ಪರ್ಯಾಯ ವ್ಯವಸ್ಥೆ ಕಲ್ಪಿಸಿ ರಸ್ತೆ ಅಭಿವೃದ್ಧಿ ಮಾಡಿ

ದಾವಣಗೆರೆ :

   ಕೆ.ಆರ್. ಮಾರುಕಟ್ಟೆ ರಸ್ತೆಯಲ್ಲಿರುವ ಬೀದಿ ಬದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಯೇ ರಸ್ತೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಬೇಕೆಂದು ಆಗ್ರಹಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಷ್ಟ್) ಹಾಗೂ ಫುಟ್‍ಪಾತ್ ಚಿಲ್ಲರೆ ತರಕಾರಿ ವ್ಯಾಪಾರಸ್ಥರ ಸಂಘ ಇವುಗಳ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಬೀದಿ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಎದುರು ಜಮಾಯಿಸಿದ ಬೀದಿಬದಿ ವ್ಯಾಪಾರಸ್ಥರು, ಸ್ಮಾರ್ಟ್‍ಸಿಟಿ ರಸ್ತೆ ಅಭಿವೃದ್ಧಿಯ ನೆಪದಲ್ಲಿ ಮರಗಳ ಮಾರಣ ಹೋಮ ನಡೆಸಿ, ರಸ್ತೆ ಅಭಿವೃದ್ಧಿ ಮಾಡಿ ತಮ್ಮನ್ನು ಅಲ್ಲಿಂದ ಎತ್ತಂಗಡಿ ಮಾಡಲು ಮುಂದಾಗಿರುವ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

   ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ದಾವಣಗೆರೆ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವುದು ಸ್ವಾಗತಾರ್ಹವಾಗಿದೆ. ಆದರೆ, ರಸ್ತೆ ಅಭಿವೃದ್ಧಿಯ ನೆಪದಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ನೆರಳು ನೀಡುತ್ತಿರುವ ಮರಗಳ ಮಾರಣಹೋಮ ನಡೆಸಿ, ರಸ್ತೆ ಅಭಿವೃದ್ಧಿ ಮಾಡಿ, ವ್ಯಾಪಾರವನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಬಡ ಬೀದಿ ಬದಿ ವ್ಯಾಪಾರಸ್ಥರನ್ನು ಇಲ್ಲಿಂದ ಎತ್ತಂಗಡಿ ಮಾಡಲು ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್‍ಸಿಟಿ ನಿಗಮ ಸಂಚು ರೂಪಿಸಿವೆ ಎಂದು ಆರೋಪಿಸಿದರು.

  ಸ್ಮಾರ್ಟ್ ಸಿಟಿ ನಿಗಮವು ನಗರದ ಮಾರುಕಟ್ಟೆಯ ಕೆಲವು ಪ್ರಮುಖ ಬೀದಿಗಳಾದ ಚೌಕಿಪೇಟೆ, ಎಂ ಜಿ ರಸ್ತೆ, ದೊಡ್ಡಪೇಟೆ ರಸ್ತೆಯಲ್ಲಿ ಕಾಮಾಗಾರಿಯನ್ನು 8 ತಿಂಗಳ ಹಿಂದಿನಿಂದ ಪ್ರಾರಂಭ ಮಾಡಿದ್ದಾರೆ. ಆದರೆ ಇಂದಿಗೂ ಸಂಪೂರ್ಣ ಮುಗಿದಿಲ್ಲ. ಈ ಅಪೂರ್ಣ ಕಾಮಾಗಾರಿಯಿಂದಾಗಿ ಅಲ್ಲಿನ ವ್ಯಾಪಾರಸ್ಥರು ವಾಹನ ಸವಾರರು ಪಾದಚಾರಿಗಳು ತುಂಬಾ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಇಲ್ಲಿನ ಚಿಲ್ಲರೆ ತರಕಾರಿ ವ್ಯಾಪಾರಸ್ಥರ ಹಾಗೂ ಅವರ ಕುಟುಂಬದ ಜೀವನ ಆಧಾರವೇ ಈ ವ್ಯಾಪಾರವಾಗಿದೆ. ಹಾಗಾಗಿ ಈ ರಸ್ತೆಯಲ್ಲಿ ಮರಗಳನ್ನು ಕಡಿಯದೆ ಇರುವುದರಲ್ಲೇ ಅಭಿವೃದ್ದಿಪಡಿಸಿ ಬೀದಿ ಬದಿ ವ್ಯಾಪಾರಸ್ಥರಿಗೆ ಜೀವನ ಭದ್ರತೆ ಕಲ್ಪಿಸಬೇಕೆಂದು ಆಗ್ರಹಿಸಿದರು.
ಇಲ್ಲಿನ ಜಯಚಾಮರಾಜೆಂದ್ರ ವೃತ್ತದಿಂದ ಮಾರ್ಕೆಟ್ ರಿಂಗ್ ರಸ್ತೆಯ ವರೆಗೆ ತಕ್ಷಣವೇ ಮರ ಕಡಿಯುವುದನ್ನು ನಿಲ್ಲಿಸಬೇಕು. ವ್ಯಾಪಾರಸ್ಥರು ಕಳೆದ 30 ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದು ಮಹಾನಗರ ಪಾಲಿಕೆಯು ಈ ವ್ಯಾಪಾರಸ್ಥರಿಗೆ ಅಧಿಕೃತ ಪರವಾನಗಿ ಹಾಗೂ ಗುರುತಿನ ಚೀಟಿಯನ್ನು ವಿತರಿಸಬೇಕೆಂದು ಆಗ್ರಹಿಸಿದರು.

  ಹೋರಾಟವನ್ನು ಬೆಂಬಲಿಸಿ ರೈತ ಮುಖಂಡ ತೇಜಸ್ವಿ ಪಟೇಲ್, ನ್ಯಾಯವಾದಿ ಎಲ್.ಹೆಚ್.ಅರುಣಕುಮಾರ್, ಡಾ.ವಸುದೇಂದ್ರ ಮತ್ತಿರರು ಭಾಗವಹಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಎಸ್‍ಯುಸಿಐನ ಮಂಜುನಾಥ ರೆಡ್ಡಿ, ತಿಪ್ಪೇಸ್ವಾಮಿ, ಭಾರತಿ, ನಾಗಜ್ಯೋತಿ, ಸೌಮ್ಯ, ಫುಟ್‍ಪಾತ್ ಚಿಲ್ಲರೆ ತರಕಾರಿ ವ್ಯಾಪಾರಸ್ಥರ ಸಂಘದ ಇಸ್ಮಾಯಿಲ್. ಎಸ್ ಸೇರಿದಂತೆ ನೂರಾರು ಬೀದಿ ಬದಿ ವ್ಯಾಪಾರಸ್ಥರು ಭಾಗವಹಿಸಿದ್ದರು.

Recent Articles

spot_img

Related Stories

Share via
Copy link
Powered by Social Snap