ಪ್ರತಿಭಾವಂತರಿಂದ ದಾರಿದ್ರ್ಯ ನಿರ್ಮೂಲನೆ

 

ದಾವಣಗೆರೆ:

   ಪ್ರತಿಭಾವಂತರ ಕೈಗೆ ದೇಶದ ಅಧಿಕಾರ ಸಿಕ್ಕಾಗ, ಭ್ರಷ್ಟಾಚಾರ-ದಾರಿದ್ರ್ಯ ನಿರ್ಮೂಲನೆ ಆಗಲಿದೆ ಎಂದು ಸಾಹಿತಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯ್ಕ್ ಅಭಿಪ್ರಾಯಪಟ್ಟರು.
ನಗರದ ಹದಡಿ ರಸ್ತೆಯಲ್ಲಿರುವ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಕಲಾಕುಂಚ ಸಾಂಸ್ಕøತಿಕ ಸಂಸ್ಥೆಯಿಂದ 2017-18ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯ ಪ್ರಥಮ ಭಾಷೆ ಕನ್ನಡದಲ್ಲಿ 125ಕ್ಕೆ 120ರಿಂದ 124 ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಕನ್ನಡ ಕುವರ-ಕುವರಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಚುನಾವಣೆಗಳು ಸಹ ಯುದ್ಧದ ರೀತಿಯಲ್ಲಿ ನಡೆಯುತ್ತಿವೆ. ಇಂಥಹ ಪರಿಸ್ಥಿತಿ ಬದಲಾಗಿ, ಪ್ರೀತಿಯಿಂದ ಚುನಾವಣೆಗಳು ನಡೆಯಬೇಕಿದೆ. ಇಂಥಹ ಪರಿಸ್ಥಿತಿ ಬರಬೇಕಾದರೆ, ಜನತೆ ಪ್ರೀತಿಯಿಂದ ಪ್ರತಿಭಾವಂತರ ಕೈಗೆ ದೇಶವನ್ನು ಕೊಡಬೇಕು. ಆಗ ಮಾತ್ರ ದೇಶದಲ್ಲಿ ಮನೆ ಮಾಡಿರುವ ಭ್ರಷ್ಟಾಚಾರ, ದಾರಿದ್ರ್ಯ ನಿರ್ಮೂಲನೆಯಾಗಲಿವೆ ಎಂದು ಹೇಳಿದರು.

   ಇಂದಿನ ಜಗತ್ತೇ ಒಂದು ಕಲಾಕುಂಚ ಇದ್ದಂತೆ, ಈ ಜಗತ್ತಿನ ಕಲೆಯಲ್ಲಿ ಕಪ್ಪು ಚುಕ್ಕೆಯಾಗುವ ಬದಲು, ಆದರ್ಶ ಚುಕ್ಕೆಯಾದರೆ, ನಮ್ಮ ಬದುಕು ಸಾರ್ಥಕವಾಗಲಿದೆ. ನಮ್ಮಲ್ಲಿ ಆತ್ಮವಿಶ್ವಾಸ ಹಾಗೂ ದೃಢ ಸಂಕಲ್ಪ ಇದ್ದರೆ ಎಂಥಹ ಕಾಯಿಲೆಯೂ ದೂರವಾಗಲಿದೆ. ಅಹಂಕಾರ, ಮದ, ಮತ್ಸರ, ಲೋಭ ತೊರೆದು ಸಕಲ ಜೀವರಾಶಿಯನ್ನು ಪ್ರೀತಿಸುವುದರ ಜೊತೆಗೆ ಸರಳತೆ ಹಾಗೂ ಮೌಲ್ಯಗಳನ್ನು ಬಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.

   ಬಸವಣ್ಣರ ಮಹಾಮನೆಯ ಕಾಲದಲ್ಲಿ ಪ್ರತಿಯೊಬ್ಬರೂ ಚಿಂತನೆಯನ್ನು ಬೆಳೆಸಿಕೊಂಡಿದ್ದರ ಪರಿಣಾಮ, ಕಸ ಹೊಡೆಯುವವನಿಂದ ಹಿಡಿದು ಚಪ್ಪಲಿ ಹೋಲಿಯುವವನೂ ಕಾಯಕವನ್ನೇ ಪೂಜೆಯನ್ನಾಗಿ ಭಾವಿಸಿದ್ದರು. ಆದರೆ, ಇಂದು ಪೂಜೆಯೇ ಕಾಯಕವಾಗಿದೆ. ಹೀಗಾಗಿ ಪೂಜೆಯ ಮೂಲಕ ಜನಸಾಮಾನ್ಯರನ್ನು ವಂಚಿಸುವ ಹಾಗೂ ಮೋಸ ಮಾಡುವವರನ್ನು ವಿರೋಧಿಸುವ ಮೂಲಕ ಮೌಢ್ಯ ತೊರೆದು, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ನಮ್ಮ ಕಾಯಕಗಳಲ್ಲಿ ತೊಡಗಿಸಿಕೊಂಡು ಮಿಣಿಕು ಹುಳುವಿನಂತೆ ಸಮಾಜಕ್ಕೆ ಬೆಳಕಾಗಬೇಕೆಂದು ಕಿವಿಮಾತು ಹೇಳಿದರು.

  ನಾನು ಓದಿರುವುದು ಕೇವಲ 8ನೇ ತರಗತಿ ನಾನು ಯಾವುದೇ ವಿವಿಯ ಮೆಟ್ಟಿಲು ಹತ್ತಿಲ್ಲ. ಆದರೆ, ನಾನು ಬರೆದ ಹಲವು ಪದ್ಯ, ಕಥೆ, ಕಾದಂಬರಿಗಳು ವಿಶ್ವ ವಿದ್ಯಾಲಯಗಳ ಪಠ್ಯವಾಗಿವೆ. ಆದ್ದರಿಂದ ಛಲ ಮೈಗೂಡಿಸಿಕೊಂಡು ಬದುಕು ಕಟ್ಟಿಕೊಳ್ಳಬೇಕು. ತಂದೆ-ತಾಯಿ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಹೀಗಿದಾಗ ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ನಮ್ಮ ಬಳಿ ಧೈರ್ಯದಿಂದ ಹೇಳಿಕೊಳ್ಳುತ್ತಾರೆ. ಅದೇ ಪೋಷಕರೇ ರಾಕ್ಷಸಿ ಗುಣ ಹೊಂದಿದ್ದರೆ, ಮಕ್ಕಳು ಪ್ರೀತಿಸಿದ ಕಾರಣಕ್ಕೊ, ಮಗದೊಂದು ಕಾರಣಕ್ಕೊ ಆತ್ಮಹತ್ಯೆ ಸೇರಿದಂತೆ ಇತರೆ ಅನಾಹುತಗಳನ್ನು ಮಾಡಿಕೊಳ್ಳುವ ಸಾಧ್ಯತೆಯೂ ಇದೆ ಎಂದು ಸೂಚ್ಯವಾಗಿ ಎಚ್ಚರಿಸಿದರು.

   ದೇವರ ಪೂಜೆ ಮಾಡುವ ಮನುಷ್ಯ ಬಳಿಕ ಸುಳ್ಳು ಹೇಳುವುದು, ಲಂಚ ಪಡೆಯುವುದನ್ನು ಮಾಡಿದರೆ, ಆ ದೇವರು ಒಪ್ಪಲು ಸಾಧ್ಯವೇ?. ಹೀಗಾಗಿ ದೇವರು ಮತ್ತು ಕಾಯಕ ಅಂದರೆ, ನಡೆ-ನುಡಿ ಒಂದಾಗಿರಬೇಕು ಎಂದ ಅವರು, ಮಕ್ಕಳ ಮದುವೆಯನ್ನು ಆಡಂಬರದಿಂದ ಮಾಡಿ ಇರುವ ಆಸ್ತಿ ಮಾರಿ ಬೀದಿಗೆ ಬಂದು ಕೂಲಿಯಾಳುಗಳಾಗಿ ದುಡಿಯುವ ಬದಲು, ಮಕ್ಕಳ ವಿವಾಹವನ್ನು ಸರಳವಾಗಿ ಮಾಡಬೇಕು. ಹೆಣ್ಣು ಹುಟ್ಟಿದರೆ ಹೆಗ್ಗಣ, ಗಂಡು ಹುಟ್ಟಿದರೆ ಬಲ ಭೀಮಾ ಎಂಬ ಪ್ರತೀತಿಯನ್ನು ಅಳಸಿ ಸುಳ್ಳು ಮಾಡಲು ಲಿಂಗ ಭೇದ ಮರೆತು ಬದುಕು ನಡೆಸೋಣ ಎಂದು ಕರೆ ನೀಡಿದರು.

   ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶ ಮಾಡಿದ ಕಾರಣಕ್ಕೆ ಕೇರಳ, ಕೊಡಗಿನಲ್ಲಿ ಜಲ ಪ್ರವಾಹ ಆಗಿದೆ ಎಂಬ ಹುಯ್ಯಿಲು ಎಬ್ಬಿಸಿರುವುದು ಶುದ್ಧ ಸುಳ್ಳು. ಇದು ಆಗಿರುವುದು ಮನುಷ್ಯ ಪ್ರøಕತಿಯ ಮೇಲೆ ನಡೆಸಿರುವ ಅತ್ಯಾಚಾರ, ದೌರ್ಜನ್ಯದಿಂದ ಎಂದು ಸ್ಪಷ್ಟಪಡಿಸಿದರು
ಈ ಸಂದರ್ಭದಲ್ಲಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕನ್ನಡ ಕುವರ ಪ್ರಶಸ್ತಿಗೆ 397, ಕನ್ನಡ ಕುವರಿ ಪ್ರಶಸ್ತಿಗೆ 567 ಮಕ್ಕಳಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

  ಸಂಸ್ಥೆಯ ಅಧ್ಯಕ್ಷ ಕೆ.ಹೆಚ್.ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಸ್ಥಾಪಕ ಗಣೇಶ್ ಶೆಣೈ, ಕಸಾಪ ಜಿಲ್ಲಾಧ್ಯಕ್ಷ ಡಾ.ಮಂಜುನಾಥ ಕುರ್ಕಿ, ತಾಲೂಕು ಅಧ್ಯಕ್ಷ ಬಿ.ವಾಮದೇವಪ್ಪ, ಹೋಟೆಲ್ ಉದ್ಯಮಿ ಮಲ್ಲಾಡಿ ಪ್ರಭಾಕರಶೆಟ್ಟಿ, ಜ್ಯೋತಿ ಗಣೇಶ್ ಶೆಣೈ, ಹೇಮಾ ಶಾಂತಪ್ಪ ಪೂಜಾರಿ, ರೇಖಾ ಪುರಾಣಿಕ್ ಮತ್ತಿತರರು ಉಪಸ್ಥಿತರಿದ್ದರು.

Recent Articles

spot_img

Related Stories

Share via
Copy link
Powered by Social Snap