ಪ್ರಜಾಪ್ರಭುತ್ವ ವ್ಯವಸ್ಥೆ ಬಲಹೀನವಾದರೆ ದೇಶಕ್ಕೆ ಪೆಟ್ಟು

 ಚಿತ್ರದುರ್ಗ:


      ಅನೀತಿ, ಅಧರ್ಮ, ಅನ್ಯಾಯ, ಭ್ರಷ್ಟಾಚಾರಗಳೇ ಹೆಚ್ಚಾಗಿರುವ ಸಮಾಜವನ್ನು ತಿದ್ದುವ ಆತ್ಮಸ್ಥೈರ್ಯವನ್ನು ಇಂದಿನ ಯುವಕರು ಬೆಳಸಿಕೊಳ್ಳಬೇಕೆಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಸಲಹೆ ನೀಡಿದರು.

      ಎಸ್ ಆರ್ ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೊಹಣ ನೆರವೇರಿಸಿ ಮಾತನಾಡಿದ ಅವರು ಸಮಾಜದ ಸುವ್ಯವಸ್ಥೆ ಹದಗೆಟ್ಟಿದ್ದು ಕಾನೂನುಗಳನ್ನು ನಿರ್ಲಕ್ಷಿಸುವಂತಹ ಸಮಾಜ ನಿರ್ಮಾಣವಾಗಿದೆ. ಹಿಂದೆ ಭ್ರಷ್ಟಾಚಾರ, ಅತ್ಯಚಾರದಂತಹ ನೀಚಕೃತ್ಯಗಳನ್ನ ಮಾಡಿದರೆ ಅಂಥವರನ್ನು ಸಮಾಜ ¨ಹಿಷ್ಕರಿಸುತ್ತಿತ್ತು. ಆದರೆ ಇಂದಿನ ಸಮಾಜ ಅಂಥವರಿಗೆ ಹೂವಿನಹಾರ ಹಾಕಿ ಸ್ವಾಗತಿಸುತ್ತಿದೆ. ಮುಂದಿನ ಸಮಾಜವನ್ನು ತಿದ್ದುವ ಜವಾಬ್ದಾರಿ ಹೊಂದಿರುವ ವಿದ್ಯಾರ್ಥಿಗಳೇ ತಾವುಗಳು ಉತ್ತಮ ಸಮಾಜವನ್ನ ಕಟ್ಟುವವರಾಗಬೇಕು ಎಂದು ಹೇಳಿದರು.

      ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಭ್ರಷ್ಚಾಚಾರ ನಡೆಸಲು ಅಲ್ಲ, ಸ್ವಾತಂತ್ರ್ಯ ಭಾರತದಲ್ಲಿ ರಾಜನೀತಿ ಹೇಗಿರಬೇಕೆಂದು. ಇಂದು ನಮ್ಮನ್ನು ಆಳುವ ರಾಜನೀತಿ ಹಾಳಾಗಿದೆ. ಸಮಾಜವನ್ನು ಉತ್ತಮ ರೀತಿಯಲ್ಲಿ ಮುನ್ನೆಡೆಸುವವರೆ ಇಂದು ಅನ್ಯಾಯ, ಅಧರ್ಮಗಳಲ್ಲಿ ತೊಡಗಿದ್ದಾರೆ. ಬಂಡವಾಳಶಾಹಿ, ಅಧಿಕಾರಶಾಹಿ ನಡುವೆ ಪ್ರಜಾಪ್ರಭುತ್ವ ಗೌಣವಾಗಿದೆ. ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳು ಪ್ರಜಾಪ್ರಭುತ್ವವನ್ನು ಸರಿಯಾದ ಮಾರ್ಗದಲ್ಲಿ ಮುನ್ನೆಡಸಬೇಕು ಎಂದರು.

      ಎಸ್ ಆರ್ ಎಸ್ ಶಿಕ್ಷಣ ಸಂಸ್ಥೆಯು ಹುತಾತ್ಮ ಯೋಧರ ಕುಟುಂಬವನ್ನ ಪ್ರತಿವರ್ಷ ಸನ್ಮಾನಿಸುವ ರೀತಿ ನನಗೆ ತುಂಬ ಸಂತೋಷವನ್ನುಂಟು ಮಾಡಿದೆ. ಏಕೆಂದರೆ ಶಿಕ್ಷಣ ಸಂಸ್ಥೆಯು ಕೇವಲ ಶಿಕ್ಷಣ ನೀಡಿದರೆ ಸಾಲದು, ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡಬೇಕೆಂದು ಹರ್ಷವ್ಯಕ್ತಪಡಿಸಿದರು.

      ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ದೇಶ ನನಗೆ ಏನನ್ನು ನೀಡಿದೆ ಎನ್ನುವುದಕ್ಕಿಂತ ದೇಶಕ್ಕಾಗಿ ತಾನು ಏನನ್ನು ನೀಡಿದ್ದೇನೆ ಎಂಬ ಪ್ರಶ್ನೆಯನ್ನು ಹಾಕಿಕೊಳ್ಳಬೇಕು. ನಾನು ಕೂಡ ಇಂತಹ ಪ್ರಶ್ನೆಯನ್ನ ಹಾಕಿಕೊಂಡಾಗ ಉತ್ತರ ಸಿಕ್ಕಿದ್ದು ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಕ್ಕೆ ಸಂತೋಷ್ ಹೆಗ್ಡೆ ಯವರಂತಹ ಅತಿಥಿಗಳನ್ನು ಆಹ್ವಾನಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ದೇಶದ ಕಾನೂನು, ಸುವ್ಯವಸ್ಥೆಗಳನ್ನು ಪರಿಚಯಿಸುವುದರ ಮೂಲಕ ರಾಷ್ಟ್ರಭಕ್ತಿಯನ್ನ ಬೆಳೆಸುವ ಸತ್ಕಾರ್ಯವನ್ನ ಮಾಡಬೇಕೆನಿಸಿತು ಎಂದು ಹೇಳಿದರು.

      ರಾಜಸ್ಥಾನದ ಪೋಕ್ರಾನ್‍ನಲ್ಲಿ ಉಂಟಾದ ಬಾಂಬ್ ಸ್ಪೋಟದಿಂದ ಹುತಾತ್ಮರಾದ ದಾವಣಗೆರೆ ಜಿಲ್ಲೆ, ಹರಿಹರ ಪಟ್ಟಣದ ನಿವಾಸಿ ವೀರಯೋಧ ಜಾವೀದ್ ಕುಟುಂಬವನ್ನ ಸಂಸ್ಥೆಯ ವತಿಯಿಂದ ಐವತ್ತು ಸಾವಿರ ರೂ.ಗಳ ಧನಸಹಾಯ ನೀಡಿ ಸನ್ಮಾನಿಸಲಾಯಿತು.

      ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಲಿಂಗಾರೆಡ್ಡಿ, ಉಪಾಧ್ಯಕ್ಷರಾದ ಬಿ ಎಲ್ ಅಮೋಘ್, ಆಡಳಿತಾಧಿಕಾರಿಗಳಾದ ಡಾ. ರವಿ. ಟಿ. ಎಸ್., ಎಲ್ಲಾ ವಿಭಾಗಗಳ ಪ್ರಾಚಾರ್ಯರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪನ್ಯಾಸಕ ಅಜೇಯ ಕುಮಾರ ವಿ ಎಚ್, ಕಾರ್ಯಕ್ರಮ ನಿರೂಪಿಸಿದರು.

Recent Articles

spot_img

Related Stories

Share via
Copy link
Powered by Social Snap