ಇಂದಿನಿಂದ ಜಕಾರ್ತದಲ್ಲಿ ಏಷ್ಯನ್ ಕ್ರೀಡಾಕೂಟ ಪ್ರಾರಂಭ

    

      ಒಲಂಪಿಕ್ಸ್ ಕ್ರೀಡಾಕೂಟದ ನಂತರ ವಿಶ್ವದ ಪ್ರತಿಷ್ಟಿತ ಕ್ರೀಡಾಕೂಟವಾಗಿ ಹೊರಹೊಮ್ಮಿರುವ ಏಷ್ಯನ್ ಕ್ರೀಡಾಕೂಟವು ಆಗಸ್ಟ್ 18 ರಿಂದ ಸೆಪ್ಟೆಂಬರ್ 2 ರವರೆಗೆ ಇಂಡೋನೇಷ್ಯಾದ ರಾಜಧಾನಿ ಜಕಾರ್ತ ಹಾಗೂ ಸುಮಾತ್ರಾ ದ್ವೀಪದ ಪಾಲೆಮ್ ಬಾಂಗ್‍ನಲ್ಲಿ ನಡೆಯಲಿದೆ.

      ಪ್ರಾಚೀನ ಕಾಲದಿಂದಲೂ ಮನರಂಜನೆಗಾಗಿ ಆರಂಭಗೊಂಡ ಕ್ರೀಡೆಯು ಪ್ರಸ್ತುತ ಕಾಲಕ್ಕನುಗುಣವಾಗಿ ಕ್ರಮೇಣವಾಗಿ ಬದಲಾಗುತ್ತಾ ಹೋಗುತ್ತಿದೆ. ಈ ಕ್ರೀಡೆಗಳು ರಾಷ್ಟ್ರ-ರಾಷ್ಟ್ರಗಳನ್ನು ಬೆಸೆಯುವ ಕೊಂಡಿಯಾಗಿ ಮಾರ್ಪಟ್ಟಿವೆ. ಶತ-ಶತಮಾನದ ಇತಿಹಾಸ ಹೊಂದಿರುವ ಒಲಂಪಿಕ್ಸ್ ಕ್ರೀಡಾಕೂಟವು ಮನರಂಜನೆ ಜತೆಗೆ ವಿಶ್ವದ ವಿವಿಧ ರಾಷ್ಟ್ರಗಳ ನಡುವಿನ ಬಾಂಧವ್ಯ ಬೆಸೆಯುವ ಸಾಧನವಾಗಿ ರೂಪುಗೊಂಡಿದೆ.ಒಲಂಪಿಕ್ಸ್ ಮಾದರಿಯಲ್ಲಿಯೇ ಏಷ್ಯಾ ರಾಷ್ಟ್ರಗಳಿಗೆ ಸೀಮಿತವಾಗಿದ್ದ ಈ ಏಷ್ಯನ್ ಕ್ರೀಡಾಕೂಟ, ಕೂಟದಿಂದ ಕೂಟಕ್ಕೆ ಯಶಸ್ವಿಯಾಗುತ್ತಾ ಸಾಗಿದ್ದು, ಒಲಂಪಿಕ್ಸ್ ನಂತರ ವಿಶ್ವದ ಪ್ರತಿಷ್ಟಿತ ಕ್ರೀಡಾಕೂಟವಾಗಿ ಹೊರಹೊಮ್ಮಿದೆ.

      ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಕ್ರೀಡಾಕೂಟವು ವಿಶ್ವದ ಪ್ರತಿಷ್ಟಿತ ಕ್ರೀಡಾಕೂಟಗಳಲ್ಲಿ ಒಂದಾಗಿದೆ. ಏಷ್ಯಾ ಖಂಡದ ರಾಷ್ಟ್ರಗಳು ಪಾಲ್ಗೊಳ್ಳುತ್ತಿದ್ದು, ಇದರಲ್ಲಿ ಭಾಗವಹಿಸುವ ರಾಷ್ಟ್ರಗಳ ಸಂಖ್ಯೆ ಕೂಟದಿಂದ ಕೂಟಕ್ಕೆ ಹೆಚ್ಚುತ್ತಾ ಸಾಗಿದೆ. ಇದರೊಂದಿಗೆ ಕ್ರೀಡಾಪಟುಗಳ ಸಂಖ್ಯೆಯೂ ಕೂಡಾ ಗಣನಿಯವಾಗಿ ಹೆಚ್ಚುತ್ತಾ ಸಾಗಿದೆ. ಇದು ಏಷ್ಯಾ ಖಂಡದಲ್ಲಿ ಕ್ರೀಡಾ ಬೆಳವಣಿಗೆಯು ಒಂದು ಉತ್ತಮ ಬೆಳವಣಿಗೆಯಾಗಿದೆ. ಮೊಟ್ಟಮೊದಲ ಬಾರಿಗೆ ಈ ಏಷ್ಯನ್ ಕ್ರೀಡಾಕೂಟವು ಭಾರತದಲ್ಲಿ ನಡೆಯಿತು ಎಂಬುದು ವಿಶೇಷ. ನವದೆಹಲಿಯಲ್ಲಿ 1949 ರ ಫೆಬ್ರವರಿ 13ರಂದು ಏಷ್ಯನ್ ಅಥ್ಲೆಟಿಕ್ ಫೆಡರೇಷನ್ ಅಸ್ತಿತ್ವಕ್ಕೆ ತರಲಾಯಿತು.1950 ರಲ್ಲಿ ನವದೆಹಲಿಯಲ್ಲಿಯೇ ಮೊದಲ ಏಷ್ಯನ್ ಕ್ರೀಡಾಕೂಟವನ್ನು ನಡೆಸಲು ನಿರ್ಧರಿಸಲಾಯಿತು.

      1950 ರಲ್ಲಿ ನಡೆಸಲುದ್ದೇಶಿಸಿದ್ದ ಚೊಚ್ಚಲ ಏಷ್ಯನ್ ಕ್ರೀಡಾಕೂಟಕ್ಕೆ ಕಾರಣಾಂತರದಿಂದ ಮುಂದೂಡಿ 1951 ರಂದು ಚಾಲನೆ ದೊರೆಯಿತು. ಮಾರ್ಚ್ 4 ರಿಂದ 11 ರವರೆಗೆ ನಡೆದ ಮೊದಲ ಏಷ್ಯನ್ ಕ್ರೀಡಾಕೂಟಕ್ಕೆ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರು ಚಾಲನೆ ನೀಡಿದರು.ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಒಟ್ಟು 11 ರಾಷ್ಟ್ರಗಳ 489 ಕ್ರೀಡಾಪಟುಗಳು ಪದಕ ಪಡೆಯಲು ಪೈಪೋಟಿ ನಡೆಸಿದರು. ಈ ಚೊಚ್ಚಲ ಕ್ರೀಡಾಕೂಟವನ್ನು ಅತ್ಯಂತ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ಸಂಘಟಿಸಿದ್ದ ಭಾರತವು ಮೆಚ್ಚುಗೆಗೆ ಪಾತ್ರವಾಯಿತು. ಈ ಕ್ರೀಡಾಕೂಟ ಮುಕ್ತಾಯವಾಗುತ್ತಿದ್ದಂತೆ ಫಿಲಿಫೈನ್ಸ್‍ನಲ್ಲಿ ಎರಡನೇ ಕ್ರೀಡಾಕೂಟವನ್ನು ನಡೆಸಲು ತೀರ್ಮಾನಿಸಲಾಯಿತು.ಈ ಎರಡನೇ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಸೆಣಸಾಡಿ ಪದಕಗಳ ದೋಚಲು ಬಂದಿದ್ದ 18 ರಾಷ್ಟ್ರಗಳಲ್ಲಿ ಒಟ್ಟು 970 ಕ್ರೀಡಾಪಟುಗಳು ಭಾಗವಹಿಸಿದ್ದರು.

      ಪ್ರಾರಂಭಗೊಂಡಂದಿನಿಂದ 1979 ರವರೆಗೆ ನಡೆದ ಕ್ರೀಡಾಕೂಟವು ಏಷ್ಯನ್‍ಗೇಮ್ಸ್ ಫೆಡರೇಷನ್ ನಿಯಂತ್ರಣದಲ್ಲಿತ್ತು. ಆದರೆ, 1882 ರಿಂದ ಒಲಿಂಪಿಕ್ಸ್ ಕೌನ್ಸಲ್ ಆಫ್ ಏಷ್ಯಾ ಅಧೀನದಲ್ಲಿ ಏಷ್ಯನ್ ಕ್ರೀಡಾಕೂಟ ನಡೆಯುತ್ತಿದು, ಈ ಕೂಟದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಮಾನ್ಯತೆ ದೊರೆತು, ಒಲಿಂಪಿಕ್ಸ್ ಕೂಟದ ನಂತರ ವಿಶ್ವದ ಅತೀ ದೊಡ್ಡ ಕ್ರೀಡಾಕೂಟವೆಂಬ ಹೆಗ್ಗಳಿಕೆ ಏಷ್ಯನ್ ಕ್ರೀಡಾಕೂಟಕ್ಕಿದೆ.

      ಇದುವರೆಗೆ ನಡೆದಿರುವ 17 ಕ್ರೀಡಾಕೂಟಗಳ ಆತಿಥ್ಯವನ್ನು ಒಟ್ಟು 9 ರಾಷ್ಟ್ರಗಳು ಆತಿಥ್ಯ ವಹಿಸಿವೆ. ಇಸ್ರೇಲ್ ಹೊರತುಪಡಿಸಿ. ಏಷ್ಯಾದ 45 ರಾಷ್ಟ್ರ ತಂಡಗಳು ಈ ಕೂಟಗಳಲ್ಲಿ ಭಾಗವಹಿಸಿವೆ. 7 ರಾಷ್ಟ್ರಗಳಾದ ಇಂಡೋನೇಷಿಯಾ, ಭಾರತ, ಶ್ರೀಲಂಕಾ, ಸಿಂಗಾಪುರ್, ಫಿಲಿಫೈನ್ಸ್, ಜಪಾನ್, ಥೈಲ್ಯಾಂಡ್ ಕೂಟದ ಎಲ್ಲಾ ಆವೃತ್ತಿಗಳಲ್ಲಿ ಪಾಲ್ಗೊಂಡಿವೆ.

      ದಕ್ಷಿಣ ಕೊರಿಯಾದ ಇಂಚಿಯಾನ್‍ನಲ್ಲಿ 2014 ರ ಸೆಪ್ಟೆಂಬರ್ 19 ರಿಂದ 4 ರವರೆಗೆ ನಡೆದ ಈ ಕೂಟದಲ್ಲಿ 45 ರಾಷ್ಟ್ರಗಳಿಂದ 36 ಸ್ಪರ್ಧೆಗಳಲ್ಲಿ ಒಟ್ಟು 9501 ಮಂದಿ ಪೈಪೋಟಿ ನಡೆಸಿದರು. 18 ನೇ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಭಾರತ ತಂಡದ ಮುಖ್ಯಸ್ಥರಾಗಿ ಬ್ರಿಜ್‍ಭೂಷಣ್ ಶರಣ ಸಿಂಗ್ ಅವರನ್ನು ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷರಾಗಿರುವ ಸಿಂಗ್ ಅವರೊಂದಿಗೆ ನಾಲ್ವರು ಉಪ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ರಾಜಕುಮಾರ ಸಾಚೇತಿ, ಕರ್ನಲ್ ಸತ್ಯವ್ರತ ಶೋರಾನ್, ಬಲಬೀರ್ ಸಿಂಗ್ ಖುಶವಾಹಾ ಹಾಗೂ ದೇವಕುಮಾರ ಸಿಂಗ್ ಅವರು ಕಾರ್ಯನಿರ್ವಹಿಸುವರು.

 ಆಗಸ್ಟ್ 18 ರಿಂದ ಸೆಪ್ಟೆಂಬರ್ 2 ರವರೆಗೆ ನಡೆಯಲಿರುವ ಈ ಕ್ರೀಡಾಕೂಟದಲ್ಲ್ಲಿ 34 ವಿವಿಧ ಕ್ರೀಡೆಗಳಲ್ಲಿ ಭಾರತದ ಒಟ್ಟು 543 ಕ್ರೀಡಾಪಟುಗಳು ಭಾಗವಹಿಸಲಿದ್ದು, ಪದಕ ಪಡೆಯಲು ಸೆಣಸಾಟ ನಡೆಸಲಿದ್ದಾರೆ. ಈ ಕೂಟದಲ್ಲಿನ ಬೇಸ್‍ಬಾಲ್,ಫುಟ್‍ಬಾಲ್, ಜೆಟ್‍ಸ್ಕೈ, ಮಾಡರ್ನ್ ಪೆಂಟಾಥ್ಲಾನ್, ರಗ್ಬಿಸೆವೆನ್ ಹಾಗೂ ಟ್ರಯಾಥ್ಲಾನ್ ಸ್ಪರ್ಧೆಗಳಲ್ಲಿ ಭಾರತದ ಕ್ರೀಡಾಪಟುಗಳು ಭಾಗವಹಿಸುತ್ತಿಲ್ಲ.

 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap