೀರು ಓಬಳಾಪುರ ಪಂಪ್ಹೌಸ್ನಿಂದ ಹರಿಯುತ್ತಿದೆ. ಬಳ್ಳಾಪುರದ ಪಂಪ್ಹೌಸ್ನಲ್ಲಿ ಮಧುಗಿರಿಗೆ ಹರಿಸುವ ಎರಡು ಪಂಪ್ಗಳು ನೀರು ಹರಿಯಲು ಸಹಾಯಕವಾಗಿದ್ದು, ಅಲ್ಲೇನಾದರೂ ವಿದ್ಯುತ್ ಕಡಿತವಾದರೆ ಸಿದ್ದಾಪುರ ಕೆರೆಗೆ ನೀರು ಹರಿಯುವುದಿಲ್ಲ. ಒಂದು ತಿಂಗಳಿನಲ್ಲಿ ಓಬಳಾಪುರದಲ್ಲಿನ ಮೋಟಾರ್ ಪಂಪ್ಗಳು ಕೆಟ್ಟು ನಿಂತಿದ್ದು, ಆ ದಿನಗಳಲ್ಲಿ ಮಧುಗಿರಿ ಕೆರೆಗೆ ಮತ್ತು ಪಟ್ಟಣದ ಪಂಪ್ಹೌಸ್ನ ಮೋಟಾರ್ 8 ದಿನಗಳ ಕಾಲ ಕೆಟ್ಟು ನಿಂತಿತ್ತು. ಸಿದ್ದಾಪುರ ಕೆರೆಯಿಂದ ಪಟ್ಟಣದ ಒಂದರಿಂದ ಹದಿನೆಂಟು ವಾರ್ಡ್ಗಳಿಗೆ ನೀರು ಹರಿಸಲಾಗುತ್ತದೆ.

      ಈ ನಡುವೆ ಪಾವಗಡ ಗೇಟ್, ತುಮಕೂರು ಗೇಟ್, ಮಧುಗಿರಿ ಖಾಸಗಿ ಬಸ್ ನಿಲ್ದಾಣದ ಬಳಿ ಮುಖ್ಯ ಪೈಪ್ ಹಾಳಾಗಿ ನೀರು ಸೋರಿಕೆಯಾಗುತ್ತಿದೆ. ಇದು ಈಗಿನ ಕಥೆಯಲ್ಲ ಪದೆ ಪದೆ ಪೈಪ್ಗಳು ಒಡೆದು ಹೋಗುತ್ತಲೇ ಇರುತ್ತವೆ.

      ಓಬಳಾಪುರ ಕೆರೆಯಿಂದ ಈಗ ಒಂದು ಮೋಟಾರ್ ಮಾತ್ರವೇ ಕಾರ್ಯನಿರ್ವಹಿಸುತ್ತಿದೆ. ಎರಡು ಮೋಟಾರ್ಗಳ ಮೂಲಕ ನೀರು ಸರಬರಾಜು ಪ್ರಕ್ರಿಯೆ ನಡೆದಿದ್ದರೆ ಬಹು ಬೇಗನೆ ಸಿದ್ದಾಪುರ ಕೆರೆಗೆ ನೀರು ಸಂಗ್ರಹವಾಗುತ್ತಿತ್ತು. ಒಂದು ಮೋಟಾರ್ ಕಾರ್ಯ ನಿರ್ವಹಿಸುತ್ತಿರುವುದರಿಂದ ಜಲಸಂಗ್ರಹಾಗಾರದಲ್ಲಿ ನೀರು ಶೇಖರಣೆಯಾಗಲು ವಿಳಂಬವಾದರೆ ಕಡಿಮೆ ಪ್ರಮಾಣದ ನೀರು ಹರಿಯುತ್ತಿರುವುದು ಮತ್ತೊಂದು ಸಮಸ್ಯೆ. ಈ ನಡುವೆ ಒಡೆದು ಹಾಳಾಗಿರುವ ಪೈಪ್ಗಳನ್ನು ರಿಪೇರಿ ಮಾಡಿಸುವ ಕೆಲಸ ಮಾತ್ರ ನಡೆದಿಲ್ಲ. ಪರಿಣಾಮವಾಗಿ ಸಾಕಷ್ಟು ನೀರು ಹಾನಿಯಾಗುತ್ತಲೇ ಇದೆ.

ತುಮಕೂರು ತಾಲ್ಲೂಕು:

      ತುಮಕೂರು ತಾಲ್ಲೂಕಿನಲ್ಲಿ ಹೇಮಾವತಿ ಹರಿಯುವ ಕೆರೆಗಳನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ. ಹೆಬ್ಬೂರು-ಗೂಳೂರು ಏತ ನೀರಾವರಿ ಯೋಜನೆ ವ್ಯಾಪ್ತಿಯಲ್ಲಿ 52 ಕೆರೆಗಳು ಬರುತ್ತವೆ. ಕಸಬಾ ಹೋಬಳಿ ವ್ಯಾಪ್ತಿಗೆ ಮಲ್ಲಸಂದ್ರ, ಹಾಲನೂರು, ದೊಡ್ಡನಾರವಂಗಲ, ಕುಪ್ಪೂರು, ಹೆಬ್ಬಾಕ, ಅಸಲೀಪುರ ಸೇರುತ್ತವೆ. ಊರ್ಡಿಗೆರೆ ವ್ಯಾಪ್ತಿಗೆ ಮೈದಾಳ ಮತ್ತು ದೇವರಾಯಪಟ್ಟಣ ಕೆರೆಗಳು ಸೇರುತ್ತವೆ.

      ತುಮಕೂರು ನಗರಕ್ಕೆ ಕುಡಿಯುವ ನೀರೊದಗಿಸುವ ಬುಗುಡನಹಳ್ಳಿ ಕೆರೆಗೆ ಜುಲೈ ತಿಂಗಳಿನಲ್ಲಿಯೇ ನೀರು ಹರಿಸಲಾಯಿತಾದರೂ ನೀರಿನ ಪ್ರಮಾಣ ಕ್ರಮೇಣ ಕಡಿಮೆಯಾಗಿದ್ದರಿಂದ ಇನ್ನೂ ಕೆರೆ ತುಂಬಲು ಸಾಧ್ಯವಾಗಿಲ್ಲ. ಪ್ರಸ್ತುತ ಕಳೆದ ನಾಲ್ಕೈದು ದಿನಗಳಿಂದ ನೀರಿನ ಪ್ರಮಾಣ ಹೆಚ್ಚಾಗಿದೆ. ಅಂದರೆ, ನಾಲೆಯಿಂದ 200 ಕ್ಯುಸೆಕ್ಸ್ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಇದರಿಂದಾಗಿ ಇನ್ನು 15 ದಿನಗಳಲ್ಲಿ ಬುಗುಡನಹಳ್ಳಿ ಕೆರೆ ಭರ್ತಿಯಾಗಬಹುದೆಂದು ಅಂದಾಜಿಸಲಾಗಿದೆ. ಈ ಕೆರೆಯಿಂದ ಹೆಬ್ಬಾಕ ಕೆರೆಗೆ ನೀರು ಹರಿಸಲಾಗುತ್ತಿದೆ. ಹೆಬ್ಬಾಕ ಮತ್ತು ಕುಪ್ಪೂರು ಕೆರೆಗಳು ಬುಗುಡನಹಳ್ಳಿ ಕೆರೆಗೆ ಪೂರಕವಾಗಿ ಇರುವ ಕೆರೆಗಳು. ಬುಗುಡನಹಳ್ಳಿಯಿಂದ ಈ ಕೆರೆಗಳಿಗೆ ನೀರು ತುಂಬಿಸಿಕೊಂಡರೆ ಬುಗುಡನಹಳ್ಳಿ ಕೆರೆ ಖಾಲಿಯಾದಾಗ ಈ ಕೆರೆಗಳ ನೀರನ್ನು ಬಳಕೆ ಮಾಡಿಕೊಳ್ಳಬಹುದು.

      ದುರಂತವೆಂದರೆ, ತುಮಕೂರು ಜಿಲ್ಲೆಗೆ ನೀರು ಹರಿಯಲು ಆರಂಭಿಸಿ ಎರಡೂವರೆ ತಿಂಗಳು ಕಳೆದರೂ ಬುಗುಡನಹಳ್ಳಿ ಕೆರೆ ಭರ್ತಿಯಾಗಲಿಲ್ಲ. ಕೊನೇಪಕ್ಷ ಅರ್ಧ ಕೆರೆಯನ್ನಾದರೂ ತುಂಬಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ವೇಳೆ ಈ ಹಿಂದೆಯೇ ನೀರನ್ನು ತುಂಬಿಸಿಕೊಂಡಿದ್ದರೆ ಹೆಬ್ಬಾಕ, ಕುಪ್ಪೂರು ಕೆರೆಗಳನ್ನು ತುಂಬಿಸಿಕೊಳ್ಳಬಹುದಿತ್ತು. ಈ ಕಾರ್ಯ ಇದೀಗ ಆರಂಭವಾಗಿದೆ.

      ತುಮಕೂರು ಸುತ್ತಮುತ್ತಲ ಯಾವ ಕೆರೆಗಳಿಗೂ ನೀರು ಹರಿದಿಲ್ಲ. ಹೆಬ್ಬೂರುಗೂಳೂರು ಕೆರೆಗಳಿಗೆ ನೀರು ಹರಿಯುತ್ತಿರುವುದನ್ನು ಬಿಟ್ಟರೆ ಕಸಬಾ ಹೋಬಳಿ, ಊರ್ಡಿಗೆರೆ ವ್ಯಾಪ್ತಿಯ ಕೆರೆಗಳಿಗೆ ಹೇಮಾವತಿ ನೀರು ಹರಿದಿಲ್ಲ. ಇಲ್ಲಿಯೇ ಕುಡಿಯುವ ನೀರಿಗೆ ಸಂಕಷ್ಟವಿದೆ. ಹೀಗಿದ್ದರೂ ಕೈಗಾರಿಕೆಗಳಿಗೆ ನೀರು ಒದಗಿಸುವ ಯೋಜನೆಗಳು ಕೆಲವು ವರ್ಷಗಳಿಂದ ಜೀವಂತಿಕೆ ಪಡೆದುಕೊಂಡಿವೆ. ಈ ವಿಷಯ ಪರ- ವಿರೋಧದ ವಿಷಯವಾಗಿ ರಾಜಕಾರಣಿಗಳಿಗೆ ಆಹಾರವಾಗಿದೆ.

      ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದಾಬಸ್ಪೇಟೆ ಕೈಗಾರಿಕಾ ಪ್ರದೇಶ ಹಾಗೂ ತುಮಕೂರು ಜಿಲ್ಲೆಯ ಹಿರೇಹಳ್ಳಿ ಕೈಗಾರಿಕಾ ಪ್ರದೇಶಕ್ಕೆ 15 ಎಂಎಲ್ಡಿ ನೀರನ್ನು ಬುಗುಡನಹಳ್ಳಿ ಕೆರೆಯಿಂದ ದೇವರಾಯ ಪಟ್ಟಣದ ಕೆರೆಯ ಮೂಲಕ ಮೈದಾಳ ಕೆರೆಯಲ್ಲಿ ಸಂಗ್ರಹಿಸಿ ಈ ಕೈಗಾರಿಕೆ ಪ್ರದೇಶಗಳಿಗೆ ನೀರು ಪೂರೈಸಲು ಯೋಜನೆ ರೂಪಿತವಾಗಿದೆ. 75.38 ಕೋಟಿ ರೂ.ಗಳ ವೆಚ್ಚದ ಈ ಯೋಜನೆ ಹಿರೇಹಳ್ಳಿ, ದಾಬಸ್ ಪೇಟೆ ಕೈಗಾರಿಕಾ ಪ್ರದೇಶಗಳಿಗೆ ನೀರೊದಗಿಸುವ ಯೋಜನೆಯಾಗಿದೆ.

      ತುಮಕೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಬುಗುಡನಹಳ್ಳಿ ಕೆರೆ ಇತ್ತೀಚಿನ ವರ್ಷಗಳಲ್ಲಿ ಭರ್ತಿಯಾಗಿ ಕೋಡಿ ಹರಿಯುವುದು ಕಡಿಮೆಯಾಗಿದೆ. ಇಲ್ಲಿ ನೀರು ಹೆಚ್ಚು ಸಂಗ್ರಹವಾಗಿ ಹೆಬ್ಬಾಕ ಕೆರೆಗೂ ಹರಿಸಿದರೆ ನೀರಿನ ಸಮಸ್ಯೆ ನೀಗಿಸಬಹುದು. ಹೆಬ್ಬಾಕ ಕೆರೆಯು 190 ಎಂಸಿಎಫ್ಟಿ ಯಷ್ಟು ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಇದರ ಜೊತೆಗೆ ತುಮಕೂರು ಅಮಾನಿಕೆರೆ, ಮರಳೂರು ಕೆರೆ ಇತ್ಯಾದಿ ಕೆರೆಗಳಿಗೆ ನೀರು ಹರಿಸುವ ಚಿಂತನೆಗಳು ಇತ್ತೀಚಿನ ದಿನಗಳಲ್ಲಿ ಹುಟ್ಟಿಕೊಂಡಿವೆ. ಈ ಯೋಜನೆ ಸಾಕಾರಗೊಳ್ಳಲು ಇನ್ನು ಕೆಲವು ವರ್ಷಗಳು ಬೇಕಾಗಬಹುದು. ಆದರೆ ಅಮಾನಿಕೆರೆಗೆ ನೀರು ತುಂಬಿಸಬಹುದು. 152 ಎಂಸಿಎಫ್ಟಿ ನೀರಿನ ಸಾಮರ್ಥ್ಯ ಇರುವ ಕೆರೆ ಹಾಗೂ ಹೆಬ್ಬಾಕ ಕೆರೆ ಇವರೆಡು ತುಂಬಿಕೊಂಡರೆ ಕುಡಿಯುವ ನೀರಿನ ಅಭಾವವನ್ನು ತಪ್ಪಿಸಲು ಸಾಧ್ಯವಾಗುತ್ತದೆ.

      ಜಿಲ್ಲೆಯಲ್ಲಿ ಬಹಳ ವರ್ಷಗಳಿಂದ ನೀರಿನ ರಾಜಕಾರಣ ನಡೆಯುತ್ತಿದೆ. ರಾಜಕಾರಣಿಗಳಾದವರು ಆಯಾ ತಾಲ್ಲೂಕಿಗೆ ಸೀಮಿತವಾಗಿ ವರ್ತಿಸುತ್ತಾ ಬಂದಿದ್ದಾರೆ. ಹೇಮಾವತಿ ನೀರನ್ನು ಜಿಲ್ಲೆಗೆ ಹರಿಸುವ ಉಸಾಬರಿಗಿಂತ ಹೆಚ್ಚಾಗಿ ಹರಿಯುತ್ತಿರುವ ನೀರನ್ನು ನಮ್ಮ ತಾಲ್ಲೂಕಿಗೆ ಹೇಗೆ ಮತ್ತು ಎಷ್ಟನ್ನು ತೆಗೆದುಕೊಂಡು ಹೋಗಬಹುದು ಎಂಬ ಚಿಂತನೆಯಲ್ಲಿಯೇ ಮುಳುಗಿ ಹೋಗುತ್ತಿದ್ದಾರೆ. ಹೀಗಾಗಿ ಕೆಲವರ ಮಾತಿಗೆ ಅಧಿಕಾರಿಗಳು ಮಣಿಯುತ್ತಿದ್ದಾರೆ ಎಂಬ ಆರೋಪಗಳು ಹಿಂದಿನಿಂದಲೂ ಕೇಳಿ ಬಂದಿವೆ. ಹೇಮಾವತಿ ಯೋಜನೆಯ ಪ್ರಕಾರವೇ ನೀರು ಹರಿಸಲು ಎಲ್ಲರೂ ಮನಸ್ಸು ಮಾಡಬೇಕು.

      ಪ್ರಸ್ತುತ ಕೆಲವು ತಾಲ್ಲೂಕುಗಳ ಚಿತ್ರಣವನ್ನು ಗಮನಿಸಿದರೆ ನೀರು ಖಾಲಿಯಾಗುತ್ತಿರುವುದರಿಂದ ಆತಂಕಗೊಂಡಿರುವ ರೈತರು ತಮ್ಮ ವ್ಯಾಪ್ತಿಯ ಕೆರೆಗಳಿಗೆ ನಾಲೆಗೆ ಮೋಟಾರ್ ಬಿಟ್ಟು ಅವರೇ ನೀರನ್ನು ಹರಿಸುತ್ತಿರುವ ವರದಿಗಳು ಸಹ ಇವೆ. ಬರಗಾಲದ ಈ ದಿನಗಳಲ್ಲಿ ರೈತರು ತಾನೆ ಇನ್ನೇನು ಮಾಡಿಯಾರು. ತೋಟ ಉಳಿಸಿಕೊಳ್ಳುವ ತವಕ ಅವರದ್ದು.

      ಕಳೆದ ವರ್ಷ ಬರಗಾಲದ ತೀವ್ರತೆ ಇದ್ದ ಪರಿಣಾಮ ನೀರಿಗಾಗಿ ಹಾಹಾಕಾರ ಉಂಟಾಗಿತ್ತು. ನೀರಿನ ರಾಜಕಾರಣವೂ ಅಷ್ಟೇ ಜೋರಾಗಿತ್ತು. ಈ ಬಾರಿಯೂ ಜಿಲ್ಲೆಯಲ್ಲಿ ಬರ ಕಾಣಿಸಿಕೊಂಡಿದೆ. ಹೇಮಾವತಿ ನೀರು ಮಾತ್ರ ದಾಖಲೆಗಳಲ್ಲಿ ಹರಿಯುತ್ತಿದೆ. ಅದೂ ಕೆಲವು ಭಾಗಗಳಿಗೆ ಮಾತ್ರ. ಬಹಳಷ್ಟು ಕೆರೆಗಳಿಗೆ ಹೇಮಾವತಿ ನೀರನ್ನು ಇನ್ನೂ ಹರಿಸಲಾಗಿಲ್ಲ. ಗೊರೂರು ಜಲಾಶಯದಲ್ಲಿ ಯಥೇಚ್ಛವಾಗಿ ನೀರಿದ್ದರೂ ಇಲ್ಲಿನ ಕೆರೆಗಳು ನೀರನ್ನು ಕಾಣದೆ ಇರುವುದು ದುರಂತ. ರಾಜಕಾರಣಿಗಳು ಮತ್ತು ಅಧಿಕಾರಿಗಳು ವರದಿ ಒಪ್ಪಿಸುವುದನ್ನು ಬಿಟ್ಟು ವಾಸ್ತವ ಸ್ಥಿತಿಯತ್ತ ಗಮನ ಹರಿಸಲಿ.

    ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

 

Recent Articles

spot_img

Related Stories

Share via
Copy link
Powered by Social Snap