ಗ್ರಾಮ ಮಟ್ಟದಿಂದಲೇ ಕನ್ನಡ ಬಳಕೆಯಾಗಬೇಕು

 ಚಿತ್ರದುರ್ಗ:

      ಗ್ರಾಮ ಮಟ್ಟದಿಂದ ವಿಧಾನಸೌಧ, ಬಹುಮಹಡಿ ಕಟ್ಟಡ, ವಿಕಾಸಸೌಧದಲ್ಲಿ ಆಡಳಿತ ಭಾಷೆಯನ್ನಾಗಿ ಕನ್ನಡವನ್ನು ಬಳಕೆ ಮಾಡುವುದರಿಂದ ಅತ್ಯುತ್ತಮವಾದ ಆಡಳಿತ ನೀಡಲು ಸಾಧ್ಯ. ಈ ವಿಚಾರದಲ್ಲಿ ಅಧಿಕಾರಿಗಳು ಗಂಭೀರ ಚಿಂತನೆ ಮಾಡಬೇಕೆಂದು ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ; ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.

      ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಅಡಳಿತದಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ವಿವಿಧ ಇಲಾಖೆಗಳಲ್ಲಿನ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದರು.

      ವಿವಿಧ ಇಲಾಖೆಗಳಲ್ಲಿನ ವೆಬ್‍ಸೈಟ್‍ಗಳು ಈಗಲೂ ಇಂಗ್ಲೀಷ್‍ನಲ್ಲಿದೆ. ಆದರೆ ಇಂಗ್ಲೀಷ್ ಬಳಕೆ ಬೇಡವೆಂದಲ್ಲ, ಕನ್ನಡ ಮಾತ್ರ ಪ್ರಧಾನ ಭಾಷೆಯನ್ನಾಗಿ ಉಪಯೋಗಿಸಿ ಇತರೆ ಭಾಷೆಗಳನ್ನು ಆಯ್ಕೆ ಭಾಷೆಗಳನ್ನಾಗಿ ಬಳಕೆಗೆ ಅವಕಾಶ ಇರುವಂತಿರಬೇಕು. ಸ್ವಚ್ಚ ಆಡಳಿತ ನೀಡಲು ಜನರ ಸಹಭಾಗಿತ್ವ ಅತ್ಯಂತ ಮುಖ್ಯವಾಗಿದ್ದು ಆಡಳಿತ ಜನರಿಗೆ ತಿಳಿಯಬೇಕಾದಲ್ಲಿ ಪ್ರಾದೇಶಿಕ ಭಾಷೆ ಕನ್ನಡದಲ್ಲಿ ವ್ಯವಹರಿಸಬೇಕಾಗುತ್ತದೆ ಎಂದರು.

      ಕನ್ನಡ ಸಂಪೂರ್ಣ ಅನುಷ್ಠಾನವಾಗಬೇಕಾದರೆ ಆಡಳಿತ ಮತ್ತು ಶಿಕ್ಷಣದಲ್ಲಿ ಕನ್ನಡದ ಬಳಕೆಯಾಗಬೇಕು. ಶಿಕ್ಷಣದಲ್ಲಿ ಕನ್ನಡವನ್ನು ಮೊದಲ ಭಾಷೆಯನ್ನಾಗಿ ವ್ಯಾಸಂಗ ಮಾಡಬೇಕು. 2015 ರ ಶಿಕ್ಷಣ ನೀತಿಯನ್ವಯ ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಕನ್ನಡ ಭಾಷೆಗೆ ಆದ್ಯತೆ ನೀಡಲಾಗಿದೆಯೋ ಇಲ್ಲವೋ ಎಂದು ಪರಿಶೀಲನೆ ನಡೆಸಬೇಕಾಗುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು. ಕನ್ನಡ ಅನುಷ್ಠಾನದಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿ ಇದೆ. ಶಿಕ್ಷಣ ಹಕ್ಕು ಕಾಯಿದೆ ಅನುಷ್ಠಾನದಲ್ಲಿನ ಆಸಕ್ತಿ ಕನ್ನಡ ಭಾಷೆಯ ಅನುಷ್ಠಾನದಲ್ಲಿ ಕೊರತೆಯನ್ನು ಕಾಣಲಾಗುತ್ತಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಆರ್.ಟಿ.ಇ.ನಡಿ ಈ ವರ್ಷ 4.5 ಕೋಟಿಯನ್ನು ವಿವಿಧ ಖಾಸಗಿ ಶಾಲೆಗಳಿಗೆ ಅನುದಾನ ನೀಡಲಾಗಿದೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಿಗಿಂತ ಮೂಲಭೂತ ಸೌಕರ್ಯ ಹಾಗೂ ಶೈಕ್ಷಣಿಕ ಅರ್ಹತೆಯುಳ್ಳ ಶಿಕ್ಷಕರು ಹಾಗೂ ಖಾಸಗಿಗಿಂತ ಹೆಚ್ಚಿನ ವೇತನ ನೀಡಿದರೂ ಸಹ 2010 ರಿಂದ ಸುಮಾರು 50 ಸರ್ಕಾರಿ ಶಾಲೆಗಳು ಮುಚ್ಚಿವೆ. ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಾಮರ್ಶೆ ಮಾಡಬೇಕು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಹ ಪರಿಶೀಲನೆ ನಡೆಸಬೇಕೆಂದು ತಿಳಿಸಿದರು.

      ನಗರಸಭೆಯ ವ್ಯಾಪ್ತಿಯಲ್ಲಿ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಕಟ್ಟಲು ಇಂಗ್ಲೀಷ್ ಅರ್ಜಿಯ ಬಳಕೆ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಿ ಕನ್ನಡದಲ್ಲಿ ನಮೂನೆಯನ್ನು ಒದಗಿಸಲು ಸೂಚಿಸಿ ಎಲ್ಲಾ ಅಂಗಡಿಗಳಲ್ಲಿಯು ಸಹ ಕನ್ನಡದ ನಾಮಫಲಕ ಅಳವಡಿಸಬೇಕು. ಮತ್ತು ಜಾಹಿರಾತು ಫಲಕಗಳಲ್ಲಿ ಹೆಚ್ಚಾಗಿ ಕನ್ನಡ ಬಳಕೆ ಮಾಡುವಂತೆ ಪರವಾನಗಿ ನೀಡುವಾಗ ಷರತ್ತು ವಿಧಿಸಿ ಅನುಷ್ಠಾನ ಮಾಡಬೇಕೆಂದು ಸೂಚನೆ ನೀಡಿ ಹೊಸ ಬಡಾವಣೆಗಳು ನಿರ್ಮಾಣ ಮಾಡಿದಾಗ ಅಲ್ಲಿ ಸ್ಥಳೀಯವಾಗಿ ಮಹತ್ವವಿರುವ ಗಣ್ಯರ ಹೆಸರುಗಳನ್ನು ಪ್ರಮುಖ ಬೀದಿಗಳಿಗೆ ನಾಮಕರಣ ಮಾಡಲು ಸ್ಥಳೀಯ ಸಂಸ್ಥೆಗಳು ಮುಂದಾಗಬೇಕೆಂದರು.

      ಬಸ್‍ಗಳಲ್ಲಿ ಹೆಚ್ಚಾಗಿ ಹಿಂದಿ ಹಾಡುಗಳು ಮತ್ತು ಇತರೆ ಭಾಷೆಗಳ ಹಾಡುಗಳನ್ನೆ ಹಾಕಲಾಗುತ್ತಿದೆ ಎಂಬ ದೂರುಗಳಿದ್ದು ಕನ್ನಡದ ಹಾಡುಗಳನ್ನು ಹಾಕಲು ಸೂಚನೆ ನೀಡಲು ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ತಿಳಿಸಿ ಲೋಕೋಪಯೋಗಿ ಇಲಾಖೆ ಸೇರಿದಂತೆ ಯಾವುದೇ ಇಲಾಖೆಗಳಲ್ಲಿ ಜಾಹಿರಾತು ನೀಡುವಾಗ ಕನ್ನಡ ಪತ್ರಿಕೆಗಳಿಗೆ ಕನ್ನಡದಲ್ಲಿಯೇ ಜಾಹಿರಾತು ನೀಡಬೇಕು. ಆದರೆ ಇಂಗ್ಲೀಷ್‍ನಲ್ಲಿ ಜಾಹಿರಾತು ನೀಡಬಾರದು ಎಂದು ಸೂಚನೆ ನೀಡಿ ಪೊಲೀಸ್ ಇಲಾಖೆಯಲ್ಲಿ ವೆಬ್‍ಸೈಟ್‍ನಲ್ಲಿ ಹೆಚ್ಚಾಗಿ ಇಂಗ್ಲೀಷ್ ಬಳಕೆ ಮಾಡಲಾಗುತ್ತಿದೆ. ಜನರೊಂದಿಗೆ ಸಂಪರ್ಕವಿರುವ ಇಲಾಖೆ ಜನರ ಭಾಷೆಯಲ್ಲಿ ವ್ಯವಹರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಇಲಾಖೆಗಳು ಸಹ ತಮ್ಮ ವೆಬ್‍ಸೈಟ್‍ನ್ನು ಕನ್ನಡ ಭಾಷೆಯಲ್ಲಿ ಅಪ್‍ಲೋಡ್ ಮಾಡಲು ತಿಳಿಸಿದರು.

      ಕನ್ನಡ ಅನುಷ್ಠಾನದಲ್ಲಿ ಕಾರ್ಮಿಕ, ಕೈಗಾರಿಕೆ, ಸಾರಿಗೆ, ಸ್ಥಳೀಯ ಸಂಸ್ಥೆಗಳು ಇವರ ಪಾತ್ರ ಬಹಳ ಮುಖ್ಯವಾಗಿದ್ದು ಇಂತಹ ಇಲಾಖೆಗಳ ಮುಖ್ಯಸ್ಥರೇ ಸಭೆಗೆ ಗೈರು ಹಾಜರಾಗಿರುವರು. ಸಭೆಗೆ ಬಾರದ ಅಧಿಕಾರಿಗಳಿಗೆ ನೋಟಿಸ್ ನೀಡಿ ವಿವರವನ್ನು ಪ್ರಾಧಿಕಾರಕ್ಕೆ ಕಳುಹಿಸಲು ಜಿಲ್ಲಾಧಿಕಾರಿಗೆ ತಿಳಿಸಿದರು.

      ಗಿರಿವಿದಾರರು ಹಣ ನೀಡಿಕೆಯ ರಸೀದಿಯನ್ನು ಮರಾಠಿ, ಗುಜರಾತಿಯಲ್ಲಿ ನೀಡಲಾಗುತ್ತಿದೆ ಎಂದು ದೂರುಗಳು ಬಂದಿವೆ. ಆದರೆ ಯಾವುದೇ ಲೇವಾದೇವಿ, ಗಿರಿವಿದಾರರು ಪ್ರಾದೇಶಿಕ ಭಾಷೆಯಲ್ಲಿ ಎಲ್ಲವನ್ನು ನೀಡಬೇಕಾಗುತ್ತದೆ. ಇಂತಹ ಪ್ರಕರಣಗಳನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಸಹಕಾರ ಇಲಾಖೆ ಉಪನಿಬಂಧಕರಿಗೆ ತಿಳಿಸಿ ಬ್ಯಾಂಕ್‍ಗಳಲ್ಲಿ ನೀಡಲಾಗುವ ಚಲನ್‍ಗಳಲ್ಲಿ ಕನ್ನಡ ಭಾಷೆಯಲ್ಲಿಯು ವಿವರ ಕಡ್ಡಾಯ ಇರಬೇಕೆಂದು ಬ್ಯಾಂಕರ್‍ಗಳ ಸಭೆಯಲ್ಲಿ ಸೂಚನೆ ನೀಡಲು ಹಾಗೂ ಪ್ರತಿ ಕೆ.ಡಿ.ಪಿ.ಸಭೆಯಲ್ಲಿ ಕನ್ನಡದ ಅನುಷ್ಠಾನದ ಬಗ್ಗೆ ಪರಿಶೀಲನಾ ವಿಷಯವನ್ನಾಗಿಸಿ ಪರಿಶೀಲನೆ ನಡೆಸಲು ಸೂಚನೆ ನೀಡಿದರು.

      ಸ್ಥಳೀಯವಾಗಿ ಕನ್ನಡವನ್ನು ಅನುಷ್ಠಾನ ಮಾಡಲು ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಕನ್ನಡ ಜಾಗೃತ ಸಮಿತಿ ಇದ್ದು ಕನ್ನಡ ಅನುಷ್ಠಾನವಾಗದ ಸ್ಥಳಕ್ಕೆ ಭೇಟಿ ನೀಡಿ ಸಲಹೆ ಸೂಚನೆಗಳನ್ನು ನೀಡಲಿದೆ. ಸಂಬಂಧಿಸಿದ ಇಲಾಖೆ, ಸಂಸ್ಥೆಗಳು ಸಲಹೆಗಳನ್ನು ಪುರಸ್ಕರಿಸಿ ಅನುಷ್ಠಾನಕ್ಕೆ ಮುಂದಾಗಬೇಕು. ಬೆಸ್ಕಾಂ ಇಲಾಖೆಯಲ್ಲಿ ಹೊಸದಾಗಿ ವಿದ್ಯುತ್ ಸಂಪರ್ಕ ಪಡೆಯುವಾಗ 16 ಪುಟಗಳ ಇಂಗ್ಲೀಷ್ ವಿವರಣೆಯುಳ್ಳ ನಮೂನೆಗಳಿಗೆ ಸಹಿಯನ್ನು ಪಡೆಯಲಾಗುತ್ತದೆ. ಆದರೆ ಇಂಗ್ಲೀಷ್ ಬಾರದವರು ಏನು ಮಾಡಬೇಕು. ತಿಂಗಳಲ್ಲಿ ಎಲ್ಲಾ ನಮೂನೆಗಳನ್ನು ಕನ್ನಡದಲ್ಲಿ ಅನುಷ್ಠಾನ ಮಾಡಬೇಕೆಂದು ಸೂಚಿಸಿದರು.

      ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿತೇಶ್ ಪಾಟೀಲ್, ಅಪರ ಜಿಲ್ಲಾಧಿಕಾರಿ ರವೀಂದ್ರ, ಪ್ರಾಧಿಕಾರದ ಕಾರ್ಯದರ್ಶಿ ಮುರುಳೀಧರ್, ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ; ಕರಿಯಪ್ಪ ಮಾಳಿಗೆ, ಡಾ; ಚಂದ್ರಶೇಖರ್ ತಾಳ್ಯ, ಪ್ರೊ; ಚಿತ್ರಲಿಂಗಸ್ವಾಮಿ, ಡಾ; ಲೋಕೇಶ್ ಅಗಸನಕಟ್ಟೆ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap