ಮಂದರಗಿರಿಯಲ್ಲಿ ಕ್ರಿಸ್ತಶಕ 10ನೇ ಶತಮಾನಕ್ಕೂ ಪೂರ್ವದ ಅನೇಕ ಜೈನ ಕುರುಹುಗಳ ಸಂಶೋಧನೆ

     ತುಮಕೂರು ನಗರದ ಪೂರ್ವಕ್ಕಿರುವ ಏಕಶಿಲಾ ಮಂದರಗಿರಿ ಬೆಟ್ಟದ ಮೇಲೆ ಪಾಶ್ರ್ವನಾಥ, ಸುಪಾಶ್ರ್ವನಾಥ ಮತ್ತು ಚಂದ್ರನಾಥರ ಎರಡು ಒಟ್ಟು ನಾಲ್ಕು ಬಸದಿಗಳಿವೆ. ಈ ಬಸದಿಯ ಒಳಾವರಣದಲ್ಲಿ ಪೌಳಿಗೋಡೆಗೆ ಒರಗಿಸಿ ನಿಲ್ಲಿಸಿರುವ ಹೊಯ್ಸಳ ದೊರೆ ಒಂದನೇ ನರಸಿಂಹನ ಅವಧಿಯ ಕ್ರಿ.ಶ. ಸುಮಾರು 1160ರ ಶಾಸನದಲ್ಲಿ ( ಎಕ 24, ತುಮಕೂರು-61, ಪಂಡಿತನಹಳ್ಳಿ) ಇಲ್ಲಿನ ಬಸದಿಯನ್ನು ಮತ್ತು ಪದ್ಮಾವತಿದೇವಿಕೆರೆ ಎಂಬ ಒಂದು ಕೆರೆಯನ್ನೂ ಹೊಯ್ಸಳ ಅಧಿಕಾರಿ ಈಶ್ವರನ ಹೆಂಡತಿಯಾದ ಮಾಚಿಯಕ್ಕ(ಮಾಚವ್ವೆ) ಎಂಬುವಳು ನಿರ್ಮಿಸಿದಳೆಂದು ಮಾಹಿತಿಯಿದೆ.

Image result for mandaragiri hills

     ಶಾಸನದಲ್ಲಿ ಬಸದಿಕಟ್ಟಿಸಿದಳೆಂದು ಹೇಳಿದೆಯೇ ಹೊರತು ಯಾವ ತೀರ್ಥಂಕರನಿಗೆ ಬಸದಿಯನ್ನು ನಿರ್ಮಿಸಿದಳೆಂಬ ಮಾಹಿತಿಯಿಲ್ಲ. ಅಲ್ಲದೆ ಪದ್ಮಾವತಿದೇವಿಕೆರೆಯನ್ನು ಕಟ್ಟಿಸಿದಳೆಂಬ ಮಾಹಿತಿಯಿದೆಯೇ ಹೊರತು ಅದನ್ನು ಎಲ್ಲಿ ಅಂದರೆ ಯಾವ ಸ್ಥಳದಲ್ಲಿ ಕಟ್ಟಿಸಿದಳೆಂಬ ವಿವರವಿಲ್ಲ.

      ಮಂದರಗಿರಿಯಲ್ಲಿ ಮತ್ತು ಅದರ ಪರಿಸರದಲ್ಲಿ ನಾನು ಇತ್ತೀಚೆಗೆ ಕೈಗೊಂಡ ಕ್ಷೇತ್ರಕಾರ್ಯದಲ್ಲಿ ಕೆಲವೊಂದು ಹೊಸ ವಿಷಯಗಳು ಕಂಡುಬಂದಿದ್ದು ಅವನ್ನು ಈ ಕೆಳಗಿನಂತೆ ಮಂಡಿಸಲಾಗಿದೆ.

      ಹೊಯ್ಸಳ ದೊರೆ ಒಂದನೇ ನರಸಿಂಹನ ಅವಧಿಯ ಕ್ರಿ.ಶ. ಸುಮಾರು 1160ರ ಶಾಸನದಿಂದ ಮಾಚಿಯಕ್ಕಳ ದಾನಕಾರ್ಯಗಳು ತಿಳಿದರೂ ಕೆಲವು ಅನುಮಾನಗಳು ಉಳಿಯುತ್ತವೆ. ಅವು ಈ ಕೆಳಗಿನಂತಿವೆ.

Related image

1. ಮಾಚಿಯಕ್ಕಳು ಮಂದರಗಿರಿಯಲ್ಲಿ ಎಷ್ಟು ಬಸದಿಗಳನ್ನು ಕಟ್ಟಿಸಿದಳು ?
2. ಅವಳು ನಿರ್ಮಿಸಿದ ಬಸದಿಯ ಹೆಸರೇನು ?
3. ಅವಳು ಕಟ್ಟಿಸಿದ ಪದ್ಮಾವತಿದೇವಿಕೆರೆ ಮೈದಾಳದ ಕೆರೆಯೇ ?
4. ಶಾಸನದಲ್ಲಿ ದಾನದ ಭಾಗದಲ್ಲಿ ಉಲ್ಲೇಖವಾಗಿರುವ ಹಿರಿಯಕೆರೆ ಯಾವುದು ?
5. ಮಯ್ದವೊಳಲ ದೀವ್ಯತೀರ್ಥವೆಂದು ಹೆಸರು ಮೊದಲೇ ಇತ್ತೆ ?

      ಈ ಮೆಲ್ಕಂಡ ಪ್ರಶ್ನೆಗಳಿಗೆ ಉತ್ತರವನ್ನು ಕ್ಷೇತ್ರಕಾರ್ಯದ ಆಧಾರದಿಂದ ಹುಡುಕಲು ಪ್ರಯತ್ನಿಸಿದ್ದು ಅದರ ವಿವರಗಳು ಈ ಕೆಳಗಿನಂತಿವೆ.

      ಮಂದರಗಿರಿಯಲ್ಲಿ ಈಗ ಚಂದ್ರನಾಥ(ಪದ್ಮಾಸನ), ಪಾಶ್ರ್ವನಾಥ, ಸುಪಾಶ್ರ್ವನಾಥ ಮತ್ತು ಚಂದ್ರನಾಥ(ಖಡ್ಗಾಸನ)ಎಂಬ ನಾಲ್ಕು ಬಸದಿಗಳಿವೆ. ಆದರೆ ಶಾಸನದಲ್ಲಿ ಮಾಚಿಯಕ್ಕಳು ದೀವ್ಯತೀರ್ಥದಲ್ಲಿ ಬಸದಿಯನ್ನು ನಿರ್ಮಿಸಿದ ವಿಷಯವಿದೆಯೇ ಹೊರತು ಯಾವ ಬಸದಿಯೆಂದು ಹೇಳಿಲ್ಲ. ಆದರೆ ದಾನದ ಭಾಗದಲ್ಲಿ ಚಂದಿಮದೇವರಿಗೆ ಎಂದು ಹೇಳಿದೆ. ಇದು ಮಾಚಿಯಕ್ಕಳು ತನ್ನ ತಾಯಿಯಾದ ಚಂದವ್ವೆಯ ನೆನಪಿಗಾಗಿ ಚಂದ್ರನಾಥ ಬಸದಿಯನ್ನು ಕಟ್ಟಿಸಿರುವಳೆಂದು ಹೇಳುತ್ತದೆ.

Related image

      ಪಾಶ್ರ್ವನಾಥ ಮತ್ತು ಸುಪಾಶ್ರ್ವನಾಥ ಬಸದಿಗಳು ಮೊದಲೇ ಇದ್ದಿರಬಹುದಾದ ಬಸದಿಗಳಾಗಿವೆ. ಇವುಗಳ ಪಕ್ಕದಲ್ಲೇ ಮಾಚಿಯಕ್ಕಳು ಚಂದ್ರನಾಥ ಸ್ವಾಮಿಯ ಬಸದಿಯನ್ನು ನಿರ್ಮಿಸಿರುವಳು. ಈಗಾಗಲೇ ಇದ್ದ ಬಸದಿಯ ಜೀಣ್ರ್ನೋದ್ಧಾರ ಮಾಡಿಸಿದಳೋ ಅಥವಾ ನೂತನವಾದ ಬಸದಿಯನ್ನು ನಿರ್ಮಿಸಿದಳೋ ಶಾಸನದಲ್ಲಿ ಸ್ಪಷ್ಟವಾದ ವಿವರವಿಲ್ಲ. ಈ ಬಸದಿಗಳ ಮುಂದೆ ಹೊಯ್ಸಳರ ಶೈಲಿಯ ಭಗ್ನವಾದ ಜಿನಮೂರ್ತಿಯೊಂದು ಬಿದ್ದಿದೆ. ಈಗ ಗರ್ಭಗುಡಿಯಲ್ಲಿರುವ ಚಂದ್ರನಾಥನ ಮೂರ್ತಿಯು ಶೈಲಿಯ ದೃಷ್ಟಿಯಿಂದ ಹೊಯ್ಸಳರ ಕಾಲದ್ದಲ್ಲ. ಹೀಗಾಗಿ ಮಾಚಿಯಕ್ಕ ಮಾಡಿಸಿರಬಹುದಾದ ಮೂಲ ಚಂದ್ರನಾಥನ ಮೂರ್ತಿಯು ಹೊರಗೆ ಬಿದ್ದಿರುವ ಒಡೆದುಮುಕ್ಕಾಗಿರುವ ಮೂರ್ತಿಯೇ ಆಗಿದೆ.

      ಬಸದಿಯನ್ನು ನಿರ್ಮಿಸಿದ ಮಾಚಿಯಕ್ಕಳು ಪದ್ಮಾವತಿಗೆರೆಯೆಂಬ ಕೆರೆಯನ್ನೂ ಕಟ್ಟಿಸಿಕೊಟ್ಟಳೆಂದು ಶಾಸನ ತಿಳಿಸುತ್ತಿದ್ದು ಬಹಳ ಜನರು ಈಗಿನ ಮೈದಾಳದ ಕೆರೆಯೇ ಅದು ಎಂದು ಭಾವಿಸಿರುವರು. ಆದರೆ ಈ ಅಭಿಪ್ರಾಯ ತಪ್ಪಾಗುತ್ತದೆ. ಮೈದಾಳದ ಕೆರೆಯ ರಚನೆ, ಕೋಡಿಯ ನಿರ್ಮಾಣದ ಕಲ್ಲುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಪಲ್ಲವ ನೊಳಂಬರ ಕಾಲದ ಕೆರೆಯೆಂದು ತಿಳಿದುಬರುತ್ತದೆ. ಶಾಸನದಲ್ಲಿ ಉಲ್ಲೇಖಿಸಿರುವ ಶ್ರೀಮಯ್ದವೊಳಲು ಕ್ರಿಸ್ತಶಕ 1287ರ ಹೊನ್ನುಡಿಕೆ ಶಾಸನದಲ್ಲಿ ‘ಮಯಿಂದವೊಳಲು’ ಎಂದು ಉಲ್ಲೇಖವಾಗಿದ್ದು ಇದು ನೊಳಂಬರ ಅರಸ ಶ್ರೀಮಯಿಂದನ(ಒಂದನೇ ಮಹೇಂದ್ರರಾಜ)ಹೆಸರಿನಲ್ಲಿ ನಿರ್ಮಿಸಿರುವ ಗ್ರಾಮವಾಗಿದೆ. ಇದರ ಮೂಲ ಹೆಸರು ‘ಮಹೇಂದ್ರಪೊಳಲು’ ಎಂದಿದ್ದು ಕಾಲಾನಂತರ ಇದು ಗ್ರಾಮ್ಯರ ಬಾಯಲ್ಲಿ ಮಯಿನ್ದವೊಳಲು ಆಗಿರಬೇಕು. ಶಿರಾ ಮತ್ತು ಮಧುಗಿರಿ ತಾಲೂಕಿನ ಅನೇಕ ಶಾಸನಗಳಲ್ಲಿ ನೊಳಂಬ ಅರಸ ಮಹೇಂದ್ರರಾಜನನ್ನು ಮಯಿಂದ, ಮಯಿನ್ದರಸ ಎಂದೇ ಕರೆದಿವೆ. ಕೆರೆಯ ದಕ್ಷಿಣ ದಿಕ್ಕಿನ ಕೋಡಿಯ ಪಕ್ಕ ಬಯಲಿನಲ್ಲಿ ಒಂದು ಶಿವಲಿಂಗವನ್ನು ನಿಲ್ಲಿಸಲಾಗಿದೆ. ಇದರ ರಚನೆ, ಶಿಲೆ ಮತ್ತು ಸೂತ್ರವನ್ನು ಗಮನಿಸಿದರೆ ಸುಮಾರು 9ನೆ ಶತಮಾನದಷ್ಟು ಹಳೆಯದ್ದೆಂದು ತೋರುತ್ತದೆ. ಇದು ಈ ಕೆರೆಯ ಸಮಿಪದಲ್ಲೇ ದೊರಕಿದ್ದು ಕೆರೆಯ ಏರಿಯನ್ನು ನವೀಕರಿಸುವಾಗ ಇಲ್ಲಿ ನಿಲ್ಲಿಸಲಾಗಿದೆ.

Image result for mandaragiri hills       ಮಂದರಗಿರಿ ಬೆಟ್ಟದಿಂದ ಮೈದಾಳ ಕೆರೆಗೆ ಇಳಿದು ಬರುವಾಗ ಕೆರೆಯ ವಿಶಾಲವಾದ ಬಂಡೆಗಳ ಮೇಲೆ ಏಳುದೇವರ ಅಮ್ಮ ಎಂದು ಕರೆಸಿಕೊಳ್ಳುತ್ತಿರುವ ಸಪ್ತಮಾತೃಕೆಯರ ವಿಗ್ರಹಗಳು ಇವೆ. ಏಳೂ ವಿಗ್ರಹಗಳು ಸ್ವತಂತ್ರ ರಚನೆಗಳಾಗಿದ್ದು ಪ್ರತಿಯೊಂದೂ ಸುಮಾರು ನಾಲ್ಕರಿಂದ ಐದು ಅಡಿ ಎತ್ತರವಾಗಿವೆ. ಅಗಲ ಸುಮಾರು ಮೂರು ಅಡಿಯಿಂದ ಐದು ಅಡಿಯವರೆಗೂ ಇವೆ. ಇವೂ ಕೂಡ ಶೈಲಿಯಿಂದ 9ನೇ ಶತಮಾನಕ್ಕೆ ಸೇರಿದ್ದಾಗಿವೆ.(ಚಿತ್ರ 5). ಈ ಕಾರಣದಿಂದ ಮೈದಾಳದ ಕೆರೆಯನ್ನು ಮಾಚಿಯಕ್ಕಳು ನಿರ್ಮಿಸಿದ ಪದ್ಮಾವತಿದೇವಿಕೆರೆಯೆಂದು ಕರೆಯಲು ಸಾಧ್ಯವಿಲ್ಲ. ಈ ಕೆರೆ ಅವಳಿಗಿಂತಲೂ ಪೂರ್ವದಲ್ಲಿ ಅಂದರೆ ಸುಮಾರು ಕ್ರಿ.ಶ.900 ಅಥವಾ 950ರ ಹೊತ್ತಿಗೆಯೇ ನಿರ್ಮಾಣವಾಗಿತ್ತೆಂದು ತಿಳಿಯಬಹುದಾಗಿದೆ. ಮೈದಾಳದ ಗ್ರಾಮಸ್ಥರು ಯಾರೂ ಕೂಡಾ ಈ ಕೆರೆಯನ್ನು ಪದ್ಮಾವತಿದೇವಿಕೆರೆಯೆಂದು ಕರೆಯುತ್ತಿದ್ದ ಸುಳಿವನ್ನು ನೀಡಲಿಲ್ಲ. ಶಾಸನದ ದಾನದ ಭಾಗದಲ್ಲಿ ಹಿರಿಯಕೆರೆ ಎಂಬ ಕೆರೆಯೊಂದನ್ನು ಎರಡು ಬಾರಿ ಹೆಸರಿಸಲಾಗಿದೆ.

     ಹಿರಿಯಕೆರೆ ಎಂದರೆ ದೊಡ್ಡಕೆರೆ ಅಥವಾ ಪ್ರಾಚೀನಕೆರೆ ಎಂದೂ ಆಗುತ್ತದೆ. ಮೈದಾಳದ ಕೆರೆಯನ್ನೇ ಹಿರಿಯಕೆರೆಯೆಂದು ಕರೆಯಲಾಗಿದೆ. ಅಂದರೆ ಮಾಚಿಯಕ್ಕಳು ದಾನವನ್ನು ಬಿಡುವ ಪೂರ್ವದಲ್ಲೆ ಈ ಕೆರೆ ಇತ್ತು ಎಂಬುದು ಸ್ಪಷ್ಟವಾಗುತ್ತದೆ. ನಿಜವಾದ ಅರ್ಥದಲ್ಲೂ ಮೈದಾಳದ ಕೆರೆ ತುಮಕೂರು ಜಿಲ್ಲೆಯ ಕೆರೆಗಳಲ್ಲೇ ದೊಡ್ಡದಾದ ಕೆರೆಯಾಗಿದೆ. ಎರಡು ಬೆಟ್ಟಗಳ ನಡುವೆ ಏರಿಯನ್ನು ನಿರ್ಮಿಸಿ ಕಟ್ಟಿರುವ ಕೌಶಲ್ಯ ಮೆಚ್ಚುಗೆಯನ್ನು ಪಡೆಯುತ್ತದೆ.Related image

      ಹಾಗಾದರೆ ಮಾಚಿಯಕ್ಕ ನಿರ್ಮಿಸಿದ ಪದ್ಮಾವತಿಕೆರೆ ಎಲ್ಲಿದೆಯೆಂಬ ಪ್ರಶ್ನೆ ಮೂಡುವುದು ಸಹಜ. ಮಂದರಗಿರಿಬೆಟ್ಟದಲ್ಲಿ ಬಸದಿಯ ಪಶ್ಚಿಮಕ್ಕೆ (ಬಸದಿಯ ಹಿಂಭಾಗ) ಈಗಲೂ ಇರುವ ಸಣ್ಣ ಕೆರೆಯೇ ಪದ್ಮಾವತಿಕೆರೆಯಾಗಿದೆ. ಶಾಸನದಲ್ಲಿ ಉಲ್ಲೇಖಿಸಿರುವಂತೆ ಅವಳು ಊರಿಗೆ ಕೆರೆಯನ್ನು ಕಟ್ಟಿಸಿಕೊಡಲಿಲ್ಲ. ಅವಳು ತಾನು ನಿರ್ಮಿಸಿದ ಬಸದಿಗೆ ಕೆರೆಯನ್ನು ನಿರ್ಮಿಸಿಕೊಟ್ಟಳೆಂದು ಶಾಸನದಲ್ಲಿ ಹೇಳಿದೆ. ಬಸದಿಗೆಯೆಂದರೆ ಬಸದಿಯ ಮತ್ತು ಭಕ್ತರ ಅನುಕೂಲಕ್ಕೆಂದೇ ಆಗಿದೆ. ಹಿಗಾಗಿ ಬಸದಿಯ ಹಿಂಭಾಗದಲ್ಲೇ ಕಲ್ಲುಗುಂಡುಗಳು ಮತ್ತು ದೊಡ್ಡ ಕಲ್ಲುತುಂಡುಗಳಿಂದ ಯೋಜನಾಬದ್ಧವಾಗಿ ಮಳೆ ಬಂದಾಗ ಸಹಜವಾಗಿಯೇ ನೀರು ತುಂಬುವಂತೆ ನಿರ್ಮಿಸಲಾಗಿದೆ. ಇದನ್ನೇ ಶಾಸನೊಕ್ತ ಪದ್ಮಾವತಿದೇವಿಕೆರೆಯೆಂದು ಹೇಳಬಹುದಾಗಿದೆ. 

      ಮಾಚಿಯಕ್ಕಳು ಮಂದರಗಿರಿಬೆಟ್ಟದಲ್ಲಿ ಬಸದಿಯನ್ನು ನಿರ್ಮಿಸುವ ಮೊದಲೆ ಆ ಸ್ಥಳವು ದೀವ್ಯತಿರ್ಥವಾಗಿತ್ತೆಂದು ಶಾಸನದಲ್ಲಿ ಉಲ್ಲೇಖಿಸಿರುವ ‘ದೀವ್ಯತಿರ್ಥದಲ್ಲಿ ಸದ್ಧರ್ಮಾಪೇಕ್ಷೆಯಿಂದ ಬಸದಿಯನ್ನು ನಿರ್ಮಿಸಿದಳು’ ಎಂಬ ಮಾತು ತಿಳಿಸುತ್ತದೆ. ಯಾವ ಕಾರಣದಿಂದ ಈ ಸ್ಥಳವು ಅವಳ ಕಾಲಕ್ಕಾಗಲೆ ದಿವ್ಯತೀರ್ಥವಾಗಿತ್ತೆಂಬುದಕ್ಕೆ ನಮ್ಮ ಕ್ಷೇತ್ರಕಾರ್ಯದಲ್ಲಿ ಉತ್ತರ ದೊರಕಿದೆ. ಬಸದಿಗೂ ಮತ್ತು ಪದ್ಮಾವತಿಕೆರೆಗೂ ಮಧ್ಯದಲ್ಲಿ ಒಂದು ಬೃಹತ್ತಾದ ಬಂಡೆಗಲ್ಲಿದ್ದು ಅದರ ದಕ್ಷಿಣಕ್ಕೆ ಸುಮಾರು ಆರು ಅಡಿ ಎತ್ತರದ ಪಾಶ್ರ್ವನಾಥನ ಮೂರ್ತಿಯನ್ನು ಕೆತ್ತಲಾಗಿದ್ದು ಅದನ್ನು ಯಾರೋ ಕೆತ್ತಿ ಒಡೆದುಹಾಕಿದ್ದಾರೆ. ಆದರೂ ಮೂರ್ತಿಯ ಸ್ವರೂಪವನ್ನು ಸ್ಪಷ್ಟವಾಗಿ ಗಮನಿಸಬಹುದಾಗಿದೆ.

Image result for mandaragiri hills

      ಬಂಡೆಯ ಕೆಳಗೆ ಜನರು ಕುಳಿತುಕೊಳ್ಳುವಂತೆ ಸ್ಥಳವಿದ್ದು ನೆಲದ ಬಂಡೆಯಲ್ಲಿ ‘ಶ್ರೀ ಸ್ವಸ್ತಿ’ ಎಂಬ 5 ಇಂಚು ಗಾತ್ರದ ಕನ್ನಡ ಬರೆಹವಿದೆ. ಹಾಸುಬಂಡೆಯ ಕೆಲವು ಕಡೆ ಬಸದಿ ಅಥವಾ ಕೆರೆಯ ಕೆಲಸಗಾರರು ದಿನದ ಲೆಕ್ಕ ಗುರುತಿಸಲು ಮಾಡಿಕೊಂಡಿರುವ ಸಂಕೇತ ಅಕ್ಷರಗಳು ಮತ್ತು ಪ್ರತಿ ಅಕ್ಷರಗಳ ಕೆಳಗೆ ಸಣ್ಣ ಸಣ್ಣ ಗೆರೆಗಳ ಸಾಲುಗಳನ್ನು ಕಾಣಬಹುದಾಗಿದೆ. ಬಸದಿಯ ಉತ್ತರಕ್ಕೆ ಮತ್ತೊಂದು ನೀರಿನ ಕೊಳವಿದ್ದು ಇದೂ ಕೂಡ ಹಳೆಯ ರಚನೆಯಂತೆ ತೋರುತ್ತದೆ. ಇದರ ಪಕ್ಕದಲ್ಲಿ ದೊಡ್ಡದಾದ ಮತ್ತೊಂದು ಬಂಡೆಗೆ ಹೊಂದಿಕೊಂಡಂತೆ ಆ ಬಂಡೆಯ ದಕ್ಷಿಣಕ್ಕೆ ಅಂದರೆ ಈಗಿರುವ ಬಸದಿಯ ಕಡೆಗೆ ಮುಖಮಾಡಿದಂತೆ ದೊಡ್ಡದಾದ ಪಾಳು ಬಸದಿಯಿದೆ. ಇದು ಬಹಳ ಹಾಳಾಗಿದ್ದು ಬೃಹತ್ತಾದ ಇದರ ಕಂಭಗಳು ಮತ್ತು ತೊಲೆಗಳು ಎಲ್ಲೆಂದರಲ್ಲಿ ಚದುರಿ ಬಿದ್ದಿವೆ. ಕೆಲವು ಮುರಿದಿವೆ. ಇದರ ಮುಂದಿನ ಮಾನಸ್ಥಂಭ ಈಗ ಎರಡು-ಮೂರು ತುಂಡಾಗಿ ಎದುರಿನ ಮತ್ತೊಂದು ಹಾಸುಬಂಡೆಯ ಮೇಲೆ ಬಿದ್ದಿವೆ.

      ದೊಡ್ಡ ಬಂಡೆಯ ಮುಂದಕ್ಕೆ ಚಾಚಿದಂತೆಯೇ ಬಸದಿಯನ್ನು ನಿರ್ಮಿಸಿದ್ದು ಸುಮಾರು 30 ಅಡಿ ಅಗಲ ಮತ್ತು ಅಷ್ಟೇ ಉದ್ದವಿದೆ. ಬಸದಿಯ ಒಳಭಾಗ ಮತ್ತು ಗರ್ಭಗುಡಿಯಲ್ಲಿ ಚಾವಣಿಯ ಎತ್ತರಕ್ಕೆ ಮುಳ್ಳುಗಿಡಗಳು ಬೆಳೆದಿದ್ದು ಒಳಗೆಹೋಗಲು ಭಯವಾಗುತ್ತದೆ. ಬಹಳ ಕಷ್ಟಪಟ್ಟು ಗಿಡಗಳನ್ನು ಕಡಿದು ಗರ್ಭಗುಡಿಯ ಜಾಗವನ್ನು ಕಾಣುವಂತೆ ಮಾಡಿದಾಗ ಗರ್ಭಗುಡಿಯ ಬಂಡೆಯ ಮೇಲೆ 9 ಅಡಿ ಎತ್ತರ 9 ಅಡಿ ಅಗಲವಾದ ಸ್ಥಳವಿನ್ಯಾಸದಲ್ಲಿ ಪಾಶ್ರ್ವನಾಥನು ಕುಳಿತಂತೆ ಉಬ್ಬುಶಿಲ್ಪವನ್ನು ನಿರ್ಮಿಸಲಾಗಿದೆ.

      ಆದರೆ ಇಡೀ ಮೂರ್ತಿಯನ್ನು ಯಾರೋ ಬೇಕೆಂದೇ ಒಡೆದುಹಾಕಿದ್ದಾರೆ. ಸಿಂಹಪೀಠದಲ್ಲಿ ಕುಳಿತ ಬಹಳ ಅಪರೂಪವಾದ ಮತ್ತು ಸುಂದರವಾದ ಭಂಗಿಯಲ್ಲಿರುವ ಪಾಶ್ರ್ವನಾಥನ ಮೂರ್ತಿಯಾಗಿತ್ತೆಂದು ಜೈನಸಮಾಜದವರ ಅಭಿಪ್ರಾಯವಾಗಿದೆ. ಇದು ಹಾಳಾಗದೆ ಉಳಿದಿದ್ದರೆ ಕರ್ನಾಟಕದ ಜೈನಶಿಲ್ಪ ಸಂಸ್ಕೃತಿಗೆ ತುಮಕೂರು ಜಿಲ್ಲೆಯು ನೀಡಿದ ಮಹತ್ವದ ಕೊಡುಗೆಯಾಗುತ್ತಿತ್ತು. ಇದನ್ನು ಯಾರು ಒಡೆದು ಹಾಕಿದ್ದಾರೆ ?, ಏಕೆ ಒಡೆದು ಹಾಕಿದ್ದಾರೆ ತಿಳಿಯುವುದಿಲ್ಲ.

      ಚಂದ್ರನಾಥಬಸದಿಯ ಹಿಂಭಾಗದ ಬಂಡೆಯ ಮೇಲಿದ್ದ ಪಾಶ್ರ್ವನಾಥನ ನಿಂತಭಂಗಿಯ ಉಬ್ಬುಶಿಲ್ಪವನ್ನೂ ಹೀಗೆ ಒಡೆದು ಹಾಳುಮಾಡಿದ್ದಾರೆ. ಈ ಪಾಶ್ರ್ವನಾಥನ ಉಬ್ಬುಶಿಲ್ಪ ಮತ್ತು ಅದಕ್ಕೆ ನಿರ್ಮಿಸಿದ್ದ ಬಸದಿಯನ್ನೂ ಒಡೆದುಹಾಕಿದ್ದಾರೆ. ಇದು ಯಾವುದಾದರು ಧಾಳಿಯಲ್ಲಾಯಿತೋ ಅಥವಾ ಧರ್ಮಾಂಧರು ಒಡೆದುಹಾಕಿದ್ದಾರೋ ಹೇಳುವುದು ಕಷ್ಟ. ಕುಳಿತ ಶೈಲಿ ಮತ್ತು ಉಬ್ಬುಶಿಲ್ಪದ ಲಕ್ಷಣಗಳನ್ನು ಮತ್ತು ಬಸದಿಯ ಕಂಬಗಳು, ಮುರಿದು ಬಿದ್ದಿರುವ ಮಾನಸ್ಥಂಭ ಮುಂತಾದವನ್ನು ಗಮನಿಸಿದರೆ ಇವುಗಳ ಕಾಲವನ್ನು 10ನೇ ಶತಮಾನಕ್ಕೆ ಸೇರಿಸಬಹುದಾಗಿದೆ. ಇವುಗಳು ವೈಭವವಾಗಿದ್ದ ಕಾಲದಲ್ಲಿ ಈ ಸ್ಥಳಕ್ಕೆ ದೀವ್ಯತೀರ್ಥವೆಂಬ ಹೆಸರು ಪ್ರಾಪ್ತವಾಗಿದ್ದು ಇದನ್ನೆ ಮಾಚಿಯಕ್ಕಳು ಶಾಸನದಲ್ಲಿ ಉಲ್ಲೇಖಿಸಿರುವುದು.

      ಈ ಮಾಚಿಯಕ್ಕಳ ಪೂರ್ವಿಕರೂ ಕೂಡ ಜೀರ್ಣಜಿನಾಲಯಗಳನ್ನು ಸರಿಪಡಿಸುತ್ತಿದ್ದರೆಂದು ಲಕ್ಕುಂಡಿ ಶಾಸನದ ಆಧಾರದಿಂದ ಹೇಳಬಹುದಾಗಿದೆ. ಇವಳ ಹಿರಿಯರು ಬಹಳ ಪ್ರಸಿದ್ಧವಾದ ಲಕ್ಕುಂಡಿಯ ಅತ್ತಿಯಬ್ಬೆಯ ಶಾಸನದಲ್ಲಿ ಉಲ್ಲೇಖವಾಗಿದ್ದಾರೆ. ಮಾಚಿಯಕ್ಕಳ ತಾತನೆಂದು ಉಲ್ಲೇಖವಾಗಿರುವ ನಾಕಿಸೆಟ್ಟಿಯು ಅತ್ತಿಯಬ್ಬೆಯಿಂದ ನಿರ್ಮಿತವಾದ ಲಕ್ಕುಂಡಿ ಬ್ರಹ್ಮಜಿನಾಲಯವನ್ನು ಪುನರ್‍ನಿರ್ಮಿಸಿದ ನಾಕಿಸೆಟ್ಟಿಯೇ ಆಗಿದ್ದಾನೆ. ಇವನ ಮಗ ಬಿಟ್ಟಿಗ ಮತ್ತು ಚಂದವ್ವೆಯರಿಗೆ ಮಗಳಾಗಿ ಹುಟ್ಟಿದವಳೇ ಮಾಚಿಯಕ್ಕ.Related image

ಅತ್ತಿಯಬ್ಬೆಯು ಬ್ರಹ್ಮಜಿನಾಲಯ ನಿರ್ಮಿಸಿದ ಕಾಲ – ಕ್ರಿ.ಶ. 1007
ಭರತಾರ್ಯನು ಪುನರ್ ನಿರ್ಮಿಸಿದ ಕಾಲ – ಕ್ರಿ.ಶ. ಸುಮಾರು 1050
ನಾಕಿಸೆಟ್ಟಿಯು ಪುನರ್ ನಿರ್ಮಿಸಿದ ಕಾಲ – ಕ್ರಿ.ಶ. ಸುಮಾರು 1100
ನಾಕಿಸೆಟ್ಟಿಯ ಕಾಲವನ್ನು ಕ್ರಿ.ಶ.ಸುಮಾರು 1100 ಎಂದು ನಿರ್ಧರಿಸಿದರೆ, ಇವನ ಮಗ ಬಿಟ್ಟಿಗನ ಕಾಲವನ್ನು 1125 ಎಂದು ನಿರ್ಧರಿಸಬೇಕಾಗುತ್ತದೆ.

      ಆಗ ಇವನ ಮಗಳು ಮಾಚಿಯಕ್ಕಳ ಕಾಲ ಕ್ರಿ.ಶ. 1160ಕ್ಕೆ ಸರಿಹೊಂದುತ್ತದೆ. ಈ ಕಾರಣದಿಂದಾಗಿ ಮಾಚಿಯಕ್ಕಳು ಅತ್ತಿಯಬ್ಬೆಯ ಸಂಬಂಧಿಯೂ ಅಲ್ಲದೆ ಅವಳ ದಾನಕಾರ್ಯಗಳಿಂದ ಪ್ರಭಾವಿತಳಾದವಳೂ ಆಗಿರಬೇಕು. ಮಾಚಿಯಕ್ಕಳಿಂದ ಅವಳ ಪೂರ್ವಿಕರ ಜೈನಜಿನಾಲಯಗಳ ಜೀಣ್ಣೋದ್ಧಾರಕಾರ್ಯ ಮುಂದುವರೆದಿತ್ತೆಂದು ಹೇಳಬಹುದಾಗಿದೆ. ಲಕ್ಕುಂಡಿಯಿಂದ ತುಮಕೂರಿನವರೆಗೂ ಜೀರ್ಣಜಿನಾಲಯಗಳ ಜೀಣ್ಣೋದ್ಧಾರಕಾರ್ಯ ಪಸರಿಸಿರುವುದು ಕತೂಹಲಕಾರಿಯಾದುದಾಗಿದೆ.

 

– ಪ್ರೊ.ಡಿ.ವಿ.ಪರಮಶಿವಮೂರ್ತಿ
ಪ್ರಾಧ್ಯಾಪಕರು, ಕನ್ನಡ ವಿಭಾಗ
ತುಮಕೂರು ವಿಶ್ವವಿದ್ಯಾನಿಲಯ

Recent Articles

spot_img

Related Stories

Share via
Copy link
Powered by Social Snap