ಜನಹಿತ ಮರೆತ ಸರ್ಕಾರ: ಬಿಎಸ್‌ವೈ

ತುಮಕೂರು

           ರಾಜ್ಯದ ಸಮ್ಮಿಶ್ರ ಸರ್ಕಾರ ಜನಹಿತವನ್ನು ಸಂಪೂರ್ಣ ಮರೆತಿದ್ದು, ಕೇವಲ ವರ್ಗಾವಣೆ ದಂಧೆಗೆ ಮಾತ್ರ ಮೀಸಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಗುಡುಗಿದರು.
          ಅರಸೀಕೆರೆಯಲ್ಲಿ ನಡೆಯುವ ತಮ್ಮ ಸಂಬಂಧಿಕ ಸಂತೋಷ ಎಂಬುವರ ನಿಶ್ಚಿತಾರ್ಥಕ್ಕೆ ತೆರಳುವ ಮಾರ್ಗಮಧ್ಯೆ ಸಿದ್ದಗಂಗಾ ಮಠಕ್ಕೆ ಭೇಟಿ ನೀ‌ಡಿ ಮಠಾಧ್ಯಕ್ಷರಾದ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನೀರಾವರಿ ಯೋಜನೆ ಸೇರಿದಂತೆ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಸ್ಥಗಿತಗೊಂಡಿವೆ. ರಾಜ್ಯದ ರೈತರು ಹಾಗೂ ಜನರ ಹಿತವನ್ನು ಈ ಸಮ್ಮಿಶ್ರ ಸರ್ಕಾರ ಮರೆತಿದೆ ಎಂದು ದೂರಿದರು.
            ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ನವರು ಮಾತ್ರ ಸಾಲ ಮರುಪಾವತಿಸುವಂತೆ ರೈತರಿಗೆ ನೋಟಿಸ್ ನೀಡುವ ಕೆಲಸವನ್ನು ಮಾತ್ರ ನಿಲ್ಲಿಸಿಲ್ಲ. 4 ವರ್ಷದಲ್ಲಿ 4 ಕಂತಿನಲ್ಲಿ ಸಾಲ ತೀರಿಸುತ್ತೇವೆ ಎಂದರೆ ಯಾವ ಬ್ಯಾಂಕ್‌ನವರು ತಾನೇ ಕಾಯುತ್ತಾರೆ ಎಂದು ಪ್ರಶ್ನಿಸಿದರು.
            ರೈತರ ಹಿತಕಾಪಾಡುವ ಹೊಣೆಗಾರಿಕೆ ಈ ಸಮ್ಮಿಶ್ರ ಸರ್ಕಾರಕ್ಕೆ ಇದ್ದಿದ್ದರೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸಾಲ ಮನ್ನಾ ಮಾಡಲು ಇಷ್ಟು ದಿನ ಬೇಕಾಗಿತ್ತಾ ಎಂದ ಅವರು, ಸಹಕಾರಿ ಕ್ಷೇತ್ರದಲ್ಲಿ ಬ್ಯಾಂಕ್‌ಗಳಿಗೆ ಸಾಲದ ಹಣ ತುಂಬದೆ ಇರುವುದರಿಂದ ಆ ಬ್ಯಾಂಕ್‌ಗಳು ಸಹ ದಿವಾಳಿ ಸ್ಥಿತಿಗೆ ಬಂದಿವೆ. ರಾಜ್ಯದಲ್ಲಿ ಇಂತಹ ಪರಿಸ್ಥಿತಿ ಇದ್ದರೂ ಕೂಡ ಮುಖ್ಯಮಂತ್ರಿಗಳು ರಾಜಕೀಯ ದೊಂಬರಾಟ ಮಾಡಿಕೊಂಡು ನಾಡಿನ ಜನತೆಗೆ ಸುಳ್ಳು ಭರವಸೆ ನೀಡುವಲ್ಲಿ ನಿರತರಾಗಿದ್ದಾರೆ ಎಂದು ಆರೋಪಿಸಿದರು.
           ರಾಜ್ಯಕ್ಕೆ ಸ್ಮಾರ್ಟ್‌ಸಿಟಿ ಯೋಜನೆಗಾಗಿ ಕೇಂದ್ರ ಸರ್ಕಾರ 1500 ಕೋಟಿ ರೂ. ಬಿಡುಗಡೆ ಮಾಡಿದೆ. ಆದರೆ ಈ ಯೋಜನೆಯಡಿ ಖರ್ಚು ಮಾಡಿರುವುದು ಕೇವರ 40 ಕೋಟಿ ರೂ. ಮಾತ್ರ. ಬದ್ಧತೆ ಇಲ್ಲದ ಈ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
           ರಾಜ್ಯದ ಜನತೆ ಭಾರತೀಯ ಜನತಾ ಪಾರ್ಟಿಗೆ 104 ಸ್ಥಾನ ನೀಡುವ ಮೂಲಕ ಆಶೀರ್ವದಿಸಿದ್ದಾರೆ. ನಾವು ಪ್ರತಿಪಕ್ಷವಾಗಿಯೇ ಕೆಲಸ ಮಾಡುತ್ತೇವೆ. ಸರ್ಕಾರ ಬೀಳಿಸುವ ಯಾವುದೇ ರೀತಿಯ ಕೆಲಸಕ್ಕೆ ನಾವು ಕೈ ಹಾಕಿಲ್ಲ ಎಂದರು.
            ಕಾಂಗ್ರೆಸ್ ಪಕ್ಷದಲ್ಲಿ ಉಂಟಾಗಿರುವ ಒಳಜಗಳವನ್ನು ಶಮನ ಮಾಡುವ ಕಾರ್ಯದಲ್ಲೇ ತಲ್ಲೀನರಾಗಿರುವ ಸಮ್ಮಿಶ್ರ ಸರ್ಕಾರದ ನಾಯಕರು ಇನ್ನು ಮುಂದೆಯಾದರೂ ರಾಜ್ಯದ ಅಭಿವೃದ್ಧಿ ಕಡೆ ಗಮನ ಹರಿಸಲಿ. ರೈತರು, ಬಡವರ ಹಿತಕಾಪಾಡುವ ಕಾರ್ಯಕ್ರಮಗಳನ್ನು ಜಾರಿಗೊಳಿಸಲಿ ಎಂದು ಸಲಹೆ ನೀಡಿದರು.
           ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಸ್. ಬಸವರಾಜು, ಮುಖಂಡರಾದ ಮರಿಸ್ವಾಮಿ, ಪುತ್ರಿಯರಾದ ಉಮಾದೇವಿ, ಪದ್ಮಾವತಿ, ವಿಧಾನ ಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಕೊಪ್ಪಲ್ ನಾಗರಾಜು, ಹೆಬ್ಬಾರ ರವಿಶಂಕರ್, ರುದ್ರೇಶ್, ಪಾಲಿಕೆ ಸದಸ್ಯ ಹೆಚ್. ಮಲ್ಲಿಕಾರ್ಜುನಯ್ಯ ಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap