ಪಾಲಿಕೆ ಚುನಾವಣೆ: ಸ್ಪರ್ಧಾಕಾಂಕ್ಷಿಗಳ ಪರದಾಟ

ತುಮಕೂರು:

      ತುಮಕೂರು ಮಹಾನಗರ ಪಾಲಿಕೆಗೆ ಆಗಸ್ಟ್ 31 ರಂದು ನಡೆಯಲಿರುವ ಚುನಾವಣೆ ಹಿನ್ನೆಲೆಯಲ್ಲಿ ಆಗಸ್ಟ್ 13 ರಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಿದ್ದು, ನಾಮಪತ್ರ ನಮೂನೆ ಪಡೆಯಲು ಮತ್ತು ನಾಮಪತ್ರಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲಾತಿಗಳನ್ನು ಸಿದ್ಧಪಡಿಸಿಕೊಳ್ಳಲು ಸ್ಪರ್ಧಾಕಾಂಕ್ಷಿಗಳು ಪಾಲಿಕೆ ಕಚೇರಿಯಲ್ಲಿ ಪರದಾಡಲಾರಂಭಿಸಿರುವುದು ಮಂಗಳವಾರ ಕಂಡುಬಂದ ಬೆಳವಣಿಗೆ.
ನಾಮಪತ್ರ ನಮೂನೆ (ಅರ್ಜಿ)ಯು ಒಟ್ಟು 8 ಪುಟಗಳನ್ನು ಹೊಂದಿದ್ದು, ಅದಕ್ಕೆ 20 ರೂ. ಶುಲ್ಕ ನಿಗದಿಪಡಿಸಲಾಗಿದೆ. ವಾರ್ಡ್ವಾರು ಮತದಾರರ ಪಟ್ಟಿಗೆ 60 ರೂ. ಶುಲ್ಕ ನಿಗದಿಪಡಿಸಲಾಗಿದೆ.

      ಸ್ಪರ್ಧಾಕಾಂಕ್ಷಿಗಳು ಮಂಗಳವಾರ ಸಹ ಪಾಲಿಕೆ ಕಚೇರಿಗೆ ಆಗಮಿಸಿ ಸಂಬಂಧಿಸಿದ ವಾರ್ಡ್ನ ಚುನಾವಣಾಧಿಕಾರಿಗಳಿಂದ ನಾಮಪತ್ರ ನಮೂನೆ ಪಡೆದರು. ಇದರ ಜೊತೆಗೆ ಪಾಲಿಕೆಯ ಚುನಾವಣಾ ಶಾಖೆಗೆ (ಸರ್ವೋದಯ ಕಾಲೇಜು ಹಳೆಯ ಕಟ್ಟಡ) ತೆರಳಿ ಸಂಬಂಧಿಸಿದ ವಾರ್ಡ್ನ ಮತದಾರರ ಪಟ್ಟಿ ಪಡೆದುಕೊಳ್ಳುವುದೂ ಕಂಡುಬಂದಿತು.

      ನಾಮಪತ್ರ ಸಲ್ಲಿಕೆಗೆ ಬೇಕಾದ ದಾಖಲಾತಿಗಳ ಬಗ್ಗೆ ಅನೇಕ ಸ್ಪರ್ಧಾಕಾಂಕ್ಷಿಗಳು ಗೊಂದಲ ಅನುಭವಿಸುತ್ತಿರುವುದು ಸಹ ಕಂಡುಬಂದಿದೆ. ಯಾವ-ಯಾವ ದಾಖಲಾತಿಗಳು ಅಗತ್ಯವೆಂಬುದು ಹಾಗೂ ಅವುಗಳನ್ನು ತುರ್ತಾಗಿ ಹೊಂದಿಸಿಕೊಳ್ಳುವುದು ಹೇಗೆಂಬುದು ಅವರ ಈ ಗೊಂದಲಕ್ಕೆ ಕಾರಣವೆನ್ನಲಾಗಿದೆ. ‘‘ನಾಮಪತ್ರಕ್ಕೆ ಅಗತ್ಯವಾದ ದಾಖಲಾತಿಗಳ ಬಗ್ಗೆ ಪಾಲಿಕೆಯ ಚುನಾವಣಾಧಿಕಾರಿಗಳಲ್ಲೇ ಸ್ಪಷ್ಟತೆ ಇಲ್ಲ’’ ಎಂಬ ದೂರುಗಳೂ ಸ್ಪರ್ಧಾಕಾಂಕ್ಷಿಗಳಿಂದ ಕೇಳಿಬರುತ್ತಿವೆ. ಮಾಜಿ ಸದಸ್ಯರು, ಹಾಲಿ ಕಾರ್ಪೊರೇಟರ್ಗಳು ಈ ವಿಷಯದಲ್ಲಿ ಇತರರಿಗಿಂತ ಮುಂದಿದ್ದು, ಹೊಸದಾಗಿ ಸ್ಪರ್ಧಿಸಬಯಸಿರುವವರು ಮಾತ್ರ ತ್ವರಿತವಾಗಿ ದಾಖಲಾತಿ ಹೊಂದಿಸಲು ಪರದಾಡುತ್ತಿದ್ದಾರೆ.

ಇನ್ನೂ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿಲ್ಲ:

      ನಾಮಪತ್ರ ನಮೂನೆ ವಿತರಿಸುವ ಕಾರ್ಯ ಆಗಸ್ಟ್ 13 ರಿಂದ ಆರಂಭವಾಗಿದ್ದರೂ, ಎರಡನೇ ದಿನವಾದ ಆಗಸ್ಟ್ 14 ರಂದು ಸಹ ಸ್ಪರ್ಧಾಕಾಂಕ್ಷಿಗಳಿಂದ ನಾಮಪತ್ರ ಸಲ್ಲಿಕೆ ಆಗಿಲ್ಲ. ಆಗಸ್ಟ್ 15 ರಂದು ಸ್ವಾತಂತ್ರೋತ್ಸವದ ರಜೆ ಇದೆ. ನಾಮಪತ್ರ ಸಲ್ಲಿಕೆಗೆ ಆಗಸ್ಟ್ 20 ಕೊನೆಯದಿನವಾಗಿದ್ದು, ಬಹುಶಃ ಆಗಸ್ಟ್ 16 (ಗುರುವಾರ), 17 (ಶುಕ್ರವಾರ) ನಾಮಪತ್ರ ಸಲ್ಲಿಕೆ ಬಿರುಸಾಗಬಹುದೆಂದು ನಿರೀಕ್ಷಿಸಲಾಗಿದೆ. ಇನ್ನು ಕೊನೆಯ ದಿನವಾದ ಆಗಸ್ಟ್ 20 (ಸೋಮವಾರ) ರಂದು ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಕೆಯಾಗಬಹುದೆನ್ನಲಾಗುತ್ತಿದೆ.

ನಾಮಪತ್ರ ಸಲ್ಲಿಸುವಾಗ..

      ನಾಮಪತ್ರ ಸಲ್ಲಿಸುವಾಗ ಅ‘್ಯರ್ಥಿಗೆ 25 ವರ್ಷ ವಯಸ್ಸಾಗಿರಬೇಕು. ಅಭ್ಯರ್ಥಿಯು ಯಾವುದಾದರೂ ರಾಜಕೀಯ ಪಕ್ಷದಿಂದ ಪ್ರಾಯೋಜಿಸಲ್ಪಟ್ಟಿದ್ದಲ್ಲಿ ಈ ಬಗ್ಗೆ ಘೋಷಣೆ ಇರಬೇಕು. ಪಕ್ಷೇತರನಾಗಿದ್ದಲ್ಲಿ ಈ ಪ್ರಶ್ನೆ ಉದ್ಭವಿಸದು. ಆಯೋಗವು ಅಧಿಸೂಚಿಸಿದ ಮುಕ್ತ ಚಿಹ್ನೆಗಳಲ್ಲಿ / ಪಕ್ಷದಿಂದ ಸ್ಪರ್ಧಿಸುವುದಾದರೆ ಆ ಪಕ್ಷದ ಮೀಸಲು ಚಿಹ್ನೆಯನ್ನು ತಮ್ಮ ಆಯ್ಕೆಯ 3 ಚಿಹ್ನೆಗಳನ್ನು ಆದ್ಯತೆಯ ಮೇಲೆ ನಮೂದಿಸಬೇಕು. ಈಗ ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಇರುವುದಾಗಿ ಹಾಗೂ ಯಾವುದೇ ಅನರ್ಹತೆ ಇಲ್ಲವೆಂದು ಘೋಷಿಸಿಕೊಳ್ಳಬೇಕು. ಅಭ್ಯರ್ಥಿಯು ತನ್ನ ಹಾಗೂ ತನ್ನ ಪತಿ/ಪತ್ನಿಯ ಆದಾಯವನ್ನು ಘೋಷಿಸಬೇಕು ಎಂಬಿತ್ಯಾದಿ ನಿಬಂಧನೆಗಳಿವೆ.
ಚುನಾವಣಾಧಿಕಾರಿ ಕಚೇರಿಯ 100 ಮೀಟರ್ ವ್ಯಾಪ್ತಿಯೊಳಗೆ ಅಭ್ಯರ್ಥಿಯ ಸಂಗಡ ನಾಮಪತ್ರ ಸಲ್ಲಿಕೆಗೆ ಬರುವವರ ಸಂಖ್ಯೆಯನ್ನು 5 ಜನರಿಗೆ ಮಿತಿಗೊಳಿಸಲಾಗಿದೆ. ವಾಹನಗಳ ಸಂಖ್ಯೆಯನ್ನು 2 ಕ್ಕೆ ಮಿತಿಗೊಳಿಸಲಾಗಿದೆ.

ಪಕ್ಷದ ಟಿಕೆಟ್ಗೆ ಕಾತರ:

      ಪಾಲಿಕೆ ಕಚೇರಿಗೆ ಎಡತಾಕುತ್ತಿರುವ ಬಹುತೇಕ ಸ್ಪರ್ಧಾಕಾಂಕ್ಷಿಗಳಲ್ಲಿ ಪಕ್ಷದ ಟಿಕೆಟ್ ಪಡೆಯುವ ಕಾತರ ಎದ್ದುಕಾಣುತ್ತಿದೆ. ಇನ್ನೊಂದೆರಡು ದಿನಗಳಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದ್ದು, ತಮಗೆ ಟಿಕೆಟ್ ಖಾತ್ರಿ ಆಗಿದೆ ಎಂದೇ ಅನೇಕರು ಆತ್ಮವಿಶ್ವಾಸದಿಂದ ಹೇಳುತ್ತಿದ್ದಾರೆ. ಅದೇ ರೀತಿ ಒಂದು ಪಕ್ಷದಲ್ಲಿ ಈವರೆಗೆ ಗುರುತಿಸಿಕೊಂಡಿರುವವರು ಮತ್ತೊಂದು ಪಕ್ಷದಿಂದ ಸ್ಪರ್ಧಾಳು ಆಗುವ ಲಕ್ಷಣಗಳೂ ಕಾಣತೊಡಗಿವೆ. ಹಾಲಿ ಪಾಲಿಕೆ ಸದಸ್ಯರಿಗೂ ಟಿಕೆಟ್ ನಿರಾಕರಿಸುವ ಸಂಭವ ಇದ್ದು, ಈ ಹಿನ್ನೆಲೆಯಲ್ಲಿ ಅಂಥ ಕೆಲವರು ಇನ್ನೊಂದು ಪಕ್ಷದಿಂದ ಟಿಕೆಟ್ ಪಡೆದು ಸ್ಪರ್ಧಿಸುವುದು ಖಚಿತವಾಗಿದೆ. ಮೀಸಲಾತಿ ಮತ್ತಿತರ ಕಾರಣದಿಂದ ಈ ಬಾರಿ ಸ್ಪರ್ಧಿಸುವ ಅವಕಾಶದಿಂದ ವಂಚಿತರಾದವರು ತಾವು ಸ್ಪರ್ಧಿಸಲು ಉದ್ದೇಶಿಸಿದ್ದ ವಾರ್ಡ್ನಲ್ಲಿ ತಮ್ಮ ಕೈಚಳಕ ತೋರಲು ಸಿದ್ಧರಾಗುತ್ತಿದ್ದಾರೆ.

ಟಿಕೆಟ್ಗೆ ಪಟ್ಟಿ ಸಿದ್ಧತೆ:

      ಈ ಮಧ್ಯೆ ಪಾಲಿಕೆ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಜೆಡಿಎಸ್ನಲ್ಲಿ 15 ಜನರಿಗೆ ಟಿಕೆಟ್ ಖಚಿತವಾಗಿದೆ; ಬಿಜೆಪಿಯಲ್ಲೂ ಈಗ 15 ಜನರ ಪಟ್ಟಿ ಸಿದ್ಧವಾಗಿದೆ; ಕಾಂಗ್ರೆಸ್ನಲ್ಲಿ 4 ಜನರಿಗೆ ಟಿಕೆಟ್ ಖಚಿತವಾಗಿದೆ ಎಂಬ ಮಾತುಗಳು ಪಾಲಿಕೆ ಕಚೇರಿ ಆವರಣದಲ್ಲಿ ಹರಿದಾಡುತ್ತಿದೆ. ಕಾಂಗ್ರೆಸ್ ಪಕ್ಷ ಆಗಸ್ಟ್ 17 ರಂದು ಪಟ್ಟಿ ಪ್ರಕಟಿಸಲಿದೆ ಎನ್ನಲಾಗಿದ್ದು, ಉಳಿದೆರಡು ಪಕ್ಷಗಳು ನಾಮಪತ್ರ ಸಲ್ಲಿಕೆಗೆ ಕೊನೆಯದಿನವಾದ ಆಗಸ್ಟ್ 20 ರಂದು ತನ್ನ ಅಭ್ಯರ್ಥಿಗಳಿಗೆ ‘ಬಿ’ ಫಾರಂ ನೀಡಲಿದೆಯೆಂದು ಹೇಳಲಾಗುತ್ತಿದೆ.

2 ದಿನಗಳಲ್ಲಿ 387 ಜನರಿಂದ ನಾಮಪತ್ರ ನಮೂನೆ ಸ್ವೀಕಾರ:

      ತುಮಕೂರು ಮಹಾನಗರ ಪಾಲಿಕೆಯ ಚುನಾವಣೆ ಪ್ರಕ್ರಿಯೆ ಆರಂ‘ಗೊಂಡ ಮೊದಲ ದಿನವಾದ ಆಗಸ್ಟ್ 13 ರಂದು ಮತ್ತು ಎರಡನೆಯ ದಿನವಾದ ಆಗಸ್ಟ್ 14 ರಂದು ಒಟ್ಟಾರೆ 387 ನಾಮಪತ್ರಗಳ ನಮೂನೆಯನ್ನು ಸ್ಪರ್‘ಾಕಾಂಕ್ಷಿಗಳು ನಿಗದಿತ ಶುಲ್ಕ ಪಾವತಿಸಿ ಚುನಾವಣಾಧಿಕಾರಿಗಳಿಂದ ಪಡೆದುಕೊಂಡು ಹೋಗಿದ್ದಾರೆ.

      ನಗದಲ್ಲಿ ಪಾಲಿಕೆಯ ಒಟ್ಟು 35 ವಾರ್ಡ್ಗಳಿವೆ. ತಲಾ 5 ವಾರ್ಡ್ಗಳಿಗೆ ಒಬ್ಬರಂತೆ ಒಟ್ಟು 7 ಚುನಾವಣಾಧಿಕಾರಿಗಳನ್ನು ಚುನಾವಣಾ ಆಯೋಗ ನಿಯಮಿಸಿದೆ. ಮೊದಲನೇ ದಿನ 197 ಹಾಗೂ ಎರಡನೇ ದಿನ 190 ಸೇರಿ ಒಟ್ಟು 387 ನಾಮಪತ್ರ ನಮೂನೆಗಳು ವಿತರಿಸಲ್ಪಟ್ಟಿವೆ.

      ಒಂದನೇ ಚುನಾವಣಾಧಿಕಾರಿಗಳಿಂದ 2 ದಿನಗಳಲ್ಲಿ 50 ನಾಮಪತ್ರ ನಮೂನೆಗಳು ವಿತರಣೆಗೊಂಡಿವೆ. ಎರಡನೇ ಚುನಾವಣಾಧಿಕಾರಿಗಳಿಂದ 23 ಮತ್ತು 35; ಮೂರನೇ ಚುನಾವಣಾಧಿಕಾರಿಗಳಿಂದ 17 ಮತ್ತು 45; ನಾಲ್ಕನೇ ಚುನಾವಣಾಧಿಕಾರಿಗಳಿಂದ 32 ಮತ್ತು 34; ಐದನೇ ಚುನಾವಣಾಧಿಕಾರಿಗಳಿಂದ 14 ಮತ್ತು 17; ಆರನೇ ಚುನಾವಣಾಧಿಕಾರಿಗಳಿಂದ 33 ಮತ್ತು 21; ಏಳನೇ ಚುನಾವಣಾಧಿಕಾರಿಗಳಿಂದ 32 ಮತ್ತು 38 -ಹೀಗೆ ಕ್ರಮವಾಗಿ ಎರಡು ದಿನಗಳಲ್ಲಿ ನಾಮಪತ್ರಗಳು ವಿತರಣೆಗೊಂಡಿವೆ.

Recent Articles

spot_img

Related Stories

Share via
Copy link
Powered by Social Snap