ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಎಸ್‍ಎಫ್‍ಐ ಅಖಿಲ ಭಾರತ ಜಾಥಾ

ತುಮಕೂರು

                ತಾರತಮ್ಯರಹಿತ, ವೈಜ್ಞಾನಿಕ ಶಿಕ್ಷಣಕ್ಕೆ ಒತ್ತಾಯಿಸಿ ಎಸ್‍ಎಫ್‍ಐ ಅಖಿಲ ಭಾರತ ಜಾಥಾವು ಕನ್ಯಾಕುಮಾರಿಯಿಂದ ಹೊರಟು ತುಮಕೂರು  ನಗರಕ್ಕೆ ಸೋಮವಾರ ರಾತ್ರಿ ಆಗಮಿಸಿತು. ಎಸ್‍ಎಫ್‍ಐ ಜಿಲ್ಲಾ ಸಮಿತಿಯು ಜಾಥಾವನ್ನು ಸ್ವಾಗತಿಸಿತು.
ಜಾಥಾವನ್ನು ಉದ್ದೇಶಿಸಿ ಎಸ್‍ಎಫ್‍ಐ ರಾಷ್ಟಾಧ್ಯಕ್ಷರಾದ ವಿ.ಪಿ.ಸಾನುರವರು ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶಿಕ್ಷಣ ನೀತಿಗಳು ಅವೈಜ್ಞಾನಿಕತೆಯಿಂದ ಕೂಡಿದ್ದು, ನಿರುದ್ಯೋಗ ಹೆಚ್ಚಳವಾಗಳು ಕಾರಣವಾಗಿದೆ. ವಿಶ್ವವಿದ್ಯಾಲಯಗಳಲ್ಲಿ ಶೈಕ್ಷಣಿಕ ವಾತಾವರಣಕ್ಕಿಂತ ಕೋಮುವಾದಿಕರಣಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅತ್ಯಂತ ಅಪಾಯಕಾರಿಯಾಗಿದೆ ಸಂಶೋಧನೆಯಲ್ಲಿ ತೊಡಗಬೇಕಾದ ವಿವಿಗಳು ಭ್ರಷ್ಟಾಚಾರದಲ್ಲಿ ಮುಳುಗುತ್ತಿವೆ. ಉನ್ನತ ಶಿಕ್ಷಣವು ಅತ್ಯಂತ ಅಪಾಯಕಾರಿ ಸ್ಥಿತಿಯನ್ನು ತಲುಪಿದ್ದು, ಇಂಜಿನಿಯರಿಂಗ್ ಮೆಡಿಕಲ್ ಸೇರಿದಂತೆ ವೃತ್ತಿಪರ ಕೋರ್ಸ್‍ಗಳು ಬಡವರಿಗೆ ಕೈಗೆಟಕದ ಸ್ಥಿತಿ ನಿರ್ಮಾಣವಾಗಿದೆ.

                     ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಿಕ್ಷಣ ಕ್ಷೇತ್ರದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗುತ್ತಿಲ್ಲ. ದೇಶದ ಸುಮಾರು 2 ಲಕ್ಷ ಸರ್ಕಾರಿ ಶಾಲೆಗಳನ್ನು ಮುಚ್ಚುವ ಸ್ಥಿತಿಯನ್ನು ಕೇಂದ್ರ ಸರ್ಕಾರ ನಿರ್ಮಾಣ ಮಾಡಿದೆ. ಸರ್ಕಾರಿ ಶಾಲಾ ಕಾಲೇಜು ಮತ್ತು ವಿವಿಗಳಿಗೆ ಮೂಲಭೂತ ಸೌಲಭ್ಯ ಒದಗಿಸುವ ಬದಲಾಗಿ ಖಾಸಗಿ ಶಾಲಾ ಕಾಲೇಜು ವಿವಿಗಳಿಗೆ ಸರ್ಕಾರವು ಬೆಂಬಲಿಸುತ್ತಿದೆ. ಇದು ಶಿಕ್ಷಣ ವ್ಯಾಪಾರಿಕರಣದ ಭಾಗವಾಗಿದೆ ಎಂದು ಮಾತನಾಡಿ ಇದೇ ತಿಂಗಳ 17ರಂದು ಜಮ್ಮು ಕಾಶ್ಮೀರ, ತ್ರಿಪುರದ ಅಗರ್ತಾಲ, ಕನ್ಯಾಕುಮಾರಿ, ರಾಜಸ್ಥಾನ್ ಹೊರಟಿರುವ ಜಾಥಾ ದೆಹಲಿಯಲ್ಲಿ ಕೇಂದ್ರದ ಶಿಕ್ಷಣ ವಿರೋಧಿ ನೀತಿಯ ವಿರುದ್ಧ ಬೃಹತ್ ಬಹಿರಂಗ ಸಭೆ ಮೂಲಕ ಸಮಾಪ್ತಿಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ ಹಲವಾರು ರಾಷ್ಟ್ರೀಯ ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ.
                    ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ಮಾತನಾಡಿ ರಾಜ್ಯದಲ್ಲಿ ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೆ ಶಿಕ್ಷಣ ಕ್ಷೇತ್ರವು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಶಿಕ್ಷಕ ಉಪನ್ಯಾಸಕರು ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಇಲ್ಲದಂತಾಗಿದೆ. ರಾಜ್ಯದಲ್ಲಿ 34 ಸಾವಿರ ಶಿಕ್ಷಕ, ಉಪನ್ಯಾಸಕ ಹುದ್ದೆಗಳು ಖಾಲಿ ಇವೆ. ಎಸ್‍ಸಿ ಎಸ್‍ಟಿ ಹಾಗೂ ಬಿಸಿಎಂ ಹಾಸ್ಟೆಲ್‍ಗಳು ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ವಿವಿಗಳು ಉನ್ನತ ಶಿಕ್ಷಣ ನೀಡುವ ಬದಲಾಗಿ ಭ್ರಷ್ಟಾಚಾರದಲ್ಲಿ ತೊಡಗಿವೆ. ಗ್ರಾಮೀಣ ಪ್ರದೇಶದ ಬಹುತೇಕ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇದೆ. ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಹಲವಾರು ಮೂಲಭೂತ ಸಮಸ್ಯೆಗಳಿಂದ ಕೂಡಿದೆ. ರಾಜ್ಯದಲ್ಲಿ ಉನ್ನತ ಹಂತದಿಂದ ಪ್ರಾಥಮಿಕ ಹಂತದವರೆಗೂ ಶಿಕ್ಷಣ ವ್ಯಾಪಾರಿಕರಣವಾಗುತ್ತಿದೆ. ಇದನ್ನು ನಿಯಂತ್ರಿಸುವಂತೆ ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಲಾಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೇರಳದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ 98ರಷ್ಟು ಫಲಿತಾಂಸ ಬಂದಿದ್ದು ಅಲ್ಲಿನ ಸರ್ಕಾರಿ ಶಾಲಾ ಕಾಲೇಜುಗಳ ಗುಣಮಟ್ಟವನ್ನು ಹೇಳುತ್ತದೆ.
                   ಈ ಸಂದರ್ಭದಲ್ಲಿ ಜಾಥಾವನ್ನು ಎಸ್‍ಎಫ್‍ಐ ಜಿಲ್ಲಾಧ್ಯಕ್ಷರಾದ ಈ.ಶಿವಣ್ಣರವರು ಸ್ವಾಗತಿಸಿ ಮಾತನಾಡಿ ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಸಮಸ್ಯೆಗಳಿದ್ದು, ಅವುಗಳನ್ನು ನಿವಾರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಹಾಸ್ಟೆಲ್ ಸಮಸ್ಯೆ, ಬಸ್ ಪಾಸ್ ಸಮಸ್ಯೆ ಹೀಗೆ ವಿದ್ಯಾರ್ಥಿಗಳಿಗೆ ಹಲವಾರು ಸಮಸ್ಯೆಗಳಿದ್ದು ಬಗೆಹರಿಸಲು ಮುಂದಾಗಬೇಕಾಗಿದೆ. ತುಮಕೂರು ವಿವಿಯು ಸ್ವಂತ ಕಟ್ಟಡವಿಲ್ಲದೆ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆಯುತ್ತಿದ್ದು ಸರ್ಕಾರದಿಂದ ಗುರುತಿಸಿರುವ ಜಾಗದಲ್ಲಿ ವಿವಿ ಕ್ಯಾಂಪಸ್ ನಿರ್ಮಿಸಲು ಕುಲಪತಿ ಹಾಗೂ ಸರ್ಕಾರ ಮುಂದಾಗಬೇಕಾಗಿದೆ. ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಬೇಕಾದ ಪೂರಕವಾತಾವರಣ ನಿರ್ಮಾಣವಾಗಬೇಕಾಗಿದೆ. ಕಾಲೇಜಿಗೆ ಬೇಕಾದ ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕಾಗಿದೆ
ಜಾಥಾದಲ್ಲಿ ಎಸ್‍ಎಫ್‍ಐ ಮುಖಂಡರಾದ ಚಂದ್ರಶೇಖರ್, ತಿಪ್ಪೇಸ್ವಾಮಿ, ಚೇತನ್, ಡಿವೈಎಫ್‍ಐ ಜಿಲ್ಲಾಧ್ಯಕ್ಷ ಎಸ್.ರಾಘವೇಂದ್ರ, ಯುವ ಮುಖಂಡ ದರ್ಶನ್, ಸಿಐಟಿಯು ಮುಖಂಡ ರಾಮು ಮೊದಲಾದವರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link
Powered by Social Snap