ಬಿಜೆಪಿ ಕಛೇರಿಯಲ್ಲಿ ವಾಜಪೇಯಿಗೆ ಭಾವಪೂರ್ಣ ಶ್ರದ್ಧಾಂಜಲಿ

ದಾವಣಗೆರೆ:

      ಬಿಜೆಪಿ ಪಕ್ಷವನ್ನು ರಾಷ್ಟ್ರಮಟ್ಟದಲ್ಲಿ ಕಟ್ಟಿ ಬೆಳಸಿದ ಕೀರ್ತಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ ಎಂದು ದಾವಣಗೆರೆ ಉತ್ತರ ಶಾಸಕ, ಪಕ್ಷದ ಹಿರಿಯ ಮುಖಂಡ ಎಸ್.ಎ.ರವೀಂದ್ರನಾಥ್ ಹೇಳಿದರು.

     ಇಲ್ಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸಂಜೆ ನಡೆದ ಅಟಲ್ ಬಿಹಾರಿ ವಾಜಪೇಯಿ ಭಾವಪೂರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಅಭಿವೃದ್ಧಿ ಚಿಂತನೆಯೊಂದಿಗೆ ಪ್ರಧಾನಿಯಾಗಿ ಉತ್ತಮ ಕೆಲಸ ಮಾಡಿದ ಧೀಮಂತ ನಾಯಕ ಅಟಲ್ ಬಿಹಾರಿ ವಾಜಪೇಯಿ ಎಂದು ಸ್ಮರಿಸಿದರು.

     ಉತ್ತಮ ಕವಿ, ಪ್ರಖರ ವಾಗ್ಮಿಯಾಗಿದ್ದ ವಾಜಪೇಯಿ ಭಾಷಣ ಕೇಳಲು ಎಲ್ಲೆಡೆ ಜನಸಾಗರವೇ ಹರಿದು ಬರುತ್ತಿತ್ತು. ಸಂಸತ್ತಿನಲ್ಲಿ ಕೂಡ ವಾಜಪೇಯಿ ಮಾತನಾಡುತ್ತಿದ್ದರೆ ಪ್ರಧಾನಿಗಳಾಗಿದ್ದ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಕೂಡಾ ಕುತೂಹಲದಿಂದ ಆಲಿಸುತ್ತಿದ್ದರು. ಇವರ ಭಾಷಣ ಕೇಳಿ ಎಲ್ಲಾ ನಾಯಕರು ತಮ್ಮ ನಡೆ-ನುಡಿಯಲ್ಲಿನ ಲೋಪ ತಿದ್ದಿಕೊಳ್ಳುತ್ತಿದ್ದರು. ಅಂತಹ ಮಹಾನ್ ನಾಯಕ ವಾಜಪೇಯಿ ಎಂದು ಅವರು ನುಡಿದರು.

      ಅಧಿಕಾರ ಇದ್ದಾಗಲೂ, ಇಲ್ಲದಾಗಲೂ ವಾಜಪೇಯಿ ದೇಶದ ಚಿಂತನೆ ಮಾಡಿದ್ದರು. ಪ್ರಧಾನಿಯಾಗಿ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲು ಬಹುವಾಗಿ ಶ್ರಮಿಸಿದ್ದರು. ನದಿಗಳ ಜೋಡಣೆಯೂ ವಾಜಪೇಯಿ ದೊಡ್ಡ ಕನಸಾಗಿದ್ದು, ಅದು ಸಾಧ್ಯವಾದರೆ ದೇಶದಲ್ಲಿ ಬರಗಾಲದ ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬಹುದು ಎಂದರು.

      ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್.ಶಿವಯೋಗಿಸ್ವಾಮಿ ಮಾತನಾಡಿ, ಅಟಲ್ ನಮಗೆ ದೊಡ್ಡ ಶಕ್ತಿಯಾಗಿದ್ದರು. ಪಕ್ಷ ಮತ್ತು ಸಂಘಟನೆಯಲ್ಲಿ ಶ್ರದ್ಧೆ ಮತ್ತು ಗೌರವ ಹೊಂದಿದ್ದರು. ಸಂಸ್ಕಾರವಂತ ಪಕ್ಷ ನಮ್ಮದು ಎಂಬ ಹೆಮ್ಮೆ ಅವರಲ್ಲಿತ್ತು. ರಾಜಕೀಯ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತನೂ ಮೇಲ್ಪಂಕ್ತಿಯಲ್ಲಿ ಬರಲು ವಾಜಪೇಯಿ ಸ್ಫೂರ್ತಿಯಾಗಿದ್ದರು. ವಾಜಪೇಯಿಗೆ ಸರಿಸಾಟಿಯಾಗಿ ನಿಲ್ಲಬಲ್ಲ ನಾಯಕರು ಯಾರೂ ಇರಲಿಲ್ಲ. ಅಂತಹ ಮೇರು ವ್ಯಕ್ತಿತ್ವವುಳ್ಳ ವಾಜಪೇಯಿ ಯಾವುದೇ ಸಮಸ್ಯೆ ಎದುರಾದರೂ ಧೃತಿಗೆಡಲಿಲ್ಲ. ಬಿಜೆಪಿ ಕಾರ್ಯಕರ್ತರಿಗೆ ಇವರ ಆದರ್ಶ ಪ್ರೇರಣೆಯಾಗಿದೆ. ವಾಜಪೇಯಿ ಆಶಯದಂತೆ ಪಕ್ಷದ ಸಂಘಟನೆ ಬಲಗೊಳಿಸಿ, ಜನಸೇವೆ ಮಾಡೋಣ ಎಂದು ಕರೆ ನೀಡಿದರು.

      ಪಕ್ಷದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ ನಂತರ ಜಯದೇವ ವೃತ್ತ, ಹರಳೆಣ್ಣೆ ಕೊಟ್ರಬಸಪ್ಪ ವೃತ್ತ, ಗಡಿಯಾರ ಕಂಬ ಸೇರಿದಂತೆ ಅನೇಕ ಕಡೆಗಳಲ್ಲಿ ಅಗಲಿದ ನಾಯಕನಿಗೆ ಭಾವಪೂರ್ಣ ವಿದಾಯ ಅರ್ಪಿಸಲಾಯಿತು.

      ಮಾಯಕೊಂಡ ಶಾಸಕ ಪ್ರೊ.ಎನ್.ಲಿಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಮುಖಂಡರಾದ ಎಲ್.ಬಸವರಾಜ, ಜೆ.ಸೋಮಶೇಖರ್, ಹೆಚ್.ಎಸ್.ನಾಗರಾಜ್, ಎನ್.ರಾಜಶೇಖರ, ಪಿ.ಸಿ.ಶ್ರೀನಿವಾಸ, ಹೆಚ್.ಸಿ.ಜಯಮ್ಮ, ರಾಜನಹಳ್ಳಿ ಶಿವಕುಮಾರ್, ಹೇಮಂತ ಕುಮಾರ, ಜಗದೀಶ್, ಉಮಾ, ಹೆಚ್.ಎನ್.ಶಿವಕುಮಾರ್, ಧನಂಜಯ್ ಕಡ್ಲೆಬಾಳ್, ಶಿವರಾಜ ಪಾಟೀಲ್, ವೈ.ಮಲ್ಲೇಶ್, ಸರೋಜಮ್ಮ ದೀಕ್ಷಿತ್, ಶಿವನಗೌಡ ಪಾಟೀಲ್, ಗುಮ್ಮನೂರು ಶ್ರೀನಿವಾಸ್, ಕೋಟಿಯಾಳ್ ಸಿದ್ದೇಶ್, ಕೆ.ಎಂ.ವೀರೇಶ್, ಗೌತಮ್ ಜೈನ್, ಶಶಿಧರ, ಟಿಪ್ಪು ಸುಲ್ತಾನ್, ಚೇತುಬಾಯಿ, ಭಾಗ್ಯ ಪಿಸಾಳೆ, ಪ್ರವೀಣ್ ಜಾಧವ್, ಧನುಷ್ ರೆಡ್ಡಿ ಮತ್ತಿತರರು ಪಾಲ್ಗೊಂಡಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap