ಚುನಾವಣೆಯಲ್ಲಿ ಮತಗಟ್ಟೆ ಸಿಬ್ಬಂದಿ ಪಾತ್ರ ಅತ್ಯಂತ ಪ್ರಮುಖ: ಎಡಿಸಿ ಸೋಮಶೇಖರ

  ಬಳ್ಳಾರಿ:

      ಬಳ್ಳಾರಿ ಲೋಕಸಭಾ ಉಪಚುನಾವಣೆ ಕಾರ್ಯದಲ್ಲಿ ಮತಗಟ್ಟೆ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾತ್ರ ಅತ್ಯಂತ ಪ್ರಮುಖವಾಗಿದ್ದು, ಎಲ್ಲರು ತರಬೇತಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ಚುನಾವಣಾ ಸಂದರ್ಭದಲ್ಲಿ ಸಮಯೋಚಿತವಾಗಿ ಕರ್ತವ್ಯನಿರ್ವಹಿಸಿ. ಒಂದು ಸಣ್ಣ ಪ್ರಮಾದದಿಂದ ಮರು ಮತದಾನಕ್ಕೆ ಅಥವಾ ಚುನಾವಣಾ ವ್ಯಾಜ್ಯಗಳಿಗೆ ಕಾರಣವಾಗಲಿದ್ದು,ಇದಕ್ಕೆ ಯಾವುದೇ ರೀತಿಯಲ್ಲಿ ಅಸ್ಪದ ಕೊಡದಿರಿ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿಗಳಾದ ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ ಹೇಳಿದರು.

      ಬಳ್ಳಾರಿ ಲೋಕಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಕಂಪ್ಲಿ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಏರ್ಪಡಿಸಿದ್ದ ತರಬೇತಿ ಕಾರ್ಯಗಾರಕ್ಕೆ ಭೇಟಿ ನೀಡಿ ಅವರು ಮಾತನಾಡಿದರು.

      ಶಾಂತಿ ಮತ್ತು ನಿಷ್ಪಕ್ಷಪಾತವಾಗಿ ಚುನಾವಣೆ ಕರ್ತವ್ಯ ನಿರ್ವಹಿಸುವುದು ಮತಗಟ್ಟೆ ಅಧಿಕಾರಿಗಳ ಜವಾಬ್ದಾರಿ. ಚುನಾವಣಾಧಿಕಾರಿಯಿಂದ ಮತದಾನಕ್ಕೆ ಸಂಬಂಧಿಸಿದ ಎಲ್ಲ ಸಾಮಗ್ರಿಗಳನ್ನು ಪಡೆದು ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿ ಎಂದು ಹೇಳಿದ ಅವರು, ಜನತಾ ಪ್ರಾತಿನಿಧ್ಯ ಅಧಿನಿಯಮ 1951 ರನ್ವಯ ತಮ್ಮನ್ನು ಚುನಾವಣಾ ಆಯೋಗಕ್ಕೆ ನಿಯೋಜಿಸಲಾಗಿದ್ದು, ಈ ಅವಧಿಯಲ್ಲಿ ಆಯೋಗದ ನಿಯಂತ್ರಣ ಮೇಲ್ವಿಚಾರಣೆ ಮತ್ತು ಶಿಸ್ತಿಗೆ ಒಳಪಟ್ಟಿರುತ್ತೀರಿ ಎಂದರು.\

      ಮತಗಟ್ಟೆ ಅಧಿಕಾರಿಗಳು ಚುನಾವಣಾ ಮತದಾನ ಮುನ್ನಾದಿನ ಬೆಳಗ್ಗೆ 9ಕ್ಕೆ ಮಸ್ಟರಿಂಗ್ ಕೇಂದ್ರದಲ್ಲಿ ಹಾಜರಿರಬೇಕು. ರ್ಯಾಂಡಮೈಸ್‍ನಂತೆ ತಮ್ಮ ತಂಡಕ್ಕೆ ಹಂಚಿಕೆ ಮಾಡಿದ ಮತಗಟ್ಟೆ ಸಂಖ್ಯೆ ಗುರುತಿಸಿಕೊಳ್ಳಬೇಕು. ತಮ್ಮ ಕಾರ್ಯತಂಡದ ಸದಸ್ಯರೊಂದಿಗೆ ಮಸ್ಟರಿಂಗ್ ಕೌಂಟರ್‍ನಲ್ಲಿ ಸಾಮಗ್ರಿಗಳನ್ನು ಪಡೆದುಕೊಂಡು ಪರಿಶೀಲಿಸಿ ಖಾತರಿಪಡಿಸಿಕೊಳ್ಳಬೇಕು. ತಮ್ಮ ಮತಗಟ್ಟೆಗೆ ತಲುಪುವ ವಾಹನ ಗುರುತಿಸಿ ಸ್ಥಳ ಕಾಯ್ದಿರಿಸಬೇಕು ಎಂದು ಅವರು ವಿವರವಾಗಿ ಹೇಳಿದರು.

ಮತಗಟ್ಟೆಯ ಹೊರಗೆ ಮತ್ತು ಒಳಗೆ ಪ್ರದರ್ಶಿಸಿ:

      ಮತಗಟ್ಟೆಯ ಹೊರಗೆ ಸ್ಪರ್ಧಿಸುವ ಉಮೇದುವಾರರ ಪಟ್ಟಿ, ಮತಗಟ್ಟೆ ಪ್ರದೇಶ,ಮತದಾರರ ಸಂಖ್ಯೆ ಹಾಗೂ ಮತದಾರರ ಸಮಯಪಟ್ಟಿ, 100 ಮೀಟರ್ ಮತ್ತು 200 ಮೀಟರ್ ಎಚ್ಚರಿಕೆ ಪಟ್ಟಿ ಪ್ರದರ್ಶಿಸಬೇಕು ಎಂದು ಹೇಳಿದ ಅವರು, ಮತಗಟ್ಟೆ ಒಳಗೆ ಪಿಆರ್‍ಒ,ಪಿಒ/ಪೊಲಿಂಗ್ ಏಜೆಂಟ್‍ಗಳ ಪದನಾಮ ಫಲಕ,ಪೊಲಿಂಗ್ ಏಜೆಂಟ್ ಪಾಸ್, ವಿಸಿಟರ್ ಶೀಟ್ ಇರುವಂತೆ ನೋಡಿಕೊಳ್ಳಬೇಕು ಎಂದರು.

      ವಿವಿಧ ನಮೂನೆಗಳಿಗಾಗಿ ಲಕೋಟೆಗಳು, ಠಾಣಾಧಿಕಾರಿಗಳಿಗೆ ಪತ್ರ, ಮತದಾರರ ರಿಜಿಸ್ಟರ್ 17ಎ,ಮತದಾರರ ಚೀಟಿಗಳು, ಟೆಂಡರ್ಡ್ ಮತದಾನ ಮತಪತ್ರಗಳು, ಆಕ್ಷೇಪಿತ ಮತಗಳ ಪಟ್ಟಿ ಸೇರಿದಂತೆ 19 ಐಟಂಗಳ ಲೇಖನ ಸಾಮಗ್ರಿ ಸೇರಿದಂತೆ ಇನ್ನೀತರ ಸಾಮಗ್ರಿಗಳನ್ನು ಮತಗಟ್ಟೆ ಅಧಿಕಾರಿಗಳು ಪಡೆದು ಪರಿಶೀಲಿಸಿಕೊಳ್ಳಬೇಕು ಎಂದು ಹೇಳಿದರು.

 ಮತಗಟ್ಟೆ ತಲುಪಿದಾಗ ಏನ್ಮಾಡಬೇಕು?:

      ಮತಗಟ್ಟೆ ಕೇಂದ್ರ ತಲುಪಿದ ತಕ್ಷಣ ಎಲ್ಲ ಮತಗಟ್ಟೆ ಅಧಿಕಾರಿಗಳು ನಾಳೆಯ ಮತದಾನಕ್ಕೆ ಪೂರಕವಾಗಿ ಸಿದ್ಧತಾ ಕಾರ್ಯ ಮಾಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ ಹೇಳಿದರು.

      ಉಮೇದುವಾರಿಕೆ ನೋಟಿಸ್‍ಗಳು ನಿಷೇಧಿತ ಪ್ರದೇಶದ ಸೂಚಿಸುವ ಪೋಸ್ಟರ್‍ಗಳು, ಮತಗಟ್ಟೆ ಕಟ್ಟಡದಲ್ಲಿ ಯಾವುದಾದರೂ ಪಕ್ಷದ ಚಿಹ್ನೆ ಅಥವಾ ಇನ್ನೀತರೆ ಭಾವಚಿತ್ರಗಳಿದ್ದರೆ ತೆಗೆದುಹಾಕಬೇಕು ಇಲ್ಲವೇ ಮುಚ್ಚಬೇಕು ಎಂದರು.

      ಮತಗಟ್ಟೆ ಅಧ್ಯಕ್ಷಾಧಿಕಾರಿಯ ಕರ್ತವ್ಯಗಳು, ಮೊದಲನೇ ಮತಗಟ್ಟೆ ಅಧಿಕಾರಿ ಹಾಗೂ ಎರಡನೇ ಮತಗಟ್ಟೆ, ಮೂರು ಮತ್ತು ನಾಲ್ಕನೇ ಮತಗಟ್ಟೆ ಅಧಿಕಾರಿಗಳ ಕರ್ತವ್ಯಗಳನ್ನು ಸುದೀರ್ಘವಾಗಿ ವಿವರಿಸಿದ ಎಡಿಸಿ ಸೋಮಶೇಖರ ಅವರು ಅವುಗಳೆನ್ನಲ್ಲಾ ಕಡ್ಡಾಯವಾಗಿ ಪಾಲಿಸಬೇಕು ಎಂದರು.

      ತರಬೇತಿಯಲ್ಲಿ ಅಣುಕು ಮತದಾನದ ಬಗ್ಗೆ ವಿವರಿಸಿದ ಎಡಿಸಿ ಸೋಮಶೇಖರ ಅವರು, ಅಣುಕು ಮತದಾನ ಸರಿಯಾಗಿ ಬೆಳಗ್ಗೆ 6ಕ್ಕೆ ಪೊಲಿಂಗ್ ಏಜೆಂಟ್‍ರ ಸಮ್ಮುಖದಲ್ಲಿ ಪ್ರಾರಂಭಿಸಬೇಕು ಮತ್ತು ಅಣುಕು ಮತದಾನದಲ್ಲಿ ಕನಿಷ್ಠ 50 ಮತಗಳನ್ನು ಹಾಕಬೇಕು. ಅಣುಕು ಮತದಾನ ಮುಗಿದ ನಂತರ ಅಣುಕು ಮತದನ ದೃಢೀಕರಣವನ್ನು ಭರ್ತಿ ಮಾಡಿ ಹಾಜರಿರುವ ಏಜೆಂಟರ ಸಹಿ ಪಡೆದು ಸೆಕ್ಟರ್ ಅಧಿಕಾರಿಗಳಿಗೆ ನೀಡಬೇಕು ಎಂದರು. ಅಣುಕು ಮತದಾನ ಮುಗಿದ ನಂತರ ಕಂಟ್ರೋಲ್ ಯೂನಿಟ್‍ನಲ್ಲಿ ಕ್ಲಿಯರ್ ಮಾಡಿ ಸ್ವಿಚ್ ಆಫ್ ಮಾಡಿ ಸೀಲ್ ಮಾಡುವುದು ಹಾಗೂ ವಿವಿಪ್ಯಾಟ್‍ನಲ್ಲಿರುವ ಮತಚೀಟಿಗಳನ್ನು ಕ್ಲಿಯರ್ ಮಾಡಿ ಒಂದು ಕವರ್‍ನಲ್ಲಿ ಸೀಲ್ ಮಾಡಬೇಕು. ಬೆಳಗ್ಗೆ 7 ಮತದಾನ ಪ್ರಾರಂಭಿಸಬೇಕು ಎಂದರು.

      ಮತದಾನದ ರಹಸ್ಯ ಕಾಪಾಡುವುದು ಮತಗಟ್ಟೆ ಅಧಿಕಾರಿಯ ಪ್ರಥಮ ಕರ್ತವ್ಯ ಎಂಬುದನ್ನು ತರಬೇತಿಯಲ್ಲಿ ಒತ್ತಿ ಹೇಳಿದ ಎಡಿಸಿ ಸೋಮಶೇಖರ ಅವರು, ಮತದಾನದ ಆರಂಭದಲ್ಲಿ ಪೂಜೆ,ಆರತಿ, ದೀಪ ಇತ್ಯಾದಿ ನಿಷೇಧ ಎಂದರು.

      ಬಳ್ಳಾರಿ ನಗರ, ಬಳ್ಳಾರಿ ಗ್ರಾಮೀಣ, ಕಂಪ್ಲಿ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತಗಟ್ಟೆ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಬಳ್ಳಾರಿಯಲ್ಲಿ ತರಬೇತಿ ನಡೆಯಿತು. ಸಂಡೂರು ಹಾಗೂ ಸಿರಗುಪ್ಪಾದಲ್ಲಿಯೂ ಇದೇ ರೀತಿಯ ತರಬೇತಿ ಸೋಮವಾರ ನಡೆಯಿತು.
ಅ.23ರಂದು ಹೊಸಪೇಟೆ,ಹಡಗಲಿ ಮತ್ತು ಹಗರಿಬೊಮ್ಮನಳ್ಳಿಯಲ್ಲಿ ಪ್ರಥಮ ಹಂತದ ತರಬೇತಿ ನಡೆಯಲಿದೆ.

      ಮತಗಟ್ಟೆ ಸಿಬ್ಬಂದಿಗಳಿಗೆ ಎರಡನೇ ಹಂತದ ತರಬೇತಿ ಅ.26 ಮತ್ತು 27 ಹಾಗೂ ಮೂರನೇ ಹಂತದ ತರಬೇತಿ 29 ಮತ್ತು 30ರಂದು ನಡೆಯಲಿದೆ ಎಂದು ಅಪರ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ ತಿಳಿಸಿದರು. ಈ ಸಂದರ್ಭದಲ್ಲಿ ಎಆರ್‍ಒ ಶ್ರೀಧರನ್, ಕಂಪ್ಲಿ ಮತ್ತು ಕುರುಗೋಡು ತಹಸೀಲ್ದಾರರು ಹಾಗೂ ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ ಸಿಬ್ಬಂದಿ ಇದ್ದರು.

     ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap