“ಬೋಧನೆ ಮತ್ತು ಸಂಶೋಧನೆ ಒಂದೇ ನಾಣ್ಯದ ಎರಡು ಮುಖಗಳು”:ಡಾ.ಕೇಶವ

ತುಮಕೂರು:

      ಬೋಧಕ ಬೋಧನೆಯ ಜೊತೆಗೆ ಸಂಶೋಧನೆಯನ್ನೂ ಪ್ರವೃತ್ತಿಯಾಗಿ ಬೆಳೆಸಿಕೊಳ್ಳಬೇಕು. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು. ಇವೆರಡಕ್ಕೂ ಬೋಧಕರು ನ್ಯಾಯ ಒದಗಿಸಿದರೆ ಉತ್ತಮ ವಿದ್ವತ್ ಪಡೆಯನ್ನು ಕಟ್ಟಲು ಸಾಧ್ಯ ಎಂದು ತುಮಕೂರು ವಿಶ್ವವಿದ್ಯಾಲಯದ ಗ್ರಂಥಾಲಯ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಕೇಶವ ಅಭಿಪ್ರಾಯಪಟ್ಟರು.
ಅವರು ನಗರದ ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನಲ್ಲಿ ಏರ್ಪಡಿಸಿದ್ದ “ಬೋಧನೆ ಮತ್ತು ಸಂಶೋಧನೆಯಲ್ಲಿ ವಿದ್ಯುನ್ಮಾನ ಮಾಹಿತಿ” ಎಂಬ ವಿಷಯವನ್ನು ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

     ನಾವು ಮಾಡುವ ಸಂಶೋಧನೆ ಕೇವಲ ವಿದ್ವತ್‍ವಲಯಕ್ಕೆ ಮಾತ್ರ ಸೀಮಿತವಾಗಬಾರದು. ಅದು ಸಾಮಾನ್ಯ ಜನರನ್ನು ವಿದ್ಯಾರ್ಥಿಗಳನ್ನು ತಲುಪುವಂತಿರಬೇಕು. ಅಂತಹ ಸಂಶೋಧಕನನ್ನು ಸಮಾಜ ಸುಲಭವಾಗಿ ಗುರ್ತಿಸುತ್ತದೆ. ಇದರಿಂದ ಆತನ ವ್ಯಕ್ತಿತ್ವವೂ ವೃದ್ಧಿಯಾಗುತ್ತದೆ ಎಂದು ನುಡಿದರು.

      ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವ ಕಾರಣದಿಂದ ವ್ಯಕ್ತಿಗಳಲ್ಲಿ ಗ್ರಂಥಾಲಯಕ್ಕೆ ಹೋಗಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ. ಓದು ಎನ್ನುವುದು ಅಜ್ಞಾನವನ್ನು ತೊಡೆದು ಜ್ಞಾನವನ್ನು ನೀಡುವ ಸಾಧನ ಕೇವಲ ಪರೀಕ್ಷೆಗಾಗಿ ಓದುವ ಓದು ಓದಾಗಲಾರದು. ಅದು ನಮ್ಮ ಜ್ಞಾನವನ್ನು ವಿಸ್ತರಿಸುವಂತಿರಬೇಕು ಎಂದರು.

     ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ.ಡಿ.ಎನ್.ಯೋಗೀಶ್ವರಪ್ಪನವರು ಸಂಶೋಧನೆಯನ್ನು ಬೋಧನೆಯ ಅವಿಭಾಜ್ಯ ಅಂಗವಾಗಿ ಸ್ವೀಕರಿಸುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಇದನ್ನು ಕೇವಲ ಬಡ್ತಿಗಾಗಿ ಅಥವಾ ಇನ್‍ಕ್ರಿಮೆಂಟ್‍ಗಾಗಿ ಮಾಡುತ್ತಿರುವುದರಿಂದ ಸಂಶೋಧನೆಯ ಗುಣಮಟ್ಟ ಕಡಿಮೆಯಾಗಿದೆ. ಆದ್ದರಿಂದ ಈ ಕ್ಷೇತ್ರವನ್ನು ಅದರಿಂದ ಮುಕ್ತಿಗೊಳಿಸಿದರೆ ಸಂಶೋಧನೆಯ ಗುಣಮಟ್ಟ ಹೆಚ್ಚಬಹುದು. ಇತ್ತೀಚೆಗೆ ಮಾಡುತ್ತಿರುವ ಬಹುಪಾಲು ಸಂಶೋಧನೆಗಳು ಕೇವಲ ಕತ್ತರಿಸಿ ಮತ್ತು ಅಂಟಿಸುವ ಸೂತ್ರದಂತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

     ಇತ್ತೀಚೆಗೆ ಆಸಕ್ತಿಯಿಂದ ಮಾಡುವ ಸಂಶೋಧನೆಗಳು ಕ್ಷೀಣಿಸಿವೆ. ಬೋಧಕರು ತಮ್ಮ ತರಗತಿಗಳಲ್ಲಿ ವಿದ್ಯಾರ್ಥಿ ಸಮುದಾಯದಲ್ಲಿ ಸಂಶೋಧನಾ ಆಸಕ್ತಿಯನ್ನು ಮೂಡಿಸಿದರೆ ಇಷ್ಟಪಟ್ಟು ಬರುವವರ ಸಂಖ್ಯೆ ಹೆಚ್ಚಾಗಿ ಅದರ ಗುಣಮಟ್ಟ ಸುಧಾರಿಸುತ್ತದೆ ಎಂದು ತಿಳಿಸಿದ ಅವರು ವಿದ್ಯಾರ್ಥಿಗಳು ನೋಡುವ ಸಂಸ್ಕೃತಿಯನ್ನು ಬಿಟ್ಟು ಓದುವ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.ಓದು ಪುಸ್ತಕ ಸಂಸ್ಥೆಯ ಅಧ್ಯಕ್ಷರಾದ ಪ್ರೊ.ಎಸ್.ಎಲ್.ಕಾಡದೇವರ ಮಠ ಅವರು ಗ್ರಂಥಾಲವೆಂಬುದು ಜ್ಞಾನದೇಗುಲ. ಆ ದೇಗುಲಕ್ಕೆ ಪ್ರತಿನಿತ್ಯ ಹೊಸ ಪುಸ್ತಕಗಳನ್ನು ಓದುವ ಮೂಲಕ ಪೂಜೆ ಸಲ್ಲಿಸಬೇಕು. ವಿದ್ಯಾರ್ಥಿಗಳು ಪುಸ್ತಕ ಓದುವುದರ ಮೂಲಕ ಪುಸ್ತಕ ಸಂಸ್ಕೃತಿಯನ್ನು ಉಳಿಸಿ ಎಂದು ಕರೆ ನೀಡಿದರು.

      ಗೋಷ್ಠಿಯಲ್ಲಿ ತುಮಕೂರು ವಿಶ್ವವಿದ್ಯಾನಿಲಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ರೂಪೇಶ್‍ಕುಮಾರ್ ಪ್ರಬಂಧ ಮಂಡಿಸಿದರು. ಶ್ರೀ ಸಿದ್ಧಗಂಗಾ ಬಾಲಕರ ಕಾಲೇಜಿನ ಪ್ರೊ.ಎಂ.ಸಿ.ಪಾಟೀಲ್ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.

       ಕು.ಸಿ.ಆರ್. ಫರಾ ಪ್ರಾರ್ಥಿಸಿದರು. ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ಗ್ರಂಥಪಾಲಕರಾದ ಶ್ರೀಯುತ ಎ.ಎಸ್.ವಿರೂಪಾಕ್ಷಯ್ಯ ಸ್ವಾಗತಿಸಿದರು. ಪ್ರಾಧ್ಯಾಪಕರಾದ ಪ್ರೊ.ಜಿ.ಚಿದಾನಂದಮೂರ್ತಿ ವಂದಿಸಿದರು. ಕು.ನಯನಪ್ರಸಾದ್ ನಿರೂಪಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap