ಬಗೆಹರಿಯದ ಬಂಡಿ ಜಾಡು….ಕಾಲುದಾರಿಗಳ ಗೋಳು….!! : ಕಂದಾಯ ಇಲಾಖೆಯ ಜಾಣಕಿವುಡು…!!!

 ತುಮಕೂರು:

       ಇದು ಇಂದು ನಿನ್ನೆಯ ಸಮಸ್ಯೆಯಂತೂ ಅಲ್ಲ. ಶತಮಾನಗಳಿಂದಲೂ ಕಾಲುದಾರಿಯ ಕಥೆ ಅಡ್ಡ ದಾರಿ ಹಿಡಿದೇ ನಡೆದಿದೆ. ಹೊಲಗಳಿಗೆ ಹೋಗಲು ಗ್ರಾಮದ ನಕಾಶೆಯಲ್ಲಿ ಬಂಡಿ ದಾರಿ, ಜಾಡುಗಳಿದ್ದರೂ ಯಾರಾದರೊಬ್ಬ ಮಧ್ಯೆ ಹೊಲ ಇರುವ ರೈತ ದಾರಿ ಬಿಡದೆ ಹೋದರೆ ಇನ್ನೊಬ್ಬ ರೈತನ ಕಥೆ ಮುಗಿದಂತೆಯೇ ಸರಿ. ವ್ಯವಸಾಯಕ್ಕೆ ಬೇಕಾದ ಸಲಕರಣೆಗಳು, ವ್ಯವಸಾಯೋತ್ಪನ್ನಗಳು ಮತ್ತಿತರ ಭಾರದ ಸರಕು ಸರಂಜಾಮುಗಳನ್ನು ಸಾಗಿಸಲು ಈ ಕಿರುದಾರಿಗಳು ಅತ್ಯಂತ ಅವಶ್ಯಕ. ಇದರ ಪ್ರಾಮುಖ್ಯತೆಯನ್ನು ಕಂಡೇ ಸರ್ಕಾರ ಇಂತಹ ಕಾಲುದಾರಿಗಳನ್ನು ಯಾವುದೇ ಕಾರಣಕ್ಕೂ ಅತಿಕ್ರಮಣ ಮಾಡದಂತೆ ಆದೇಶವನ್ನು ಹೊರಡಿಸಿದೆ. ಆದರೆ ಈ ಆದೇಶವನ್ನು ಪಾಲಿಸಬೇಕಾದ ಕೆಳಹಂತದ ಕಂದಾಯ ಅಧಿಕಾರಿಗಳು ತಾಲ್ಲೂಕು ಮಟ್ಟದ ತಹಸೀಲ್ದಾರರ ಅಂಗಳಕ್ಕೆ ಪ್ರಕರಣವನ್ನು ನೂಕಿ ತೆಪ್ಪಗಾಗಿ ಬಿಡುತ್ತಾರೆ. ಇವು ಎಷ್ಟು ಸರಳವಾದ ಪ್ರಕ್ರಿಯೆಗಳಾದರೂ ಅದನ್ನು ಗೊಂದಲದ ಗೂಡನ್ನಾಗಿಸಿ, ಯಾವುದೇ ಇತ್ಯರ್ಥಕ್ಕೆ ರೈತರು ಬಾರದಂತೆ ಪ್ರಕರಣವನ್ನು ಹಸಿಯಾಗಿರುವಂತೆ ನೋಡಿಕೊಳ್ಳುವ ಛಾತಿ ಈ ಅಧಿಕಾರಿ ವರ್ಗಕ್ಕಿದೆ ಎಂಬುದು ಸಾರ್ವಕಾಲಿಕ ಸತ್ಯ. ಹೀಗಾಗಿ ಅಸಹಾಯಕ ರೈತರು ಕಂದಾಯ ಇಲಾಖೆಯವರನ್ನು ಎದುರು ಹಾಕಿಕೊಳ್ಳಲಾರದೆ ತಮ್ಮ ಕಷ್ಟವನ್ನು ತಾವೇ ಅನುಭವಿಸುವಂತಾಗಿದೆ. ಕಾಲುದಾರಿ ಒತ್ತುವರಿ ಮಾಡಿರುವ ರೈತನೇನಾದರೂ ಬಲಾಢ್ಯನಾದರಂತೂ ಮೂಗಿದೇ ಹೋಯಿತು. ಬಡಪಾಯಿ ರೈತರು ಯಾವುದೇ ಪ್ರತಿರೋಧವಿಲ್ಲದೆ ಸುಮ್ಮನಾಗಬೇಕಾಗುತ್ತದೆ. ಇಲ್ಲಿ ಕೈಬೆಚ್ಚಗಾಗಿಸುವ ದಂಧೆಯೂ ಜಾಸ್ತಿ. ಅಕಸ್ಮಾತ್ ಏನಾದರೂ ಪ್ರಕರಣವನ್ನು ಸರ್ವೇ ಇಲಾಖೆಗೆ ಒಪ್ಪಿಸಿದರೆ ಇದ್ದಿದ್ದೂ ಗೊಂದಲವಾಗಿ ಅತ್ತ ಸಮೀಕ್ಷೆಯೂ ನಡೆಯದೆ, ಇತ್ತ ಕಾಲುದಾರಿಯೂ ಇಲ್ಲದೆ ಹಪಹಪಿಸುವಂತಾಗುತ್ತದೆ ರೈತರ ಬಾಳು. ಈ ಕುರಿತು ಪ್ರಾದೇಶಿಕ ಆಯುಕ್ತರು, ಬೆಂಗಳೂರು ವಿಭಾಗ, ಬೆಂಗಳೂರು ಅವರು ದಿನಾಂಕ 27.12.2000 ರಲ್ಲಿ ಒಂದು ಅರೆ ಸರ್ಕಾರಿ ಪತ್ರವನ್ನು ತುಮಕೂರು ಜಿಲ್ಲಾಧಿಕಾರಿಗಳಿಗೆ ಬರೆದಿರುತ್ತಾರೆ. ಉಲ್ಲೇಖಿತ ಪತ್ರದಲ್ಲಿ ಗ್ರಾಮಾಂತರ ಪ್ರದೇಶಗಳ ಜಮೀನುಗಳಲ್ಲಿ ಓಡಾಡಲು ದಾರಿಯನ್ನು ಬಿಡಿಸಿಕೊಡಲು ಶೀಘ್ರವಾಗಿ ಕ್ರಮ ಕೈಗೊಳ್ಳುವಂತೆ ಸೂಚನೆಯನ್ನೂ ನೀಡಿರುವ ಆಧಾರಗಳು ಲಭ್ಯವಿದೆ.

 ಒತ್ತುವರಿಗೆ ಅವಕಾಶವೇ ಇಲ್ಲ..!!!

      ಗ್ರಾಮಾಂತರ ಪ್ರದೇಶಗಳ ಜಮೀನುಗಳಲ್ಲಿ ಓಡಾಡಲು ದಾರಿ ಬಿಟ್ಟುಕೊಡುವ ಬಗ್ಗೆ ಜಗಳಗಳು ಅತ್ಯಂತ ಸಾಮಾನ್ಯವಾಗಿ ಬಿಟ್ಟಿವೆ. ಇದರಿಂದಲೇ ಅನೇಕ ಬಾರಿ ದುರದೃಷ್ಟಕರ ಘಟನೆಗಳೂ, ವೈಮನಸ್ಯಗಳು ಬಂದು ಹಳ್ಳಿಗಾಡಿನ ಸೌಹಾರ್ದತೆಯೂ ಕದಡಿ ಹೋಗಿರುವ ಉದಾಹರಣೆಗಳು ಇವೆ. ಸಾರ್ವಜನಿಕರು ಸರ್ಕಾರಕ್ಕೆ ಮನವಿಗಳ ಮಹಾಪೂರವನ್ನೇ ಹರಿಸಿದ್ದಾರೆ. ಗ್ರಾಮ ನಕಾಶೆಗಳಲ್ಲಿ ಇರುವ ಕಾಲುದಾರಿ ಹಾಗೂ ಬಂಡಿ ದಾರಿಗಳನ್ನು, ಅನೇಕ ಕಡೆ ಅತಿಕ್ರಮಣ ಮಾಡಲಾಗಿದೆ. ಇವುಗಳ ತೆರವಿಗೆ ಇನ್ನಿಲ್ಲದ ಪ್ರಯತ್ನಗಳೂ ನಡೆಯುತ್ತಿವೆ. ಇಂತಹ ಕಾಲುದಾರಿಗಳು ಮತ್ತು ಬಂಡಿ ದಾರಿಗಳನ್ನು ಒತ್ತುವರಿ ಅಥವಾ ಅಕ್ರಮವಾಗಿ ಸಾಗುವಳಿ ಮಾಡಿಕೊಳ್ಳುವಂತೆಯೇ ಇಲ್ಲ.

      ಹೊಸದಾಗಿ ಭೂಮಿಯನ್ನು ಮಂಜೂರು ಮಾಡುವಾಗಲೂ ಮತ್ತು ಅಕ್ರಮ ಸಾಗುವಳಿ ಜಮೀನುಗಳನ್ನು ಸಕ್ರಮಗೊಳಿಸುವ ಸಂದರ್ಭಗಳಲ್ಲಿಯೂ ಸುತ್ತಮುತ್ತಲಿನ ಇತರೆ ರೈತರಿಗೆ ಓಡಾಡುವುದಕ್ಕೆ ಹಾಗೂ ವ್ಯವಸಾಯಕ್ಕೆ ಎತ್ತಿನಗಾಡಿ ಮತ್ತು ಸಲಕರಣೆಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ಮಾಡಿಕೊಡಲು ಷರತ್ತು ವಿಧಿಸಿ ಆದೇಶ ಹೊರಡಿಸಬೇಕೆಂಬ ನಿಯಮಗಳನ್ನು ವಿಭಾಗಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಬರೆದಿರುವ ಅರೆ ಸರ್ಕಾರಿ ಪತ್ರದಲ್ಲಿ ಸ್ಪಷ್ಟವಾಗಿ ನಿರ್ದೇಶನ ನೀಡಿದ್ದಾರೆ.

      ಅಕಸ್ಮಾತ್ ಬಂಡಿದಾರಿ ಹಾಗೂ ಕಾಲುದಾರಿಗಳು ಇಲ್ಲದೆ ಹೋದ ಪಕ್ಷದಲ್ಲಿ ಭೂಕಂದಾಯ ಕಾಯಿದೆಯಡಿಯಲ್ಲಿ ಅವಶ್ಯವಿರುವ ಕಡೆಗಳಲ್ಲಿ ಗ್ರಾಮ ನಕಾಶೆಗಳಲ್ಲಿ ಹೊಸದಾಗಿ ಕಾಲುದಾರಿ ಹಾಗೂ ಬಂಡಿ ದಾರಿಗಳನ್ನು ಮೀಸಲಿರಿಸಲು ಅಗತ್ಯವಾದ ಪ್ರಸ್ತಾವನೆಗಳನ್ನು ಅಧೀನ ಕಚೇರಿಗಳಿಂದ ತರಿಸಿಕೊಂಡು ಕ್ರಮ ಜರುಗಿಸುವಮತೆ ವಿಭಾಗಾಧಿಕಾರಿಗಳ ಸೂಚನೆಗಳಿವೆ.

ಆದೇಶ ಪಾಲನೆ ಕನಸಿನ ಮಾತು..!!!

      ಕಳೆದ 17 ವರ್ಷಗಳ ಹಿಂದೆಯೇ ಬೆಂಗಳೂರು ವಿಭಾಗಾಧಿಕಾರಿಗಳ ಪತ್ರದ ಆಧಾರದ ಮೇಲೆ ತುಮಕೂರು ಜಿಲ್ಲಾಧಿಕಾರಿಗಳು ತುಮಕೂರು ಜಿಲ್ಲೆಯ ಹತ್ತು ತಾಲ್ಲೂಕುಗಳ ತಹಸೀಲ್ದಾರರಿಗೆ ಈ ಕುರಿತು ಆದೇಶವೊಂದನ್ನು ನೀಡಿದ್ದಾರೆ. ತುಮಕೂರು ಜಿಲ್ಲಾಧಿಕಾರಿಗಳಾಗಿದ್ದ ಜಯರಾಮರಾಜೇ ಅರಸ್ ಅವರ ಕಾಲದಲ್ಲಿಯೇ ಈ ಪತ್ರವೂ ಹೊರಬಿದ್ದಿದೆ. ತುಮಕೂರು ಜಿಲ್ಲೆಯ ಎಲ್ಲಾ ಗ್ರಾಮಾಂತರ ಪ್ರದೇಶಗಳಲ್ಲಿ ಈ ರೀತಿಯ ಒತ್ತುವರಿ, ಅಕ್ರಮ ಸಾಗುವಳಿ ಕಂಡುಬಂದಲ್ಲಿ ಕೂಡಲೇ ತೆರವುಗೊಳಿಸಲು ಹಾಗೂ ಕಾಲುದಾರಿ ಮತ್ತು ಬಂಡಿದಾರಿಗಳು ಇಲ್ಲದೆ ನಕಾಶೆಗಳಲ್ಲಿ ಹೊಸದಾಗಿ ಸೇರಿಸಬೇಕಾದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ತುರ್ತಾಗಿ ಸಲ್ಲಿಸುವಂತೆ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಆದರೆ ಎಷ್ಟರಮಟ್ಟಿಗೆ ಈ ಆದೇಶ ಪಾಲನೆಯಾಗಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆಯಿಲ್ಲ.

      ಸಾರ್ವಜನಿಕರಿಗೆ ಉಪಯೋಗವಾಗುವ ಇಂತಹ ಕೆಲಸಗಳಿಗೆ ಕಂದಾಯ ಇಲಾಖೆಯ ಗ್ರಾಮಮಟ್ಟದ ಸಿಬ್ಬಂದಿ ಸಹಕರಿಸುವುದು ಸ್ವಲ್ಪ ಕಷ್ಟವೇ ಎನ್ನಬಹುದು. ಯಾವುದೇ ವಿಧವಾದ ಲಂಚ ರುಷುವತ್ತುಗಳಿಲ್ಲದೆ ಕೆಲಸ ಕಾರ್ಯಗಳು ಕಂದಾಯ ಇಲಾಖೆಯಲ್ಲಿ ಆಗುವುದೇ ಇಲ್ಲವೆಂಬ ಗುರುತರವಾದ ದೂರುಗಳೂ ಇವೆ. ಹಾಗಾಗಿ ವರ್ಷಗಳು ಉರುಳಿದರೂ ಈ ರೀತಿಯ ಆದೇಶಗಳು ಪಾಲನೆಯಾಗುವುದು ಕಷ್ಟ. ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಶೀಘ್ರವೇ ಕ್ರಮಕ್ಕೆ ಮುಂದಾಗುವುದು ಸೂಕ್ತ.

– ಭೂಷಣ್ ಮಿಡಿಗೇಶಿ

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap