ಕೆಸರು ಗದ್ದೆಯಂತಾಗಿರುವ ರಸ್ತೆ ದುರಸ್ಥಿಗೆ ಆಗ್ರಹಿಸಿ ಪ್ರತಿಭಟನೆ

ಗುಬ್ಬಿ

               ಪಟ್ಟಣದ 17 ನೇ ವಾರ್ಡ್ ಹನುಮಂತನಗರ ನಿವಾಸಿಗಳು ಹಾಳಾಗಿರುವ ರಸ್ತೆಯನ್ನು ದುರಸ್ಥಿಗೊಳಿಸುವಂತೆ ಒತ್ತಾಯಿಸಿ ಕೆಸರು ಗದ್ದೆಯಂತಾಗಿರುವ ರಸ್ತೆಗೆ ಪೈರು ನಾಟಿ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.

               ಪಟ್ಟಣದ ಶ್ರೀಚನ್ನಬಸವೇಶ್ವರ ದೇವಾಲಯದ ಮೂಲಕ ಹನುಮಂತ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಮಳೆ ಬಿದ್ದ ಪರಿಣಾಮ ಇಡೀ ರಸ್ತೆ ಕೆಸರು ಗದ್ದೆಯಂತಾಗಿದ್ದು ಜನಸಾಮಾನ್ಯರು ಓಡಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೆ ಹಾಳಾಗಿರುವ ರಸ್ತೆಯನ್ನು ದುರಸ್ಥಿಗೊಳಿಸದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.

               ಇದೆ ರಸ್ತೆಯಲ್ಲಿ ಇರುವ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರವಿದ್ದು ಇಲ್ಲಿಗೆ ಪ್ರತಿ ನಿತ್ಯ ಬರುವ ವಿದ್ಯಾರ್ಥಿಗಳು ಕೆಸರು ಗದ್ದೆಯಂತಾಗಿರುವ ರಸ್ತೆಯಲ್ಲಿ ಎದು ಬಿದ್ದು ಓಡಾಡುವಂತಹ ಪರಿಸ್ಥಿತಿ ಉಂಟಾಗಿದ್ದು ಈ ಬಗ್ಗೆ ಜನಪ್ರತಿನಿಧಿಗಳನ್ನು ಕೇಳಿದರೆ ನೀವು ನಮಗೆ ಪುಕ್ಕಟ್ಟೆ ಮತಹಾಕಿಲ್ಲ ಎನ್ನುತ್ತಾರೆ. ಆದ್ದರಿಂದ ನಮ್ಮ ಸಮಸ್ಯೆಯನ್ನು ಕೇಳುವವರೆ ಇಲ್ಲದಂತಾಗಿದೆ. ಕೆಸರು ಗದ್ದೆಯಂತಾಗಿರುವ ರಸ್ತೆಯನ್ನು ತ್ವರಿತವಾಗಿ ದುರಸ್ಥಿಗೊಳಿಸದಿದ್ದರೆ ಮುಂಬರುವ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ಸ್ಥಳೀಯ ಮುಖಂಡ ಶಿವಕುಮಾರ್ ಎಚ್ಚರಿಕೆ ನೀಡಿದರು.

               ಪಟ್ಟಣ ಪಂಚಾಯ್ತಿ ಮಾಜಿ ಸದಸ್ಯ ರಾಮಯ್ಯ ಮಾತನಾಡಿ ಕಳೆದ ಹಲವು ಬಾರಿ ರಸ್ತೆಯನ್ನು ದುರಸ್ಥಿಗೊಳಿಸುವಂತೆ ಪಟ್ಟಣ ಪಂಚಾಯ್ತಿಗೆ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನವಾಗಿಲ್ಲ. ಚುನಾವಣೆಯೊಳಗೆ ರಸ್ತೆಯನ್ನು ದುರಸ್ಥಿಗೊಳಿಸದಿದ್ದರೆ ಮತ್ತಷ್ಟು ಉಗ್ರ ಸ್ವರೂಪದ ಹೋರಾಟ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.

                ಸ್ಥಳೀಯ ನಿವಾಸಿ ಪ್ರಭಾವತಿ ಮಾತನಾಡಿ, ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ತೀವ್ರತರ ಸಮಸ್ಯೆಯಾಗಿದೆ. ಪ್ರತಿ ನಿತ್ಯ ಶಾಲೆಗೆ ಹೋಗುವ ಮಕ್ಕಳು ಕೆಸರಿನಲ್ಲಿ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ. ಸ್ವಲ್ಪ ಮಳೆ ಬಂದರೂ ಇಡೀ ರಸ್ತೆ ಕೆಸರು ಗದ್ದೆಯಾಗುತ್ತದೆ. ರಾತ್ರಿ ವೇಳೆ ಬೀದಿದೀಪಗಳಿಲ್ಲ, ಕೆಸರು ಗದ್ದೆಯಂತಿರುವ ರಸ್ತೆಯಲ್ಲಿ ತಡಕಾಡಿಕೊಂಡು ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೆ ನಮ್ಮ ರಸ್ತೆ ಮತ್ತು ಬೀದಿದೀಪಗಳನ್ನು ದುರಸ್ಥಿಗೊಳಿಸುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕುಮಾರ್, ಮಾರುತಿ, ನಾಗರಾಜು, ಗಿರೀಶ್, ಹರೀಶ್, ಕಿಟ್ಟಿ, ಭೀಮಣ್ಣ ಮುಂತಾದವರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link
Powered by Social Snap